ಮಾರಣಾಂತಿಕ ಬೆಂಕಿ ಹಚ್ಚಿದ ನಾಯಕರು
ಅಧಿಕಾರಕ್ಕೇರಲು ಇತರ ಆಯ್ಕೆಗಳಿದ್ದರೂ ಅಡ್ವಾಣಿ ಮತ್ತು ಜೋಶಿ ಧಾರ್ಮಿಕ ಶತ್ರುತ್ವ ಮತ್ತು ಸಣ್ಣ ಮತ್ತು ದೊಡ್ಡ ಮಟ್ಟದ ಹಿಂಸಾಚಾರವನ್ನು ಸೃಷ್ಟಿಸುವ ಜೂಜಾಟವನ್ನು ಆಯ್ಕೆ ಮಾಡಿಕೊಂಡರು. ಅವರು ವಂಚಕರಾಗಿದ್ದು ತಾವೇನು ಮಾಡುತ್ತಿದ್ದೇವೆ ಎಂಬುದನ್ನು ನಿಖರವಾಗಿ ತಿಳಿದಿದ್ದರು.
ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರನ್ನು ಆರೆಸ್ಸೆಸ್-ಬಿಜೆಪಿ ರಾಜಕೀಯ ಸನ್ಯಾಸಕ್ಕೆ ದೂಡಿರುವ ಸುದ್ದಿಯಿಂದ ಕೆಲವರಿಗೆ ಸಮಾಧಾನ ಅಥವಾ ಪರಪೀಡನೆಯ ಆನಂದ ದೊರಕಿರಬಹುದು. ಈ ಇಬ್ಬರು ನಾಯಕರ ಬೆನ್ನು ನೋಡಲು ಬಹಳಷ್ಟು ಮಂದಿ ಹಲವು ವರ್ಷಗಳಿಂದ ಕಾತರರಾಗಿ ಕಾಯುತ್ತಿರಬಹುದು. ಬಹಳಷ್ಟು ಮಂದಿ; ಅವರ ಅವಮಾನ, ಈ ಮಾರ್ಗದರ್ಶಕರಿಗೆ ರಾಜಕೀಯ ಅಗೋಚರದತ್ತ ಮಾರ್ಗದರ್ಶನ ಮಾಡಿದ ರೀತಿ, ಅವರ ಆಕ್ರೋಶ, ಮಡುಗಟ್ಟಿದ ಭಿನ್ನಾಭಿಪ್ರಾಯ, ಹೀಗೆ ಆ ಕ್ಷಣದಲ್ಲಿ ಈ ಇಬ್ಬರು ಹಿರಿಯ ನಾಯಕರಲ್ಲಿ ಮೂಡಿದ ಪ್ರತಿಯೊಂದು ಭಾವನೆಯನ್ನೂ ಆನಂದಿಸಲು ಬಯಸಿರಬಹುದು. ಆದರೆ ಈ ಹಂತದಲ್ಲಿ ಇತಿಹಾಸ ಅದೆಲ್ಲಿಂದಲೋ ಕತ್ತೆತ್ತಿ ನಮ್ಮತ್ತ ಇಣುಕಿ, ಈಗ ನೀನು ನಿಜವಾಗಿಯೂ ಸಂತೋಷವಾಗಿದ್ದೀಯಾ? ಎಂದು ಪ್ರಶ್ನಿಸುತ್ತದೆ.
