varthabharthi


ತುಂಬಿ ತಂದ ಗಂಧ

ದ್ವೀಪ: ಅಭಿವೃದ್ಧಿ ತರುವ ಪಲ್ಲಟಗಳ ನೋಟ

ವಾರ್ತಾ ಭಾರತಿ : 14 Apr, 2019

ತಮ್ಮ ಮೋಹಕ ಅಭಿನಯ ಮತ್ತು ಸ್ನಿಗ್ಧ ಸೌಂದರ್ಯದಿಂದ ದಕ್ಷಿಣ ಭಾರತದ ಕಲಾವಿದೆಯಾಗಿ ಬೆಳಗಿದ ನಟಿ ಸೌಂದರ್ಯ ಕೀರ್ತಿಯ ಶಿಖರದಲ್ಲಿರುವಾಗಲೇ ಅನಿರೀಕ್ಷಿತ ಅಪಘಾತದಲ್ಲಿ 17ನೇ ಎಪ್ರಿಲ್ 2004ರಂದು ನಿಧನರಾದರು. ತಮ್ಮ ವೃತ್ತಿಬದುಕಿನ ಉಚ್ಛ್ರಾಯ ಹಂತದಲ್ಲಿರುವಾಗಲೇ ಕನ್ನಡಕ್ಕೆ ಮರಳಿ ಬಂದು ‘ದ್ವೀಪ’ ಎಂಬ ಅಪೂರ್ವ ಕಲಾತ್ಮಕ ಕುಸುಮವೊಂದನ್ನು ನಿರ್ಮಿಸಿ ನಾಯಕಿ ಪಾತ್ರದಲ್ಲಿ ನಟಿಸಿದರು. ದ್ವೀಪ ಚಿತ್ರವು 2003ನೇ ಸಾಲಿನ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ ಸ್ವರ್ಣಕಮಲ ಪುರಸ್ಕಾರಕ್ಕೆ ಪಾತ್ರವಾಯಿತು. ತಮ್ಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಎರಡು ಬಾರಿ, ಆಂಧ್ರಪ್ರದೇಶದ ನಂದಿ ಪ್ರಶಸ್ತಿಯನ್ನು ಮೂರು ಬಾರಿ ಮತ್ತು ಎಂಟು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದ ಸೌಂದರ್ಯ ಅವರು ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದೆ. ಆಪ್ತಮಿತ್ರ ಚಿತ್ರದಲ್ಲಿ ನಟಿಸಿ ನಿರ್ಮಾಪಕ, ನಟ ದ್ವಾರಕೀಶ್ ಅವರ ವೃತ್ತಿ ಬದುಕಿಗೆ ಹೊಸ ತಿರುವು ನೀಡಿದ ಕನ್ನಡತಿ ಸೌಂದರ್ಯ ನಟಿಸಿದ ದ್ವೀಪ ಚಿತ್ರವನ್ನು ಮತ್ತೊಮ್ಮೆ ಅವಲೋಕಿಸಲಾಗಿದೆ.

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಚಲನಚಿತ್ರೋತ್ಸವ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಉತ್ಸವದಲ್ಲಿ ‘ದ್ವೀಪ’ ಚಿತ್ರವನ್ನು ಮತ್ತೊಮ್ಮೆ ನೋಡಿದಾಗ ಅದರಲ್ಲಿನ ಸಮಕಾಲೀನತೆಯ ಅಂಶಗಳು ಹಾಗೂ ಪ್ರಸ್ತುತ ಆಡಳಿತ ವ್ಯವಸ್ಥೆಗಳು ಬೆನ್ನು ಹತ್ತಿರುವ ಅಭಿವೃದ್ಧಿಯ ಪರಿಕಲ್ಪನೆಗಳನ್ನು ಅವರು ನಿರ್ವಹಿಸಿರುವ ರೀತಿ ಕುತೂಹಲ ಮೂಡಿಸಿತು.
