ಚುನಾವಣೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದೆಯೇ ? ಮತದಾರರ ಸಹಾಯವಾಣಿ ‘1950’ರ ನೆರವು ಪಡೆಯಿರಿ
ಉಡುಪಿ, ಎ.8: ಎ.18ರಂದು ನಡೆಯುವ ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದೆಯೇ... ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು... ನಿಮ್ಮ ಮತಗಟ್ಟೆಯ ಬಗ್ಗೆ ಮಾಹಿತಿ.... ಹಾಗಿದ್ದರೆ ತಕ್ಷಣ ಟೋಲ್ಫ್ರೀ ನಂ. ‘1950’ಕ್ಕೆ ಕರೆ ಮಾಡಿ.
ಮನೆಯಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಇದ್ದಾರೆಯೇ, ಅವರನ್ನು ಮತಕೇಂದ್ರಕ್ಕೆ ಕರೆದುಕೊಂಡು ಹೋಗಿ ಮತದಾನ ಮಾಡಿಸಲು ತೊಂದರೆ ಯಿದೆಯೇ.....ಚಿಂತೆ ಬಿಡಿ.. ಉಡುಪಿ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ ‘1950’ಕ್ಕೆ ಮಾಹಿತಿ ನೀಡಿ..
ಹೌದು.. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲಾಡಳಿತದ ವತಿಯಿಂದ ಪ್ರಾರಂಭಿಸಲಾಗಿರುವ ಮತದಾರರ ಸಹಾಯವಾಣಿ ಕೇಂದ್ರದ ಮೂಲಕ, ಸುಗಮ ಚುನಾವಣೆ ಮತ್ತು ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಅಗತ್ಯವಿರುವ ನೆರವು ನೀಡಲಾಗುತ್ತಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಮತದಾರರ ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಿದರೆ ಸಾಕು, ಅದನ್ನು ನೊಂದಣಿ ಮಾಡಿಕೊಂಡು ಸಂಬಂದಪಟ್ಟ ಅಧಿಕಾರಿಗಳ ಮೂಲಕ ತ್ವರಿತಗತಿಯಲ್ಲಿ ಅಗತ್ಯ ನೆರವು ನೀಡಲಾಗುತ್ತದೆ.
ಮನೆಯಲ್ಲಿನ ಹಿರಿಯ ನಾಗರಿಕರಿಗೆ ಮತದಾನದ ದಿನ ಮತಗಟ್ಟೆಗೆ ತೆರಳಲು ವಾಹನ ಸೌಲಭ್ಯ, ವೀಲ್ಚೇರ್ ವ್ಯವಸ್ಥೆ, ಅಂಧ ಮತದಾರರಿಗೆ ಬೇಕಾದ ಸೌಲಭ್ಯಗಳು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಎಲ್ಲಿದೆ, ಯಾವ ಕ್ಷೇತ್ರ,, ಯಾವ ಮತಗಟ್ಟೆ ಎಂಬ ಮಾಹಿತಿ ಸಹ ನಿಮಗೆ ಇದರಲ್ಲಿ ತಕ್ಷಣಕ್ಕೆ ಲಭ್ಯವಾಗಲಿದೆ.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಸಹಾಯವಾಣಿಯ ಮೂಲಕ 1327 ಕರೆ ಸ್ವೀಕರಿಸಿದ್ದು, ತಮ್ಮ ಮತಕೇಂದ್ರದ ಬಗ್ಗೆ ಮಾಹಿತಿ ಕೇಳಿ 317 ಮಂದಿ, ಹೊಸದಾಗಿ ಮತಪಟ್ಟಿಗೆ ಹೆಸರು ಸೇರಿಸಲು 433 ಮಂದಿ, ಮತಪಟ್ಟಿಯಲ್ಲಿ ಹೆಸರು ತೆಗೆಯುವ ಬಗ್ಗೆ 144 ಮಂದಿ, ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುವ ಬಗ್ಗೆ 229 ಮಂದಿ, ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು 140 ಮಂದಿ, 22 ದೂರುಗಳು, ನೇರವಾಗಿ ನೀಡಲಾಗಿರುವ 42 ದೂರುಗಳನ್ನು ಸ್ವೀಕರಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಹ ಸಾರ್ವಜನಿಕರು ಈ ಸಂಖ್ಯೆಗೆ ದೂರು ನೀಡಬಹುದಾಗಿದೆ. ಈಗಾಗಲೇ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನೀಡಿರುವ ದೂರುಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ. ಸಹಾಯವಾಣಿ ಮೂಲಕ ದಿನದ 24 ಗಂಟೆಗಳ ಕಾಲವೂ ದೂರು ಸ್ವೀಕರಿಸಲಾಗುತ್ತಿದೆ. ಇದಕ್ಕಾಗಿ 3 ಪಾಳಿಯಲ್ಲಿ 6 ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ದಿನದ ಯಾವುದೇ ಸಮಯದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.