ರಾಷ್ಟ್ರೀಯ ಪಕ್ಷಗಳನ್ನು ನೋಡಿಯಾಗಿದೆ, ಪರ್ಯಾಯವೇ ಇನ್ನು ಮುಂದಕ್ಕೆ -ಪ್ರಕಾಶ್ ರಾಜ್
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಹುಭಾಷಾ ನಟ, ಸಾಮಾಜಿಕ ಹೋರಾಟಗಾರ, ಚಿಂತಕ ಪ್ರಕಾಶ್ ರಾಜ್, ಗೌರಿ ಹತ್ಯೆಯ ನಂತರ ಪ್ರಭುತ್ವವನ್ನು ಪ್ರಶ್ನಿಸುವ, ಆ ಮೂಲಕ ಜನರಲ್ಲಿ ಜಾಗೃತಿಯನ್ನುಂಟುಮಾಡುವ ದಿಸೆಯಲ್ಲಿ ಬಯಲಿಗೆ ಬಂದವರು. ಮುಂದುವರಿದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕಾರಣಕ್ಕೂ ಕಾಲಿಟ್ಟವರು. ಅವರ ಚಿಂತನೆ, ಯೋಚನೆ ಮತ್ತು ಕಾರ್ಯಾಚರಣೆಗಳ ಸುತ್ತ ‘ವಾರ್ತಾಭಾರತಿ’ಯೊಂದಿಗೆ ನಡೆದ ಮಾತುಕತೆ ಇಲ್ಲಿದೆ.
ಪ್ರ: ಸಿನೆಮಾ ಕ್ಷೇತ್ರದ ಹಣ, ಪ್ರಚಾರ, ಪ್ರಶಸ್ತಿ, ಖ್ಯಾತಿಗಳ ಸುರಕ್ಷಾ ವಲಯದಲ್ಲಿದ್ದ ನೀವು, ಗೌರಿ ಹತ್ಯೆ ಬಳಿಕ ಸಾರ್ವಜನಿಕ ಬದುಕಿಗೆ ತೆರೆದುಕೊಂಡವರು, ನಂತರ ಅಲ್ಪಾವಧಿಯಲ್ಲೇ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿದ್ದು ದುಡುಕಿನ ನಿರ್ಧಾರ ಅನ್ನಿಸುತ್ತಿಲ್ಲವೇ?
ಪ್ರಕಾಶ್ ರಾಜ್: ಕಲಾವಿದ, ನಟ ಎನ್ನುವುದಕ್ಕೂ ಮುಂಚೆ ನಾನೊಬ್ಬ ಈ ದೇಶದ ಪ್ರಜೆ. ಒಬ್ಬ ಮನುಷ್ಯ. ಮನುಷ್ಯ ಬೆಳೆದಂತೆ, ಆ ಕ್ಷಣದಲ್ಲಿ ಏನನ್ನು ಗ್ರಹಿಸುತ್ತಾನೆಯೋ ಅದನ್ನು ಅಭಿವ್ಯಕ್ತಿಸಬೇಕು. ಅದನ್ನು ತನ್ನ ತಾಯಿ, ಪರಿಸರ, ಸಾಹಿತ್ಯ, ರಂಗಭೂಮಿ, ಗೆಳೆಯರು ಕಲಿಸುತ್ತಾರೆ. ಈ ಸಿನೆಮಾ ಕ್ಷೇತ್ರ ನನಗೆ ಕಂಫರ್ಟ್ ಲೈಫನ್ನು ನೀಡಿದೆ ನಿಜ. ಆದರೆ ಅದಕ್ಕೂ ಮೀರಿ, ಈ ಸಮಾಜದಿಂದ ಇಷ್ಟೆಲ್ಲ ಪಡೆದ ನಾನು ಈ ಸಮಾಜಕ್ಕೆ ಕೊಟ್ಟಿದ್ದೇನು ಎನ್ನುವುದೂ ಮುಖ್ಯವಾಗಬೇಕಲ್ವಾ? ನೋಡಿ, ಗೌರಿ, ದಾಭೋಲ್ಕರ್, ಕಲಬುರ್ಗಿ ಯಂತವರು ನಮ್ಮ ಅಭಿವ್ಯಕ್ತಿಯ ದನಿಗಳು. ಅದನ್ನು ಹಿಚುಕಲು ಪ್ರಯತ್ನಿಸಲಾಯಿತು. ಅದರಲ್ಲೂ ಗೌರಿಯ ಹತ್ಯೆಯಾದಾಗ ಕೆಲವರು ಸಂಭ್ರಮಿಸಿದರು. ಸಂಭ್ರಮಿಸುವುದು ತಪ್ಪಲ್ಲವಾ ಎಂದಾಕ್ಷಣ ನನ್ನ ಮೇಲೆ ಮುಗಿಬಿದ್ದರು. ಆಗ ಈ ಸಮಾಜ ಸರಿ ಇಲ್ಲ, ಪ್ರಶ್ನಿಸಬೇಕು, ಗಟ್ಟಿ ದನಿಯಾಗಬೇಕೆನಿಸಿದ್ದು ನಿಜ. ಜೊತೆಗೆ ಇನ್ನೊಂದು ಗೌರಿ ನಮ್ಮ ದೇಶದಲ್ಲಿ ಆಗಬಾರದು ಎಂಬ ಕಾರಣಕ್ಕೆ, ಒಂದು ದನಿಯನ್ನು ಅಡಗಿಸಿದರೆ ಮತ್ತೊಂದು ದೊಡ್ಡ ದನಿ ಹುಟ್ಟುತ್ತದೆ ಎಂಬುದನ್ನು ತೋರುವುದಕ್ಕೆ ಪ್ರಭುತ್ವವನ್ನು ಪ್ರಶ್ನಿಸತೊಡಗಿದೆ. ಆದರೆ ಕಳೆದ ಐದು ವರ್ಷಗಳ ದೇಶದ ಸ್ಥಿತಿಯನ್ನು, ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ, ಇಲ್ಲಿ ಬರೀ ಪ್ರಶ್ನೆ ಕೇಳುತ್ತಾ ಕೂರುವುದಲ್ಲ, ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾದಂತಹ ಅನಿವಾರ್ಯತೆ ಇದೆ ಅನ್ನಿಸಿತು. ಜೊತೆಗೆ ರಾಷ್ಟ್ರೀಯ ಪಕ್ಷಗಳಿಗೆ, ಅವುಗಳ ಬೆಳವಣಿಗೆಯಷ್ಟೇ ಮುಖ್ಯವಾಗಿದೆ, ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕೆಟ್ಟ ಆಸೆ ಇದೆ. ಇದರ ನಡುವೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರವೇ ಇಲ್ಲದಂತಾಗುತ್ತಿದೆ. ಆ ಕಾರಣಕ್ಕಾಗಿ ಪ್ರಜೆಗಳ ದನಿಯಾಗಿ, ಅವರ ಆಶೋತ್ತರಗಳನ್ನು ಪ್ರತಿನಿಧಿಸಬಲ್ಲ ಸಂಸದನಾಗಬೇಕೆಂದು ಸಕ್ರಿಯ ರಾಜಕಾರಣಕ್ಕೆ ಬಂದಿದ್ದೇನೆ.
ಪ್ರ: ತಳಮಟ್ಟದ ಕಾರ್ಯಕರ್ತರು, ಬೂತ್ ಮಟ್ಟದ ಸಂಘಟನೆ, ರಾಜಕೀಯ ನೆಲೆ ಇಲ್ಲದೆ, ಕೇವಲ ಸಿನೆಮಾ ಜನಪ್ರಿಯತೆಯನ್ನು ನೆಚ್ಚಿಕೊಂಡು ಚುನಾವಣಾ ರಾಜಕಾರಣ ಮಾಡುವುದು, ಗೆಲ್ಲುವುದು ಸಾಧ್ಯವೇ?
