ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ‘ಮೋದಿ’ ವರ್ಸಸ್ ಪ್ರಮೋದ್
ಪ್ರಮೋದ್ ಮಧ್ವರಾಜ್ - ಶೋಭಾ ಕರಂದ್ಲಾಜೆ
ಉಡುಪಿ, ಎ.11: ಎರಡು ಜಿಲ್ಲೆಗಳಲ್ಲಿ ವ್ಯಾಪಿಸಿ ರಾಜ್ಯದ ಅತ್ಯಂತ ದೊಡ್ಡ ಕ್ಷೇತ್ರವೆನಿಸಿ ಮೂರು ಭೌಗೋಳಿಕ ಪ್ರದೇಶಗಳನ್ನು -ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡು (ಬಯಲುಸೀಮೆ)-ಒಳಗೊಂಡ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 12 ಮಂದಿ ಸ್ಪರ್ಧಾಕಣದಲ್ಲಿದ್ದರೂ ನಿಜವಾದ ಸ್ಪರ್ಧೆ ಇರುವುದು ಎರಡು ವಿಭಿನ್ನ ಪರಿಸ್ಥಿತಿಯೊಂದಿಗೆ ಪರಸ್ಪರ ಸೆಣಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ನ ಮೈತ್ರಿ ಅಭ್ಯರ್ಥಿಗಳ ನಡುವೆ.
ಹಾಲಿ ಸಂಸದೆಯಾಗಿ ಕಳೆದ ಐದು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದರೂ, ತನ್ನ ಸಾಧನೆ ಹಾಗೂ ಕಳೆದೈದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗಾಗಿ ಮತಯಾಚಿಸುವ ‘ಧೈರ್ಯ’ ಸಾಲದೇ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಮರು ಆಯ್ಕೆಗಾಗಿ ಮೋದಿ ಹೆಸರಿ ನಲ್ಲಿ ಬಿಜೆಪಿಗೆ ಮತ ಯಾಚಿಸುತ್ತಿರುವ ಶೋಭಾ ಕರಂದ್ಲಾಜೆ ಒಂದು ಕಡೆ.
ಅವರ ಎದುರಾಳಿಯಾಗಿ ಇರುವವರು ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದು, ಹಲವು ಪ್ರಮುಖ ಸಂಸದರನ್ನು ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ, ಚಿಕ್ಕಮಗಳೂರಿನಲ್ಲಿ ಮಾತ್ರ ಸ್ವಲ್ಪ ಮಟ್ಟಿನ ಅಸ್ತಿತ್ವವನ್ನು ಹೊಂದಿದ್ದು, ಉಡುಪಿಯಲ್ಲಿ ಒಬ್ಬ ಗ್ರಾಪಂ ಸದಸ್ಯನನ್ನೂ ಹೊಂದಿರದ ಜೆಡಿಎಸ್ ಪಕ್ಷದ ಪರವಾಗಿ ಆ ಪಕ್ಷದ ತೆನೆ ಹೊತ್ತ ಮಹಿಳೆಯ ಚಿಹ್ನೆಯಲ್ಲಿ ಸ್ಪರ್ಧಿಸಲು ಮುಂದಾಗಿ ಗ್ರಾಮೀಣ ಮತದಾರರನ್ನು ಗೊಂದಲದಲ್ಲಿ ಕೆಡವಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇನ್ನೊಂದು ಕಡೆ.
2014ರ ಗೆಲುವಿನ ಬಳಿಕ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ತಮ್ಮದೇ ಪಕ್ಷದ ಕಾರ್ಯಕರ್ತರಿಂದ ‘ಗೋ ಬ್ಯಾಕ್ ಶೋಭಾ’ ಅಭಿಯಾನಕ್ಕೂ ತುತ್ತಾದ ಶೋಭಾ ಕರಂದ್ಲಾಜೆ, ಆರು ತಿಂಗಳ ಹಿಂದಿನವರೆಗೂ ಇಲ್ಲಿ ಮರುಸ್ಪರ್ಧೆಗೆ ತೀರಾ ನಿರಾಸಕ್ತಿಯನ್ನು ತೋರಿಸಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಮತ್ತೆ ಇಲ್ಲಿಂದಲೇ ಸ್ಪರ್ಧಿಸಲು ಅವಕಾಶ ಪಡೆದು, ಕಾರ್ಯಕರ್ತರ ಒಂದು ಗುಂಪಿನ ವಿರೋಧದ ಮಧ್ಯೆಯೂ, ಎರಡು ಜಿಲ್ಲೆಗಳಲ್ಲೂ ತಳಮಟ್ಟದಿಂದಲೇ ಪ್ರಬಲ ಸಂಘಟನೆಯನ್ನು ಕಟ್ಟಿರುವ ಬಿಜೆಪಿ ಮತ್ತು ಸಂಘ ಪರಿವಾರದ ಬದ್ಧತೆ ಹೊಂದಿದ ಕಾರ್ಯಕರ್ತರ ಪಡೆಯನ್ನೇ ಗೆಲುವಿನ ಗುರಿಮುಟ್ಟಿಸಲು ನಂಬಿದ್ದಾರೆ.