ಸಾಹಿತಿ ನಾ. ಡಿಸೋಜಾ ಅವರ ಕಾದಂಬರಿಯ ಎಳೆಯನ್ನು ಆಧರಿಸಿದ ದ್ವೀಪ ಚಲನಚಿತ್ರ, ಕೃತಿಗೆ ಋಣಿಯಾಗಿದ್ದರೂ ಅದರಿಂದ ಸಂಪೂರ್ಣ ಭಿನ್ನವಾಗಿ ನಿಲ್ಲುವ ಚಿತ್ರ.
ಮಾನವ ಕಲ್ಯಾಣ ಕೇಂದ್ರಿತ ಅಭಿವೃದ್ಧಿ ಯೋಜನೆಗಳು ಮನುಷ್ಯರ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮನುಷ್ಯ ಸಂಬಂಧಗಳ ಪಲ್ಲಟಗಳ ಒಂದು ಮಹಾನ್ ಲೀಲೆಯನ್ನು ಈ ಚಲನಚಿತ್ರ ಕೃತಿ ಕಟ್ಟಿಕೊಡುತ್ತದೆ. ವಸಾಹತೋತ್ತರ ಕಾಲದ ಅಭಿವೃದ್ಧಿ ನೆಚ್ಚಿಕೊಂಡ ನಾಗರಿಕತೆ ಮತ್ತು ಪರಂಪರೆಯ ನಡುವಿನ ಅಸಮತೋಲ ಸಂಗ್ರಾಮವೊಂದರ ದಾಖಲೆ ಇದಾಗಿದೆ.
ಇಲ್ಲಿ ಎರಡು ಬಗೆಯ ಜಗತ್ತುಗಳಿವೆ. ಒಂದು ಪರಂಪರೆಯ ಬದುಕಿನೊಡನೆ ಹಾಸುಹೊಕ್ಕಾದ ನಂಬಿಕೆಯ ಜಗತ್ತು. ಮತ್ತೊಂದು ಮನುಷ್ಯನೇ ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಂಡ ನೆಲದ ಕಾನೂನುಗಳ ಆಧುನಿಕ ಜಗತ್ತು. ಈ ನಂಬಿಕೆ ಮತ್ತು ಕಾನೂನುಗಳ ನಡುವೆ ಇರುವ ಪರಸ್ಪರ ಅಪನಂಬಿಕೆ ಬದುಕನ್ನು ಮೂರಾ ಬಟ್ಟೆಯಾಗಿಸುವುದನ್ನು ತಣ್ಣಗೆ ಹೇಳುವ ಪರಿಯೇ ಕುತೂಹಲಕಾರಿಯಾಗಿದೆ.
ನಂಬಿಕೆಯ ಜಗತ್ತಿಗೆ ಕಲ್ಲೆಸೆದು ತಲ್ಲಣ ಮೂಡಿಸುವುದರೊಂದಿಗೆ ಆರಂಭವಾಗುವ ಚಿತ್ರ ಮನುಷ್ಯನ ನಾಗರಿಕ ಸಂಸ್ಕೃತಿಯ ಅನೇಕ ಪದರುಗಳನ್ನು ಅದು ಪೋಷಿಸುತ್ತಿರುವ ಅಸಂಗತತೆಯನ್ನು, ದುರಂತಗಳ ವಿವಿಧ ಮಜಲುಗಳನ್ನು ಬಿಚ್ಚಿಡುತ್ತದೆ.
ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ಪ್ರದೇಶದಲ್ಲಿ ತಮ್ಮ ಬೇರುಗಳಿಗೆ ಅಂಟಿಕೂತ ಕೆಲವೇ ಕೆಲವು ಕುಟುಂಬಗಳಲ್ಲಿ ದುಗ್ಗಪ್ಪಯ್ಯನ ಕುಟುಂಬ ಒಂದು. ಕಳೆದ ನಾಲ್ಕು ವರ್ಷಗಳಿಂದ ಅವರಿರುವ ಸೀತಾಗುಡ್ಡ ಮುಳುಗಡೆಯಾಗುತ್ತದೆ ಎಂದು ಸರಕಾರ ಹೇಳಿದರೂ, ಹಾಗಾಗದೇ ಇರುವುದರಿಂದ ನಂಬಿದ ದೈವ ಕೈಬಿಡದೆಂಬ ಅಚಲವಾದ ನಂಬಿಕೆ ದುಗ್ಗಪ್ಪಯ್ಯ ಮತ್ತವನ ಕುಟುಂಬಕ್ಕೆ. ಆದರೆ ಈ ಬಾರಿ ಪೊಲೀಸರು ಬಲವಂತದಿಂದ ತೆರವು ಗೊಳಿಸುತ್ತಾರೆಂಬ ವಿಷಯ ಅವರಲ್ಲಿ ಆತಂಕ ಮೂಡಿಸುತ್ತದೆ.
ನಾಲ್ಕಾರು ತಲೆಮಾರುಗಳ ಹಿಂದೆ ಘಟ್ಟವನ್ನು ಹತ್ತಿ ನೆಲೆಗೊಂಡು ನೇಮವನ್ನು ಮಾಡುತ್ತಾ ತನ್ನ ಬದುಕಿಗೊಂದು ಘನತೆಯನ್ನು ತಂದುಕೊಂಡ ದುಗ್ಗಪ್ಪಯ್ಯನಿಗೆ ಬೇರುಗಳ ಜೊತೆಯಲ್ಲಿ ಬದುಕುವ ಆಸೆ. ಆದರೆ ತನ್ನ ಬೇರುಗಳನ್ನು ಮನವರಿಕೆ ಮಾಡಿಕೊಡಲು ಆತ ಸರಕಾರ ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ ಸಾಕ್ಷ್ಯ ಒದಗಿಸಲಾರ. ಸರಕಾರದ ಕಾನೂನಿನಲ್ಲಿ ಪರಂಪರೆಯ ಬೇರನ್ನು ಮೂರ್ತರೂಪದಲ್ಲಿ ತೋರಿಸಿದರೆ ಮಾತ್ರ ಮಾನ್ಯತೆ. ಕನಿಷ್ಠ ಅವನ ಗುಡಿಗೆ ಆರ್ಕಿಯಾಲಜಿ ಮಹತ್ವವಾದರೂ ಇರಬೇಕು. ನಂಬಿದ ದೈವ ಕೈಬಿಡುವುದಿಲ್ಲವೆಂಬ ಅಚಲ ನಂಬಿಕೆಯಲ್ಲಿ ಅಲ್ಲಿಯೇ ಉಳಿಯುವ ಮನಸ್ಸು ಮಾಡುತ್ತಾರೆ.
ಆದರೆ ಮಗನ ಮನಸ್ಥಿತಿಯೇ ಬೇರೆ. ಪರಿಹಾರ ಕೊಟ್ಟರೆ ಹಣ ಸಿಗಬಹುದು. ಆದರೆ ಹೊಸ ಸ್ಥಳದಲ್ಲಿ ಈಗ ಸಂಪಾದಿಸಿರುವ ಗೌರವ ಘನತೆ ಸಿಗಲಾರದು! ಹಾಗಾಗಿ ತಮ್ಮ ಬದುಕುವ ರೀತಿಗೆ, ಘನತೆ ಗೌರವಕ್ಕೆ ತಕ್ಕ ಹಾಗೆ ಪರಿಹಾರ ಸಿಗಬೇಕೆಂಬ ತಕರಾರು ಆತನದು. ತರಿ, ಖುಷ್ಕಿ, ಬಾಗಾಯ್ತು ಜಮೀನುಗಳಿಗೆ ಪರಿಹಾರ ಕಟ್ಟುವ ಸರಕಾರಕ್ಕೆ ಈ ಘನತೆ ಗೌರವಗಳಿಗೆ ಪರಿಹಾರ ಸೂಚಿಸಲಾಗದು.
