ಕೊಳಚೆ ಗುಂಡಿಯಾಗಿ ಪರಿವರ್ತಿತವಾದ ಶಿವಮೊಗ್ಗದ ತುಂಗಾ ನಾಲೆ!
ಗಂಗಾ ನದಿ ರೀತಿಯಲ್ಲಿ ನಡೆಯಬೇಕಿದೆ ತುಂಗಾ ನದಿ-ನಾಲೆಗಳ ಸ್ವಚ್ಚತಾ ಅಭಿಯಾನ
ಶಿವಮೊಗ್ಗ, ಎ. 8: 'ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕಿನ ಹಲವು ಹಳ್ಳಿಗಳ ಸಾವಿರಾರು ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ತುಂಗಾ ಎಡ ನಾಲೆಯು ಅಕ್ಷರಶಃ ಕೊಳಚೆ ನೀರು ಹರಿದು ಹೋಗುವ ರಾಜಕಾಲುವೆಯಾಗಿ ಪರಿವರ್ತಿತವಾಗಿದೆ..!'
ಹೌದು. ಪ್ರಸ್ತುತ ಶಿವಮೊಗ್ಗ ನಗರ ಹಾಗೂ ತಾಲೂಕಿನ ಭಾಗದ ತುಂಗಾ ಎಡ ನಾಲೆಯು ಸಂಪೂರ್ಣವಾಗಿ ಘನತ್ಯಾಜ್ಯ ವಸ್ತು ಹಾಗೂ ಕೊಳಚೆ ನೀರಿನಿಂದ ತುಂಬಿ ಹೋಗಿದೆ. ಕೊಳೆತು ನಾರುತ್ತಿದೆ. ಸೊಳ್ಳೆ ಮತ್ತೀತರ ಕ್ರಿಮಿಕೀಟಗಳ ಉತ್ಪತ್ತಿ ತಾಣವಾಗಿ ಪರಿವರ್ತಿತವಾಗಿದೆ.
ಇದರಿಂದ ನಾಲೆಯ ಇಕ್ಕೆಲಗಳಲ್ಲಿ ವಾಸಿಸುವ ಬಡಾವಣೆ ಹಾಗೂ ಗ್ರಾಮಗಳ ನಿವಾಸಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ. ದುರ್ನಾತ, ಸೊಳ್ಳೆ, ನೊಣ ಮತ್ತೀತರ ಕ್ರಿಮಿಕೀಟಗಳ ಹಾವಳಿಯಿಂದ ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸುತ್ತಿದೆ. ಇವರ ಗೋಳು ಕೇಳುವವರ್ಯಾರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ನಾಲೆಯ ನರಕ ಸದೃಶ್ಯ ಸ್ಥಿತಿ ಗಮನಿಸ ಬೇಕಾದರೆ, ನಗರದ ಹೊರವಲಯ ಮೇಲಿನ ಹಸವಾಡಿ ಹಾಗೂ ಹೊಳೆಹಟ್ಟಿ ಸುತ್ತಮುತ್ತಲಿನ ಗ್ರಾಮಗಳಿಗೆ ಆಗಮಿಸಿದರೆ ಗೊತ್ತಾಗುತ್ತದೆ. ಮೇಲಿನ ಹನಸವಾಡಿ ಗ್ರಾಮದಲ್ಲಿ ನಾಲೆಯ ಮಧ್ಯೆ ಗೇಟ್ ವ್ಯವಸ್ಥೆಯಿದೆ. ಈ ಸ್ಥಳದಲ್ಲಿ ಭಾರೀ ದೊಡ್ಡ ಪ್ರಮಾಣದ ಘನತ್ಯಾಜ್ಯ, ಕೊಳಕು ವಸ್ತುಗಳ ಸಂಗ್ರಹವೇ ಕಂಡುಬರುತ್ತದೆ.
