ಮಂಗಳೂರು: ಎ.16ರಿಂದ ಮದ್ಯ ಮಾರಾಟ ನಿಷೇಧ
ಮಂಗಳೂರು, ಎ.5: ಲೋಕಸಭಾ ಚುನಾವಣೆ ಹಿನ್ನೆಲೆ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಮತದಾನ ನಡೆಸಲು ದ.ಕ. ಜಿಲ್ಲೆಯಾದ್ಯಂತ ಹಾಗೂ ಜಿಲ್ಲೆಯ ಗಡಿ ಪ್ರದೇಶದಿಂದ 5 ಕಿ.ಮೀ ಪರಿಧಿಯಲ್ಲಿ ಎ.16ರಂದು ಸಂಜೆ 6 ಗಂಟೆಯಿಂದ 18 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧ ಗೊಳಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕು ಪ್ರದೇಶಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಎ.21ರಂದು ಸಂಜೆ 5 ಗಂಟೆಯಿಂದ ಎ.23ರಂದು ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮತ ಎಣಿಕೆಯ ಸಲುವಾಗಿ ಮೇ 22ರಂದು ಸಂಜೆ 5 ಗಂಟೆಯಿಂದ ಮೇ 23ರಂದು ಮಧ್ಯರಾತ್ರಿ 12 ಗಂಟೆಯವರೆಗಿನ ಅವಧಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಲಾಗಿದೆ. ಈ ದಿನಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕಾರ್ಯಾಚರಿಸುತ್ತಿರುವ ಎಲ್ಲ ರೀತಿಯ ಮದ್ಯ ಮಾರಾಟ ಡಿಪೋ, ಮದ್ಯದಂಗಡಿ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೊಟೇಲ್, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶದಲ್ಲಿ ತಿಳಿಸಿದ್ದಾರೆ.