ಆದರೆ ಪ್ರಮೋದ್ ಮಧ್ವರಾಜ್ಗೆ ಶೋಭಾರಿಗಿರುವ ಇಂಥ ಅನುಕೂಲಕರ ಸಂಘಟನೆಗಳ ಬೆಂಬಲವಿಲ್ಲ. ಇತ್ತೀಚಿನ ದಶಕಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸಂಘಟನಾತ್ಮಕವಾಗಿ ದುರ್ಬಲವಾಗಿರುವ ಕಾಂಗ್ರೆಸ್, ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಹಾಗೂ ಚಿಹ್ನೆಗೆ ಮತವನ್ನು ಕೇಳುವ ಬದಲು, ಹೆಚ್ಚು ಕಡಿಮೆ ಶೂನ್ಯ ಅಸ್ತಿತ್ವವನ್ನು ಹೊಂದಿರುವ ಜೆಡಿಎಸ್ಗೆ ಹಾಗೂ ಅದರ ಚಿಹ್ನೆಗೆ ಮತ ನೀಡಿ ಎಂದು ಕಾಂಗ್ರೆಸ್ ಬೆಂಬಲಿಗರಿಗೆ ಮತ್ತು ಮತದಾರರಿಗೆ ಮನವಿ ಮಾಡಬೇಕಾದ ಮುಜುಗುರಕ್ಕೆ ಸಿಲುಕಿದೆ. ಅದೂ ಸಹ ಕಾಂಗ್ರೆಸ್ನ ಒಬ್ಬ ಪ್ರಮುಖ ನಾಯಕನ ಪರವಾಗಿ.
ಮೈತ್ರಿ ಪಕ್ಷಗಳ ಒಡಂಬಡಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಯಾರೂ ಊಹಿಸದ ರೀತಿಯಲ್ಲಿ ಜೆಡಿಎಸ್ ಪಾಲಾದ ಬಳಿಕ ಅತ್ಯಂತ ಚಾಣಕ್ಷತನ ದಿಂದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಒಲಿಸಿ ಕೊಂಡು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಪ್ರಮೋದ್, ಕಾಂಗ್ರೆಸ್ ಹಿರಿಯ ನಾಯಕರೂ ಅದಕ್ಕೆ ಸೈಗುಟ್ಟುವಂತೆ ಮಾಡುವಲ್ಲಿ ಸಫಲತೆಯನ್ನು ಕಂಡಿದ್ದಾರೆ. ಫಲಿತಾಂಶದ ಬಳಿಕದ ಬೆಳವಣಿಗೆ ಏನೇ ಇದ್ದರೂ, ಈಗಂತೂ ಅವರು ನಿರಾಳರಾಗಿ ಪ್ರಚಾರದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಮೈತ್ರಿ ಅಭ್ಯರ್ಥಿ ಪರವಾಗಿ ಈಗ ಹೆಚ್ಚು ಪ್ರಚಾರದಲ್ಲಿ ನಿರತರಾಗಿರುವವರು ಸ್ವತಹ ಪ್ರಮೋದ್ ಮಧ್ವರಾಜ್ ಅವರೇ. ಕಾಂಗ್ರೆಸ್ ನಾಯಕರು, ಕಾರ್ಯ ಕರ್ತರಂತೂ ಇನ್ನೂ ಮೈಚಳಿ ಬಿಟ್ಟು, ಕಣಕ್ಕೆ ಇಳಿದ ಸೂಚನೆ ಇಲ್ಲವಾದರೂ, ಚುನಾವಣೆಗೆ ದಿನಗಳು ಸಮೀಪಿಸುತ್ತಿರುವುದರಿಂದ ಅಲ್ಲಲ್ಲಿ ಬಿರುಸಿನ ಪ್ರಚಾರವನ್ನಂತೂ ನಡೆಸುತಿದ್ದಾರೆ. ಕ್ಷೇತ್ರ ಕೈತಪ್ಪಿದ ನೋವು ಇವರಲ್ಲಿದ್ದರೂ, ಅಭ್ಯರ್ಥಿ ನಮ್ಮವರೇ ಎಂಬ ಸಮಾಧಾನವೂ ಇದೆ. ಇನ್ನು ಜೆಡಿಎಸ್ಗೆ ಹೇಳಿಕೊಳ್ಳುವ ಕಾರ್ಯಕರ್ತರ ಬೆಂಬಲ ಇಲ್ಲದಿದ್ದರೂ, ಸಂಘಟನೆಯ ದೃಷ್ಟಿಯಿಂದ ಪಕ್ಷ ಕಟ್ಟಲು ಇದೊಂದು ಅವಕಾಶವಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ತಮ್ಮ ಕೈಲಾದ ಪ್ರಯತ್ನ ನಡೆಸುತಿದ್ದಾರೆ.
