varthabharthi


ನೇಸರ ನೋಡು

ಮತದಾನ - ನಾಲ್ಕು ಸ್ವಾತಂತ್ರ್ಯಗಳಿಗಾಗಿ

ವಾರ್ತಾ ಭಾರತಿ : 13 Apr, 2019
ಜಿ.ಎನ್.ರಂಗನಾಥ ರಾವ್

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಸಂವಿಧಾನದ ಆಶಯಗಳಿಗನುಗುಣವಾಗಿ ಆಡಳಿತ ನಡೆಸಲೆಂದು ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಲೋಕಸಭೆ/ರಾಜ್ಯ ವಿಧಾನ ಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ. ಹೀಗೆ ಆಯ್ಕೆಮಾಡಿದ ಪ್ರತಿನಿಧಿಗಳನ್ನು ನಿಯಂತ್ರಿಸಲಾಗದಿರುವುದು ಮತದಾರರ ದುರದೃಷ್ಟ. ಈ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಗತ್ಯಗಳು, ಬೇಡಿಕೆಗಳು, ಜನರ ಆಶೋತ್ತರಗಳು ಇತ್ಯಾದಿಗಳಿಗೆ ಸ್ಪಂದಿಸುತ್ತಿದ್ದಾರೆಯೇ?-ಇದು ಈಚಿನ ದಿನಗಳಲ್ಲಿ ಪದೇಪದೇ ಕೇಳಿಬರುತ್ತಿರುವ ಪ್ರಶ್ನೆ. ಸ್ಪಂದಿಸುವ ಮಾತಿರಲಿ, ಈ ಜನತಾ ಪ್ರತಿನಿಧಿಗಳಿಗೆ ಮತದಾರರ ಆಶೋತ್ತರಗಳಿಗಿಂತ ಅಧಿಕಾರ ಲಾಲಸೆ ಮತ್ತು ಸ್ವಾರ್ಥಪಿಪಾಸೆಯೇ ಮುಖ್ಯವಾಗಿರುವುದು ಈಗಿನ ವಿದ್ಯಮಾನ.


ಮತ್ತೊಂದು ಸಾರ್ವತ್ರಿಕ ಚುನಾವಣೆ ಬಂದಿದೆ. ದೇಶದ ಕೆಲವೆಡೆಗಳಲ್ಲಿ ಮೊದಲ ಹಂತದ ಮತದಾನವೂ ಮುಗಿದಿದೆ. ಕರ್ನಾಟಕದಲ್ಲಿ ಇದೇ 18 ಮತ್ತು 23ರಂದು ಮತದಾನ ನಡೆಯಲಿದೆ. ನಮ್ಮ ಸ್ವಾತಂತ್ರ್ಯವನ್ನು ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವುದರಲ್ಲಿ ಈ ಚುನಾವಣೆ ನಿರ್ಣಾಯಕವಾಗಲಿದೆ ಎಂದು ಕಾಂಗ್ರೆಸ್ ಆದಿಯಾಗಿ ಎಲ್ಲ ವಿರೋಧ ಪಕ್ಷಗಳೂ ಏಕಕಂಠದಿಂದ ಘೋಷಿಸಿವೆ. ಈ ಭೀತಿಗೆ ಕಾರಣ ಕಳೆದ ಐದು ವರ್ಷಗಳಲ್ಲಿ ಮೋದಿಯವರ ಸರ್ವಾಧಿಕಾರ ಪ್ರವೃತ್ತಿಯ ಆಡಳಿತ ಹಾಗೂ ಈ ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸಿದಲ್ಲಿ ಸಂವಿಧಾನವನ್ನು ಬದಲಾಯಿಸಲಾಗುವುದು ಹಾಗೂ ಈ ದೇಶದಲ್ಲಿ ಇನ್ನು ಐವತ್ತು ವರ್ಷಗಳ ಕಾಲ ಚುನಾವಣೆ ನಡೆಯುವುದಿಲ್ಲ ಎಂದು ಭಾಜಪದ ಕೆಲವು ಧುರೀಣರು ಘಂಟಾಘೋಷವಾಗಿ ಹೇಳಿರುವುದು. ಮೋದಿಯವರು ಈ ಮಾತುಗಳನ್ನು ಅಲ್ಲಗಳೆಯದೇ ಇರುವುದು ಇಂಥ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಎಂದೇ ವಿರೋಧ ಪಕ್ಷಗಳು ಸಂವಿಧಾನವನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮರೋತ್ಸಾಹದಿಂದ ಚುನಾವಣಾ ಕಣಕ್ಕೆ ಧುಮುಕಿವೆ. ಹಿಂದುತ್ವ ಪ್ರಧಾನ ಚಿಂತನೆಯಾಗುಳ್ಳ ಹಾಗೂ ಏಕಪಕ್ಷೀಯ ಅಧ್ಯಕ್ಷ ಮಾದರಿ ಸರಕಾರವನ್ನು ಬಯಸುವ ಸರ್ವಾಧಿಕಾರಿ ಪ್ರವೃತ್ತಿಯ ಭಾರತೀಯ ಜನತಾ ಪಕ್ಷವನ್ನು ಈ ಚುನಾವಣೆಯಲ್ಲಿ ಶತಾಯಗತಾಯ ಪರಾಜಯಗೊಳಿಸಲು ನಡೆಸಿರುವ ಪ್ರಯತ್ನವನ್ನು ಪ್ರಜಾಪ್ರಭುತ್ವವಾದಿಗಳೆಲ್ಲರೂ ಸ್ವಾಗತಿಸಿರುವುದು ನ್ಯಾಯೋಚಿತವಾದುದೇ ಆಗಿದೆ. ರಾಜ್ಯಾಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ರಾಜಕೀಯ ಪಕ್ಷಗಳು ಹಾತೊರೆಯುತ್ತಿರುವುದರಲ್ಲಿ ಅಸಹಜವಾದುದೇನೂ ಇಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಸಂವಿಧಾನದ ಆಶಯಗಳಿಗನುಗುಣವಾಗಿ ಆಡಳಿತ ನಡೆಸಲೆಂದು ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಲೋಕಸಭೆ/ರಾಜ್ಯ ವಿಧಾನ ಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ.

ಹೀಗೆ ಆಯ್ಕೆಮಾಡಿದ ಪ್ರತಿನಿಧಿಗಳನ್ನು ನಿಯಂತ್ರಿಸಲಾಗದಿರುವುದು ಮತದಾರರ ದುರದೃಷ್ಟ. ಈ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಗತ್ಯಗಳು, ಬೇಡಿಕೆಗಳು, ಜನರ ಆಶೋತ್ತರಗಳು ಇತ್ಯಾದಿಗಳಿಗೆ ಸ್ಪಂದಿಸುತ್ತಿದ್ದಾರೆಯೆ?