ಎ.17-18ರ ಚುನಾವಣಾ ಜಾಹೀರಾತಿಗೆ ಪೂರ್ವಾನುಮತಿ ಅಗತ್ಯ
ಉಡುಪಿ, ಎ.13: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎ.18ರಂದು ಮತದಾನ ನಡೆಯಲಿದ್ದು, ಮತದಾನ ನಡೆಯುವ 48 ಗಂಟೆಗಳ ಮುಂಚೆ (ಎ.17 ಮತ್ತು 18ರ) ದಿನಪತ್ರಿಕೆ ಸೇರಿದಂತೆ ಯಾವುದೇ ಮುದ್ರಣ ಮಾಧ್ಯಮದಲ್ಲಿ, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಣದಲ್ಲಿ ರುವ ಅಭ್ಯರ್ಥಿ ಗಳ ಪರ ಯಾವುದೇ ಸಂಸ್ಥೆ, ವ್ಯಕ್ತಿಗಳು ಜಾಹಿರಾತು ಪ್ರಕಟಿಸುವ ಮುನ್ನ, ಜಾಹಿರಾತಿನಲ್ಲಿರುವ ವಿಷಯಗಳ ಕುರಿತು ಜಿಲ್ಲಾ ಚುನಾವಣಾಧಿ ಕಾರಿಗಳ ಕಚೇರಿಯಲ್ಲಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ)ಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದು ಪ್ರಕಟಿಸಬೇಕಾಗಿದೆ.
ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದ ಜಾಹಿರಾತುಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಇಲ್ಲ: ಆದರೆ, ಎ.16ರ ಸಂಜೆ 6 ಗಂಟೆಯಿಂದ ಎ.18ರ ಸಂಜೆ 6 ಗಂಟೆಯವರೆಗೆ ಟಿವಿ, ವೆಬ್ಸೈಟ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಪೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳಿಗೆ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಮತಯಾಚನೆ ಸೇರಿದಂತೆ ಯಾವುದೇ ಚುನಾವಣಾ ಜಾಹಿರಾತುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.
ಇಂತಹ ಜಾಹಿರಾತು ಅಥವಾ ಸಂದೇಶ ಹಾಕುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದೂ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಸಿದ್ದಾರೆ.