ಜೆಡಿಎಸ್ನಿಂದ ಸ್ವತಹ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ನ ದೊಡ್ಡ ನಾಯಕರ್ಯಾರೂ ಇನ್ನೂ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವ ಮನಸ್ಸು ಮಾಡಿಲ್ಲ. ಈ ಇಬ್ಬರನ್ನು ಹೊರತು ಪಡಿಸಿದರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಉಳಿದ 10 ಮಂದಿಯ ಹೆಸರು ಸಹ ಮತದಾರರ ಗಮನಕ್ಕೆ ಬಂದಂತಿಲ್ಲ.
ಕ್ಷೇತ್ರದ ಹಿನ್ನೋಟ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ 2012ರಲ್ಲಿ ನಡೆದ ಉಪಚುನಾವಣೆಯೂ ಸೇರಿದಂತೆ ಒಟ್ಟು ಮೂರು ಲೋಕಸಭಾ ಚುನಾವಣೆಗಳಲ್ಲಿ ಎರಡರಲ್ಲಿ ಬಿಜೆಪಿಯೇ ಜಯಗಳಿಸಿರುವುದು ಕ್ಷೇತ್ರದಲ್ಲಿ ಅದು ಹೊಂದಿರುವ ಪ್ರಾಬಲ್ಯವನ್ನು ತೋರಿಸುತ್ತದೆ. ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಪಡೆದುದರಿಂದ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ವಿ.ಸುನಿಲ್ ಕುಮಾರ್ ಅವರನ್ನು 45,724 ಮತಗಳ ಅಂತರದಿಂದ ಸೋಲಿಸಿ ಕ್ಷೇತ್ರವನ್ನು 2004ರ ನಂತರ ಮೊದಲ ಬಾರಿ ಕಾಂಗ್ರೆಸ್ ತೆಕ್ಕೆಗೆ ತಂದುಕೊಟ್ಟ ಕೆ.ಜಯಪ್ರಕಾಶ್ ಹೆಗ್ಡೆ ಈಗ ಸ್ವತಹ ಬಿಜೆಪಿಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಹೆಗ್ಡೆ, ಟಿಕೆಟ್ ಸಿಗದೇ ತನಗಾದ ಅಸಮಧಾನದಿಂದ ಪೂರ್ತಿಯಾಗಿ ಹೊರಬಾರದಿರುವುದು ಈಗಿನ ಅವರ ನಡವಳಿಕೆಯಿಂದ ಸ್ಪಷ್ಟವಾಗುತ್ತಿದೆ.
2009ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡ, ತನ್ನ ಎದುರಾಳಿ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆಯವರನ್ನು 27,018 ಮತಗಳ ಅಂತರದಿಂದ ಸೋಲಿಸಿದ್ದರು. ಬಳಿಕ 2012ರ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದ ಜಯಪ್ರಕಾಶ್ ಹೆಗ್ಡೆ, 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧಿಸಿ, ಮೋದಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿ 1.8 ಲಕ್ಷ ಮತಗಳ ಅಂರದ ಪರಾಭವ ಅನುಭವಿಸಿ ದ್ದರು.
