ಭಾರತದ ಲೋಕಸಭೆ ಮತ್ತು ಮುಸ್ಲಿಮರ ಪ್ರತಿನಿಧಿತ್ವ
ಭಾಗ-1
ದೇಶದ ಹದಿನೇಳನೇ ಲೋಕಸಭೆಗೆ ಚುನಾವಣೆಗಳು ಘೋಷಣೆಯಾಗಿವೆ. ಜನತಂತ್ರದ ಹಬ್ಬಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಿವೆ. ತಂತ್ರ ಮತ್ತು ಪ್ರತಿತಂತ್ರಗಳ ಮಾಹಿತಿಯ ಮಹಾಪೂರವೇ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರತಿದಿನವೂ ಪ್ರಕಟವಾಗುತ್ತಲೇ ಇದೆ. ಇಂಗ್ಲಿಷ್ ಮಾಧ್ಯಮಗಳಲ್ಲಿ ಅಲ್ಲಲ್ಲಿ ಗಂಭೀರವಾಗಿ ಮುಸ್ಲಿಂ ಸಮುದಾಯದ ಪ್ರತಿನಿಧಿತ್ವದ ಬಗ್ಗೆ ಮುಖ್ಯವಾಗಿ ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಪ್ರಮಾಣ ಕಡಿಮೆಯಾದ ವಿವರಗಳನ್ನು ಒಳಗೊಂಡ ಗಂಭೀರ ವರದಿಗಳು ಕಳೆದ ಒಂದು ವರ್ಷದಿಂದ ಪ್ರಕಟವಾಗಿವೆ. ಕನ್ನಡದಲ್ಲಿ ಈ ಬಗ್ಗೆ ಹುಡುಕಿದರೂ ಒಳನೋಟಕೊಡುವಂತಹ ವರದಿಗಳು ಕಾಣಿಸುತ್ತಿಲ್ಲ. ಅಲ್ಲಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಅಷ್ಟಿದೆ ಇಷ್ಟಿದೆ ಎನ್ನುವುದನ್ನು ಹೊರತು ಪಡಿಸಿದರೆ, ಶೇ.13 ರಷ್ಟಿರುವ ಮುಸ್ಲಿಂ ಸಮುದಾಯದ ಒಟ್ಟಾರೆ ಲೋಕಸಭೆ ಚುನಾವಣೆಗಳ ಇದುವರೆಗಿನ ರಾಜಕಾರಣದ ಏಳು ಬೀಳುಗಳ ಬಗ್ಗೆ ಕನ್ನಡ ಮಾಧ್ಯಮಗಳಲ್ಲಿ ವರದಿಯಾಗಿದ್ದು ಕಡಿಮೆಯೆಂದೇ ಹೇಳಬೇಕು.
ನಮ್ಮ ದೇಶದ ಲೋಕಸಭೆ ಚುನಾವಣೆಯ ಮೇಲೆ ಮುಸ್ಲಿಮರ ಮತಗಳು ಪ್ರಭಾವ ಬೀರುತ್ತವೆಯೇ? ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರು ಪ್ರಭಾವ ಬೀರಬಲ್ಲರು? ಮುಸ್ಲಿಂ ಅಭ್ಯರ್ಥಿಗಳು ಎಷ್ಟು ಜನ ಗೆಲ್ಲಬಹುದು? ಎಲ್ಲೆಲ್ಲಿ ಗೆಲ್ಲಬಹುದು? ಇದುವರೆಗೂ ನಡೆದ ಲೋಕಸಭೆಯ ಚುನಾವಣೆಗಳಲ್ಲಿ ಗೆದ್ದ ಮುಸ್ಲಿಂ ಅಭ್ಯರ್ಥಿಗಳ ಪ್ರಮಾಣವೇನು? ಈ ಬಗ್ಗೆ ಅಂಕಿಸಂಖ್ಯೆಗಳಿಗೇನೂ ಕೊರತೆಯಿಲ್ಲ. ದತ್ತಾಂಶಗಳನ್ನು