ಸರಕಾರಿ ವ್ಯವಸ್ಥೆಗೆ ಇವರಿಗಿರುವ ಗೌರವ ಘನತೆಯದೇ ದೊಡ್ಡ ತೊಂದರೆ, ಖುಷ್ಕಿಗಿಷ್ಟು, ಬಾಗಾಯ್ತಿಗಿಷ್ಟು, ತರಿಗಿಷ್ಟು ಎಂದು ಪರಿಹಾರದ ಮೌಲ್ಯ ಕಟ್ಟಬಹುದು. ಗೌರವ ಘನತೆಗೆಲ್ಲಿ ಕಟ್ಟುವುದು?
ನಾವು ಬದುಕುವ ರೀತಿಗೆ ಸರಕಾರ ಪರಿಹಾರ ಕಟ್ಟಬೇಕು. ಸರಕಾರದ ಮಾನದಂಡಗಳಿಗೆ ಅವರ ಬದುಕು ಒಗ್ಗಬೇಕು. ಈ ಸಂಘರ್ಷದಲ್ಲಿ ಇವೆರಡಕ್ಕೆ ಸಾಕ್ಷಿಯಾಗಿ ಮಧ್ಯದಲ್ಲಿ ಸಿಲುಕಿದ ನಾಗಿಯ ಬದುಕು ಜರ್ಜರಿತವಾಗುತ್ತದೆ.
ಸೀತೆ-ರಾಮ ವನವಾಸದ ಕಾಲದಲ್ಲಿ ಓಡಾಡಿದ ಜಾಗ ಎಂಬ ನಂಬಿಕೆಯಿದೆ. ಆದರೆ ಆ ನಂಬಿಕೆಗೆ ಸರಕಾರದ ಮಾನದಂಡಗಳಲ್ಲಿ ಯಾವ ಕಿಮ್ಮತ್ತೂ ಇಲ್ಲ.
ಈ ನಂಬಿಕೆ, ಈ ಕಾನೂನು, ಆರ್ಕಿಯಾಲಜಿಯ ಮಹತ್ವ ಇವೆಲ್ಲ ನಾವೇ ಸೃಷ್ಟಿಸಿಕೊಂಡ ಮಾನದಂಡಗಳಲ್ಲಿ ಪರಸ್ಪರ ಢಿಕ್ಕಿ ಹೊಡೆಯುತ್ತಾ ಒಂದು ಅಸಂಗತ ಕಾವ್ಯ ಮೈದಳೆಯುತ್ತ ತಾವೇ ಹೆಣೆದ ಬಲೆಗಳಲ್ಲಿ ಮನುಷ್ಯರು ಹೆಣಗಾಡುವ ಕಥನ ಹೆಣೆದುಕೊಳ್ಳುವ ಸೊಬಗು ಇಲ್ಲಿದೆ.


