ಅಕ್ಕಮಹಾದೇವಿಯ ಕುರಿತಂತೆ ಇನ್ನಷ್ಟು...
ಈ ಹೊತ್ತಿನ ಹೊತ್ತಿಗೆ
ಶರಣ ಚಳವಳಿಯಲ್ಲಿ ಅಕ್ಕಮಹಾದೇವಿಯ ವಚನಗಳು ಅಗ್ರಸ್ಥಾನದಲ್ಲಿವೆ. ಸ್ತ್ರೀ ಸಂವೇದನೆಗಳ ಐತಿಹಾಸಿಕ ನೆಲೆಗಳನ್ನು ಗುರುತಿಸುವಾಗ ಅದು ತಲುಪುವುದು ಅಕ್ಕಮಹಾದೇವಿಯ ಬಳಿಗೆ. ಇಂತಹ ಅಕ್ಕಮಹಾದೇವಿಯನ್ನು ಬೇರೆ ಆಯಾಮದ ಮೂಲಕ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ ಡಾ. ವಿಜಯಶ್ರೀ ಸಬರದ.
ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಒಂದು ಅಕ್ಕಮಹಾದೇವಿಯ ಬದುಕನ್ನು ಪರಿಚಯಿಸುವ ಕೆಲಸವನ್ನು ಮಾಡಿದರೆ ಇನ್ನೊಂದು ಅಧ್ಯಾಯ ಬೇರೆ ಬೇರೆ ಕೃತಿಗಳು, ಕವಿಗಳು, ಬರಹಗಾರರು ಅಕ್ಕಮಹಾದೇವಿಯನ್ನು ಕಂಡ ರೀತಿಯನ್ನು ವಿವರಿಸುತ್ತದೆ. ಮೊದಲ ಅಧ್ಯಾಯದಲ್ಲಿ ಅಕ್ಕನ ಜನನ, ಮದುವೆ, ಅಕ್ಕಮಹಾದೇವಿಯ ಕೃತಿಗಳು, ವಚನಗಳ ಅಧ್ಯಯನದ ಪ್ರವೇಶಿಕೆ, ಅಕ್ಕಮಹಾದೇವಿ ಮತ್ತು ಅನುಭವ ಮಂಟಪದ ನಡುವಿನ ಸಂಬಂಧ, ಆಕೆಯ ವಚನಗಳ ಸ್ಫೋಟಗುಣ, ಆತ್ಮಶೋಧನೆ, ಕಾವ್ಯ ಸೌಂದರ್ಯ, ಅನುಭಾವಗಳನ್ನು ತೆರೆದಿಡುತ್ತದೆ.
ಎರಡನೆ ಭಾಗದಲ್ಲಿ ವಚನಕಾರರ ದೃಷ್ಟಿಯಲ್ಲಿ ಅಕ್ಕ, ಹರಿಹರನ ಮಹಾದೇವಿಯಕ್ಕನ ಗರಳೆಯಲ್ಲಿ ಅಕ್ಕಮಹಾದೇವಿ, ಶೂನ್ಯ ಸಂಪಾದನೆಗಳಲ್ಲಿ ಮಹಾದೇವಿಯಕ್ಕನ ಪರೀಕ್ಷೆ, ಜನಪದ ಸಾಹಿತ್ಯದಲ್ಲಿ ಮಹಾದೇವಿಯಕ್ಕ, ಆಧುನಿಕ ಕಾವ್ಯದಲ್ಲಿ ಅಕ್ಕಮಹಾದೇವಿ ಇತ್ಯಾದಿ ವಿವರಗಳಿವೆ.
‘ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯ...’
ಎಂಬಂತಹ ಸರಳ ಪದಗಳಲ್ಲಿ ಅಗಾಧ ತತ್ವಜ್ಞಾನವನ್ನು ಬಚ್ಚಿಟ್ಟು ಹಾಡುತ್ತಿದ್ದ ಅಕ್ಕಮಹಾದೇವಿ ‘ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು...’ ಎಂದು ಎಲ್ಲ ಬಂಧಗಳನ್ನು ಬಿಟ್ಟು ನಡೆದ ಅಕ್ಕಮಹಾದೇವಿಯ ಬದುಕು ಒಂದು ಅಚ್ಚರಿ. 12ನೇ ಶತಮಾನದಲ್ಲಿ ಅಧ್ಯಾತ್ಮದ ಕರೆಗೆ ಓಗೊಟ್ಟು, ಸಂಸಾರವನ್ನು ಧಿಕ್ಕರಿಸಿ ಪದಗಳನ್ನು ಕಟ್ಟುತ್ತಾ ಒಂದು ದೊಡ್ಡ ಚಳವಳಿಯಲ್ಲಿ ಭಾಗಿಯಾದ ಅಕ್ಕನ ಕುರಿತಂತೆ ಕನ್ನಡದಲ್ಲಿ ಇನ್ನಷ್ಟು ಗಂಭೀರ ಕೃತಿಗಳು ಬರಬೇಕಾಗಿದೆ. ಅಕ್ಕಮಹಾದೇವಿಯ ವಚನಗಳ ಅಧ್ಯಯನ ವರ್ತಮಾನದ ಲವು ಬಿಕ್ಕಟ್ಟುಗಳಿಗೆ ಉತ್ತರವಾಗಿದೆ.
180 ಪುಟಗಳ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಹೊರತಂದಿದೆ. ಮುಖಬೆಲೆ 140 ರೂಪಾಯಿ.