ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪ್ರಣಾಳಿಕೆ ಬಿಡುಗಡೆ
ಮಂಗಳೂರು, ಎ.12: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೆಲ್ಫೇರ್ ಪಾರ್ಟಿ ಆ್ ಇಂಡಿಯಾ ಇದರ ಪ್ರಣಾಳಿಕ ಬಿಡುಗಡೆ ಸಮಾರಂಭ ಶುಕ್ರವಾರ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆಯಿತು.
ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ.ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ತಮ್ಮ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಒಟ್ಟು ಮೂರು ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಬ್ಬರು ಅಭ್ಯರ್ಥಿಗಳು ಪಶ್ಚಿಮ ಬಂಗಾಳದ ಜಂಗೀಪುರ ಮತ್ತು ಕೂಚ್ ಬಿಹಾರ್ನಿಂದ ಸ್ಪರ್ಧಿಸುತ್ತಿದ್ದಾರೆ. ಒಬ್ಬರು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಕಣಕ್ಕಿಳಿದಿದ್ದಾರೆ ಎಂದರು.
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ವಿರುದ್ಧ ಜಂಗೀಪುರದಲ್ಲಿ ಸ್ವತಃ ವೆಲ್ಫೇರ್ ಪಕ್ಷದ ರಾಷ್ಟ್ರಾಧ್ಯಕ್ಷ ಎಸ್.ಕ್ಯೂ.ಆರ್. ಇಲ್ಯಾಸ್ ಸ್ಪರ್ಧಿಸುತ್ತಿದ್ದು, ಅಲ್ಲಿನ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೃಷಿ, ಉದ್ಯೋಗ, ಕೋಮು ಸಾಮರಸ್ಯ ಮತ್ತು ಬಲಿಷ್ಠ ಭಾರತ ನಿರ್ಮಾಣದ ಪ್ರಸ್ತಾವಣೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದು ಸುಲೈಮಾನ್ ಕಲ್ಲರ್ಪೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸರ್ರಾಜ್, ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ಮುತ್ತಲಿಬ್, ಫೈಝಲ್ ಉಪಸ್ಥಿತರಿದ್ದರು.