ಮನುಷ್ಯನ ಕಲ್ಯಾಣವನ್ನು ಕೇಂದ್ರೀಕರಿಸುವ ಅಭಿವೃದ್ಧಿ ತನ್ನ ಒಡಲಲ್ಲಿ ಅನೇಕ ದುರಂತದ ಬೀಜಗಳನ್ನು ಇಟ್ಟುಕೊಂಡಿರುತ್ತದೆ. ಆದರೆ ಈ ದುರಂತದ ಕಾವು ತಟ್ಟುವುದು ಅಭಿವೃದ್ಧಿಯ ಫಲಿತಗಳನ್ನು ಉಣ್ಣುವ ಮಂದಿಗಲ್ಲ; ಅಭಿವೃದ್ಧಿಯ ಅಡಿಪಾಯಕ್ಕೆ ಮೈತೆತ್ತುಕೊಂಡ ಅಸಹಾಯಕ ವರ್ಗಕ್ಕೆ. ಅದು ಇಲ್ಲಿ ದುಗ್ಗಪ್ಪಯ್ಯನಂತಹ ಕುಟುಂಬದಲ್ಲಿ, ಹೆಬ್ಬಾರ, ಹೇರಂಬ ಅವರ ಬದುಕಿನಲ್ಲಿ ತನ್ನ ಚಹರೆ ಮೂಡಿಸಿದೆ. ಹೆಬ್ಬಾರ, ಹೇರಂಬ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ಬದಲಾವಣೆಯನ್ನು ಸ್ವೀಕರಿಸಿ ಹೊಂದಿಕೊಳ್ಳುವ ವರ್ಗವಾದರೆ, ದುಗ್ಗಪ್ಪಯ್ಯ ಜಡಗೊಂಡ ಚಲನರಹಿತ ವರ್ಗಕ್ಕೆ ಸೇರಿದವನಂತೆ ವ್ಯಾಖ್ಯಾನಕ್ಕೊಳಗಾಗುತ್ತಾನೆ. ಅಭಿವೃದ್ಧಿಯ ಪಲ್ಲಟಗಳು ದುಗ್ಗಪ್ಪಯ್ಯನ ಸಂಸಾರದಲ್ಲಿ ಉಂಟು ಮಾಡುವ ತಳಮಳಗಳು ಮನುಷ್ಯ ಸಂಬಂಧಗಳ ನಡುವಿನ ಅನೇಕ ಬಿಕ್ಕಟ್ಟು, ಹೊಂದಾಣಿಕೆ, ರಾಗ ದ್ವೇಷ ಮತ್ತು ದರ್ಶನಗಳ ಒಂದು ಸರಣಿಯನ್ನೇ ಈ ಚಿತ್ರ ನೇಯುತ್ತದೆ.
ಸೀತೆ-ರಾಮ ವನವಾಸ ಮಾಡಿದ ಜಾಗದಲ್ಲಿ ನೆಲೆ ನಿಂತಿರುವ ನಂಬಿಕೆಯ ದೈವ ತನ್ನನ್ನು ಕೈಬಿಡುವುದಿಲ್ಲವೆಂದು ನಂಬಿರುವ ದುಗ್ಗಪ್ಪಯ್ಯ, ಕೊನೆಗೂ ಸೀತಾದಿಬ್ಬ ಮುಳುಗಡೆಯಾಗುವ ಸೂಚನೆ ಕಂಡಾಗ ಆಘಾತಕ್ಕೊಳಗಾಗುತ್ತಾನೆ. ನಂಬಿಕೆಯೇ ತಪ್ಪಾಯಿತಲ್ಲ ಎಂದು ಪರಿತಪಿಸುವ ದುಗ್ಗಪ್ಪಯ್ಯ ಕೊನೆಯ ಬಾರಿಗೆ ಮಾಡುವ ನೇಮ ಒಂದು ಪ್ರಳಯ ನರ್ತನವಾಗಿ ಮಾರ್ಪಡುತ್ತದೆ. ಈ ಪಾತ್ರವನ್ನು ನೆನೆದಾಗ ನನಗೆ ಥಿಂಗ್ಸ್‌ಪಾಲ್ ಅಪಾರ್ಟ್‌ನ ಒಕೆಂಕೋನ ಅಂತ್ಯ, ಕುರಸೋವಾನ ಡೆರ್ಸ್ ಉಜಾಲನ ಸಾವು, ದುಗ್ಗಪ್ಪಯ್ಯನ ಕುಸಿತವೆಲ್ಲ ಒಂದೇ ಎಳೆಯಲ್ಲಿ ಬಂಧಿಸಿದ ನಾಗರಿಕತೆ-ಪರಂಪರೆಯ ಸಂಘರ್ಷದ ಲೀಲೆಯಂತೆ ಕಾಣಿಸಿತು.