ಪರಿಶೀಲಿಸುವ ಮುನ್ನ ಪ್ರಸ್ತುತ ಲೋಕಸಭಾ ಚುನಾವಣೆಯ ವಿಷಯಗಳ ಕುರಿತು ಸ್ವಲ್ಪ ಗಮನಹರಿಸುವ ಅಗತ್ಯವಿದೆ. ಸಾಮಾಜಿಕ ಒಳಗೊಳ್ಳುವಿಕೆ ಮತ್ತು ವೈವಿಧ್ಯ ಚುನಾವಣೆಯ ವಿಷಯವಲ್ಲ. ಮುಸ್ಲಿಮರ ಕುರಿತಂತೆ ಬಳಸುತ್ತಿದ್ದ ಪ್ರಬಲ ಅಸ್ತ್ರ ಜನಸಂಖ್ಯೆ, ತುಷ್ಟೀಕರಣ ಮೂಲೆ ಸೇರಿದೆ. ತಲಾಖ್, ದೇಶದ್ರೋಹದ ಆಪಾದನೆಗಳು, ದನದ ರಾಜಕೀಯ ಮತ್ತು ಆದ ಕೊಲೆಗಳು ಇಂದು ಪ್ರಮುಖ ವಿಷಯವಾಗಿ ಉಳಿದಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷ ಈ ವಿಷಯಗಳನ್ನು ತೆಗೆದುಕೊಳ್ಳಲು ತಯಾರಿಲ್ಲ, ಅಂದರೆ ಮುಸ್ಲಿಂ ಸಮುದಾಯದ ಹಿತಾಸಕ್ತಿಯು ಇಂದು ಚುನಾವಣೆಯ ಪ್ರಮುಖ ಅಜೆಂಡಾ ಅಲ್ಲ ಎನ್ನುವುದು ವಾಸ್ತವ. ಪ್ರತಿ ಚುನಾವಣೆಯಲ್ಲಿಯೂ ಗೆಲ್ಲುವ ಕಾರ್ಯತಂತ್ರಗಳು ಬದಲಾಗುತ್ತಲೇ ಇರುತ್ತವೆ. ಈ ಚುನಾವಣೆಯಲ್ಲಿ ನೆರೆಯ ರಾಷ್ಟ್ರವೇ ನಮ್ಮ ದೇಶದ ಸಮಸ್ಯೆಗಳಿಗೆ ಕಾರಣ ಎಂದು ಕೆಲವು ಪಕ್ಷಗಳು ಬಿಂಬಿಸುತ್ತಿವೆ. ಇಲ್ಲವೇ ಗತಕಾಲದ ವಿಷಯಗಳನ್ನು ಕೆದಕಿ ಇಂದು ಉತ್ತರ ಕೊಡಿ ಎಂದು ಪ್ರಚಾರ ಮಾಡಲಾಗುತ್ತಿದೆ.
ರಾಜಕೀಯ ಪಕ್ಷಗಳ ನಾಯಕರುಗಳ ಬಳಿ ತಮ್ಮನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಡಿ, ಎರಡು ಸೀಟುಕೊಡಿ, ಮೂರು ಸೀಟು ಕೊಡಿ ಎಂದು ಮುಸ್ಲಿಂ ಸಮುದಾಯದ ರಾಜಕಾರಣಿಗಳು ಗೋಗರೆಯುತ್ತಿರುವುದನ್ನು ಗಮನಿಸಿದರೆ ಸಾಕು ರಾಜಕೀಯವಾಗಿ ಈ ಸಮುದಾಯವನ್ನು ಮೂಲೆಗುಂಪುಮಾಡುವ ಹುನ್ನಾರಗಳಂತೆ ಕಾಣಿಸುತ್ತಿದೆ. ರಾಜಕಾರಣಿಗಳು ಮತ್ತು ಮುಸ್ಲಿಂ ಸಮುದಾಯ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಇಂದು ಬಳಸುತ್ತಿರುವ ಪದಗಳು ಸವಕಲಾಗಿವೆ ಮತ್ತು ಹಳೆಯ ನೋಟುಗಳಾಗಿದ್ದು, ಇದರ ಬಗ್ಗೆಯೇ ಮಾತು ಕತೆ ನಡೆಯುತ್ತಿದೆ. ವಿಷಯಾಧಾರಿತ ಬೆಂಬಲ ನೀಡುವ ಇತರ ಸಮುದಾಯಗಳನ್ನು ನೋಡಿ ಕಲಿಯುವ ಸನ್ನಿವೇಶಕ್ಕೆ ಮುಸ್ಲಿಂ ಸಮುದಾಯ ಇನ್ನೂ ತೆರೆದುಕೊಂಡಿಲ್ಲ. ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ದೇಶದ ಸಂವಿಧಾನದ ಬಗ್ಗೆ ಅದು ಕೊಡಮಾಡಿದ ಹಕ್ಕುಗಳ ಬಗ್ಗೆ ಅಪಾರವಾದ ಅಧ್ಯಯನದ ಅಗತ್ಯವಿದೆ ಇದನ್ನು ಅರ್ಥಮಾಡಿಕೊಂಡು ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿರುವ ರಾಜಕಾರಣಿಗಳಲ್ಲಿ ಧಾರ್ಮಿಕ ನೇತಾರರಲ್ಲಿ ಇಂತಹವರ ಸಂಖ್ಯೆ ಬಹಳ ಕಡಿಮೆ. ಇತರ ಸಮುದಾಯಗಳು ಮುಸ್ಲಿಮರ ರಾಜಕಾರಣ ಹೇಗಿರಬೇಕು ಎನ್ನುವುದರ ಕುರಿತಂತೆ ಬಳಸುವ ಶಬ್ದಕೋಶಗಳತ್ತ ಕಣ್ಣಾಡಿಸಿದರೆ, ಸೆಕ್ಯುಲರ್ ಪಕ್ಷಗಳು ಹೇಳುವ; ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು, ಹಾಗಾಗಿ ನೀವೆಲ್ಲರೂ ಇಂತಹದೇ ಪಕ್ಷಕ್ಕೆ ಮತ ಹಾಕಬೇಕು ಎನ್ನುವಂತಹ ಮಾತುಗಳು, ಅವರು ಗೆದ್ದರೇ? ಇವರು ಗೆದ್ದರೇ? ಇದಕ್ಕೂ ಮುಸ್ಲಿಂ ಸಮುದಾಯಕ್ಕೂ ಸಂಬಂಧವೇ ಇಲ್ಲ. ಒಂದು ಪಕ್ಷದವರು ಗೆದ್ದರೆ, ಮುಸ್ಲಿಮರನ್ನು ದೂಷಿಸುವ, ಇತರರು ಗೆದ್ದರೆ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ನಂತರದಲ್ಲಿ ಮುಸ್ಲಿಮರನ್ನು ಕಡೆಗಣಿಸುವ ಮನಸ್ಥಿತಿಯೂ ಇದೆ. ಬೇರೆ ಸಮುದಾಯಗಳಿಗೆ ಇಲ್ಲದಂತಹ ನೀತಿಸಂಹಿತೆಯೊಂದನ್ನು ಮುಸ್ಲಿಂ ಮತದಾರರ ಮೇಲೆ, ಮುಸ್ಲಿಂ ರಾಜಕಾರಣಿಗಳು ಮತ್ತು ಪಕ್ಷಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೇರಿವೆ. ಮುಸ್ಲಿಮರು ಎಲ್ಲರಂತೆಯೇ ಈ ದೇಶದ ಪ್ರಜೆಗಳು, ಯಾರಿಗೆ ಮತ ಹಾಕಬೇಕು ಅಥವಾ ಹಾಕಬಾರದು ಎನ್ನುವ ಸ್ವಾತಂತ್ರದ ಅರಿವಿಲ್ಲದ ಮಂದಿ ಮುಸ್ಲಿಮರನ್ನು ದೂಷಿಸುತ್ತಲೇ ಇರುತ್ತಾರೆ.