ಪ್ರಕಾಶ್ ರಾಜ್: ನೀವೇಳಿದ್ದು ಸರಿ. ಆದರೆ ನಾವೆಲ್ಲ ಚುನಾವಣೆ ಯನ್ನು ಆ ಥರ ನೋಡ್ತಾ ಬಂದಿರೋದೇ ಅದರ ಪ್ರಾಬ್ಲಂ. ಚುನಾವಣೆ ಅನ್ನೋದು ಇವತ್ತು ಮಾರ್ಕೆಂಟಿಂಗ್ ಆಗಿದೆ, ಬ್ರಾಂಡಿಂಗ್ ಆಗಿದೆ. ಚುನಾವಣೆ ಅಂದರೆ ಮತ ಖರೀದಿ ಮಾಡುವುದಾ, 50-60 ಕೋಟಿ ದುಡ್ಡು ಖರ್ಚು ಮಾಡುವುದಾ. ಬೂತ್ ಮಟ್ಟ ಅಂದರೆ ಏನು, ಜನರ ಹತ್ತಿರ ಹೋಗೋದು. ಬಿ ಮೈ ಬೂತ್ ಲೀಡರ್ ಎಂಬ ಅಭಿಯಾನ ಶುರು ಮಾಡಿದೆ, ಐದೂವರೆ ಸಾವಿರ ಜನ ಅವರಾಗಿಯೇ ಮುಂದೆ ಬಂದು ಕೆಲಸ ಮಾಡ್ತಿದಾರೆ. ಇವತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರವನ್ನು ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಕೋಟೆ ಅಂತಿದೀರ, ಯಾರ ಕೋಟೇರಿ ಈ ದೇಶ. ಅವರು 20 ದಿನ ಇರುವಾಗ ಅಭ್ಯರ್ಥಿ ಘೋಷಣೆ ಮಾಡಿ, ಚುನಾವಣಾ ತಯಾರಿ ಮಾಡಿಕೊಂಡರು, ನಾನು ಮೂರು ತಿಂಗಳಿನಿಂದಲೇ ಮಾಡೋಕೆ ಶುರು ಮಾಡಿದೆ. ಚುನಾವಣೆ ಅನ್ನೋದು ಅಭ್ಯರ್ಥಿ ಮತ್ತು ಪ್ರಜೆಯ ನಡುವಿನ ಸಂವಾದವಾಗಬೇಕು. ಮುಂದಿನ ವಿಷನ್ ಏನು ಅಂತ ವಿವರಿಸಬೇಕು. ಅಷ್ಟಕ್ಕೂ ನಾನು ಒಬ್ಬಂಟಿ ಅಲ್ಲ. ನನ್ನ ಜೊತೆ ಆಪ್ ಪಕ್ಷವಿದೆ, ಕಮ್ಯುನಿಷ್ಟರು ಬೆಂಬಲ ವ್ಯಕ್ತಪಡಿಸಿದ್ದಾರೆ, ಮಹಿಳಾ ಸಂಘಟನೆಗಳು, ಆಟೋ ಚಾಲಕರು, ವೈದ್ಯರು, ಶಿಕ್ಷಕರು.. ಇವರೇ ನನ್ನ ಬೂತ್ ಬಾಯ್ಸೋ. ನೀನು ಜನಪರವಾಗಿದ್ದೀಯ, ಬದಲಾವಣೆ ಬಯಸ್ತಿದೀಯ ನಿನ್ನ ಪರವಾಗಿ ನಾವು ನಿಂತ್ಕೋತೀವಿ ಎಂದು ಮುಂದೆ ಬಂದಿದ್ದಾರೆ. ಇದೇ ಆಗಬೇಕಾಗಿರೋದು, ಪಾರ್ಟಿಸಿಪೇಟರಿ ಡೆಮಾಕ್ರಸಿ. ಈ ಡೆಮಾಕ್ರಸಿಯಲ್ಲಿ ಚುನಾವಣೆಗಳೆಂದರೆ ನಾಡಹಬ್ಬ. ಈ ಹಬ್ಬ ಸಂಭ್ರಮದ ಹಬ್ಬವಾಗಬೇಕಾದರೆ ಹೊಸಬರು ಬರಬೇಕು, ಬದಲಾವಣೆ ಕಾಣಬೇಕು.
ಪ್ರ: ಕಾಂಗ್ರೆಸ್ ಇಡೀ ರಾಜ್ಯದಲ್ಲಿ ಒಬ್ಬ ಮುಸ್ಲಿಮ್ ವ್ಯಕ್ತಿಗೆ ಟಿಕೆಟ್ ನೀಡಿದೆ. ಅದೇ ಕ್ಷೇತ್ರದಲ್ಲಿ ನೀವು ಸ್ಪರ್ಧೆಗೆ ಇಳಿದಿದ್ದೀರ. ಜಾತ್ಯತೀತ ಮತಗಳು ವಿಭಜನೆಯಾಗಿ, ಮೂರನೆಯವರಿಗೆ ಲಾಭವಾಗುವುದಿಲ್ಲವೆ?