ಸಮಸ್ಯೆಗೆ ಕಾರಣವೇನು?: ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯದಿಂದ ಬಲ ಹಾಗೂ ಎಡ ನಾಲೆಗಳ ಮೂಲಕ, ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತದೆ. ಎಡ ನಾಲೆಯಿಂದ ಪೂರೈಕೆಯಾಗುವ ನೀರು ಶಿವಮೊಗ್ಗ - ಹೊನ್ನಾಳ್ಳಿ ತಾಲೂಕಿನ ಹಲವು ಗ್ರಾಮಗಳ ಮೂಲಕ ಹಾದು ಹೋಗಲಿದೆ.
ಈ ನಾಲೆಯು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಿಂದ ಹಾದು ಹೋಗುತ್ತದೆ. ಹಲವು ಬಡಾವಣೆಗಳಲ್ಲಿನ ಚರಂಡಿ ಹಾಗೂ ಯುಜಿಡಿಯ ಕೊಳಚೆಯು ನೇರವಾಗಿ ನಾಲೆಗೆ ಸೇರುತ್ತಿದೆ. ಘನತ್ಯಾಜ್ಯ, ಸತ್ತು ಹೋದ ಪ್ರಾಣಿಗಳ ಕಳೇಬರ, ಪ್ರಾಣಿಗಳ ಹತ್ಯೆ ನಂತರ ಉಳಿಯುವ ಮಾಂಸ-ಮೂಳೆಗಳ ಚೂರುಗಳನ್ನು ನಾಲೆಗೆ ಎಸೆಯಲಾಗುತ್ತಿದೆ.
'ನಾಲೆಯಲ್ಲಿ ನೀರು ಹರಿಯುತ್ತಿದ್ದರೆ, ಕೊಳಚೆಯ ನರಕ ಸದೃಶ್ಯತೆ ಅನುಭವಕ್ಕೆ ಬರುವುದಿಲ್ಲ. ಪ್ರಸ್ತುತ ಬೇಸಿಗೆ ವೇಳೆ ನಾಲೆಯಲ್ಲಿ ಕೆಲ ನೀರಿನ ಹರಿಯುವಿಕೆ ಕಡಿಮೆಯಾಗುತ್ತದೆ. ಈ ವೇಳೆ ಮಾತ್ರ ಮಲೀನತೆಯ ಆಗಾಧತೆ ಕಂಡುಬರುತ್ತದೆ' ಎಂದು ನಾಗರೀಕರು ಅಭಿಪ್ರಾಯಪಡುತ್ತಾರೆ.
ನಿರ್ಲಕ್ಷ್ಯವೇಕೆ?: ದೇಶಾದ್ಯಂತ ಸ್ವಚ್ಚತಾ ಅಭಿಯಾನದ ಬಗ್ಗೆ ದೊಡ್ಡ ಚರ್ಚೆಗಳಾಗುತ್ತಿವೆ. ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಮಲಿನಗೊಂಡಿರುವ ಗಂಗಾ ನದಿಯ ಸ್ವಚ್ಚತೆಗೆಂದೇ ಕೇಂದ್ರ ಸರ್ಕಾರ ನೂರಾರು ಕೋಟಿ ರೂ. ವ್ಯಯಿಸುತ್ತಿದೆ. ವಿಶೇಷ ಅಭಿಯಾನವನ್ನೇ ಜಾರಿಗೊಳಿಸಿದೆ. ಆದರೆ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿ ಹಾಗೂ ಅದಕ್ಕೆ ಸಂಬಂಧಿಸಿದ ನಾಲೆಗಳು ದೊಡ್ಡ ಪ್ರಮಾಣದಲ್ಲಿ ಮಲೀನಗೊಂಡಿದ್ದರೂ, ಇದರ ಸ್ವಚ್ಚತೆಯತ್ತ ಆಡಳಿತಗಾರರ ಚಿತ್ತ ಹರಿಯದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.