ಕೋಮುವಾದಕ್ಕೂ ಮುಸ್ಲಿಮರಿಗೂ ಗಂಟುಹಾಕುವ ಮೂಲಕ ಗೆಲ್ಲುವ ತಂತ್ರಗಾರಿಕೆಯೂ ಈ ಚುನಾವಣೆಯಲ್ಲಿ ನಡೆಯಲು ಸಾಧ್ಯವಿಲ್ಲ. ಕೋಮುವಾದದ ಬಗ್ಗೆ ಮಾತನಾಡುತ್ತಿದ್ದ ಮುಸ್ಲಿಂ ನಾಯಕರು ಮತ್ತು ಮುಸ್ಲಿಂ ಧಾರ್ಮಿಕ ನೇತಾರರು ಹೆಚ್ಚಿನ ಪ್ರಭಾವ ಬೀರಲು ಆಗಿಲ್ಲ, ಆಗಿದ್ದರೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗುತ್ತಿರಲಿಲ್ಲ. ಯಾವುದಾದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಿಕೊಳ್ಳಬೇಕು, ನಾಯಕತ್ವ ಬೇರೆ, ಪ್ರತಿನಿಧಿತ್ವ ಬೇರೆ. ಪಕ್ಷಗಳ ಮೂಲಕ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ರಾಜಕೀಯ ಪ್ರತಿನಿಧಿತ್ವಕ್ಕೆ ಸಂಬಂಧಿಸಿದಂತೆ ಗುರುತಿಸಬಹುದು, ಆದರೆ ಇವರೆಲ್ಲಾ ಸಮುದಾಯದ ನಾಯಕರಾಗಲು ಸಾಧ್ಯವಿಲ್ಲ. ಧಾರ್ಮಿಕ ನಾಯಕತ್ವವನ್ನು ಎಲ್ಲಕ್ಕೂ ಅನ್ವಯಿಸಿ ಹೇಳಿದರೆ ತಪ್ಪಾಗಬಹುದು. ಈ ಮಾತು ಇತರ ಸಮುದಾಯಗಳಿಗೆ ಅನ್ವಯಿಸುವುದಿಲ್ಲ. ಒಕ್ಕಲಿಗರ ಪ್ರಶ್ನಾತೀತ ನಾಯಕ ದೇೇಗೌಡರು, ಲಿಂಗಾಯತರ ನಾಯಕ ಯಡಿಯೂರಪ್ಪನವರು, ಕುರುಬರ ನಾಯಕ ಸಿದ್ದರಾಮಯ್ಯನವರು. ಎರಡನೇ ಪೀಳಿಗೆಯ ನಾಯಕರು ಈ ಸಮುದಾಯಗಳಲ್ಲಿ ತಯಾರಾಗಿದ್ದಾರೆ. ಮಠಗಳು ಸಹ ರಾಜಕಾರಣದ ಮೇಲೆ ಹಿಡಿತ ಸಾಧಿಸಿವೆ. ಮುಸ್ಲಿಂ ಸಮುದಾಯದಲ್ಲಿ ಈ ರೀತಿಯ ಚಲನೆಗಳು ಸಾಧ್ಯವಾಗಿಲ್ಲ. ರಾಜಕಾರಣದಲ್ಲಿ ಇದ್ದರೆ ಸಾಲದು ಚುನಾವಣೆಯಲ್ಲಿ ಗೆಲ್ಲದೇ ಹೋದರೆ ಅವರನ್ನು ಕ್ಯಾರೇ ಎನ್ನುವವರಿಲ್ಲ.
