ದ.ಕ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಮತ ನೀಡಲು ಬಿ.ಇಬ್ರಾಹೀಂ ಕರೆ
ಮಂಗಳೂರು, ಎ.14: ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿಯೇ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಎಲ್ಲಾ ಧರ್ಮೀಯರೂ ಸಹೋದರರಂತೆ ಬಾಳಲು ಸಾಧ್ಯವಾಗಿದೆ. ಅಂತಹ ಸಂವಿಧಾನವನ್ನು ಬದಲಾಯಿಸಲು ಮುಂದಾಗಿರುವ ನರೇಂದ್ರ ಮೋದಿಯ ಬಿಜೆಪಿಯನ್ನು ತಿರಸ್ಕರಿಸುವುದರೊಂದಿಗೆ ದ.ಕ.ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಮತ ನೀಡಲು ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ಮುಸ್ಲಿಂ ಧುರೀಣ ಬಿ.ಇಬ್ರಾಹೀಂ ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಳೆದ 2 ಅವಧಿಯಲ್ಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಜಿಲ್ಲೆಯಲ್ಲಿ ಯಾವೊಂದು ಅಭಿವೃದ್ಧಿಯನ್ನೂ ಮಾಡಿಲ್ಲ. ಜಿಲ್ಲೆಯ ಬಿಜೆಪಿಗರಿಗೂ ಅಭಿವೃದ್ಧಿ ಬೇಕಾಗಿಲ್ಲ. ಬದಲಾಗಿ ಧರ್ಮ-ಧರ್ಮಗಳ, ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಘರ್ಷಣೆ ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವುದೇ ಅವರ ಉದ್ದೇಶವಾಗಿದೆ ಇದಕ್ಕೆ ಜಿಲ್ಲೆಯಲ್ಲಿ ಆಗಾಗ ಘಟಿಸುವ ಅನೈತಿಕ ಪೊಲೀಸ್ ಗಿರಿ ಸಾಕ್ಷಿಯಾಗಿದೆ ಎಂದರು.
ಕರಾವಳಿ ಜಿಲ್ಲೆಯಲ್ಲಿ ಪ್ರತೀ ಚುನಾವಣೆಯ ಸಂದರ್ಭ ಬಿಜೆಪಿಗರು ಹಿಂದುತ್ವದ ಮೂಲಕ ಘರ್ಷಣೆ ಮಾಡುತ್ತಲೇ ಇದ್ದಾರೆ. ಈ ಚುನಾವಣೆಯಲ್ಲೂ ಅದನ್ನು ಪುನರಾವರ್ತನೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೆ ಕಡಿವಾಣ ಹಾಕಲು ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷದ ಸಮರ್ಥ ಹಾಗೂ ಯುವ ಉತ್ಸಾಹಿ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸಿಕೊಡುವ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಮತ್ತು ಸಂಸತ್ನಲ್ಲಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಧ್ವನಿ ಎತ್ತಲು ಅವಕಾಶ ಮಾಡಿಕೊಡಬೇಕಿದೆ ಎಂದು ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಬಿಜೆಪಿಯ ಕೀಳುಮಟ್ಟದ ರಾಜಕೀಯದಿಂದ ದೇಶ ತಲೆತಗ್ಗಿಸುವಂತೆ ಮಾಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯು ಯೋಧರನ್ನು ಮೋದಿ ಸೇನೆ ಎಂದು ಹೇಳಿರುವುದು ಬಿಜೆಪಿ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದಿರುವ ಬಿ. ಇಬ್ರಾಹೀಂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ.ಯ ಕೊಡುಗೆಯ ಭರವಸೆ ನೀಡಿದೆ. ರೈತರು, ಅಲ್ಪಸಂಖ್ಯಾತರು, ಮಹಿಳೆಯರ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸಿರುವುದು ಗಮನಾರ್ಹ ಎಂದಿದ್ದಾರೆ.
ನಳಿನ್ಗೆ ಸಂಸತ್ತಿನಲ್ಲಿ ಮಾತನಾಡಲು ಭಾಷೆಯ ತೊಡಕು ಇದೆ. ಇದರ ನೇರ ಪರಿಣಾಮ ದ.ಕ.ಜಿಲ್ಲೆಯ ಜನತೆಯ ಮೇಲಾಗುತ್ತಿವೆ. ಮಿಥುನ್ ರೈಗೆ ಭಾಷೆಯ ಸಮಸ್ಯೆ ಇಲ್ಲ. ಅವರು ಜಿಲ್ಲೆಯ ಸಮಸ್ಯೆಯ ಬಗ್ಗೆ ಖಂಡಿತಾ ಸಂಸತ್ತಿನಲ್ಲಿ ಮಾತನಾಡಬಲ್ಲರು. ನವಮಂಗಳೂರು ಬಂದರು ಮತ್ತು ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಲು ಮುಂದಾದ ಕೀರ್ತಿ ನಳಿನ್ ಮತ್ತು ಬಿಜೆಪಿಗರಿಗೆ ಸಲ್ಲುತ್ತದೆ. ಹಾಗಾಗಿ ಸಂವಿಧಾನದ ರಕ್ಷಣೆ ಮತ್ತು ದೇಶದಲ್ಲಿ ಜಾತ್ಯತೀತ ಶಕ್ತಿಗಳು ಬಲಗೊಳ್ಳಲು ಮಿಥುನ್ ರೈಯನ್ನು ಗೆಲ್ಲಿಸಲೇಬೇಕಿದೆ ಎಂದು ಬಿ.ಇಬ್ರಾಹೀಂ ಅಭಿಪ್ರಾಯಪಟ್ಟಿದ್ದಾರೆ.