ಕ್ಷೇತ್ರ ಪುನರ್ವಿಂಗಡಣೆಗೆ ಮೊದಲು ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ 11 ಬಾರಿ ಜಯಗಳಿದ್ದರೆ, ಬಿಜೆಪಿ ಒಂದು ಬಾರಿ ಮಾತ್ರ ಜಯಗಳಿಸಿತ್ತು. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಎಂಟು ಬಾರಿ, ಬಿಜೆಪಿ ಮೂರು ಬಾರಿ ಹಾಗೂ ಜೆಡಿಎಸ್ ಅಭ್ಯರ್ಥಿ ಒಂದು ಬಾರಿ ಜಯ ದಾಖಲಿಸಿದ್ದರು.
ಚುನಾವಣೆಗೆ ಇನ್ನು ಒಂದು ವಾರ ಮಾತ್ರ ಉಳಿದಿರುವಂತೆ ಪ್ರಮುಖ ಎದುರಾಳಿಗಳ ಪ್ರಚಾರದ ಭರಾಟೆ ತಾರಕಕ್ಕೇರುತ್ತಿದೆ. ಮನೆ ಮನೆ ಭೇಟಿ, ಸಣ್ಣ ಸಣ್ಣ ಸಭೆಗಳಿಗೆ ಇದು ಸೀಮಿತಗೊಳ್ಳುತ್ತಿದೆ. ಎಪ್ರಿಲ್ ತಿಂಗಳ ಬಿರುಬಿಸಿಲು ಈ ಬಾರಿ ಇನ್ನಷ್ಟು ತೀವ್ರತೆಯನ್ನು ಹೊಂದಿರುವುದರಿಂದ ಎಲ್ಲಾ ಅಭ್ಯರ್ಥಿಗಳು ನಿಜವಾದ ಅರ್ಥದಲ್ಲಿ ಗೆಲುವಿಗಾಗಿ ‘ಬೆವರಿಳಿಸುತಿದ್ದಾರೆ’. ಆದರೆ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಪ್ರಚಾರದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಯಾರೂ ನೀಡುತ್ತಿಲ್ಲ ಎಂಬ ಅಸಮಧಾನ ಮತದಾರರಲ್ಲಿದೆ.
ಮಹಿಳಾ ಮತದಾರರು ನಿರ್ಣಾಯಕರಾಗಬಲ್ಲರೇ ?
ರಾಜ್ಯದಲ್ಲಿ ಮಹಿಳಾ ಮತದಾರರು ಪ್ರಾಬಲ್ಯ ಹೊಂದಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವೂ ಒಂದು. ಇಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ 36,171ರಷ್ಟು ಹೆಚ್ಚಿದೆ. 2014ಕ್ಕೆ ಹೋಲಿಸಿದರೆ (29,032) ಮಹಿಳಾ ಮತದಾರರ ಸಂಖ್ಯೆಯಲ್ಲಿ 7139ರಷ್ಟು ಹೆಚ್ಚಾಗಿದೆ. ವಿಶೇಷವೆಂದರೆ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 31,000 ಮಂದಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
2014ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪುರುಷ ಮತದಾರರ ಸಂಖ್ಯೆ 5352 ಹೆಚ್ಚಿದ್ದರೆ, 2019ರಲ್ಲಿ ಇದು ತಿರುವುಮುರುವಾಗಿ ಮಹಿಳಾ ಮತದಾರರ ಸಂಖ್ಯೆ 5171ರಷ್ಟು ಹೆಚ್ಚಿದೆ. ಕೇವಲ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಈಗ ಪುರುಷ ಮತದಾರರ ಸಂಖ್ಯೆ ಮಹಿಳೆಯ ರಿಗಿಂತ 777ರಷ್ಟು ಹೆಚ್ಚಿದೆ. ಹೀಗಾಗಿ ಕ್ಷೇತ್ರದ ಅದರಲ್ಲೂ ಉಡುಪಿ ಜಿಲ್ಲೆಯ ಮಹಿಳಾ ಮತದಾರರು ಒಂದರ್ಥದಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ.