-ಇದು ಈಚಿನ ದಿನಗಳಲ್ಲಿ ಪದೇಪದೇ ಕೇಳಿಬರುತ್ತಿರುವ ಪ್ರಶ್ನೆ. ಸ್ಪಂದಿಸುವ ಮಾತಿರಲಿ, ಈ ಜನತಾ ಪ್ರತಿನಿಧಿಗಳಿಗೆ ಮತದಾರರ ಆಶೋತ್ತರಗಳಿಗಿಂತ ಅಧಿಕಾರ ಲಾಲಸೆ ಮತ್ತು ಸ್ವಾರ್ಥಪಿಪಾಸೆಯೇ ಮುಖ್ಯವಾಗಿರುವುದು ಈಗಿನ ವಿದ್ಯಮಾನ. ಪ್ರಜಾಸತ್ತಾತ್ಮಕವಾಗಿ ಆಯ್ಕೆ ಹೊಂದಿದ ಸರಕಾರ ಏನುಬೇಕಾದರೂ ಮಾಡಬಹುದು, ಮನಸೋ ಇಚ್ಛೆ ವರ್ತಿಸಬಹುದು ಎಂಬುದು ನಮ್ಮ ರಾಜಕಾರಣಿಗಳ ದೃಢ ನಂಬಿಕೆಯಾಗಿರುವಂತಿದೆ. ಸಮಾಜವನ್ನು ಒಡೆಯಬಹುದು, ಜಾತಿಮತ ಧರ್ಮಗಳನ್ನು ಪರಸ್ಪರ ಎತ್ತಿಕಟ್ಟಬಹುದು, ಧರ್ಮಾಧಾರಿತ ಧ್ರುವೀಕರಣ ನಡೆಸಬಹುದು, ಜನತೆಯನ್ನು ನಿರಂತರವಾಗಿ ದಟ್ಟದಾರಿದ್ರ್ಯದಲ್ಲಿ ಕೊಳೆಸಬಹುದು, ಅವರ ಹಕ್ಕು-ಸ್ವಾತಂತ್ರ್ಯಗಳನ್ನು ಕಸಿದುಕೊಂದು ಅವರನ್ನು ಮಟ್ಟಹಾಕಬಹುದು, ತಮ್ಮ ಅನುಕೂಲಕ್ಕಾಗಿ ಸಂವಿಧಾನಾತ್ಮಕ ಸಂಸ್ಥೆಗಳ ಕೊರಳು ಹಿಚುಕಬಹುದು, ಹಿಂಸೆ ಪ್ರಚೋದಿಸುವ ಮೂಲಕ ಸಮಾಜದಲ್ಲಿ ಅಶಾಂತಿಯುಂಟುಮಾಡಬಹುದು ಎನ್ನುವುದು ಇಂದು ನಮ್ಮನ್ನು ಆಳುತ್ತಿರುವ ಪ್ರಭುಗಳ ನಂಬಿಕೆಯಾಗಿರುವಂತಿದೆ.

ಇವತ್ತಿನ ಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆ ಹೊಂದಿದ ಸರಕಾರದಲ್ಲಿ ಒಳ್ಳೆಯ ಆಡಳಿತ ನೀಡುವುದಕ್ಕಿಂತ ಮಿಗಿಲಾಗಿ ಇಂಥ ಆಶಯಗಳೇ ಹೆಚ್ಚಾಗಿರುವಂತೆ ತೋರುತ್ತದೆ. ಶಾಂತಿ, ಮಾನವ ಘನತೆ, ಮಾನ-ಮರ್ಯಾದೆಗಳಿಂದ ಸಭ್ಯ ಜೀವನ ನಡೆಸುವ ಪ್ರಜೆಗಳ ಆಶಯವನ್ನು ಗೌರವಿಸದ ಸರಕಾರಗಳಿಂದಾಗಿ ಇಂದು ಪ್ರಜೆಗಳ ದುಃಖ ದುಮ್ಮಾನಗಳು ಮುಗಿಲು ಮುಟ್ಟಿವೆ. ದೇಶದ ಆರ್ಥಿಕ ವಿಪತ್ತನ್ನೇ ಗಮನಿಸಿ. ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಮಸ್ಯೆಗೆ ಖಾಯಂ ಪರಿಹಾರ ಕಂಡುಹಿಡಿಯುವ ಬದಲು ಸರಕಾರ ಅವರಿಗೆ ಪುಡಿಗಾಸು ಭಿಕ್ಷೆ ನೀಡುವ ಉದ್ಧಟತನವನ್ನು ತೋರುತ್ತದೆ. ಬೆಳೆ ವಿಮೆ ಹೆಸರಿನಲ್ಲಿ ವಿಮಾ ಕಂಪೆನಿಗಳನ್ನು ಮತ್ತಷ್ಟು ಶ್ರೀಮಂತವಾಗಿಸುತ್ತದೆ. ಹಳೇ ಯೋಜನೆಗೆ ಹೊಸ ಹೆಸರಿಟ್ಟು ಅರವತ್ತು ದಾಟಿದ ರೈತರಿಗೆ ನಿವೃತ್ತಿ ವೇತನದ ಆಸೆ ತೋರುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಂದ ವಂತಿಗೆ ಕಟ್ಟಿಸಿಕೊಳ್ಳುವ ಪಿಂಚಣಿ ಯೋಜನೆಯನ್ನು ಸರಕಾರದ ಬೊಕ್ಕಸದಿಂದ ಕೊಡುವ ಪಿಂಚಣಿ ಎಂಬಂತೆ ಬಿಂಬಿಸುವ ಗರ್ವವನ್ನು ತೋರುತ್ತದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ವೃತ್ತಿಪ್ರಧಾನ ಶಿಕ್ಷಣ ಸುಧಾರಣೆ, ಉದ್ಯೋಗಗಳನ್ನು ಸೃಷ್ಟಿಸುವಂಥ ಕ್ರಮಗಳ ಬದಲು ಮೀಸಲಾತಿಯ ತುಪ್ಪಸವರುತ್ತದೆ. ನಿರುದ್ಯೋಗದ ಫಲವಾದ ಬಡತನ ಸಮಾಜದಲ್ಲಿ ಕೋಪ, ಹತಾಶೆ, ಅಶಾಂತಿ, ಪ್ರತಿಭಟನೆ, ಹಿಂಸೆಗಳಿಗೆಡೆಮಾಡಿಕೊಡುತ್ತದೆ ಎಂಬ ಪರಿವೆಯೂ ಸರಕಾರಕ್ಕಿದಂತಿಲ್ಲ. ಪ್ರೌಢ ವಯಸ್ಸಿನ ಮಕ್ಕಳ ತಲೆತಿಕ್ಕಿ ದೇವರು-ಧರ್ಮ-ದೇಶಭಕ್ಕಿ ಕುರಿತಂತೆ ಅವರ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಉದ್ಯೋಗ ಬಯಸುವ ಕೈಗಳಿಗೆ ಲಾಠಿಗಳನ್ನು ನೀಡಲಾಗುತ್ತಿದೆ,ಸಮುದಾಯಗಳ ವಿರುದ್ಧ, ಧರ್ಮಗಳ ವಿರುದ್ಧ ಅವರನ್ನು ಎತ್ತಿಕಟ್ಟಲಾಗುತ್ತಿದೆ. ಇದೆಲ್ಲವನ್ನೂ ಭಾಜಪ ಸರಕಾರಗಳು ಮತ್ತು ಸಂಘ ಪರಿವಾರ ಮಾಡುತ್ತಿರುವುದು ಹಗಲು ಬೆಳಕಿನಷ್ಟು ಸ್ಪಷ್ಟವಾಗಿದ್ದರೂ ಮೋದಿಯವರು ದಿವ್ಯ ಮೌನ ತಾಳುತ್ತಾರೆ.