ನಮ್ಮಲ್ಲಿ ಅರ್ಧದಷ್ಟು ಭಾರತೀಯರು ಬಾಬರಿ ಮಸೀದಿ ಧ್ವಂಸ ಘಟನೆಯ ನಂತರ ಜನಿಸಿದವರು ಮತ್ತು ಕೋಟ್ಯಂತರ ಮಂದಿ ಈ ಘಟನೆ ನಡೆದಾಗ ಇನ್ನೂ ಎಳವೆಗಳು. ಇನ್ನು, ಉಳಿದವರು, ಶಿಲಾನ್ಯಾಸ, ಹುಸಿ ಜಾತ್ಯತೀತರು ಮತ್ತು ಸಂಘಪರಿವಾರದಂಥ ಶಬ್ದಗಳು ಸಾಮಾನ್ಯ ಶಬ್ದಕೋಶಗಳಿಗೆ ಪ್ರವೇಶ ಪಡೆಯುವುದಕ್ಕೂ ಮೊದಲ ಸಮಯವನ್ನು ನೆನಪು ಮಾಡಲು ಸ್ವಲ್ಪ ಶ್ರಮಪಡಬೇಕು. 1980ರ ದಶಕದ ಮಧ್ಯಭಾಗದಲ್ಲಿ ಸಂಘಪರಿವಾರ-ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಬಾಬರಿ ಮಸೀದಿಯನ್ನು ಕೆಡವುದಕ್ಕೂ ಮೊದಲು ಸಾರ್ವಜನಿಕರನ್ನು ಬಾಧಿಸುತ್ತಿದ್ದ ಹಲವು ನೈಜ ಸಮಸ್ಯೆಗಳು ಇದ್ದವು. ಉದಾಹರಣೆಗೆ, ಖಾಲಿಸ್ಥಾನ ಚಳವಳಿ, ಭೋಪಾಲ್ ಅನಿಲ ದುರಂತ, ಏಡ್ಸ್, ಬೋಫೋರ್ಸ್ ಹಗರಣ, ಕಂಪ್ಯೂಟರೀಕರಣ, ಡಿ.ಎಚ್ ಅಂಬಾನಿ ಯಾವುದೇ ಭಯವಿಲ್ಲದೆ ದೊಡ್ಡ ಉದ್ಯಮಕ್ಕಾಗಿ ಸರಕಾರಿ ಚೆಕ್ಗಳು ಮತ್ತು ಬಾಕಿಗಳನ್ನು ಉಲ್ಲಂಘಿಸಿದ ರೀತಿ, ಮಂಡಲ ಸಮಿತಿ ವರದಿ ಮತ್ತು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಜಾರಿ ಮಾಡಲು ಬಯಸಿದ್ದ ಆರ್ಥಿಕ ಉದಾರೀಕರಣ ಇತ್ಯಾದಿ.
ಅಧಿಕಾರಕ್ಕಾಗಿ ಪ್ರತ್ಯೇಕ ಹಾದಿ
ಇಂದಿನ ಅನೇಕ ಸವಾಲುಗಳು ಅಂದೂ ಇದ್ದವು; ಭ್ರಷ್ಟಾಚಾರ, ಬೃಹತ್ ಅಸಮಾನತೆ, ಸೂಕ್ತ ಶಿಕ್ಷಣ ಮತ್ತು ಸರ್ವರಿಗೂ ಆರೋಗ್ಯಸೇವೆಯ ಕೊರತೆ, ನಿರುದ್ಯೋಗ, ಹೆಚ್ಚುತ್ತಿರುವ ಪ್ರಾಕೃತಿಕ ದುರಂತಗಳು ಇತ್ಯಾದಿ. ಕಾಂಗ್ರೆಸ್ ಸರಕಾರವನ್ನು ಈ ವಿಷಯಗಳಲ್ಲಿ ಪ್ರಶ್ನಿಸಲು ಸಾಕಷ್ಟು ಅವಕಾಶವಿತ್ತು.
ಬಹಳಷ್ಟು ಪಕ್ಷಗಳು, ಕಾಂಗ್ರೆಸ್ಮುಕ್ತ ಭಾರತ ವಲ್ಲದಿದ್ದರೂ ಕನಿಷ್ಠಪಕ್ಷ ಕಾಂಗ್ರೆಸ್ ಇಲ್ಲದ ಸರಕಾರವನ್ನು ರಚಿಸುವ ಗುರಿಯನ್ನು ಹೊಂದಿದ್ದವು. ಆದರೆ ಸಂಘಪರಿವಾರ-ಬಿಜೆಪಿ ಅಧಿಕಾರಕ್ಕೇರಲು ಬೇರೆಯದೇ ದಾರಿಯನ್ನು ಕಂಡುಕೊಂಡಿತು. ಶಿಕ್ಷಣ, ಆರೋಗ್ಯಸೇವೆ, ಮಹಿಳಾ ಹಕ್ಕುಗಳನ್ನು ಬಿಟ್ಟುಬಿಡಿ. ಅಯೋಧ್ಯೆಯಲ್ಲಿ ರಾಮ ಮಂದಿರದ ಮಡಕೆಯಲ್ಲಿ ಹಿಂದೂ ಹೆಮ್ಮೆಯನ್ನು ಬೇಯಲು ಬಿಡುವ, ನೈಜ ನಂಬಿಕೆಗಳನ್ನು ತಿರುಚುವ, ಮೂಲಭೂತ ಭಾವನೆಗಳನ್ನೇ ಕೆದಕಿ ಏನಾಗುತ್ತದೆ ಎಂದು ನೋಡುವ ಎನ್ನುವುದು ಕೇಸರಿ ಪಡೆಯ ಆ ಹೊಸ ಪ್ರತ್ಯೇಕ ದಾರಿಯಾಗಿತ್ತು.