ಪ್ರಕಾಶ್ ರಾಜ್: ನೋಡಿ, ಎಷ್ಟು ತಪ್ಪಾಗಿದೆ. ಸೆಕ್ಯುಲರ್ ವೋಟ್ಸ್ ಅಂದ್ರೇನು. ಇವತ್ತು ಕಾಂಗ್ರೆಸ್ ಪಕ್ಷ ಸೆಕ್ಯುಲರ್ರೆ? ಸೆಕ್ಯುಲರ್ ಅಂತ ಹೇಳಿಕೊಳ್ಳುವ ಕಾರಣಕ್ಕೆ ಅವರು ಸೆಕ್ಯುಲರ್ ಆಗೋದಕ್ಕೆ ಸಾಧ್ಯವಿಲ್ಲ. ಇವರದು ಸಾಫ್ಟ್ ಹಿಂದುತ್ವ, ಅವರದು ಹಾರ್ಡ್ ಹಿಂದುತ್ವ. ಇವರಿಬ್ಬರೂ ಸೆಕ್ಯುಲರ್ ಅಲ್ಲ ಅನ್ನೋದು ಜನಕ್ಕೆ ಗೊತ್ತಾಗಿದೆ. ಅಷ್ಟಕ್ಕೂ ವೋಟ್ ಬ್ಯಾಂಕ್ ಅಂದ್ರೇನು, ಮುಸಲ್ಮಾನರು, ಕ್ರಿಶ್ಚಿಯನ್ನರು, ದಲಿತರನ್ನು ಭಯದಲ್ಲಿಟ್ಟು ವೋಟ್ ಹಾಕಿಸೋದಾ? ವೋಟ್ ಬ್ಯಾಂಕ್ ಪಾಲಿಟಿಕ್ಸ್ ಅಂತ ಮಾತನಾಡೋದಾದ್ರೆ, ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ಗೆದ್ದು ಒಂದು ದಶಕವಾಗಿದೆ. ಈಗ ನಾನು ಸ್ಪರ್ಧಿಸಿದ್ದರಿಂದ ಸೆಕ್ಯುಲರ್ ವೋಟ್ ಡಿವೈಡ್ ಆಗುತ್ತೆ ಅನ್ನುವುದರಲ್ಲಿ ಅರ್ಥವೇ ಇಲ್ಲ. ಕಾಲಕ್ಕೆ ತಕ್ಕಂತೆ ಚುನಾವಣಾ ಪರಿಭಾಷೆಯೂ ಬದಲಾಗಬೇಕಿದೆ. ವೋಟ್ ಬ್ಯಾಂಕ್ ಅಲ್ಲ, ಅವರು ಮನುಷ್ಯರು, ಪ್ರಜೆಗಳು. ಆಳುವವರು ಅಂದರೇನು? ಆಳುವವರು ಬೇಡ ಅನ್ನುವ ಕಾರಣಕ್ಕೆ ಅಲ್ಲವೇ ಪ್ರಜಾಪ್ರಭುತ್ವ ಬಂದಿದ್ದು. ಅಭ್ಯರ್ಥಿ ಗೆಲ್ಲೋದು, ಸೋಲೋದು ಅಲ್ಲ; ಆರಿಸಲ್ಪಡುವವನು, ಆರಿಸಲ್ಪಡದವನು ಅಷ್ಟೆ. ಉತ್ತಮ ಸರಕಾರವನ್ನು, ಒಳ್ಳೆಯ ನಾಯಕನನ್ನು ಆರಿಸಿದರೆ ಜನ ಗೆಲ್ತಾರೆ. ಕೆಟ್ಟ ಸರಕಾರವನ್ನು ಆರಿಸಿದರೆ ಜನ ಸೋಲ್ತಾರೆ. ಅದು ಪ್ರಜಾಪ್ರಭುತ್ವದ ಸೋಲು. ಆ ನಿಟ್ಟಿನಲ್ಲಿ ಪರ್ಯಾಯ ರಾಜಕಾರಣಕ್ಕೆ ಕರ್ನಾಟಕ ಸಿದ್ಧವಾಗಿದೆಯೇ, ನೋಡೋಣ. ಕಾಂಗ್ರೆಸ್-ಬಿಜೆಪಿಗಳೆಂಬ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಜನರಿಂದ ದೂರವಾಗ್ತಿದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಚುನಾವಣೆ ಇದ್ದಾಗ ಬರ್ತಾರೆ, ಮಿಕ್ಕಂತೆ ಕಣ್ಮರೆಯಾಗ್ತಾರೆ. ಇದು ಜನರಿಗೂ ಗೊತ್ತಾಗಿದೆ. ನಟನಾಗಿ, ಬರಹಗಾರನಾಗಿ, ಸಾಮಾಜಿಕ ಕಾರ್ಯಕರ್ತನಾಗಿ, ಚಿಂತಕನಾಗಿ ಅವರಿಬ್ಬರಿಗಿಂತ ಭಿನ್ನ ಅನ್ನಿಸಿದೆ, ನೋಡೋಣ.
ಪ್ರ: ಬೆಂಗಳೂರಿನ ಬೀದಿಗಳಲ್ಲಿ ಓಡಾಡ್ತಿದೀರಾ, ಜನರ ಸ್ಪಂದನ ಹೇಗಿದೆ?
