ಕರ್ನಾಟಕ ರಾಷ್ಟ್ರ ಸಮಿತಿ ಬೆಂಬಲಿತ ಎಂ.ಗಣೇಶ್ಗೆ ಮತ ನೀಡಲು ಮನವಿ
ಉಡುಪಿ, ಎ.13: ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ‘ಕರ್ನಾಟಕ ರಾಷ್ಟ್ರ ಸಮಿತಿ’ಎಂಬ ಪ್ರಾದೇಶಿಕ ಪಕ್ಷವನನು ಹುಟ್ಟು ಹಾಕಿದ್ದು, ಚುನಾವಣಾ ಆಯೋಗದಲ್ಲಿ ಪಕ್ಷವನ್ನು ನೋಂದಾಯಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದೀಗ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಈ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಗ್ಗಲಮಕ್ಕಿ ಗಣೇಶ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಬೆಂಬಲಿತ ಗಣೇಶ್ ಪರವಾಗಿ ಕ್ಷೇತ್ರದ ಜನತೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಯೋಗ್ಯ, ಅರ್ಹ, ಜನಪರ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ರಾಜ್ಯದಲ್ಲಿ ತಮ್ಮ ಪಕ್ಷ ಉಡುಪಿ-ಚಿಕ್ಕಮಗಳೂರು ಸೇರಿದಂತೆ 12 ಕಡೆಗಳಲ್ಲಿ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾಗಿ ಅವರು ತಿಳಿಸಿದರು. ಕರ್ನಾಟಕ ರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್.ಹಾಗೂ ಅಭ್ಯರ್ಥಿ ಗಣೇಶ್ ಮಗ್ಗಲಮಕ್ಕಿ ಉಪಸ್ಥಿತರಿದ್ದರು.