ಹಲವು ದಶಕಗಳಿಂದ ನದಿ ಹಾಗೂ ನಾಲೆ ಮಲೀನವಾಗುತ್ತಿದ್ದರೂ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಆಡಳಿತ ಯಾವುದೇ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ. ನಾಲೆಗೆ ಹರಿಯುತ್ತಿರುವ ಚರಂಡಿ ಹಾಗೂ ಯುಜಿಡಿ ನೀರು ಹರಿಯುವಿಕೆಗೆ ಪರಿಣಾಮಕಾರಿ ತಡೆ ಹಾಕಿಲ್ಲ. ನಾಲೆಗೆ ಘನತ್ಯಾಜ್ಯ ಎಸೆದು ಮಲೀನಗೊಳಿಸುವವರ ವಿರುದ್ದ ಕ್ರಮ ಜರುಗಿಸುವ, ಜನಜಾಗೃತಿ ಮೂಡಿಸುವ ಕಾರ್ಯ ನಡೆಸಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ದೂರುತ್ತಾರೆ.
ಒಟ್ಟಾರೆ 'ಗಂಗಾ ಸ್ನಾನಂ, ತುಂಗಾ ಪಾನಂ' ಎಂಬ ನಾಣ್ನುಡಿಯಿದೆ. ಆದರೆ ಗಂಗಾ ನದಿಯ ರೀತಿಯಲ್ಲಿ ಶಿವಮೊಗ್ಗದಲ್ಲಿ ತುಂಗಾ ನದಿಯ ನೀರು ಕೂಡ ಭಾರೀ ದೊಡ್ಡ ಪ್ರಮಾಣದಲ್ಲಿ ಮಲೀನವಾಗಿದೆ. ಇದು ಹತ್ತು ಹಲವು ಸಮಸ್ಯೆ ಸೃಷ್ಟಿಸುತ್ತಿದೆ. ಈ ಮಲೀನತೆಗೆ ಕಡಿವಾಣ ಹಾಕಲು ಇನ್ನಾದರೂ ಸ್ಥಳೀಯಾಡಳಿತ ಪರಿಣಾಮಕಾರಿ ಕ್ರಮಗಳತ್ತ ಚಿತ್ತ ಹರಿಸುವುದೇ ಕಾದು ನೋಡಬೇಕಾಗಿದೆ.
'ಶೌಚಾಲಯದ ನೀರನ್ನು ಬಿಡಲಾಗುತ್ತಿದೆ' : ಮುಖಂಡ ಅ.ನಾ.ವಿಜಯೇಂದ್ರರಾವ್
'ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ತುಂಗಾ ಎಡ ನಾಲೆ ಮಲಿನವಾಗುತ್ತಿದೆ. ಹಲವು ಮನೆಗಳ ಶೌಚಾಲಯದ ನೀರನ್ನು ನೇರವಾಗಿ ನಾಲೆಗೆ ಬಿಡಲಾಗುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಚರಂಡಿ ನೀರು ಕೂಡ ನಾಲೆಗೆ ಸೇರ್ಪಡೆಯಾಗುತ್ತಿದೆ. ಮಹಾನಗರ ಪಾಲಿಕೆ ಆಡಳಿತದ ಬೇಜವಾಬ್ದಾರಿ ಧೋರಣೆಗೆ ಇದು ಸಾಕ್ಷಿಯಾಗಿದೆ. ಕೆಲವರು ನಾಲೆಗೆ ಘನತ್ಯಾಜ್ಯ ವಸ್ತುಗಳನ್ನು ರಾಜಾರೋಷವಾಗಿ ಸುರಿಯುವುದು ಕಂಡುಬರುತ್ತದೆ. ಇದನ್ನು ಪ್ರಶ್ನಿಸುವವರೇ ಇಲ್ಲವಾಗಿದೆ. ಈ ಎಲ್ಲ ಕಾರಣಗಳಿಂದ ನಾಲೆಯಲ್ಲಿ ಹರಿಯುವ ನೀರು ವಿಷಯುಕ್ತವಾಗಿ ಪರಿಣಮಿಸಿದೆ. ಈ ನೀರನ್ನೇ ಹಲವು ಗ್ರಾಮಸ್ಥರು ಕುಡಿಯುವುದಕ್ಕೆ, ಕೃಷಿ, ಸ್ನಾನ ಮತ್ತೀತರ ಉದ್ದೇಶಕ್ಕೆ ಬಳಸುತ್ತಾರೆ.