ಗಣಪಯ್ಯನ ನೋವು ಮತ್ತೊಂದು ಬಗೆಯದು. ಇತ್ತ ಅಪ್ಪನ ಮಾತನ್ನೂ ಮೀರಲಾರದ ಅತ್ತ ಹೊಸ ಬದುಕಿಗೂ ಹೊಂದಿಕೊಳ್ಳಲಾಗದ ಗಣಪಯ್ಯ ಮನುಷ್ಯನ ರಾಗದ್ವೇಷಗಳ ಅನಂತ ಸಾಧ್ಯತೆಗಳಲ್ಲಿ ಮಿಂದೇಳುತ್ತಾನೆ. ಹೆಂಡತಿಯನ್ನು ಉತ್ಕಟವಾಗಿ ಪ್ರೀತಿಸುವ ಆತ ಪಲ್ಲಟಗೊಂಡ ಬದುಕು ಮೂಡಿಸಿದ ಅಪನಂಬಿಕೆಯಲ್ಲಿ ಕ್ರೂರವಾಗುತ್ತಾ ಹೋಗುತ್ತಾನೆ. ತನ್ನಪ್ಪನ ಸಾವಿಗೆ ಪ್ರೀತಿಯ ಹೆಂಡತಿಯ ಶೀಲವನ್ನು ಶಂಕಿಸುತ್ತಾನೆ. ಆದರೆ ಅದನ್ನು ಒಪ್ಪಿಕೊಳ್ಳಲಾಗದ ಸ್ಥಿತಿಯಲ್ಲಿಯೂ ಬೇಯುತ್ತಾನೆ. ಹೆಂಡತಿಯ ಮೇಲಿನ ಕೋಪಕ್ಕೆ ತನ್ನಲ್ಲೇ ನೋಯುವ, ನವೆಯುವ ಮತ್ತು ಕ್ರೂರಿಯಾಗುವ ಗಣಪಯ್ಯ, ತಾನು ಸೃಷ್ಟಿಸಿಕೊಂಡ ನರಕದಿಂದ ಕೊನೆಗೂ ಹೊರಬರಲಾರ.
ಇವೆರಡರ ನಡುವೆ ನಾಗಿಯ ಬದುಕಿನ ಪಯಣ ಮತ್ತಷ್ಟು ಸಂಕೀರ್ಣವಾದದ್ದು. ನೇಮ, ದುಡಿಯ ಸದ್ದಿನಿಂದ ಬಿಡುಗಡೆಗೊಂಡು ಹೊಸತನಕ್ಕೆ, ಆಧುನಿಕತೆಗೆ ಹಾತೊರೆಯುವ ನಾಗಿ ಪುರುಷ ಪ್ರಪಂಚದ ನಿಯಂತ್ರಣದಲ್ಲಿ ಬದುಕನ್ನು ಕಟ್ಟಿಕೊಂಡವಳು. ದ್ವೀಪದಿಂದ ಬಿಡುಗಡೆ ಬಯಸುವ ನಾಗಿ ಕೊನೆಗೆ ಅಲ್ಲಿಯೇ ಉಳಿಯುವ ಗಟ್ಟಿ ನಿರ್ಧಾರ ತೆಗೆದುಕೊಂಡ ನಂತರ ನಿಸರ್ಗಶಕ್ತಿಯೆದುರು ಬದುಕನ್ನು ಉಳಿಸಿಕೊಳ್ಳಲು ದೊಡ್ಡ ಹೋರಾಟ ಮಾಡುತ್ತಾಳೆ. ಅವಳೆಲ್ಲ ಪ್ರಯತ್ನಗಳಿಗೆ ಪ್ರಕೃತಿಯೇ ಮಣಿದಂತೆ ಕಂಡರೂ, ಕೊನೆಗೆ ಅದು ಪುರುಷ ನಂಬಿಕೆಯ ಒರೆಗಲ್ಲಿನಲ್ಲಿ ಅಪವ್ಯಾಖ್ಯೆಗೊಳಗಾದಾಗ ಜರ್ಜರಿತಳಾಗುತ್ತಾಳೆ.
