ಬೆಳಕು, ಬುಲ್ಟ್ರಾಲಿಂಗ್ ಮೀನುಗಾರಿಕೆ ನಿಷೇಧ
ಮಂಗಳೂರು, ಎ.11: ದ.ಕ. ಜಿಲ್ಲೆಯ ಇಇಝಡ್ ಪ್ರದೇಶದಲ್ಲಿ ಬೆಳಕು ಮೀನುಗಾರಿಕೆ ಹಾಗೂ ಬುಲ್ ಟ್ರಾಲಿಂಗ್ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ.
ನೀರಿನ ಮೇಲ್ಮೈಯಲ್ಲಿ ಅಥವಾ ನೀರಿನ ಅಡಿಯಲ್ಲಿ ಬೆಳಕು ಹರಿಸಲು ಉಪಯೋಗಿಸುವ ಎಲ್ಇಡಿ ದೀಪಗಳು, ಮೀನುಗಳನ್ನು ಆಕರ್ಷಿಸುವ ದೀಪಗಳು ಅಥವಾ ಯಾವುದೇ ರೀತಿಯ ಇತರ ಬೆಳಕಿನ ಉಪಕರಣಗಳನ್ನು ಜನರೇಟರ್ ಬಳಸಿ ಅಥವಾ ಜನರೇಟರ್ನ್ನು ಬಳಸದೇ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ಅಥವಾ ಯಾಂತ್ರೀಕೃತವಲ್ಲದ ಮೀನುಗಾರಿಕೆ ದೋಣಿಗಳು ಟ್ರಾಲಿಂಗ್, ಪರ್ಸೀನಿಂಗ್ ಅಥವಾ ಗಿಲ್ನೆಟ್ಟಿಂಗ್ ವಿಧಾನದಿಂದ ನಡೆಸುವ ಮೀನುಗಾರಿಕೆಗೆ ಅವಕಾಶವಿಲ್ಲ.
12 ನಾಟಿಕಲ್ ಮೈಲ್ನ ಒಳಗೆ ಸಹ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಮೀರಿ ವಿದ್ಯುತ್ ದೀಪಗಳನ್ನು, ಜನರೇಟರ್ಗಳನ್ನು ಬಳಸಿ ಬೆಳಕು ಮೀನುಗಾರಿಕೆ ಅಥವಾ ಬುಲ್ ಟ್ರಾಲಿಂಗ್ ಮಾಡುವ ಮೀನುಗಾರಿಕೆ ದೋಣಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.