ಸ್ವಾತಂತ್ರಾನಂತರದ ಚುನಾವಣೆಗಳನ್ನು ಅವಲೋಕಿಸಿದರೆ ಮೊದಲ ಲೋಕಸಭಾ ಚುನಾವಣೆಯಿಂದ ಹದಿನಾರನೆ ಲೋಕಸಭಾ ಚುನಾವಣೆಯವರೆಗೂ ಮುಸ್ಲಿಮರ ಪ್ರತಿನಿಧಿತ್ವ ಶೇ.11 ದಾಟಿಲ್ಲ. ಒಟ್ಟು ಹದಿನಾರು ಲೋಕಸಭಾ ಚುನಾವಣೆಗಳ ಫಲಿತಾಂಶವನ್ನು ಗಮನಿಸೋಣ:
1980ರ ಚುನಾವಣೆ ಹೊರತು ಪಡಿಸಿದರೆ ಲೋಕ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಶೇ.10ಕ್ಕಿಂತ ಕಡಿಮೆಯೇ ಇದೆ. ಇದಕ್ಕೆ ಯಾರನ್ನು ದೂರಬೇಕು? ಆಯ್ಕೆಯಾಗಿ ಹೋದವರು ಬಹುಪಾಲು ಶ್ರೀಮಂತ ಮತ್ತು ಮೇಲ್ವರ್ಗದ ಮುಸ್ಲಿಮರೇ ಆಗಿದ್ದಾರೆ. ಇವರೆಲ್ಲರ ಗ್ರಹಿಕೆ ಮುಸ್ಲಿಮರು ಅಂದರೆ ಒಂದು ನಿರ್ದಿಷ್ಟ ಧಾರ್ಮಿಕ ಗುಂಪು ಮತ್ತು ಇದು ಏಕಾಕೃತಿ ಸಮುದಾಯ ಎಂದು ಬಿಂಬಿಸಿದ್ದಾರೆ. ವಿವಿಧ ಸಾಮಾಜಿಕ ಗುಂಪುಗಳನ್ನು ಹೊಂದಿರುವ ಬಹುತ್ವವನ್ನು ಪ್ರತಿನಿಧಿಸುತ್ತಿರುವ ಸಮುದಾಯವನ್ನು ಏಕಾಕೃತಿಯ ನೆಲೆಯಲ್ಲೇ ಪರಿಭಾವಿಸಿರುವುದರ ಕಾರಣದಿಂದಾಗಿಯೇ ಇಂದು ಲೋಕಸಭೆಯಲ್ಲಿ ಪ್ರತಿನಿಧಿತ್ವ ಕಡಿಮೆಯಾಗಲು ಬಹುಮುಖ್ಯ ಕಾರಣ. ಕರ್ನಾಟಕದ ಮೀಸಲಾತಿ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ವಿವಿಧ ಸಾಮಾಜಿಕ ಗುಂಪುಗಳಿಗೆ ಸೇರಿದ ಕನಿಷ್ಠ 20 ಸಮುದಾಯಗಳು ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಮುಸ್ಲಿಮರದ್ದಾಗಿವೆ. ಇವುಗಳ ಹಿತಾಸಕ್ತಿ ಯಾವತ್ತೂ ಮುಸ್ಲಿಂ ರಾಜಕಾರಣದ ಅಜೆಂಡಾ ಆಗಲೇ ಇಲ್ಲ.
ಆದರೆ ದಲಿತ ರಾಜಕಾರಣಿಗಳು ಸರಕಾರದ ಕಿವಿಹಿಂಡಿ ಪುಟ್ಟ ಪುಟ್ಟ ಸಮುದಾಯಗಳ ಬಗ್ಗೆಯೂ ಗಮನಹರಿಸಿರುವುದು, ಅವರಿಗೆ ಪ್ರತ್ಯೇಕ ಬಜೆಟ್ ಕೊಡಿಸಿರುವುದು ಮತ್ತು ಅಧ್ಯಯನಗಳನ್ನು ಕರ್ನಾಟಕ ಸರಕಾರ ಮಾಡುತ್ತಿರುವುದನ್ನು ಅವಲೋಕಿಸಿದರೆ ನಮ್ಮ ಮುಸ್ಲಿಂ ರಾಜಕಾರಣಿಗಳಿಗೆ ಏನಾಗಿದೆ? ಎನ್ನುವ ಪ್ರಶ್ನೆ ಕಾಡದಿರದು. ಸಮುದಾಯದ ಬಗ್ಗೆ ಸಾಮಾಜಿಕ ಜ್ಞಾನದ ಕೊರತೆ ನಮ್ಮ ಬಹುಪಾಲು ಮುಸ್ಲಿಂ ರಾಜಕಾರಣಿಗಳಲ್ಲಿ ಎದ್ದು ಕಾಣುತ್ತದೆ. ಹಿಂದುಳಿದ ವರ್ಗಗಳ ಆಯೋಗದ ವರದಿಗಳ ಬಗ್ಗೆ ಪ್ರಾಥಮಿಕ ಅರಿವಿನ ಕೊರತೆ ಇದೆ. ನಮ್ಮಲ್ಲಿ ಒಗ್ಗಟ್ಟಿಲ್ಲ ಎನ್ನುವ ಸವಕಲು