2014ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾರರ ಸಂಖ್ಯೆಯಲ್ಲಿ ಒಟ್ಟಾರೆಯಾಗಿ 1,61,986 ಮಂದಿ ಹೆಚ್ಚಾಗಿದ್ದಾರೆ. ಅಂದು ಒಟ್ಟು 13,51,245 ಮತದಾರರಿದ್ದರೆ, ಈ ಬಾರಿ ಮತದಾರರ ಸಂಖ್ಯೆ 15,13,231 ಆಗಿದೆ.
ವಿವರ ಹೀಗಿದೆ
2019ರಲ್ಲಿ ಉಡುಪಿ ಜಿಲ್ಲೆ ಮತದಾರರು: 7,80,412
ಪುರುಷರು: 3,74,6978, ಮಹಿಳೆಯರು: 4,05,697. ಇತರರು:18.
ಚಿಕ್ಕಮಗಳೂರು ಜಿಲ್ಲೆ ಮತದಾರರು: 7,32,819
ಪುರುಷರು: 3,63,806. ಮಹಿಳೆಯರು: 3,68,977. ಇತರರು:36.
ಕ್ಷೇತ್ರದ ಒಟ್ಟು ಮತದಾರರು:15,13,231
ಪುರುಷರು: 7,38,503. ಮಹಿಳೆಯರು: 7,75,674. ಇತರರು: 54.
2014ರಲ್ಲಿ ಉಡುಪಿ ಜಿಲ್ಲೆ ಮತದಾರರು:7,11,533
ಪುರುಷರು: 3,38,561. ಮಹಿಳೆಯರು:3,72,945. ಇತರರು:27.
ಚಿಕ್ಕಮಗಳೂರು ಜಿಲ್ಲೆಯ ಮತದಾರರು: 6,74,982
ಪುರುಷರು: 3,40,149. ಮಹಿಳೆಯರು:3,34,797. ಇತರರು:36.
ಕ್ಷೇತ್ರದ ಒಟ್ಟು ಮತದಾರರು:13,86,515.
ಪುರುಷರು:6,78,710. ಮಹಿಳೆಯರು:7,07,742. ಇತರರು: 63.
ಕ್ಷೇತ್ರದಲ್ಲಿರುವ ಅಂದಾಜು ಜಾತಿವಾರು ಮತದಾರರ ಸಂಖ್ಯೆ
*ಪ.ಜಾತಿ, ಪ.ಪಂಗಡ- 3.6ಲಕ್ಷ
*ಅಲ್ಪಸಂಖ್ಯಾತರು-2.90ಲಕ್ಷ
*ಬಿಲ್ಲವರು,ಈಡಿಗರು-1.75ಲಕ್ಷ
*ಬಂಟರು-1.60 ಲಕ್ಷ
*ಒಕ್ಕಲಿಗರು-1.00 ಲಕ್ಷ
*ಮೊಗವೀರರು-1.00ಲಕ್ಷ
*ಲಿಂಗಾಯತರು-1.00ಲಕ್ಷ
*ಕುರುಬರು-60,000
*ಬ್ರಾಹ್ಮಣರು-40,000
*ಇತರರು-1.5ಲಕ್ಷ
ಹಿಂದಿನ ಮೂರು ಚುನಾವಣಾ ಫಲಿತಾಂಶ
2009ರ ಲೋಕಸಭಾ ಚುನಾವಣೆ
ಡಿ.ವಿ.ಸದಾನಂದ (ಬಿಜೆಪಿ)- 4,01,441
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,74,423
ರಾಧಾ ಸುಂದರೇಶ್ (ಸಿಪಿಐ)- 24,991
2012ರ ಲೋಕಸಭಾ ಉಪಚುನಾವಣೆ
ಕೆ.ಜಯಪ್ರಕಾಶ್ ಹೆಗ್ಡೆ(ಕಾಂಗ್ರೆಸ್)- 3,98,723
ವಿ.ಸುನೀಲ್ ಕುಮಾರ್ (ಬಿಜೆಪಿ)- 3.52,999
ಎಸ್.ಎಲ್.ಬೋಜೇಗೌಡ (ಜೆಡಿಎಸ್)-72,080
2014ರ ಲೋಕಸಭಾ ಚುನಾವಣೆ
ಶೋಭಾ ಕರಂದ್ಲಾಜೆ (ಬಿಜೆಪಿ)- 5,81,168
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,99,525
ವಿ.ಧನಂಜಯಕುಮಾರ್ (ಜೆಡಿಎಸ್)-14,895