ಅಧಿಕಾರಕ್ಕೇರಲು ಇತರ ಆಯ್ಕೆಗಳಿದ್ದರೂ ಅಡ್ವಾಣಿ ಮತ್ತು ಜೋಶಿ ಧಾರ್ಮಿಕ ಶತ್ರುತ್ವ ಮತ್ತು ಸಣ್ಣ ಮತ್ತು ದೊಡ್ಡ ಮಟ್ಟದ ಹಿಂಸಾಚಾರವನ್ನು ಸೃಷ್ಟಿಸುವ ಜೂಜಾಟವನ್ನು ಆಯ್ಕೆ ಮಾಡಿಕೊಂಡರು. ಅವರು ವಂಚಕರಾಗಿದ್ದು ತಾವೇನು ಮಾಡುತ್ತಿದ್ದೇವೆ ಎಂಬುದನ್ನು ನಿಖರವಾಗಿ ತಿಳಿದಿದ್ದರು.
ಲೆಕ್ಕಾಚಾರದ ಜೂಜಾಟ
ರಾಮ ಮಂದಿರ ವಿಷಯ ಖಂಡಿತವಾಗಿಯೂ ಜೂಜಾಟವಾಗಿತ್ತು. ಆದರೆ ಅದು ಲೆಕ್ಕಾಚಾರ ಮಾಡಲ್ಪಟ್ಟಿದ್ದ ಜೂಜಾಟವಾಗಿತ್ತು. ಕಾಂಗ್ರೆಸ್, ಒಳಜಗಳದಿಂದ ಹರಿದು ಹಂಚಿಹೋಗಿದೆ ಮತ್ತು ಅದರ ಜಾತ್ಯತೀತತೆ ದುರ್ಬಲವಾಗಿದೆ ಎನ್ನುವುದು ಸಂಘಪರಿವಾರ-ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ಗೆ ತಿಳಿದಿತ್ತು. (ಹುಸಿ ಜಾತ್ಯತೀತತೆ ಎಂಬ ಅಡ್ವಾಣಿಯವರ ಕಟುಮಾತು ಕಾಂಗ್ರೆಸ್ ಬೂಟಾಟಿಕೆಯ ಹೃದಯಕ್ಕೇ ನಾಟುತ್ತಿತ್ತು).
ಬೆಳೆಯುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರದ ಒಳಿತಿನ ಬಗ್ಗೆ ಕಾಳಜಿಯಿಲ್ಲ ಎನ್ನುವುದು ಇವರಿಗೆ ತಿಳಿದಿತ್ತು. ಕನಿಷ್ಠಪಕ್ಷ ಕೇಂದ್ರ ಮತ್ತು ಉತ್ತರ ಭಾರತದ, ಯಾವುದೇ ಪರಿಣಾಮಕ್ಕೊಳಗಾಗದ, ನಿರುದ್ಯೋಗಿ ಪುರುಷ ಯುವ ಸಮೂಹ ಸ್ಫೋಟಗೊಳ್ಳಲು ಸಿದ್ಧವಾಗಿರುವ ಬೆಂಕಿಯುಂಡೆಗಳಂತಿದ್ದು ಕೋಮುವಾದ ಕಿಡಿಯಿಂದ ಅದನ್ನು ಸ್ಫೋಟಿಸುವುದು ಸುಲಭ ಎನ್ನುವುದನ್ನು ಸಂಘಪರಿವಾರ-ಬಿಜೆಪಿ ಅರಿತುಕೊಂಡಿತ್ತು.
