ಕ್ರೆಡೆಯ್ ಅಧ್ಯಕ್ಷರಾಗಿ ನವೀನ್ ಕಾರ್ಡೊಜಾ ಅಧಿಕಾರಕ್ಕೆ
ಮಂಗಳೂರು, ಎ.5: ಕಟ್ಟಡ ನಿರ್ಮಾಣ ನಿರ್ಮಾಪಕರ ಪ್ರತಿಷ್ಠಿತ ಸಂಘಟನೆಯಾದ ಕ್ರೆಡೆಯ್ ಮಂಗಳೂರು ನೂತನ ಅಧ್ಯಕ್ಷರಾಗಿ ಮರಿಯನ್ ಪ್ರಾಜೆಕ್ಟ್ನ ಆಡಳಿತ ನಿರ್ದೇಶಕ ನವೀನ್ ಕಾರ್ಡೊಜಾ ಅಧಿಕಾರ ಸ್ವೀಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಮೆಹ್ತಾ, ನೂತನ ಅವಧಿಗೆ ಉಪಾಧ್ಯಕ್ಷರಾಗಿ ಇನ್ಲ್ಯಾಂಡ್ ಬಿಲ್ಡರ್ಸ್ನ ಸಿರಾಜ್ ಅಹ್ಮದ್, ಕಾರ್ಯದರ್ಶಿಯಾಗಿ ಎನ್.ಜೆ. ಬಿಲ್ಡರ್ಸ್ನ ವಿನೋದ್ ಪಿಂಟೋ, ಜತೆ ಕಾರ್ಯದರ್ಶಿಯಾಗಿ ರೋಸ್ಡೇಲ್ ಅಸೋಸಿಯೇಟ್ನ ಇರೋಲ್ ಪಿಂಟೋ, ಕೋಶಾಧಿಕಾರಿಯಾಗಿ ಗಾರ್ಡಿಯನ್ ಇನ್ಫ್ರಾಸ್ಟ್ರಕ್ಚರ್ನ ಗಣೇಶ್ ಎಂ.ಪಿ. ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
ಕ್ರೆಡೆಯ್ ತನ್ನ ಸದಸ್ಯ ಕಟ್ಟಡ ನಿರ್ಮಾಣಗಾರರ ಮೂಲಕ ಮಂಗಳೂರಿನ ನಾಗರಿಕರಿಗೆ ಗುಣಮಟ್ಟದ ವಸತಿ ಹಾಗೂ ವಸತಿ ಸಮುಚ್ಛಯಗಳನ್ನು ಒದಗಿಸುತ್ತಿದೆ. ಎಲ್ಲರಿಗೂ ಮನೆ ಮತ್ತು ಉತ್ತಮ ಗುಣಮಟ್ಟದ ಮನೆಗಳನ್ನು ಒದಗಿಸುವುದು ಕ್ರೆಡೆಯ್ನ ಪ್ರಮುಖ ಉದ್ದೇಶ ಎಂದವರು ಹೇಳಿದರು.
ಇದೀಗ ಗೃಹ ಖರೀದಿಗೆ ಸಂಬಂಧಿಸಿ ಜಿಎಸ್ಟಿಯಲ್ಲಿ ಕಡಿತವಾಗಿದ್ದು, ಶೇ. 12ರಷ್ಟಿದ್ದ ಜಿಎಸ್ಟಿ ದರ ಶೇ. 5ಕ್ಕೆ ಇಳಿಕೆಯಾಗಿದೆ. ಇದರಿಂದ ಜನಸಾಮಾನ್ಯರಿಗೂ ಮನೆ ಖರೀದಿಸಲು ಸಹಾರಿಯಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ನೂತನ ಅಧ್ಯಕ್ಷ ನವೀನ್ ಕಾರ್ಡೊಜಾ, ಕಾರ್ಯದರ್ಶಿ ವಿನೋದ್ ಪಿಂಟೋ, ಸದಸ್ಯರಾದ ಪ್ರಶಾಂತ್ ಸನಿಲ್ ಉಪಸ್ಥಿತರಿದ್ದರು.