ಪ್ರಕಾಶ್ ರಾಜ್: ಅದ್ಭುತವಾಗಿದೆ. ಬೆಂಗಳೂರಂದ್ರೆ ವಿಧಾನಸೌಧ, ಎಂಜಿ ರೋಡ್, ಕಮರ್ಷಿಯಲ್ ಸ್ಟ್ರೀಟು, ಐಟಿ-ಬಿಟಿಯಷ್ಟೇ ಅಲ್ಲ. ಇಲ್ಲಿ ಶ್ರೀಮಂತರಿಗಿಂತ ಬಡವರು ಹೆಚ್ಚಾಗಿದ್ದಾರೆ. ನಿಮಗ್ಗೊತ್ತಾ, ಇಲ್ಲಿ 2,000 ಸ್ಲಂಗಳಿವೆ. ಆ ಬಡವರಿಗೆ ಕನಿಷ್ಠ ಸೌಲಭ್ಯವಾದ ಕುಡಿಯೋ ನೀರಿಲ್ಲ. ಮೊನ್ನೆ ಮಹದೇವಪುರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ಒಬ್ಬ ಮಹಿಳೆ 2 ಲೀಟರಿನ ನಾಲ್ಕು ಬಾಟಲಿಗಳಿಗೆ ನೀರು ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದಳು. ಅಂದರೆ, ಈ ಕ್ಷಣದ ದಾಹಕ್ಕಲ್ಲದೆ, ಮೂರ್ನಾಲ್ಕು ದಿನದ ದಾಹ ಕ್ಕೇನು ಎಂಬ ಭಯ ಹುಟ್ಟಿಸಿದ್ದಾರೆ. ಕುಡಿಯುವ ನೀರಿಗೆ ಗತಿ ಇಲ್ಲದ ಸ್ಥಿತಿಗೆ ತಂದು ನಿಲ್ಲಿಸಿ, ಒಬ್ಬ 33 ಸಾವಿರ ಕೋಟಿಯ ಸ್ಟೀಲ್ ಬ್ರಿಡ್ಜ್ ಬಗ್ಗೆ ಮಾತನಾಡೋದು, ಇನ್ನೊಬ್ಬ 3 ಸಾವಿರ ಕೋಟಿ ಶಿಲೆ ಬಗ್ಗೆ ಮಾತನಾಡೋದು ಅಂದರೆ, ಏನ್ ನಡೀತಿದೆ ಇಲ್ಲಿ? ಅವರ ಆಡಳಿತ, ದೂರದೃಷ್ಟಿ ಹೇಗಿದೆ ಅನ್ನುವುದು ಅರ್ಥವಾಗುವುದಿಲ್ಲವೇ? ನಾನೇನು ಹೊಸದನ್ನು ಹೇಳ್ತಿಲ್ಲ. ಅವರ ಮನಸ್ಸಿನಲ್ಲಿರುವುದನ್ನು, ಅವರಿಗೆ ಹೇಳಲಿಕ್ಕೆ ಆಗದ್ದನ್ನು ನಾನು ಹೇಳ್ತಿದ್ದೇನೆ. ಹಾಗಾಗಿ ಅವರಿಗೆ ಹತ್ತಿರವಾಗಿದ್ದೇನೆ, ಆಪ್ತನಾಗಿದ್ದೇನೆ. ನೇರ ಸ್ಪರ್ಧೆ ಎನ್ನುತ್ತಿದ್ದವರು ಈಗ ತ್ರಿಕೋಣ ಸ್ಪರ್ಧೆ ಎನ್ನುವಂತಾಗಿದೆ. ಅದೇ ದೊಡ್ಡ ವಿಷಯವಲ್ಲವೇ? ಇವತ್ತು ಪರ್ಯಾಯ ರಾಜಕಾರಣಕ್ಕೆ ಜನ ಸಿದ್ಧರಾಗಿದ್ದಾರ, ಇವರಿಬ್ಬರಲ್ಲದೆ ಇನ್ನೊಬ್ಬರು ಯೋಗ್ಯರು, ಅರ್ಹರು ಬಂದರೆ ಕೇಳೋಕೆ ರೆಡಿ ಇದಾರ ಅನ್ನೋದು ಗೊತ್ತಾಗಲಿ ಬಿಡಿ. ಗೆಲ್ಲೋದು, ಸೋಲುವುದು ಮುಖ್ಯವಲ್ಲ.
ಪ್ರ: ಮಾತೆತ್ತಿದರೆ ರಾಷ್ಟ್ರೀಯತೆ, ದೇಶಭಕ್ತಿ, ಸೇನೆ, ಸರ್ಜಿಕಲ್ ಸ್ಟ್ರೈಕ್ ಅಂತಾರೆ... ಗೆದ್ದು ಬೀಗುತ್ತಿರುವ ಬಿಜೆಪಿಯನ್ನು ಎದುರಿಸುವುದು ಹೇಗೆ?
ಪ್ರಕಾಶ್ ರಾಜ್: ಎದುರಿಸೋದು ಅಂದರೆ ಅವರ ಹಣಬಲದೊಂದಿಗಲ್ಲ. ಜನರ ಜೊತೆ ಸಂವಾದ ಮಾಡುವ ಮೂಲಕ. ಅವರ ಸಮಸ್ಯೆಗಳನ್ನು ಅವರೇ ಪ್ರಶ್ನಿಸುವಂತೆ ಎಜುಕೇಟ್ ಮಾಡುವ ಮೂಲಕ. ಕಾಯ್ತಿರಿ, ಅವರನ್ನು ಜನ ಉಗಿದು ಕಳಿಸುತ್ತಾರೆ. ಈಗ ನಮ್ಮದೇ ದುಡ್ಡಿಂದ ಶುರುವಾದ ಸರಕಾರಿ ಶಾಲೆ ಸರಿಯಾಗಿ ನಡೆಯದೆ, ನಮ್ಮ ಮಗುವನ್ನು ಖಾಸಗಿ ಶಾಲೆಗೆ ಕಳಿಸೋದು, ಅದಕ್ಕಾಗಿ ಇನ್ನಷ್ಟು ಕಷ್ಟಪಡೋದು, ಹಣ ಹೊಂದಿಸೋದು ಇದೆಲ್ಲ ಅರ್ಥವಾಗುವುದಿಲ್ಲವೇ? ಸರಕಾರಿ ಆಸ್ಪತ್ರೆಗಳಿವೆ, ಅದಕ್ಕೆ ನಮ್ಮ ತೆರಿಗೆಯ ಕೋಟ್ಯಂತರ ಹಣ ವ್ಯಯಿಸಲಾಗ್ತಿದೆ, ಆದರೂ ಅಲ್ಲಿ ಕನಿಷ್ಠ ಚಿಕಿತ್ಸೆಯೂ ಸಿಗದೆ ಪ್ರೈವೇಟ್ ಹಾಸ್ಪಿಟಲ್‌ಗೆ ಹೋಗಬೇಕಾದ ಪರಿಸ್ಥಿತಿ ಇದೆ ಅಂದರೆ ಏನು? ಮನೆಯ ಮುಂದೆ ಮೋರಿ ಕಟ್ಟಿಕೊಂಡಿದೆ, ಬೀದಿಯಲ್ಲಿ ಧೂಳು ಜಾಸ್ತಿಯಾಗಿದೆ, ಅದರಿಂದ ಆರೋಗ್ಯ ಕೆಟ್ಟಿದೆ ಅನ್ನುವುದು, ಅದು ಯಾರಿಂದ ಆಗುತ್ತಿದೆ ಎಂಬುದನ್ನು ತಿಳಿಸಿಕೊಡಬೇಕು. ನಾನು ಒಬ್ಬ ಹೆಂಗಸನ್ನು ಕೇಳಿದೆ, ನಿನಗೆ ವೋಟ್ ಹಾಕಲು ಎಷ್ಟು ಕೊಡುತ್ತಾರೆ ಅಂತ, ಆಕೆ ಒಂದು ಸಾವಿರ ಅಂದಳು. ಐದು ವರ್ಷಕ್ಕೆ ಒಂದು ಸಾವಿರ, ವರ್ಷಕ್ಕೆ 250, ತಿಂಗಳಿಗೆ 25 ರೂಪಾಯಿ, ದಿನಕ್ಕೆಷ್ಟಾಯಿತು ಎಂದೆಲ್ಲ ಲೆಕ್ಕ ಹೇಳಿದರೆ, ಈ ಚಿಲ್ಲರೆ ಕಾಸಿಗೆ ನಿನ್ನ ಮತ ಮಾರುತ್ತೀಯ ಎಂದರೆ, ಜನ ಅರ್ಥ ಮಾಡಿಕೊಳ್ಳುತ್ತಾರೆ. ಇದಕ್ಕೆಲ್ಲ ತುಂಬಾ ಸಹನೆ, ತಾಳ್ಮೆ ಬೇಕು. ಈ ಮೂರ್ನಾಲ್ಕು ತಿಂಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ. ಇವತ್ತು ಜನ, ಅದರಲ್ಲೂ ಬಡ ಮತ್ತು ಕೆಳ ಮಧ್ಯಮವರ್ಗದ ಜನ ನಂಬಿಕೆ ಕಳಕೊಂಡಿದ್ದಾರೆ. ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ.