ಕಾಂಗ್ರೆಸ್ನ ಸುಳ್ಳು ಜಾತ್ಯತೀತತೆಯನ್ನು, ಕನಿಷ್ಠಪಕ್ಷ, ಕೌ ಬೆಲ್ಟ್ ಪ್ರದೇಶದಲ್ಲಿ (ಗೋವನ್ನು ಪವಿತ್ರವೆಂದು ಭಾವಿಸುವ ಪ್ರದೇಶ)ಸೋಲಿಸಲು ಸಂಘಪರಿವಾರ-ಬಿಜೆಪಿಯ ಸುಳ್ಳು ಹಿಂದುತ್ವವಾದಕ್ಕೆ ವಿಫುಲ ಅವಕಾಶವಿದೆ ಎನ್ನುವುದು ಅದರ ಜನ್ಮ ಜಾತ ಪ್ರವೃತ್ತಿ ಬಿಜೆಪಿಗೆ ತಿಳಿಸಿತ್ತು. ಬಹಳ ಮುಖ್ಯವಾಗಿ, ತಮ್ಮ ರಥಯಾತ್ರೆಗಳು ಮತ್ತು ಅಯೋಧ್ಯೆಗೆ ಇಟ್ಟಿಗೆಗಳನ್ನು ಸಾಗಿಸುವ ಪ್ರಹಸನದಿಂದ ರಕ್ತಪಾತವೇ ನಡೆಯಲಿದೆ ಎನ್ನುವುದು ಈ ಮಹನೀಯರಿಗೆ ಸ್ಪಷ್ಟವಾಗಿ ತಿಳಿದಿತ್ತು. ಅಷ್ಟು ಮಾತ್ರವಲ್ಲ-ಅವರ ಜೂಜಾಟದ ಯಶಸ್ಸು, ದೇಶದ ಬಹುತೇಕ ಭಾಗವನ್ನು ಕೋಮುವಾದದ ನೆಲೆಯಲ್ಲಿ ಹರಿದು ಹಾಕುವ ಹಿಂಸಾಚಾರ ಭುಗಿಲೇಳುವುದರ ಮೇಲೆ ಅವಲಂಬಿತವಾಗಿತ್ತು. ಬಾಬರಿ ಮಸೀದಿಯ ಧ್ವಂಸದ ನಂತರ ಅದೇ ನಡೆಯಿತು.
ಅಡ್ವಾಣಿ ಮತ್ತು ಜೋಶಿಗೆ ಈ ಜೂಜಾಟದಲ್ಲಿ ಎರಡನೇ ದರ್ಜೆಯ ನಾಯಕರಾದ ಅಶೋಕ್ ಸಿಂಘಾಲ್, ಕೆ.ಎನ್ ಗೋವಿಂದಾಚಾರ್ಯ, ಉಮಾ ಭಾರತಿ, ಸಾಧ್ವಿ ಋತುಂಬರ ಮತ್ತು ಜಸ್ವಂತ್ ಸಿಂಗ್ ಅವರ ಭಾವೋದ್ರಿಕ್ತ ಮತ್ತು ಅಬ್ಬರದ ಬೆಂಬಲ ಸಿಕ್ಕಿದ್ದು ಮಾತ್ರವಲ್ಲ, ತಾವೇ ಉಳಿಸಿ ಬೆಳೆಸಲು ನೆರವಾದ ರಾಕ್ಷಸನಿಂದ ಇಂದು ಗಭೀರ ಸಮಸ್ಯೆ ಎದುರಿಸುತ್ತಿರುವ ಯಶವಂತ ಸಿನ್ಹಾ, ಶತ್ರುಘ್ನ ಸಿನ್ಹಾ ಮತ್ತು ಅರುಣ್ ಶೌರಿಯಂಥ ನಾಯಕರ ಬೆಂಬಲವೂ ಇತ್ತು. ಇವರ ಕೆಳಗಿನ ಮಟ್ಟದಲ್ಲಿ ನರೇಂದ್ರ ಮೋದಿ ಮತ್ತು ಪ್ರವೀಣ್ ತೊಗಾಡಿಯಾರಂಥವರಿದ್ದರೆ ಅವರೊಂದಿಗೆ ಯುವಕರಾದ ಮನೋಹರ್ ಪಾರಿಕ್ಕರ್ ಕೂಡಾ ಕರ ಸೇವಕರಾಗಿ ಅಯೋಧ್ಯೆಗೆ ತೆರಳಿದ್ದರು.
