ಬಿಸಿನೀರು ಸೇವನೆಯ ಅದ್ಭುತ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಳ್ಳಿ
ದಿನವಿಡೀ ಸಾಕಷ್ಟು ನೀರನ್ನು ಸೇವಿಸುತ್ತಿರುವುದು ಆರೋಗ್ಯ ರಕ್ಷಣೆಗೆ ಅಗತ್ಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬಿಸಿನೀರಿನ ಸೇವನೆಯು ಕೆಲವು ಹೆಚ್ಚುವರಿ ಆರೋಗ್ಯಲಾಭಗಳನ್ನು ನೀಡುತ್ತದೆ. ಬಹಳಷ್ಟು ಜನರು ಒಂದು ಗ್ಲಾಸ್ ಬಿಸಿನೀರಿನ ಸೇವನೆಯೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ ಮತ್ತು ಇದು ಅವರಿಗೆ ಹೆಚ್ಚುವರಿ ಆರೋಗ್ಯಲಾಭಗಳನ್ನು ನೀಡುತ್ತದೆ.
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಬಿಸಿನೀರು ಆಹಾರವನ್ನು ವಿಭಜಿಸುವಲ್ಲಿ ಶರೀರಕ್ಕೆ ನೆರವಾಗುತ್ತದೆ ಮತ್ತು ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಬಿಸಿನೀರು ದೊಡ್ಡಕರುಳಿನ ಚಲನವಲನವನ್ನು ಉತ್ತೇಜಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಲೂ ನೆರವಾಗುತ್ತದೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ಶರೀರದ ತೂಕವನ್ನು ಇಳಿಸಿಕೊಳ್ಳಲು ಬಿಸಿನೀರು ನೆರವಾಗುತ್ತದೆ ಎನ್ನುವುದನ್ನು ವಿವಿಧ ಸಂಶೋಧನೆಗಳು ಬೆಟ್ಟು ಮಾಡಿವೆ. ಬಿಸಿನೀರು ಶರೀರದಲ್ಲಿಯ ವಿಷವಸ್ತುಗಳನ್ನು ಹೊರಗೆ ಹಾಕಲು ನೆರವಾಗುತ್ತದೆ. ತಣ್ಣೀರಿಗೆ ಹೋಲಿಸಿದರೆ ಬಿಸಿನೀರು ಹೆಚ್ಚು ಸಮಯ ಜಠರದಲ್ಲಿರುವುದರಿಂದ ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ.
ಕಟ್ಟಿದ ಮೂಗಿನಿಂದ ಮುಕ್ತಿ ನೀಡುತ್ತದೆ
ಬಿಸಿನೀರು ಸೇವನೆಯ ಇನ್ನೊಂದು ದೊಡ್ಡ ಲಾಭವೆಂದರೆ ಅದು ಕಟ್ಟಿಕೊಂಡಿರುವ ಮೂಗು ತೆರೆದುಕೊಳ್ಳಲು ನೆರವಾಗುತ್ತದೆ. ಕಟ್ಟಿಕೊಂಡಿರುವ ಸೈನಸ್‌ಗಳನ್ನು ಸಡಿಲಗೊಳಿಸುವ ಅದು ಶೀತದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ನೆರವಾಗುತ್ತದೆ. ಬಿಸಿನೀರು ಸೇವಿಸಿದಾಗ ಸೈನಸ್‌ನಿಂದ ಉಂಟಾಗಿರುವ ತಲೆನೋವು ಕಡಿಮೆಯಾಗುತ್ತದೆ.
ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ
ಕೇವಲ ಕರುಳಿನ ಆರೋಗ್ಯವನ್ನು ಮಾತ್ರವಲ್ಲ, ಬಿಸಿನೀರಿನ ಸೇವನೆಯು ಶರೀರದಲ್ಲಿ ರಕ್ತಸಂಚಾರವನ್ನೂ ಹೆಚ್ಚಿಸುತ್ತದೆ. ಬಿಸಿನೀರು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದಾಗಿ ರಕ್ತನಾಳಗಳು ಸುಲಭವಾಗಿ ಶರೀರದಾದ್ಯಂತ ರಕ್ತವನ್ನು ಸಾಗಿಸುತ್ತವೆ ಮತ್ತು ರಕ್ತಪರಿಚಲನೆಯು ಹೆಚ್ಚುತ್ತದೆ. ಇದರಿಂದಾಗಿ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಹೃದಯನಾಳೀಯ ರೋಗಗಳ ಅಪಾಯ ಕಡಿಮೆಯಾಗುತ್ತದೆ.
ನೋವನ್ನು ನೈಸರ್ಗಿಕವಾಗಿ ಶಮನಗೊಳಿಸುತ್ತದೆ
ಬಿಸಿನೀರು ರಕ್ತ ಪರಿಚಲನೆಯನ್ನು ಹೆಚ್ಚಿಸುವುದರಿಂದ ರಕ್ತದ ಹರಿವು ಹೆಚ್ಚುತ್ತದೆ ಮತ್ತು ಇದರಿಂದ ಸ್ನಾಯುಗಳು ಸಡಿಲಗೊಂಡು ನೋವು ಶಮನಗೊಳ್ಳುತ್ತದೆ. ಆಂತರಿಕ ನೋವಿದ್ದರೆ ಬಿಸಿನೀರಿನ ಸೇವನೆಯು ಹೆಚ್ಚು ಲಾಭಕಾರಿಯಾಗಿದೆ. ಮಹಿಳೆಯರು ಬಿಸಿನೀರು ಸೇವಿಸುವ ಮೂಲಕ ಋತುಕಾಲದ ನೋವಿನಿಂದಲೂ ಶಮನ ಪಡೆಯಬಹುದು.