 ನಾವು ಮತಚಲಾಯಿಸುವಾಗ ಚುನಾಯಿತ ಸರಕಾರ ಸಭ್ಯ ನಾಗರಿಕ ಬದುಕಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಪ್ರಜೆಗಳಿಗೆ ಒದಗಿಸುತ್ತದೆ ಎಂಬ ನಿರೀಕ್ಷೆ ನಮ್ಮದಾಗಿರುತ್ತದೆ. ಸಮುದಾಯಗಳ ನಡುವೆ ವೈರ-ವೈಮನಸ್ಯಗಳನ್ನು ಪ್ರಚೋದಿಸುವಂಥ ಭಾವನಾತ್ಮಕ ವಿಷಯಗಳಿಗೆ ಅವಕಾಶ ಕಲ್ಪಿಸಿಕೊಡುವಂಥ ಕೆಲಸವನ್ನು ನಾವು ಅದರಿಂದ ನಿರೀಕ್ಷಿಸಿರುವುದಿಲ್ಲ. ಆದರೆ ದೇಶದಲ್ಲಿ ಮೋದಿ ಸರಕಾರದ ನೇತೃತ್ವದಲ್ಲಿ ಆಗುತ್ತಿರುವುದು ಇದೇ ಮಾದರಿಯ ಕೆಲಸಗಳು. ಜೀವನ ಶೈಲಿ, ಊಟ- ಉಡುಪು, ಆಚಾರ-ವಿಚಾರ, ಧಾರ್ಮಿಕ ನಂಬಿಕೆಗಳು, ವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ರಾಷ್ಟ್ರ ಜೀವನ ಮತ್ತು ಖಾಸಗಿ ಜೀವನಗಳಲ್ಲಿ ಆರೆಸ್ಸೆಸ್ ಪ್ರಣೀತ ವಿಚಾರಧಾರೆಯನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಿರುವ ಭಾಜಪ ಸರಕಾರಕ್ಕೆ ಮತ್ತು ಅದರ ಕೃಪಾಪೋಷಿತ ಸಂಘಟನೆಗಳಿಗೆ ಇದನ್ನು ವಿರೋಧಿಸುವವರೆಲ್ಲರೂ ದೇಶದ್ರೋಹಿಗಳಾಗಿ ಕಾಣುತ್ತಾರೆ. ಭಿನ್ನ ವಿಚಾರಧಾರೆ ಹೊಂದಿರುವವರಿಗೆ, ಭಿನ್ನ ಜೀವನ ಶೈಲಿಯವರಿಗೆ ನಿರಂತರ ಭಯದ ವಾತಾವರಣ ಸೃಷ್ಟಿಸುವುದರಲ್ಲಿ ಈ ಸಂಘಟನೆಗಳು ಸದಾ ನಿರಂತರ. ಭಿನ್ನಮತೀಯರ ಮಾರಣಹೋಮಕ್ಕೆ ಜಾನುವಾರುಗಳ ಸಾಗಣೆಯಂಥ ಒಂದು ಕ್ಷುಲ್ಲಕ ನೆಪ ಸಾಕು. ಇದು ರಾಜಾರೋಷವಾಗಿ ನಡೆಯುತ್ತಿದೆ. ಈ ಬಗೆಯ ಹಿಂಸಾಚಾರಕ್ಕೆ ಸರಕಾರದ ನೈತಿಕ ಬೆಂಬಲವಿರುವಾಗ ನಡೆಸುವವರಿಗೆ ಬೇರೆ ಭಯವಿಲ್ಲ. ರಾಜಕೀಯ ಎದುರಾಳಿಗಳನ್ನು ಮಣಿಸಲು, ಭಿನ್ನ ದನಿ ದಮನಿಸುವ ಕಾರ್ಯದಲ್ಲಿ ಸಿಬಿಐ, ವರಮಾನ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಗಳು ಆಳುವ ಪ್ರಭುಗಳ ಸೇವೆಗೆ ಸದಾ ಸಿದ್ಧವಾಗಿವೆ. ತೋರಿಕೆಗಾದರೂ ತಾವು ನಿಷ್ಪಕ್ಷಪಾತದಿಂದ ವರ್ತಿಸಬೇಕು ಎನ್ನುವ ಕನಿಷ್ಠ ವಿನಯವೂ ಈ ಸಂಸ್ಥೆಗಳಲ್ಲಿ ಕಾಣುತ್ತಿಲ್ಲ. ಇವು ಚುನಾವಣಾ ಸಮಯದಲ್ಲಿ ಮಾತ್ರ ಅತಿಚುರುಕಾಗುವುದರ ಗುಟ್ಟಿನ ಮರ್ಮ ತಿಳಿಯದ್ದೇನಲ್ಲ.

