ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ: ಸಯ್ಯದ್ ಮೋಹಿದ್ ಅಲ್ತಾಫ್
ಬೆಂಗಳೂರು, ಎ.13: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಳ ಕುರಿತು ರಾಜ್ಯ ಸರಕಾರದ ಹೊಸದಿಲ್ಲಿಯ ವಿಶೇಷ ಪ್ರತಿನಿಧಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಉಸ್ತುವಾರಿ ಸಯ್ಯದ್ ಮೋಹಿದ್ ಅಲ್ತಾಫ್ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಹೇಗಿದೆ?
ಮೋಹಿದ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲುವ ಪೂರಕ ವಾತಾವರಣವಿದೆ. ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಶಾಸಕರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.
ಪ್ರ: ಜೆಡಿಎಸ್ ಪಕ್ಷವು ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡದಿರಲು ಕಾರಣವೇನು?
ಮೋಹಿದ್: ಮೈತ್ರಿ ಸೂತ್ರದಂತೆ ನಾವು 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದೆವು. ಆದರೆ, ಅಂತಿಮವಾಗಿ ನಮಗೆ 8 ಕ್ಷೇತ್ರಗಳನ್ನು ಬಿಟ್ಟುಕೊಡಲಾಯಿತು. ಈ ಪೈಕಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನವರನ್ನೇ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಇನ್ನು ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲಾಗಿದೆ. ಕಾರಣಾಂತರಗಳಿಂದ ನಮ್ಮ ಪಕ್ಷದಿಂದ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಕೊಡಲು ಸಾಧ್ಯವಾಗಿಲ್ಲ.
ಪ್ರ: ಜೆಡಿಎಸ್ ಪಕ್ಷದಿಂದ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದು ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರೇ ಒಪ್ಪಿಕೊಂಡಿದ್ದಾರಲ್ಲ?
ಮೋಹಿದ್: ನೀವು ಹೇಳುತ್ತಿರುವುದು ನಿಜ. ನಮ್ಮ ಪಕ್ಷದಿಂದಲೂ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು. ಆದರೆ, ಸೀಮಿತವಾದ ಸೀಟುಗಳಲ್ಲಿ ನಮ್ಮ ಸ್ಪರ್ಧೆಯಿದೆ. ಅಧಿಕಾರಕ್ಕಿಂತ ನಮಗೆ ದೇಶ ಮುಖ್ಯ. ಆದುದರಿಂದ, ಸಮುದಾಯವು ನಮ್ಮ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆಯಿದೆ.
ನಮ್ಮ ಮೈತ್ರಿ ಪಕ್ಷ ಕಾಂಗ್ರೆಸ್ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆ ಕ್ಷೇತ್ರವನ್ನು ನಾವು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ನಮ್ಮ ಪಕ್ಷದ ನಾಯಕತ್ವವು ಮುಂದಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಿದೆ ಎಂಬ ವಿಶ್ವಾಸವಿದೆ.
ಪ್ರ: ಇದೇ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಆದರೆ, ಕಾರ್ಯಕರ್ತರಲ್ಲಿನ ಅಸಮಾಧಾನ ಶಮನಗೊಳಿಸುವ ಕೆಲಸವಾಗಿಲ್ಲವಲ್ಲ?
ಮೋಹಿದ್: ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಲು ಈ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರಮೋದಿ ನಡೆಸುತ್ತಿರುವ ಸರ್ವಾಧಿಕಾರದ ರೀತಿಯ ಆಡಳಿತದಿಂದ ಜನರನ್ನು ರಕ್ಷಿಸಬೇಕು. ಆದುದರಿಂದ, ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗಟ್ಟು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ. ಈ ಎಲ್ಲ ಸಂಗತಿಗಳನ್ನು ಕಾರ್ಯಕರ್ತರು ಅರ್ಥ ಮಾಡಿಕೊಂಡಿದ್ದಾರೆ.
ಪ್ರ: ರಾಜ್ಯದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ನಡುವೆ ಹೊಂದಾಣಿಕೆ ಕೊರತೆ ಎದುರಾಗುತ್ತಿದೆಯಲ್ಲ, ನಿಮ್ಮ ಚುನಾವಣಾ ಫಲಿತಾಂಶದ ಮೇಲೆ ಇದು ಪರಿಣಾಮ ಬೀರುವುದಿಲ್ಲವೇ?
ಮೋಹಿದ್: ದೇಶದಲ್ಲಿ ಕೋಮುವಾದಿ ಬಿಜೆಪಿ ನೇತೃತ್ವದ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ಜಾತ್ಯತೀತ ಶಕ್ತಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು, ಲೋಕಸಭಾ ಚುನಾವಣೆ ಯನ್ನು ಎದುರಿಸುತ್ತಿವೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಪರಸ್ಪರ ಭಿನ್ನಾಭಿಪ್ರಾಯ ಗಳಿದ್ದರೆ, ಅದನ್ನು ಬಗೆಹರಿಸಿಕೊಂಡು ಮುಂದುವರೆಯುತ್ತಿದ್ದೇವೆ. ರಾಜ್ಯದಲ್ಲಿ ಈ ಬಾರಿ ಕನಿಷ್ಠ 22 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ದೇಶದಲ್ಲಿನ ಬದಲಾವಣೆಗೆ ನಮ್ಮ ರಾಜ್ಯವೇ ಮುನ್ನುಡಿ ಬರೆಯಲಿದೆ.
ಪ್ರ: ಶಿವಮೊಗ್ಗ ಹೊರತು ಪಡಿಸಿ ಬೇರೆ ಯಾವ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿದ್ರಿ, ಅಲ್ಲಿನ ವಾತಾವರಣ ಹೇಗಿದೆ?
ಮೋಹಿದ್: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದೇನೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಜನ ಗುರುತಿಸುವಂತಹ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ. ಕೇವಲ ತಮ್ಮ ಪ್ರಚೋದನಾತ್ಮಕ ಭಾಷಣಗಳ ಮೂಲಕ, ಜನರ ಮನಸ್ಸನ್ನು ಒಡೆಯುವ ಕೆಲಸ ಮಾಡಿದ್ದಾರೆ ಅಷ್ಟೇ. ಕೋಮುಗಲಭೆಗಳಿಂದಾಗಿ ಅಲ್ಲಿನ ಜನರು ಬೇಸತ್ತಿದ್ದಾರೆ. ಆದುದರಿಂದ, ಬದಲಾವಣೆ ಬಯಸಿ ಈ ಬಾರಿ ಅಲ್ಲಿನ ಜನ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್‌ಗೆ ಆಶೀರ್ವಾದ ಮಾಡಲಿದ್ದಾರೆ.