ಹೆಣ್ಣು ಉಚ್ಚಕುಲದಲ್ಲಿಯೇ ಹುಟ್ಟಿರಲಿ, ಸಣ್ಣ ಸಮುದಾಯಗಳಲ್ಲಿಯೇ ಜನಿಸಿರಲಿ, ನಾಗರಿಕ ಸಮಾಜದಲ್ಲಿ ಏನೇ ಅವಕಾಶ ಪಡೆಯಲಿ, ಜಗತ್ತಿನ ಯಾವ ಮೂಲೆಯಲ್ಲಿಯೇ ಇರಲಿ ಅವಳ ಧಾರಣ ಶಕ್ತಿ ಚೈತನ್ಯವೆಲ್ಲವೂ ಅಪವ್ಯಾಖ್ಯೆಗೊಳಗಾಗುವ ಸಾರ್ವತ್ರಿಕ ಸತ್ಯವೊಂದನ್ನು ಈ ಚಿತ್ರ ಮನಗಾಣಿಸುತ್ತದೆ.
ಅನೇಕ ವೈರುಧ್ಯಗಳನ್ನು ತನ್ನ ಒಡಲಲ್ಲಿರಿಸಿಕೊಂಡ ದ್ವೀಪ ದುರಂತದ ಅಸಂಗತಗಳನ್ನು ಸ್ಪಷ್ಟವಾಗಿ ಕಟ್ಟುತ್ತದೆ. ಜಲಾಶಯ ಶಂಕುಸ್ಥಾಪನೆಯ ದಿನ, ಭೂಮಿ ಕೊರೆಯುವ ಯಂತ್ರಗಳು ಬಂದಾಗ ನೇಮ ಕಟ್ಟಿ ಅಭಯ ಘೋಷಿಸುವ ದುಗ್ಗಪ್ಪಯ್ಯ ಕೊನೆಗೆ ಜಲಾಶಯದ ದೆಸೆಯಿಂದಲೇ ಜಲಾವೃತನಾಗುತ್ತಾನೆ.
ಈ ಚಿತ್ರವು ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಸಂಗತಿಗಳ ಕುರಿತು ಚರ್ಚಿಸುತ್ತದೆ. ಅಭಿವೃದ್ಧಿ ಮತ್ತು ತಂತ್ರಜ್ಞಾನಗಳ ಲಾಭವೆಲ್ಲ ಜನಕಲ್ಯಾಣಕ್ಕೆ ಎಂದು ಹೇಳಿದರೂ ಸಾಮಾನ್ಯವಾಗಿ ಅನುಕೂಲಸ್ಥರ ಕಡೆಗೇ ಅದು ಹರಿಯುತ್ತದೆ. ಅಭಿವೃದ್ಧಿ ಸಾಧನೆಯು ಆಲಕ್ಷಿತ ಮತ್ತು ಅಲ್ಪ ಸಂಖ್ಯಾತ ಸಮುದಾಯಗಳ ಮೂಲೋತ್ಪಾಟನೆಯಿಂದಲೇ ಆರಂಭವಾಗುವುದು. ಬಲಿಷ್ಠ ಜನವರ್ಗದ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಯಾವ ಜಲಾಶಯವಾಗಲೀ, ಅಭಿವೃದ್ಧಿ ಯೋಜನೆಗಳಾಗಲೀ ಜಾರಿಯಾಗಲು ಸಾಧ್ಯವಿಲ್ಲವೆಂಬ ಕಟುಸತ್ಯ ಸ್ವತಂತ್ರ ಭಾರತದಲ್ಲಿ ಪುರಾವೆ ಸಿಗುತ್ತಿರುವುದು ಇದಕ್ಕೆ ಸಾಕ್ಷಿ.
