ಶಿವಮೊಗ್ಗ ಲೋಕಸಭಾ ಕ್ಷೇತ್ರ: ಜಾತಿ - ಧರ್ಮಾಧಾರಿತ ಮತಗಳಿಕೆಯ ತಂತ್ರಗಾರಿಕೆ ಸಖತ್ ಜೋರು...!
ಶಿವಮೊಗ್ಗ, ಏ. 11: ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನೇರ ಹಣಾಹಣಿ ಏರ್ಪಟ್ಟಿರುವ, ರಾಜ್ಯದ 'ಹೈವೋಲ್ಟೇಜ್' ಕಣಗಳಲ್ಲೊಂದಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರಲಾರಂಭಿಸಿದೆ. ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಯಲಾರಂಭಿಸಿದೆ. ಸಭೆ, ಸಮಾರಂಭ, ಪಾದಯಾತ್ರೆ, ರೋಡ್ ಶೋ, ಮತದಾರರ ಮನೆಗೆ ಭೇಟಿ ನೀಡುವ ಕಾರ್ಯಕ್ರಮಗಳ ಸಂಖ್ಯೆಯೂ ಹೆಚ್ಚಾಗಿದೆ.
ಇದೆಲ್ಲದರ ನಡುವೆಯೇ, ಜಾತಿಯಾಧಾರಿತ 'ಮತ ಸೆಳೆಯುವ' ಕಾರ್ಯವು ಸಖತ್ ಜೋರಾಗಿದೆ. ಹೌದು. ಒಂದೆಡೆ ಚುನಾವಣಾ ಆಯೋಗವು, ಜಾತಿ-ಧರ್ಮ ಆಧಾರಿತವಾಗಿ ಮತಯಾಚನೆ ಮಾಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ. ಮತ್ತೊಂದೆಡೆ ಪ್ರಮುಖ ರಾಜಕೀಯ ಪಕ್ಷಗಳು, ವಾಮಮಾರ್ಗದ ಮೂಲಕ 'ಜಾತಿಯಾಧಾರಿತ ಮತ ಬೇಟೆ' ಎಗ್ಗಿಲ್ಲದೆ ನಡೆಸಲಾರಂಭಿಸಿವೆ.
ಕ್ಷೇತ್ರದಲ್ಲಿ ಪ್ರಬಲ ಜಾತಿಗಳ ಓಲೈಕೆಗೆ ಭಾರೀ ಕಾರ್ಯತಂತ್ರ ನಡೆಸುತ್ತಿವೆ. ನಾನಾ ರಾಜಕೀಯ ದಾಳ ಉರುಳಿಸುತ್ತಿವೆ. ಜಾತಿ, ಭಾಷೆಯಾಧಾರಿತ ಸಭೆ-ಸಮಾರಂಭ ಆಯೋಜನೆಗೆ 'ತನು-ಮನ-ಧನ'ದ ಸಹಾಯಹಸ್ತ ಚಾಚುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇತ್ತೀಚೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಜಾತಿಯಾಧಾರಿತ ಸಭೆ-ಕಾರ್ಯಕ್ರಮ ಗಮನಿಸಿದರೆ ಇದು ನಿಜವೆಂಬುವುದು ಗೋಚರವಾಗುತ್ತದೆ.
ತಂತ್ರಗಾರಿಕೆ: ಪ್ರಮುಖ ರಾಜಕೀಯ ಪಕ್ಷಗಳು, ಜಾತಿಯಾಧಾರಿತ ಮತ ಸೆಳೆಯುವ ದೊಡ್ಡ ಗೇಮ್‍ಪ್ಲ್ಯಾನ್ ರೂಪಿಸಿಕೊಂಡಿರುವುದು ಸುಳ್ಳಲ್ಲವಾಗಿದೆ. ಪ್ರಮುಖ ಜಾತಿಗಳ ಮತ ದೃವೀಕರಣಕ್ಕೆ ಕಸರತ್ತು ನಡೆಸುತ್ತಿವೆ. ತಮ್ಮ ಪಕ್ಷಗಳಲ್ಲಿರುವ ವಿಭಿನ್ನ ಸಮುದಾಯದ ನಾಯಕರ ನೇತೃತ್ವದಲ್ಲಿ 'ಜಾತಿ-ಧರ್ಮ' ಸಭೆಗಳು ಏರ್ಪಾಡಾಗುವಂತೆ ಮಾಡುತ್ತಿವೆ.
