ಉಡುಪಿ ಜಿಲ್ಲೆಯಲ್ಲಿ 2 ವಿಕಲಚೇತನರ ಮತದಾನ ಕೇಂದ್ರ
ಉಡುಪಿ, ಎ.13: ಜಿಲ್ಲಾಡಳಿತದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಎ.18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ, ವಿಕಲಚೇತನರಿಗಾಗಿ ವಿಶೇಷ ಸೌಲಭ್ಯಗಳುಳ್ಳ ಎರಡು ಮತಗಟ್ಟೆಗಳನ್ನು ತೆರೆಯಲಾಗುತ್ತದೆ.
ಈ ಮತಗಟ್ಟೆಗಳು ಅಂಗವಿಕಲ ಸಿಬ್ಬಂದಿಗಳಿಂದಲೇ ನಿರ್ವಹಿಸಲ್ಪಡುವ ಮತಗಟ್ಟೆಗಳಾಗಿದ್ದು, ಇವುಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಲಾಗುತ್ತಿದೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಮಾರ್ಗದರ್ಶನದಲ್ಲಿ ಈ ವಿಶೇಷ ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ.
ಜಿಲ್ಲೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಭಾಗ 217ರ ಕೋಡಿಕನ್ಯಾಣ ಗ್ರಾಮ ಪಂಚಾಯತ್ ಕಚೇರಿ ಮತಗಟ್ಟೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಭಾಗ 152ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತನಗರ (ಪಶ್ಚಿಮಭಾಗ) ಪುತ್ತೂರು ಇಲ್ಲಿ ವಿಕಲಚೇತನ ಮತಗಟ್ಟೆ ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮತಗಟ್ಟೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು, ಸುಗಮ ಚುನಾವಣೆ ನಡೆಸಲು ನೋಡೆಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.
ಈ ಅಧಿಕಾರಿಗಳು ಅಂಗವಿಕಲ ಮತಗಟ್ಟೆಗಳಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ, ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ಸೂಕ್ತ ನೀರಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ರ್ಯಾಂಪ್ ವ್ಯವಸ್ಥೆ, ವೀಲ್ಚೇರ್ ವ್ಯವಸ್ಥೆ, ಮತಗಟ್ಟೆಗೆ ಸ್ವಯಂಸೇವಕರ ನಿಯೋಜನೆ, ಸ್ವಯಂ ಸೇವಕರಿಗೆ ಗುರುತಿನ ಚೀಟಿ ವ್ಯವಸ್ಥೆ, ವಿಶೇಷ ಚೇತನರು ಮತ್ತು ಅಶಕ್ತ ಮತದಾರರಿಗೆ ಮತಗಟ್ಟೆಗೆ ಬರಲು ಮತ್ತು ವಾಪಸ್ ಮನೆಗೆ ಹೋಗಲು ಸೂಕ್ತ ವಾಹನ ವ್ಯವಸ್ಥೆ, ವಾಹನ ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಮತಗಟ್ಡೆಯ ಹೊರಗೆ ಮತದಾನ ಸಹಾಯ ಕೇಂದ್ರ ಸ್ಥಾಪನೆ ಕುರಿತು ಮತದಾನಕ್ಕೆ 2 ದಿನ ಮುಂಚೆ ಪರಿಶೀಲಿಸಿ ಎಲ್ಲಾ ವ್ಯವ್ಥೆ ಗಳನ್ನು ಮಾಡಲು ಸೂಚಿಸಲಾಗಿದೆ.
ಅಲ್ಲದೇ ಈ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ತುರ್ತು ಚಿಕಿತ್ಸೆಗಾಗಿ ಆರೋಗ್ಯ ಸಹಾಯಕಿಯರ ಮೂಲಕ ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪನೆ, ಮತದಾರರು ಕಾಯುವಿಕೆಯ ಸಮಯದಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ನೆರಳಿನ ವ್ಯವಸ್ಥೆ, ಮತಗಟ್ಟೆಯ ನೆಲಕ್ಕೆ ಮ್ಯಾಟ್ ಅಳವಡಿಕೆ, ಅಂಗವಿಕಲರಿಗೆ ಅಗತ್ಯವಿರುವ ಸಾಧನ ಸಲಕರಣೆಗಳು, ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ನಿಯೋಜನೆ, ಸಂಜ್ಞಾ ಭಾಷೆಯಲ್ಲಿ ಸಹಾಯ ಮಾಡಲು ಶಿಕ್ಷಕರ ನಿಯೋಜನೆ, ಪೋಟೋ ವೀಡಿಯೊ ಚಿತ್ರೀಕರಣ ವ್ಯವಸ್ಥೆ ಮಾಡಲು ಸಹ ಕ್ರಮಕೈಗೊಳ್ಳಲಾಗಿದೆ.
ಈ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ, ಸ್ವಯಂ ಸೇವಕರಿಗೆ ಮತ್ತು ನಗರ ಮತ್ತು ಗ್ರಾಮೀಣ ಪುರ್ನವಸತಿ ಕಾರ್ಯಕರ್ತರಿಗೆ, ಛಾಯಾ ಚಿತ್ರಗ್ರಾಹಕರಿಗೆ ಗುರುತಿನ ಚೀಟಿ ಹಾಗೂ ವಿಶೇಷಚೇತನ ಮತದಾರರ ಪ್ರಯಾಣದ ವಾಹನಕ್ಕೆ ಸ್ಟಿಕರ್ಗಳನ್ನು ಕೂಡಾ ಸಿದ್ದಪಡಿಸಲಾಗಿದೆ.
ಅಂಗವಿಕಲ ಮತದಾರರಿಗೆ ಲಭ್ಯ ಸೌಲಭ್ಯ
ಉಡುಪಿ ಲೋಕಸಭಾ ಕ್ಷೇತ್ರದ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಒಟ್ಟು 222 ಮತಗಟ್ಟೆಗಳಲ್ಲಿ 143 ಮತಗಟ್ಟೆ ವ್ಯಾಪ್ತಿಯಲ್ಲಿ 1649 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 412 ಮಂದಿ ಮೂಳೆಗೆ ಸಂಬಂಧಿಸಿದ, 113 ಮಂದಿ ಕಿವಿಗೆ ಸಂಬಂಧಿಸಿದ, 95 ಮಂದಿ ಕಣ್ಣಿಗೆ ಸಂಬಂಧಿಸಿದ ಮತ್ತು 1029 ಮಂದಿ ಇತರೆ ಅಂಗವೈಕಲ್ಯತೆ ಹೊಂದಿದ ಮತದಾರರಿದ್ದು, ಇವರಿಗಾಗಿ 143 ವೀಲ್ಚೇರ್, 222 ಮ್ಯಾಗ್ನಿಫೈಯಿಂಗ್ ಗ್ಲಾಸ್, 222 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಉಡುಪಿ ವಿಧಾನಸಭಾ ವ್ಯಾಪ್ತಿಯ ಒಟ್ಟು 226 ಮತಗಟ್ಟೆಗಳಲ್ಲಿ 115 ಮತಗಟ್ಟೆ ವ್ಯಾಪ್ತಿಯಲ್ಲಿ 1516 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 922 ಮಂದಿ ಮೂಳೆಗೆ ಸಂಬಂಧಿಸಿದ, 142 ಮಂದಿ ಕಿವಿಗೆ ಸಂಬಂಧಿಸಿದ, 133 ಮಂದಿ ಕಣ್ಣಿಗೆ ಸಂಬಂಧಿಸಿದ ಮತ್ತು 319 ಮಂದಿ ಇತರೆ ಅಂಗವೈಕಲ್ಯತೆ ಹೊಂದಿದ ಮತದಾರರಿದ್ದು, ಇವರಿಗಾಗಿ 115 ವೀಲ್ ಚೇರ್, 226 ಮ್ಯಾಗ್ನಿಫೈಯಿಂಗ್ ಗ್ಲಾಸ್, 226 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಕಾಪು ವಿಧಾನಸಭಾ ವ್ಯಾಪ್ತಿಯ ಒಟ್ಟು 208 ಮತಗಟ್ಟೆಗಳಲ್ಲಿ, 117 ಮತಗಟ್ಟೆ ವ್ಯಾಪ್ತಿಯಲ್ಲಿ 1299 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 371 ಮಂದಿ ಮೂಳೆಗೆ ಸಂಬಂಧಿಸಿದ, 189 ಮಂದಿ ಕಿವಿಗೆ ಸಂಬಂಧಿಸಿದ, 91 ಮಂದಿ ಕಣ್ಣಿಗೆ ಸಂಬಂಧಿಸಿದ ಮತ್ತು 648 ಮಂದಿ ಇತರೆ ಅಂಗವೈಕಲ್ಯತೆ ಹೊಂದಿದ ಮತದಾರರಿದ್ದು, ಇವರಿಗಾಗಿ 117 ವೀಲ್ಚೇರ್, 208 ಮ್ಯಾಗ್ನಿಫೈಯಿಂಗ್ ಗ್ಲಾಸ್, 208 ಮಂದಿಸಹಾಯಕರನ್ನು ನೇಮಿಸಲಾಗಿದೆ.
ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಒಟ್ಟು 209 ಮತಗಟ್ಟೆಗಳಲ್ಲಿ, 149 ಮತಗಟ್ಟೆ ವ್ಯಾಪ್ತಿಯಲ್ಲಿ 1439 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 186 ಮಂದಿ ಮೂಳೆಗೆ ಸಂಬಂಧಿಸಿದ, 204 ಮಂದಿ ಕಿವಿಗೆ ಸಂಬಂಧಿಸಿದ, 174 ಮಂದಿ ಕಣ್ಣಿಗೆ ಸಂಬಂಧಿಸಿದ ಮತ್ತು 875 ಮಂದಿ ಇತರೆ ಅಂಗವೈಕಲ್ಯತೆ ಹೊಂದಿದ ಮತದಾರರಿದ್ದು, ಇವರಿಗಾಗಿ 149 ವೀಲ್ ಚೇರ್, 209 ಮ್ಯಾಗ್ನಿಫೈಯಿಂಗ್ ಗ್ಲಾಸ್ ಹಾಗೂ 209 ಮಂದಿ ಸಹಾಯಕರನ್ನು ನೇಮಿಸಲಾಗಿದೆ ಎಂದು ಚುನಾವಣಾ ಕಚೇರಿ ಪ್ರಕಟಣೆ ತಿಳಿಸಿದೆ.