ವಾದವನ್ನು ಮುಸ್ಲಿಂ ರಾಜಕಾರಣಿಗಳು ಮಾಡುತ್ತಿದ್ದು, ಒಗ್ಗೂಡಿಸಬೇಕಾದವರು ಒಗ್ಗಟ್ಟಿಲ್ಲ ಎಂದರೆ ಹೇಗೆ? ಇನ್ನು ಕರ್ನಾಟಕ ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ಆಯೋಗ 90ರ ದಶಕದಲ್ಲಿ ಮಾಡಿದ ಅಧ್ಯಯನ ಆನಂತರ ದಿವಂಗತ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿ ಬಿಟ್ಟರೆ ಯಾವುದೇ ಹೊಸ ಅಧ್ಯಯನ ಆಗಿಲ್ಲ. ಹಿಂದಿನ ಸರಕಾರ ಮತ್ತು ಈಗಿನ ಸಮ್ಮಿಶ್ರ ಸರಕಾರದ ಮೂಲಕ ಸಮುದಾಯಗಳ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುವ ಅಗತ್ಯವಿದೆ. ಆದರೆ ಮುಸ್ಲಿಂ ರಾಜಕಾರಣಿಗಳಿಗೆ ಈ ಬಗ್ಗೆ ಆಸಕ್ತಿ ಇಲ್ಲ, ಸಮುದಾಯದ ಹಿತಾಸಕ್ತಿ ತೋರಿಕೆಯ ಮಟ್ಟದಲ್ಲಿದೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸಬಲ್ಲ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಈ ಸಮುದಾಯಗಳಿಗೆ ಸೇರಿದ ಮುಸ್ಲಿಂ ಮತದಾರರು ಯಾಕಾಗಿ ಇವರಿಗೆ ವೋಟು ಹಾಕಬೇಕು? ಇನ್ನು ಈ ರಾಜಕಾರಣಿಗಳೊಂದಿಗೆ ಆಗಾಗ ಕಾಣಿಸಿಕೊಳ್ಳುವ ಕೆಲವು ಮುಸ್ಲಿಂ ಪತ್ರಕರ್ತರು ಸೆಲ್ಫಿ ಹಿಡಿದು ಫೇಸ್‌ಬುಕ್‌ನಲ್ಲಿ ಹಾಕಿಕೊಂಡು ಲೈಕ್ ಪಡೆದುಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆಯೇ ಹೊರತೂ ತಮಗಿರುವ ಸಾಮಾಜಿಕ ಜವಾಬ್ದಾರಿಯ ಕುರಿತು ಕಿಂಚಿತ್ತೂ ಯೋಚಿಸುತ್ತಿಲ್ಲ. ಯಾಕೆಂದರೆ ಇವರಿಗೂ ಸಹ ಸಮುದಾಯದ ಆಳವಾದ ಪರಿಚಯ ಇಲ್ಲ ಅಧ್ಯಯನವಂತೂ ಮಾಡುವುದೇ ಇಲ್ಲ. ಮುಸ್ಲಿಂ ಪತ್ರಕರ್ತರಿಗೂ ಮತ್ತು ರಾಜಕಾರಣಿಗಳಿಗೂ ಒಂದು ಸಾಮ್ಯತೆ ಇದೆ, ಈ ಎರಡೂ ಗುಂಪುಗಳೂ ಸಮುದಾಯದಿಂದ ದೂರ ಉಳಿದಿವೆ. ಇವರ ಬಳಿ ಹೋದರೆ ಇವರ ಕ್ಯಾತೆ ಬಗ್ಗೆ ಮಾತುಕತೆ ನಡೆಯುತ್ತದೆ, ಒಬ್ಬರ ಬೆನ್ನು ಮತ್ತೊಬ್ಬರು ತಟ್ಟಿಕೊಂಡು ಮಾತು ಮುಗಿಸಿಬಿಡುತ್ತಾರೆ. ಇನ್ನು ಮುಸ್ಲಿಮರಲ್ಲಿರುವ ಬುದ್ಧಿ ಜೀವಿಗಳಿಗೆ ಯಾವುದೇ ಪಕ್ಷ ಮಣೆಹಾಕುವುದಿಲ್ಲ. ಸಾಮಾಜಿಕ ಕಾರ್ಯಕರ್ತರು ರಾಜಕಾರಣಿಗಳಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ.
(ಮುಂದುವರಿಯುವುದು)