ಇಂತಹ ಸಭೆಗಳಲ್ಲಿ, ಈ ಬಾರಿಯ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಸಮುದಾಯದವರು ಮತ ಹಾಕಿ ಬೆಂಬಲಿಸುವಂತೆ ನಾಯಕರುಗಳು ಮನವಿ ಮಾಡುತ್ತಿರುವುದು ಕಂಡುಬರುತ್ತಿದೆ. ಹಾಗೆಯೇ ಪ್ರಮುಖ ವರ್ಗದ ನಾಯಕರ ಮನೆಗಳಿಗೆ ಅಭ್ಯರ್ಥಿ ಹಾಗೂ ಅವರ ಪಕ್ಷದ ನಾಯಕರು ಭೇಟಿಯಿತ್ತು, ಆ ಸಮುದಾಯದ ಗಮನ ಸೆಳೆಯುವ ಕಾರ್ಯ ಕೂಡ ನಡೆಸುತ್ತಿದ್ದಾರೆ.
ಇದರ ಜೊತೆಜೊತೆಗೆ ತಮ್ಮ ಪಕ್ಷದಲ್ಲಿರುವ ಪ್ರಮುಖ ಜಾತಿ-ಸಮುದಾಯಗಳ ನಾಯಕರನ್ನು ಕ್ಷೇತ್ರಕ್ಕೆ ಕರೆತಂದು ಬಿರುಸಿನ ಪ್ರಚಾರ ಕೂಡ ನಡೆಸಲಾರಂಭಿಸಿವೆ. ಈಗಾಗಲೇ ಪ್ರಭಾವಿ ಕೋಮುಗಳ ನಾಯಕರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿವೆ.
ರಾಜಕೀಯ ನಾಯಕರು ಆಶೀರ್ವಾದದ ನೆಪದಲ್ಲಿ ಪ್ರಬಲ ಕೋಮುಗಳಿಗೆ ಸೇರಿದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಧರ್ಮ ಗುರುಗಳ ಜೊತೆ ತಾವಿರುವ ಪೋಟೋ - ವೀಡಿಯೋಗಳನ್ನು ಸಾಮಾಜಿಕ ಜಾಲತಾಣ ಹಾಗೂ ಸಮೂಹ ಮಾಧ್ಯಮಗಳ ಮೂಲಕ ವ್ಯವಸ್ಥಿತವಾಗಿ ಪ್ರಚುರಪಡಿಸಿ, ಆ ಸಮುದಾಯಗಳ ಮತದಾರರ ಗಮನ ಸೆಳೆಯುವ ಕಾರ್ಯ ನಡೆಸುತ್ತಿದ್ದಾರೆ.
ಪ್ರಚಾರ ಬಿರುಸು: ನೇರ ಹಣಾಹಣಿಗೆ ವೇದಿಕೆ ನಿರ್ಮಾಣವಾಗಿರುವ ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪರವರು ಎಡೆಬಿಡದೆ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಸುತ್ತುತ್ತಿದ್ದಾರೆ. ಪಕ್ಷದ ನಾಯಕರ ಸಭೆಯಲ್ಲಿ ಭಾಗಿಯಾಗುವುದು, ರೋಡ್ ಶೋ ನಡೆಸುವುದು, ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದು ಸೇರಿದಂತೆ ಬಿಡುವಿಲ್ಲದ ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಅಬ್ಬರ: ದಿನ ಕಳೆದಂತೆ ಶಿವಮೊಗ್ಗ ಕ್ಷೇತ್ರದಾದ್ಯಂತ ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಸಾಲುಸಾಲು ಸಮಾವೇಶಲು ನಡೆಯಲಾರಂಭಿಸಿವೆ. ರಾಜ್ಯ ಮಟ್ಟದ ನಾಯಕರು ತಂಡೋಪತಂಡವಾಗಿ ಕ್ಷೇತ್ರಕ್ಕೆ ಆಗಮಿಸಿ, ಪ್ರಚಾರ ನಡೆಸಿ ಹಿಂದಿರುಗುತ್ತಿದ್ದಾರೆ.
ಒಟ್ಟಾರೆ ಕ್ಷೇತ್ರದಲ್ಲಿ ಜಾತಿಯಾಧಾರಿತ ಮತ ಬೇಟೆ ಲೆಕ್ಕಾಚಾರ ಭಾರೀ ಕಾವು ಪಡೆದುಕೊಂಡಿದೆ. ಇದಕ್ಕಾಗಿ ನಾನಾ ತಂತ್ರ - ಪ್ರತಿತಂತ್ರ ರೂಪಿಸಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.