ಮತ್ತೊಂದು, ಸಣ್ಣ ಸಮುದಾಯಗಳು ಅಭಿವೃದ್ಧಿಯನ್ನು ತಮ್ಮ ನಂಬಿಕೆ, ಬದುಕಿನ ಶೈಲಿಗಳನ್ನೇ ನೆಪ ಮಾಡಿಕೊಂಡು ಪ್ರತಿರೋಧಿಸುವ ಪ್ರಶ್ನೆ. ಆಫ್ರಿಕಾ, ದಕ್ಷಿಣ ಅಮೆರಿಕ ಖಂಡಗಳಲ್ಲಿ ಸಣ್ಣ ಸಮುದಾಯಗಳು ಅಭಿವೃದ್ಧಿಯನ್ನು ಪ್ರತಿರೋಧಿಸುತ್ತಾ ವಿಫಲವಾಗುವ ಅನೇಕ ಚಾರಿತ್ರಿಕ ಸಂಗತಿಗಳಿವೆ. ನಂಬಿಕೆಯ ಅಡಿಪಾಯದ ಮೇಲೆ ತಮ್ಮ ನಾಗರಿಕತೆಯನ್ನು ಹಾಗೂ ಕಟ್ಟಳೆಗಳನ್ನು ರೂಪಿಸಿಕೊಂಡಿರುವ ಸಣ್ಣ ಸಮುದಾಯಗಳಿಗೆ ಹೊಸ ಪರಿಸರದಲ್ಲಿ ಹೊಂದಿಕೊಳ್ಳುವ ಅಭದ್ರತೆ ಸದಾ ಕಾಡುತ್ತದೆ. ಅಲ್ಲದೆ ನಾಗರಿಕ ಸಮಾಜ ತಮ್ಮ ನಂಬಿಕೆಗಳ ಜಗತ್ತನ್ನು ಮಾನ್ಯ ಮಾಡದಿರುವ ಶಂಕೆಯಿಂದ ಅವರು ಹೆಚ್ಚು ರಿಜಿಡ್ ಆಗಿರುತ್ತಾರೆ. ಕಟ್ಟಳೆಗಳು ಸಡಿಲವಾದರೆ ತಮ್ಮ ಸಮುದಾಯವೇ ನಾಶವಾಗಬಹುದೆಂಬ ಆತಂಕದಿಂದ ಅವು ತಮ್ಮ ಬೇರಿಗೆ ಅಂಟಿಕೂರುತ್ತವೆ. ದ್ವೀಪದಲ್ಲಿ ನಾಗಿ ಅಲ್ಲಿಯೇ ಉಳಿಯಲು ನಿರ್ಧರಿಸಿ ಹೋರಾಡಿದ ನಂತರ ನಿಸರ್ಗ ಅವರ ನಂಬಿಕೆಯ ಜಗತ್ತಿಗೆ ಕೇಡುಂಟು ಮಾಡದಿರುವ ಬಗ್ಗೆ ಖಾತ್ರಿಯೊಂದು ಸಿಗುವುದರಿಂದ ಚಿತ್ರ ಇಲ್ಲಿ ಆಶಾದಾಯಕವಾಗಿ ಮುಕ್ತಾಯಗೊಂಡು, ಬೇರೊಂದು ಆಯಾಮವೇ ದಕ್ಕುತ್ತದೆ.
2002ರಲ್ಲಿ ಬಿಡುಗಡೆಯಾದ ‘ದ್ವೀಪ’ ನಟಿ ಸೌಂದರ್ಯ ಅವರು ನಿರ್ಮಿಸಿದ ಚಿತ್ರ. ಅದೇ ಸಾಲಿನಲ್ಲಿ ಅತ್ಯುತ್ತಮ ಚಿತ್ರವೆಂದು ಸ್ವರ್ಣ ಕಮಲ ಪ್ರಶಸ್ತಿ ಗಳಿಸಿದ ಚಿತ್ರದ ಛಾಯಾಗ್ರಹಣಕ್ಕಾಗಿ ಎಚ್.ಎಂ. ರಾಮಚಂದ್ರ ಅವರು ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)