ಮತಗಟ್ಟೆಯಲ್ಲಿ ಮತದಾರರಿಗೆ ಮಾಹಿತಿ ನೀಡಲು ಪೋಸ್ಟರ್ಗಳು
ಉಡುಪಿ, ಎ.12: ಜಿಲ್ಲೆಯಲ್ಲಿ ಎ.18ರಂದು ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಮತಗಟ್ಟೆಯ ಕುರಿತು ಮಾಹಿತಿ ನೀಡಲು ವಿವಿಧ ಬಗೆಯ ಪೋಸ್ಟರ್ಗಳನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ.
ಮತಗಟ್ಟೆಯಲ್ಲಿ ವಿವಿಧ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯಗಳ ವಿವರ ಗಳನ್ನು ಪೋಸ್ಟರ್ನಲ್ಲಿ ನೀಡಲಾಗಿದ್ದು, ಇದರಿಂದ ಮತದಾರರು ಮತಗಟ್ಟೆಯಲ್ಲಿ ಯಾವ ಅಧಿಕಾರಿಗಳ ಬಳಿ ತೆರಳಬೇಕು, ಏನು ಮಾಡಬೇಕು ಮುಂತಾದ ಅನವಶ್ಯಕ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.
ಮತದಾನ ಕೇಂದ್ರದಲ್ಲಿ ಯಾವ ಗುರುತಿನ ದಾಖಲೆ ತೋರಿಸಿ ಮತದಾನ ಮಾಡಬಹುದು, ಮತದಾರರ ಪೋಟೋ ಸ್ಲಿಪ್ ಕೇವಲ ಮಾಹಿತಿಗಾಗಿಯೇ ಹೊರತು ಮತಗಟ್ಟೆಯಲ್ಲಿ ಗುರುತಿನ ದಾಖಲೆಯಾಗಿ ಉಪಯೋಗಿಸಲು ಬರುವುದಿಲ್ಲ ಎಂಬ ಮಾಹಿತಿಗಳನ್ನು ಇದರಲ್ಲಿ ನೀಡಲಾಗಿದೆ.
ಇವಿಎಂ ಬಳಕೆ ಮತ್ತು ವಿವಿಪ್ಯಾಟ್ ಯಂತ್ರ ಬಳಸಿ ಹೇಗೆ ಮತ ಚಲಾಯಿ ಸಬಹುದು ಎಂಬ ಸಚಿತ್ರ ಮಾಹಿತಿಯನ್ನು ನೀಡಲಾಗಿದೆ. ಮತದಾರರು ಮತ ಚಲಾಯಿಸುವ ವಿಧಾನವನ್ನು ಹಾಗೂ ಈ ಯಂತ್ರಗಳ ಕಾರ್ಯ ವಿಧಾನವನ್ನೂ ಸಹ ಇಲ್ಲಿ ವಿವರಿಸಲಾಗಿದೆ. ಮತದಾನ ಕೇಂದ್ರದಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ಅಂಧರಿಗೆ ದೊರೆಯುವ ಸೌಲಭ್ಯಗಳ ಬಗ್ಗೆಯೂ ಮಾಹಿತಿಗಳಿವೆ.
ಈ ಎಲ್ಲಾ ಪೋಸ್ಟರ್ಗಳನ್ನು ಮಸ್ಟರಿಂಗ್ ಸಮಯದಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲು ಕ್ರಮ ಕೈಗೊಂಡಿದ್ದು, ಮತ ಕೇಂದ್ರಕ್ಕೆ ತೆರಳಿದ ಕೂಡಲೇ ಮತಗಟ್ಟೆ ಅಧಿಕಾರಿಗಳು ಈ ಪೋಸ್ಟರ್ಗಳನ್ನು ಮತಕೇಂದ್ರ ಪ್ರವೇಶಿಸುವ ಮುನ್ನ ಮತದಾರರಿಗೆ ಸ್ಪಷ್ಟವಾಗಿ ಕಾಣುವ ಕಡೆಗಳಲ್ಲಿ ಅವಡಿಸುವಂತೆ ಸೂಚನೆ ನೀಡಲಾಗಿದೆ.