ಮಹಿಳೆಗೆ ಸಂವಿಧಾನದ ಬೆಂಗಾವಲು
ಈ ಹೊತ್ತಿನ ಹೊತ್ತಿಗೆ
ಸಂವಿಧಾನ ಯಾರಿಗೆ ಬದುಕು ಹಕ್ಕು ಗಳನ್ನು ನೀಡಿದೆಯೋ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅವರಿಗೆ ಸ್ವಾತಂತ್ರವನ್ನು ನೀಡಿದೆಯೋ ಆ ಸಮುದಾಯವೇ ಇಂದು ಸಂವಿಧಾನದ ಕುರಿತಂತೆ ಅನಕ್ಷರತೆಯನ್ನು ಹೊಂದಿರುವುದು ವರ್ತಮಾನದ ಹಲವು ಸಮಸ್ಯೆಗಳ ಮೂಲ ಕಾರಣವಾಗಿದೆ. ಇಂದು ಸಂವಿಧಾನ ದಮನಕ್ಕೆ ಸಂವಿಧಾನ ವಿರೋಧಿಗಳು ಶೋಷಿತ ಸಮುದಾಯವನ್ನೇ ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಯಾಕೆಂದರೆ, ಆ ಶೋಷಿತ ಸಮುದಾಯ ತನ್ನ ಪರವಾಗಿರುವ ಸಂವಿಧಾನದ ಕುರಿತಂತೆ ಅಜ್ಞಾನಿಯಾಗಿ ರುವುದು. ಯಾವ ಧರ್ಮಗ್ರಂಥಗಳು ತಮ್ಮನ್ನು ನಿರಂತರವಾಗಿ ಶೋಷಿಸುತ್ತಾ ಬಂದಿದೆಯೋ ಆ ಗ್ರಂಥಗಳ ಬಗ್ಗೆ ತಮ್ಮ ಒಲವು ತೋರಿಸುತ್ತಾ, ಸಂವಿಧಾನದ ಕುರಿತಂತೆ ಅಸಡ್ಡೆಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ತಳಸ್ತರದಲ್ಲಿ ಶೋಷಿತ ಸಮುದಾಯದ ನಡುವೆ ಸಂವಿ ಧಾನದ ಕುರಿತಂತೆ ಜಾಗೃತಿ ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.
ಭಾರತ ದೇಶದ ಕಟು ಸಾಮಾಜಿಕ ವಾಸ್ತವ ಅನುಭವಕ್ಕೆ ಬರುವುದು ಇಲ್ಲಿನ ವಂಚಿತ ಸಮುದಾಯಗಳಿಗೆ ಮಾತ್ರ. ಜಾತಿ ಕಾರಣವಾದ ದಮನ ಒಂದು ಬಗೆಯ ದಲಿತತ್ವವನ್ನು ತಳ ಸಮುದಾಯಗಳಿಗೆ ಹುಟ್ಟಿನಿಂದಲೇ ಹೇರಿದರೆ, ಲಿಂಗದ ಕಾರಣವಾಗಿ ಪ್ರತಿ ಜಾತಿಯ, ವರ್ಗದ ಹೆಣ್ಣು ಎರಡನೆಯ ದರ್ಜೆಯ ಪ್ರಜೆಯಾಗಿಯೇ ಮುಂದುವರಿಯುವಂತೆ ಮಾಡಲಾಗಿದೆ. ಎಲ್ಲ ಜಾತಿಗಳ ಮಹಿಳೆಯರೂ ದಮನಕ್ಕೊಳಗಾಗಿ ಪ್ರತಿ ಮಹಿಳೆಯನ್ನು ಕೆಳಜಾತಿಯನ್ನಾಗಿಸಿದೆ. ಮಹಿಳೆ ಗುಲಾಮರ ಗುಲಾಮಳಾಗಿ ಭಾರತದಲ್ಲಿ ಬದುಕುತ್ತಿದ್ದಾಳೆ. ಒಂದೆಡೆ ಜಾತಿ-ವರ್ಗ, ಇನ್ನೊಂದೆಡೆ ಪುರುಷ ಪ್ರಧಾನ ವ್ಯವಸ್ಥೆ ಎರಡಲಗಿನ ಕತ್ತಿಯಾಗಿ ಹೆಣ್ಣು ಜೀವಗಳನ್ನು ತುಳಿಯುತ್ತಿವೆ. ಇಂಥ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಭಾರತೀಯ ಸಮಾಜ ಮಾಡಿದ ಮಹತ್ತರ ಪ್ರಯತ್ನ ನಮ್ಮ ಸಂವಿಧಾನ. ಈ ನಿಟ್ಟಿನಲ್ಲಿ ನಮ್ಮ ಸಂವಿಧಾನ ಮಹಿಳೆಯ ಏಳಿಗೆಗಾಗಿ ಕೊಟ್ಟಿರುವ ಕೊಡುಗೆಗಳ ಕುರಿತಂತೆ ಜಾಗೃತಿ ಮೂಡಿಸುವ ಕೃತಿಯಾಗಿದೆ ಡಾ. ಎಚ್. ಎಸ್. ಅನುಪಮಾ ಅವರು ಬರೆದಿರುವ ‘ಸಂವಿಧಾನ ಮತ್ತು ಮಹಿಳೆ’.
ಕೃತಿಯ ಆರಂಭದಲ್ಲಿ ಭಾರತೀಯ ಸಮಾಜ ಹೆಣ್ಣನ್ನು ಹೇಗೆ ಶೋಷಣೆ ಮಾಡಿಕೊಂಡು ಬಂದಿದೆ ಎನ್ನುವುದನ್ನು ಪರಿಚಯಲಾಗಿದೆ. ಮನುಸ್ಮತಿ ಮಹಿಳೆಯ ಕುರಿತಂತೆ ಯಾವ ಧೋರಣೆಯನ್ನು ಹೊಂದಿದೆ, ಸಂವಿಧಾನ ಹೇಗೆ ಆ ಧೋರಣೆಯನ್ನು ವಿರೋಧಿಸಿ ಮಹಿಳೆಗೆ ವಿಮೋಚನೆಯನ್ನು ನೀಡುವ ಆಶಯ ಹೊಂದಿದೆ ಎನ್ನುವುದರ ವಿವರಗಳು ಈ ಕೃತಿಯಲ್ಲಿವೆ. ಸಂವಿಧಾನ ಸಭೆಯಲ್ಲಿ ಮಹಿಳೆಯರ ಪಾತ್ರ, ಸಂವಿಧಾನ ಮತ್ತು ಮಹಿಳಾ ಹಕ್ಕುಗಳು, ಕಾಲ ಕಾಲಕ್ಕೆ ಮಹಿಳೆಯರ ಹಕ್ಕುಗಳನ್ನು ಕೊಡಿಸುವಲ್ಲಿ ಸಂವಿಧಾನ ಹೇಗೆ ನೆರವಾಗಿದೆ ಎನ್ನುವುದನ್ನು ಪ್ರರಣಗಳ ಆಧಾರದಲ್ಲಿ ವಿವರಿಸಲಾಗಿದೆ.
ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 108. ಮುಖಬೆಲೆ 60 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.