ಇನ್ನು ಭ್ರಷ್ಟಾಚಾರ, ಸ್ವಜನಪಕ್ಷಪಾತ ಈ ವಿಷಯಗಳಲ್ಲೂ ಭಾರತೀಯ ಜನತಾ ಪಕ್ಷವೂ ಸೇೀರಿದಂತೆ ಯಾವ ಪಕ್ಷದಲ್ಲೂ ಶುದ್ಧ ಚಾರಿತ್ರ್ಯವಿಲ್ಲ. ದೇಶದಲ್ಲಿ ಇಂಥ ಪರಿಸ್ಥಿತಿ ಇರುವಾಗ ಮತ್ತೊಂದು ಚುನಾವಣೆಯಿಂದ ಏನು ಸುಧಾರಣೆ ಆದೀತು ಎನ್ನುವ ಮಾತು ಸಿನಿಕತನವಾಗುತ್ತದೆ. ಇಂಥ ಸಿನಿಕತನ ಸಲ್ಲದು. ಪ್ರತಿಯೊಂದು ಚುನಾವಣೆಯೂ ಒಂದು ಹೊಸ ಅವಕಾಶ. ನಾವು ಅದೇ ಕೊಳಕು, ಕಳಂಕ, ಹಿಂಸಾಚಾರಗಳ ಪಕ್ಷವನ್ನು ಆರಿಸಲು ಅಥವಾ ನಮ್ಮ ಭಾವನೆಗಳನ್ನು ಗೌರವಿಸುವಂಥ, ನಮ್ಮ ಹಕ್ಕು-ಸ್ವಾತಂತ್ರ್ಯಗಳನ್ನು ರಕ್ಷಿಸುವಂತಹ ಮತ್ತೊಂದು ಪಕ್ಷವನ್ನು ಆಯ್ಕೆಮಾಡಲು ಮತ್ತೊಂದು ಅವಕಾಶ ಎಂಬುದನ್ನು ಮರೆಯಲಾಗದು. ಮೊದಲನೆಯದಾಗಿ ಈ ಚುನಾವಣೆಯಲ್ಲಿ ನಾವು ನಾಲ್ಕು ಸ್ವಾತಂತ್ರ್ಯಗಳನ್ನು ಮರಳಿ ಪಡೆಯಲು ಮತದಾನ ಮಾಡಬೇಕಾಗಿದೆ. ಈ ಚುನಾವಣೆಯ ಮಹತ್ವವಿರುವುದು ಈ ನಾಲ್ಕು ಸ್ವಾತಂತ್ರ್ಯಗಳನ್ನು ಮರಳಿ ಪಡೆಯುವಂಥ ನಮ್ಮ ಆಯ್ಕೆಯಲ್ಲಿ. ಮೊದಲನೆಯದು ಭೀತಿ ಮುಕ್ತ ಸ್ವಾತಂತ್ರ್ಯ. ಯಾರೋ, ಎಲ್ಲಿಂದಲೋ ನಮ್ಮ ನಡೆ-ನುಡಿಯ ಮೇಲೆ ನಿಗಾ ಇಡುತ್ತಿದ್ದಾರೆ, ನಮ್ಮ ಟೆಲಿಪೋನ್ ಮಾತುಕತೆಯನ್ನು ಕದ್ದಾಲಿಸುತ್ತಿದ್ದಾರೆ, ಧಾರ್ಮಿಕ ಬಹುಸಂಖ್ಯಾತರಿಗೆ ಮಾತ್ರ ಅಧಿಕಾರ ಬಲವಿದೆ ಎನ್ನುವ ಪ್ರಜಾತಂತ್ರದ ಅಣಕವಾಡವನ್ನು ಪ್ರಶ್ನಿಸುವವರನ್ನು ದಂಡಿಸಲು, ಶಿಕ್ಷಿಸಲು ತಂಡಗಳು ಹೊಂಚುಹಾಕಿ ಕುಳಿತಿವೆ, ಯಾವಾಗ ಬೇಕಾದರೂ ಗೋರಕ್ಷಣೆ/ಲವ್ ಜಿಹಾದ್ ನೆಪಗಳಲ್ಲಿ ದಾಳಿಯಾಗಬಹುದು, ಯಾವಾಗ ಬೇಕಾದರೂ ನಮ್ಮ ಮೇಲೆ ಅಥವಾ ನೆರೆಹೊರೆಯವರ ಮೇಲೆ ಅಥವಾ ಹಳ್ಳ-ಪಟ್ಟಣಗಳ ಬೀದಿಗಳಲ್ಲಿ ಕಾನೂನು ಕೈಗೆತ್ತಿಕೊಂಡ ಗುಂಪುಗಳ ಹಿಂಸಾಚಾರದಿಂದ ಸಾವುನೋವು ಸಂಭವಿಸಬಹುದು-ಇಂತಹ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕಾಡುವ ಹೆದರಿಕೆಗಳಿಂದ ಈ ದೇಶದ ಸಮುದಾಯಗಳು ಮುಕ್ತಗೊಳ್ಳಬೇಕಿದೆ. ಅಲ್ಪಸಂಖ್ಯಾತ ಸಮುದಾಯಗಳು ಸಂವಿಧಾನಬದ್ಧ ಹಕ್ಕಿನಿಂದಾಗಿ ಈ ದೇಶದ ಪ್ರಜೆಗಳು ಎಂಬ ಭರವಸೆ ಆ ಜನರಲ್ಲಿ ಮೂಡಬೇಕಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಪ್ರತಿನಿಧಿಗಳನ್ನು ಟೀಕಿಸುವ, ಅವರ ಕೆಲಸಕಾರ್ಯಗಳನ್ನು ವಿಮರ್ಶಿಸುವ ನಮ್ಮ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಸಾಮಾಜಿಕ ಜಾಲಗಳ ಅಸಭ್ಯ-ಅಶ್ಲೀಲ ನಿಂದನಾಕ್ರಮಣದ ಭೀತಿಯಿಂದ ಮುಕ್ತರಾಗಬೇಕಿದೆ.

ಎರಡನೆಯದಾಗಿ ನಾವು ಹಸಿವು ಮತ್ತು ಬಡತನಗಳಿಂದ ವಿಮೋಚನೆ ಪಡೆಯ ಬೇಕಿದೆ. ನಮ್ಮ ಅನ್ನ ಬೆಳೆಯುವ ರೈತರ ದಯನೀಯ ಸ್ಥಿತಿಯನ್ನು ನೋಡಿ; ತುತ್ತು ಕೂಳಿಗಾಗಿ ಹೊತ್ತುಗೊತ್ತು ಇಲ್ಲದೆ ಅಹರ್ನಿಶಿ ದುಡಿಯುತ್ತಿರುವ ಕೂಲಿಕಾರ್ಮಿಕರ ಶೋಚನೀಯ ಸ್ಥಿತಿಯನ್ನು ನೋಡಿ; ಸಾಲುಗಟ್ಟಿ ನಿಂತಿರುವ ನಿರುದ್ಯೋಗಿಗಳನ್ನು ನೋಡಿ; ಕಡಿಮೆ ಸಂಬಳಕ್ಕೆ ದುಡಿಯುತ್ತ ಅಭದ್ರತೆಯಿಂದ ನರಳುತ್ತಿರುವ ನಮ್ಮ ಯುವಕರನ್ನು ನೋಡಿ! ತಮ್ಮ ಯೋಗ್ಯತಾನುಸಾರ ಗುಣಮಟ್ಟದ ಉದ್ಯೋಗ ಪಡೆಯುವುದು ಈ ಯುವಕರಿಗೆ ಇಂದಿಗೂ ಕನ್ನಡಿಯ ಗಂಟಾಗಿದೆ. ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ ಸರಕಾರ, ಇಲ್ಲಸಲ್ಲದ ಸುಳ್ಳು ಸಂಖ್ಯೆಗಳನ್ನು ಸೃಷ್ಟಿಸಿ ಉದ್ಯೋಗಾವಕಾಶ ಕಲ್ಪಿಸಿರುವುದಾಗಿ ಭಂಡತನವನ್ನು ಮೆರೆಯುತ್ತಿರುವುದನ್ನು ನೋಡಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಶಿಕ್ಷಣ, ಉದ್ಯೋಗ, ಜೀವನಯೋಗ್ಯವಾದ ಸಂಪಾದನೆ, ಆರೋಗ್ಯ ಸೌಕರ್ಯ ಈ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಯಾವುದೇ ಚುನಾಯಿತ ಸರಕಾರದ ಕರ್ತವ್ಯ. ದೇಶ ಮರಳಿ ಪಡೆಯಬೇಕಾಗಿರುವ ಮೂರನೆಯ ಸ್ವಾತಂತ್ರ್ಯ ವೆಂದರೆ ಭೇದಭಾವದಿಂದ ಮುಕ್ತಿ.