ಪರಿಸ್ಥಿತಿ ಹೀಗಿದ್ರು, ರಾಷ್ಟ್ರೀಯ ಪಕ್ಷವೊಂದರ, ಎರಡು ಸಲ ಗೆದ್ದ ಸಂಸದರೊಬ್ಬರು ಏನೂ ಮಾಡದೆ ಮೋದಿ ಮೋದಿ ಅಂತಿದಾರೆ. ಅವರಿಗೆ ನಾನು ಕೇಳೋದಿಷ್ಟೆ, ಅರೆ ನೀನೇನು ಮಾಡಿದಿಯಾ ಹೇಳಪ್ಪ, ರೋಡ್ ಅಗೆಯೋದು, ಬ್ರಿಡ್ಜ್ ಕಟ್ಟೋದಷ್ಟೇ ಕೆಲಸವಲ್ಲ, ಮಾಡಿದ್ರು ಹೇಳಿಕೊಳ್ಳಬೇಕಾಗಿಲ್ಲ. ಇಲ್ಲಿ ಮೋದಿ ಬಂದು ನಮ್ಮ ಕಷ್ಟ ಸುಖ ಕೇಳಲ್ಲ. ಬೆಂಗಳೂರಿನ ಜನಕ್ಕೆ ಪುಲ್ವಾಮ ಬೇಕಿಲ್ಲ. ಅದ್ಯಾರೋ ಉತ್ತರ ಪ್ರದೇಶದ ಮುಖ್ಯಮಂತ್ರಿಯೊಬ್ಬ ಭಾರತದ ಸೇನೆಯನ್ನ ‘ಮೋದಿಸೇನೆ’ ಅಂತಾನೆ, ಏನ್ ತಲೆ ಇದೆಯಾ ಅವರಿಗೆ, ಅವರನ್ನು ಅವರ ಪಾಡಿಗೆ ಕೆಲಸ ಮಾಡೋಕ್ಬುಡಿ. ಐದು ವರ್ಷದ ಹಿಂದೆ ಅದು ಮಾಡ್ತೀವಿ, ಇದು ಮಾಡ್ತೀವಿ ಅಂತ ಬರೀ ಸುಳ್ಳು ಹೇಳಿಕೊಂಡು, ಪುಂಗಿ ಊದ್ಕೊಂಡು ಎಷ್ಟು ದಿನಾಂತ ದೂಡ್ತೀರಾ? ಇವತ್ತಿನ ಯುವ ಜನತೆಗೆ ಬೇಕಾದ ಸ್ಕಿಲ್ ಡೆವಲಪ್ಮೆಂಟ್ ಏನು, ಕೃಷಿ ಕ್ಷೇತ್ರದಲ್ಲಿ ಎಂತಹ ಸುಧಾರಣೆಗಳನ್ನು ತರಬೇಕು ಅನ್ನೋದರ ಬಗ್ಗೆ ಮಾತಾಡಲ್ಲ. ಬರೀ ಕತೆ ಹೊಡ್ಕೊಂಡ್ ಕುತ್ಕಂಡ್ರೆ ಹೆಂಗೆ? ಅಂದ್ರೆ ಬರಿ ಜನಪ್ರಿಯವಾಗಿರೋದನ್ನು ಹೇಳಿಬಿಡೋದು, ಅದರ ಹಿಂದೆ ವಿಷನ್ ಇಲ್ಲ. ಬರೀ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಿಮ್ಮದು. ಇದು ಬಹಳ ದಿನ ನಡೆಯಲ್ಲ.
ಪ್ರ: ಸಾಮಾನ್ಯವಾಗಿ ರಾಜಕಾರಣಿಗಳು ಕಳ್ಳರು, ಸುಳ್ಳರು, ಅಪ್ರಾಮಾಣಿಕರು ಎಂಬ ಜನಾಭಿಪ್ರಾಯವಿದೆ. ಇಂತಹ ಸ್ಥಿತಿಯಲ್ಲಿ ನೀವು ರಾಜಕಾರಣಿಯಾಗುವುದು, ಚುನಾವಣೆ ಎದುರಿಸುವುದು ಹೇಗೆ?
ಪ್ರಕಾಶ್ ರಾಜ್: ನಿಜ ಅಲ್ಲವೇ? ರಾಜಕಾರಣ ಶುದ್ಧವಾಗಿದೆ. ಮನೆಯಲ್ಲಿ ಕಸ ಇದೆ ಅಂತ ಮನೆಗೆ ಹೋಗದೇ ಇರೋಕೆ ಆಗುತ್ತದೆಯೇ? ಬನ್ನಿ ಕ್ಲೀನ್ ಮಾಡೋಣ. ಜನ ಪ್ರಜ್ಞಾವಂತರಾಗಬೇಕು. ಪ್ರಶ್ನಿಸುವಂತಾಗಬೇಕು. ಇವತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ 24 ಜನ ಅಭ್ಯರ್ಥಿಗಳು ನಿಂತಿದ್ದಾರೆ. ಅದರಲ್ಲಿ ಯಾರ್ಯಾರು ಏನೇನು ಮಾಡಿದಾರೆ ಅಂತ ಕೇಳಬೇಕಲ್ಲವಾ? ಸತತವಾಗಿ ಎರಡು ಸಲ ಗೆದ್ದಿರುವ ಸಂಸದರು 10 ವರ್ಷದಿಂದ ಏನು ಮಾಡಿದರು? ಇನ್ನೊಬ್ಬ ಎಂಎಲ್ಸಿ, ಅವರದೇ ಸರಕಾರವಿದ್ದರೂ ಅವರು ಏನು ಮಾಡಿದ್ದಾರೆ? ದೇಶಾನ ಕಾಂಗ್ರೆಸ್-ಬಿಜೆಪಿ ಗುತ್ತಿಗೆ ತಗೊಂಡಿದಾರ? ಅವರು ಬಿಟ್ಟರೆ ಬೇರೆ ಯಾರೂ ಇಲ್ಲವಾ? ಪ್ರಜಾರಾಜಕೀಯ ಇದು. ಜನಸಾಮಾನ್ಯರು ಯಾವ ಪಕ್ಷದವರೂ ಅಲ್ಲ. ಗೆದ್ದ ಸಂಸದ ಬದುಕುವುದು ಜನರ ಹಣದಿಂದ. ಆ ಹಣದಲ್ಲಿ ನೀನು ಏನು ಮಾಡಿದೆ ಅಂತ ಕೇಳುವ ಹಕ್ಕು ಜನರಿಗಿದೆ. ಒಬ್ಬ ಎಂಪಿಗೆ ಒಂದು ವರ್ಷಕ್ಕೆ ಎಷ್ಟು ಅನುದಾನ ಬರುತ್ತದೆ, ಅದರ ವಿನಿಯೋಗ ಹೇಗೆ ಆಗುತ್ತದೆ, ಐಟಿ ಕಾರಿಡಾರ್ ಇರುವ ಮಹದೇವಪುರ ಕ್ಷೇತ್ರದಿಂದ ಅತಿ ಹೆಚ್ಚು ತೆರಿಗೆ ಬಂದರೂ ಒಂದು ಉತ್ತಮ ರಸ್ತೆ ಮಾಡಲಿಕ್ಕೆ ಯಾಕೆ ಆಗಿಲ್ಲ? ಚಾಮರಾಜಪೇಟೆಯ ಸ್ಲಂ ಯಾಕೆ ಹಾಗೇ ಇದೆ? ಇದೆಲ್ಲ ಸಮಸ್ಯೆಗಳಲ್ಲವೇ, ಕೇಳಬಾರದೆ? ಜನ ಕೇಳ್ತಿಲ್ಲ, ಬಾಯಿಲ್ಲ ಅಂತ ಏನು ಬೇಕಾದರೂ ಮಾಡೋದಲ್ಲ. ಬದಲಾವಣೆಯ ಕಾಲ ಬಂದಿದೆ. ಈ ಸಲ, ಮುಸ್ಲಿಮರು, ದಲಿತರು, ಕ್ರಿಶ್ಚಿಯನ್ನರು ಹೊರಗೆ ಬರ್ತಿದಾರೆ. ಇವರನ್ನು ತೀರಾ ಹಗುರವಾಗಿ ಪರಿಗಣಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ಫಲಿತಾಂಶದಲ್ಲಿ ಕಾದಿದೆ.
ಪ್ರ: ಕೊನೆಯದಾಗಿ, ನಿಮ್ಮನ್ನು ಜನ ಏಕೆ ಗೆಲ್ಲಿಸಬೇಕು?
ಪ್ರಕಾಶ್ ರಾಜ್: ತುಂಬಾ ತಲ್ಲಣಗೊಂಡಿರುವ ರಾಜಕೀಯ ಪರಿಸ್ಥಿತಿಯಲ್ಲಿ ದೃಢ ನಿಲುವು ತೆಗೆದುಕೊಳ್ಳಲೇಬೇಕಿತ್ತು. ಪರ್ಯಾಯಕ್ಕೆ ಬೀಜ ಬಿತ್ತಲೇಬೇಕಿತ್ತು. ಅದು ನನ್ನಿಂದಲೇ ಆಗಲಿ ಎನ್ನುವುದಕ್ಕಾಗಿ ನನ್ನ ಸ್ಪರ್ಧೆ. ಇದರಲ್ಲಿ ನಿಮ್ಮ ಜವಾಬ್ದಾರಿಯೂ ಇದೆ, ನನ್ನ ಜವಾಬ್ದಾರಿಯೂ ಇದೆ. ಎಲ್ಲರೂ ಸೇರಿದರೆ ಬದಲಾವಣೆ ಸಾಧ್ಯ. ಎಷ್ಟು ದಿನಾಂತ ಅದೇ ರಾಷ್ಟ್ರೀಯ ಪಕ್ಷಗಳು, ಅದೇ ಅಭ್ಯರ್ಥಿಗಳು, ಅದೇ ಮೋಸಗಳು, ಅದೇ ಸುಳ್ಳುಗಳು. ಬದಲಾವಣೆಗೆ ಇದು ಸೂಕ್ತ ಸಮಯ, ಯೋಚಿಸಿ. ಆ ಬದಲಾವಣೆಗಾಗಿ ನನ್ನನ್ನು ಗೆಲ್ಲಿಸಿ, ಆ ಮೂಲಕ ನೀವೂ ಗೆಲ್ಲಿ.