ಬಿಜೆಪಿಯ ಇಂದಿನ ದೊರೆಗಳು ಮತ್ತು ಹಿತ್ತಲಿಗೆ ಸರಿಸಲ್ಪಟ್ಟ ಇಬ್ಬರು ಧುರೀಣರ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಈ ಭಿನ್ನಾಭಿಪ್ರಾಯಗಳು ಕೇವಲ ಸ್ಥಾನಮಾನ ಮತ್ತು ಶೈಲಿಯದ್ದೇ ಹೊರತು ಸಿದ್ಧಾಂತದ್ದಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಮೊತ್ತಮೊದಲ ಬಾರಿ ಶಾಲಾ ಪಠ್ಯಪುಸ್ತಕಗಳನ್ನು ತಿರುಚುವ ಮತ್ತು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಆರಂಭಿಕ ಕೇಸರೀಕರಣ ನಡೆದಿದ್ದು ಜೋಶಿಯವರ ನೇತೃತ್ವದ ಮಾನವ ಸಂಪನ್ಮೂಲ ಇಲಾಖೆಯಿಂದ. ಇದೇ ರೀತಿ, ಉಪಪ್ರಧಾನಿ ಅಡ್ವಾಣಿಯೂ ಮೈತ್ರಿಯ ಇತಿಮಿತಿಗಳ ಒಳಗಿದ್ದೇ ಬಹುಮತೀಯ ಸಿದ್ಧ್ದಾಂತವನ್ನು ಜಾರಿಗೊಳಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದರು.
ಮುಂದುವರಿದ ಭಯಾನಕತೆ
ವಾಜಪೇಯಿ ಮತ್ತು ಅಡ್ವಾಣಿಯ ಪ್ರಜಾಪ್ರಭುತ್ವದ ಮುಖವಾಡ 2002ರ ಅಲ್ಪಸಂಖ್ಯಾತ ವಿರೋಧಿ ಗುಜರಾತ್ ಹತ್ಯಾಕಾಂಡದ ನಂತರ ಕಳಚಿಬಿತ್ತು. ಮೇಲೆ ಕುಳಿತಿದ್ದ ಅವಕಾಶವಾದಿಗಳು ಅವರಿಗಿಂತಲೂ ದೊಡ್ಡ ಅವಕಾಶವಾದಿ ಮೋದಿಯನ್ನು ಎದುರಿಸಬೇಕಾಯಿತು. ವಾಜಪೇಯಿ, ಮೋದಿಯನ್ನು ಮುಖ್ಯಮಂತ್ರಿ ಪದವಿಯಿಂದ ಕಿತ್ತುಹಾಕಲು ಬಯಸಿದ್ದರೂ ಅಡ್ವಾಣಿ, ಮೋದಿ ಪರ ವಕಾಲತ್ತು ಮಾಡಿ ವಾಜಪೇಯಿಯನ್ನು ವೌನವಾಗಿಸಿದರು.
ಅಡ್ವಾಣಿ ಅಂದು ತನಗಿಂತಲೂ ಹೆಚ್ಚು ಸುಳ್ಳುಗಾರನನ್ನು ರಕ್ಷಿಸುವ ಮೂಲಕ ಭವಿಷ್ಯದಲ್ಲಿ ತನ್ನದೇ ಕುರ್ಚಿಯಿಂದ ಕೆಳಗಿಳಿಯುವ ಬೀಜವನ್ನು ತಾವೇ ಬಿತ್ತಿದ್ದರು ಎಂದರೆ ತಪ್ಪಾಗಲಾರದು. ಸ್ಥಾನ ಮತ್ತು ಅಧಿಕಾರದ ತಮ್ಮ ನೀಗಲಾರದ ಹಸಿವನ್ನು ತಣಿಸದೆಯೇ ಅಡ್ವಾಣಿ ಮತ್ತು ಜೋಶಿಯನ್ನು ಸನ್ಯಾಸತ್ವಕ್ಕೆ ದೂಡಿರುವುದನ್ನು ಕಂಡಾಗ ಕೇವಲ ಮೇಲ್ನೋಟಕ್ಕೆ ತೃಪ್ತಿ ಸಿಗಬಹುದು.
ಇವರಿಬ್ಬರು ತಮ್ಮ ಉತ್ತುಂಗದಲ್ಲಿರುವಾಗ ದೇಶದ ಮೇಲೆ ಹೇರಿದಂತಹ ಭಯಾನಕತೆಯನ್ನು ನೆನಪಿಸಿದಾಗ ಇವರಿಬ್ಬರಿಗೆ ಇತಿಹಾಸ ಸರಿಯಾದ ನ್ಯಾಯವನ್ನೇ ಮಾಡಿದೆ ಎಂದನಿಸುತ್ತದೆ. ಆ ಭಯಾನಕತೆ ಇನ್ನೂ ಜೀವಂತವಾಗಿದ್ದು ಹಿಂದೆಂದಿಗಿಂತಲೂ ದೊಡ್ಡದಾಗಿದೆ.
ಕೃಪೆ: thehindu.com