ದಲಿತರಿಗೆ ನೀಡುತ್ತಿರುವ ಮೀಸಲಾತಿ ಮತ್ತಿತರ ಸೌಕರ್ಯಗಳ ವಿರುದ್ಧ ಮೇಲ್ಜಾತಿಯವರು ಕತ್ತಿಮಸೆಯಲಾರಂಭಿಸಿರುವುದು ಇತ್ತೀಚಿನ ಒಂದು ದುರದೃಷ್ಟಕರ ಬೆಳವಣಿಗೆ. ಜಾತಿವರ್ಗಗಳ ಶೋಷಣೆಯಿಂದ ಪೀಡಿತರಾದ ದಲಿತರಿಗೆ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಸಂವಿಧಾನಬದ್ಧವಾಗಿ ನೀಡಲಾಗುತ್ತಿರುವ ಮೀಸಲಾತಿಯನ್ನು ಈಗಾಗಲೇ ಸರಕಾರಿ ಹುದ್ದೆಗಳಲ್ಲಿ ತುಂಬಿತುಳುಕುತ್ತಿರುವ ಮೇಲ್ಜಾತಿಯವರಿಗೂ ವಿಸ್ತರಿಸಿರುವುದು ಸರಕಾರದ ಮತ್ತೊಂದು ವಿಪರ್ಯಾಸ. ಮೀಸಲಾತಿ ಎನ್ನುವುದು ಈಚಿನ ದಿನಗಳಲ್ಲಿ ಹಾಸ್ಯಾಸ್ಪದ ಸಂಗತಿಯಾಗಿಹೋಗಿದೆ. ಸಾಮಾಜಿಕ ನ್ಯಾಯವನ್ನು ಅಸಿಂಧುಗೊಳಿಸುವ ಸಾಧನವಾಗಿಬಿಟ್ಟಿದೆ. ಮಹಿಳೆಯರು, ಮಕ್ಕಳು, ಪುರುಷರು ಮತ್ತು ತೃತೀಯ ಲಿಂಗಿಗಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ, ಹಿಂಸಾಚಾರಗಳಿಂದ ಅವರನ್ನು ವಿಮುಕ್ತಗೊಳಿಸುವುದು ದೇಶ ಪಡೆಯಬೇಕಾಗಿರುವ ನಾಲ್ಕನೆಯ ಸ್ವಾತಂತ್ರ್ಯವಾಗಿದೆ. ಕಥುವಾದಲ್ಲಿ ನಡೆದಂತಹ ಹಸುಳೆ ಮೇಲಿನ ಲೈಂಗಿಕ ದೌರ್ಜನ್ಯವನ್ನಾಗಲೀ, ದೇವರದರ್ಶನಕ್ಕಾಗಿ ದೇವಾಲಯ ಪ್ರವೇಶಿಸಲೆತ್ನಿಸಿದ ಮಹಿಳೆಯರ ಮೇಲೆ ನಡೆದ ಲಾಠಿಪ್ರಹಾರವಾಗಲೀ, ಮಾನಭಂಗದ ಆರೋಪಿಗಳ ಪರವಾಗಿ ವಕೀಲರು ಪ್ರದರ್ಶನ ನಡೆಸಿದಂಥ ನಾಚಿಕೆಗೇಡಿನ ಪ್ರಕರಣಗಳನ್ನಾಗಲೀ ಈ ದೇಶ ಮತ್ತೆ ನೋಡುವಂತಾಗಬಾರದು.

ಇದೇ 18 ಮತ್ತು 23ರಂದು ಮತನೀಡುವಾಗ ನಾವು ಈ ಸ್ವಾತಂತ್ರ್ಯವನ್ನು, ನಮ್ಮ ಹಿರಿಯ ಪೀಳಿಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ಈ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ಮೌಲ್ಯಗಳನ್ನು ಗೌರವಿಸುವಂತಹವರನ್ನು ಆಯ್ಕೆ ಮಾಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)