ಒಟ್ಟಾರೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 13 ಕಿ.ಮೀ. ಉದ್ದದಷ್ಟು ನಾಲೆ ಹಾದು ಹೋಗಿದೆ. ನಗರ ವ್ಯಾಪ್ತಿಯ ಆರಂಭದಿಂದ ಅಂತ್ಯದವರೆಗೂ ನಾಲೆ ಮಲೀನವಾಗುತ್ತಿದೆ. ಈ ಹಿಂದೆ ಸಾಹಸ ಅಕಾಡೆಮಿ ಸಂಸ್ಥೆಯಿಂದ ನಾಲೆಯ ಸಮಗ್ರ ಸರ್ವೇ ನಡೆಸಲಾಗಿತ್ತು. ಎಲ್ಲೆಲ್ಲಿ ನಾಲೆ ಮಲೀನವಾಗುತ್ತಿದೆ, ಇದರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವಿಸ್ತøತ ವರದಿಯನ್ನು ಸಿದ್ದಪಡಿಸಿತ್ತು. ಸಂಬಂಧಿಸಿದವರಿಗೆ ಸಲ್ಲಿಸಿತ್ತು. ಆದರೆ ಇಲ್ಲಿಯವರೆಗೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ತುಂಗಾ ನಾಲೆಯ ಸಂರಕ್ಷಣೆಗೆ ಆಡಳಿತಗಾರರು ಗಮನಹರಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದು ಸೇರಿದಂತೆ ಬೃಹತ್ ಜನಾಂದೋಲನವನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ನಗರದ ಪ್ರಜ್ಞಾವಂತ ನಾಗರೀಕರು ಹಾಗೂ ಪರಿಸರಾಸಕ್ತರ ಜೊತೆ ಸಮಾಲೋಚಿಸಿ, ತುಂಗಾ ಎಡ ನಾಲೆ ಮಲೀನತೆ ತಡೆಗೆ ಜನಜಾಗೃತಿ ಕೂಡ ನಡೆಸಲಾಗುವುದು' ಎಂದು ಪರಿಸರ ಹೋರಾಟಗಾರ, ಸಾಮಾಜಿಕ ಚಿಂತಕ ಅ.ನಾ.ವಿಜಯೇಂದ್ರರಾವ್ ತಿಳಿಸುತ್ತಾರೆ.
'101 ಕಿ.ಮೀ. ಉದ್ದವಿದೆ' : ನೀರಾವರಿ ನಿಗಮ ಎಂಜಿನಿಯರ್ ಎನ್.ವಿ.ಭಟ್
'ನಾಲೆಯು ಸುಮಾರು 101 ಕಿ.ಮೀ. ಉದ್ದವಿದೆ. ಮಳೆಗಾಲದ ವೇಳೆ 6328 ಹೆಕ್ಟೇರ್ ಹಾಗೂ ಬೇಸಿಗೆ ಅವಧಿಯಲ್ಲಿ, ಶಿವಮೊಗ್ಗ ಹಾಗೂ ಹೊನ್ನಾಳ್ಳಿ ತಾಲೂಕಿನ 1038 ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ನಾಲೆಗೆ ಕೊಳಚೆ ನೀರು ಹಾಗೂ ಘನತ್ಯಾಜ್ಯ ಸೇರ್ಪಡೆಯಿಂದ ಮಲೀನವಾಗುತ್ತಿದೆ. ನಾಲೆಗೆ ಘನತ್ಯಾಜ್ಯ ಹಾಗೂ ಕೊಳಚೆ ನೀರು ಹರಿಸದಂತೆ ನಾಗರೀಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಹಾಗೆಯೇ ಪರ್ಯಾಯ ಕ್ರಮಗಳತ್ತಲೂ ಸಂಬಂಧಿಸಿದ ಸ್ಥಳಿಯಾಡಳಿತಗಳೇ ಕ್ರಮಕೈಗೊಳ್ಳಬೇಕಾಗಿದೆ' ಎಂದು ಕರ್ನಾಟಕ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಎನ್.ವಿ.ಭಟ್‍ರವರು ತಿಳಿಸುತ್ತಾರೆ.