ಬದುಕಿನ ಪ್ರೀತಿಯನ್ನು ಮೊಗೆದು ಕೊಡುವ ‘ಮಸಾಲೆ ಮೀಮಾಂಸೆ’
ಈ ಹೊತ್ತಿನ ಹೊತ್ತಿಗೆ
‘ಮಸಾಲೆ ಮೀಮಾಂಸೆ’ ಸಂಪೂರ್ಣಾನಂದ ಬಳ್ಕೂರು ಅವರ ಲಲಿತ ಪ್ರಬಂಧ ಸಂಕಲನ. ಲಲಿತ ಪ್ರಬಂಧವೆಂದರೆ ‘ಹಾಸ್ಯ ಬರಹ’ ಎಂದು ಜನರು ನಂಬತೊಡಗಿದ್ದಾರೆ. ಲಲಿತ ಪ್ರಬಂಧವನ್ನು ಗಂಭೀರವಾಗಿ ಸ್ವೀಕರಿಸಿ ಬರೆಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಿರಿಯ ತಲೆಮಾರಿನ ಲೇಖಕರು ಲಲಿತ ಪ್ರಬಂಧಕ್ಕೆ ಮಹತ್ವದ ಸ್ಥಾನಕೊಟ್ಟಿದ್ದರು. ಎ. ಎನ್. ಮೂರ್ತಿರಾವ್, ಗೋರೂರು, ಹಾ.ಮಾ.ನಾಯಕರಂತಹ ಹಿರಿಯರು ಬಿಟ್ಟು ಹೋದ ಈ ಪ್ರಕಾರವನ್ನು ಹೊಸ ತಲೆಮಾರು ಗಂಭೀರವಾಗಿ ಸ್ವೀಕರಿಸಿಲ್ಲ. ಕತೆ, ಕಾದಂಬರಿಗಳಿಗೆ ಸಿಕ್ಕಿದ ಪ್ರಾಶಸ್ತ್ಯ ಈ ಪ್ರಕಾರಕ್ಕೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಬಳ್ಕೂರು ಅವರ ‘ಮಸಾಲೆ ಮೀಮಾಂಸೆ’ ಲಲಿತ ಪ್ರಬಂಧಕ್ಕೆ ಒಂದು ಅತ್ಯುತ್ತಮ ಕೊಡುಗೆಯಾಗಿದೆ.
ಮುನ್ನುಡಿಯಲ್ಲಿ ಭೂಮಿಗೌಡ ಹೇಳುವಂತೆ, ಈ ಕೃತಿಯು ಸಾಹಿತ್ಯ ಪ್ರಕಾರದ ಸರ್ವ ಬಂಧಗಳನ್ನು ಕಳಚಿಕೊಂಡ ಹೊಸ ಬಗೆಯ ಕ್ರಿಯಾಶೀಲ ಕೃತಿಯಾಗಿದೆ. ಜೊತೆಗೆ ಕಾಲದ ಹಂಗನ್ನು ಕಳಚಿಕೊಳ್ಳುವ ಜಾಯಮಾನವು ಇಲ್ಲಿ ಎಲ್ಲ ಲೇಖನಗಳಿಗಿದೆ. ಇಲ್ಲಿ ಎಲ್ಲಾ ಬರಹಗಳನ್ನು ಗಮನಿಸಿದಾಗ ಲೇಖನಗಳಲ್ಲಿ ಸ್ಥಾಪಿತಗೊಳ್ಳುವ ಸಮಾಜಮುಖಿ, ಜೀವನ್ಮುಖಿ ಆಯಾಮಗಳು ಕಣ್ಣಿಗೆ ಕಟ್ಟುತ್ತವೆ.
ಕೃತಿಯಲ್ಲಿ ಒಟ್ಟು 28 ಬರಹಗಳಿವೆ. ಲೇಖಕರು ಹಂಚಿಕೊಂಡಂತೆ, ಸುತ್ತಮುತ್ತ ನಡೆದದ್ದು, ಕಂಡದ್ದು, ಕೇಳಿದ್ದು. ಇವಕ್ಕೆ ತನ್ನದೇ ಮಿತಿಯ ಪ್ರತಿಕ್ರಿಯೆಗಳು ಇವು. 1987ರಿಂದ ಈವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಮತ್ತು ಇತ್ತೀಚೆಗೆ ಬರೆದ ಸುದೀರ್ಘ ಅವಧಿಯ ಪ್ರಬಂಧಗಳೆಲ್ಲ ಇಲ್ಲಿವೆ. ಧಾರ್ಮಿಕ ನಂಬಿಕೆಗಳು, ರಾಜಕೀಯ ದೊಂಬರಾಟಗಳು, ದೈನಂದಿನ ಬದುಕಿನ ದುಮ್ಮಾನಗಳು, ಜ್ಯೋತಿಷ್ಯ, ಯೋಗ, ಶುಗರ್ ಕಾಯಿಲೆ, ಯಕ್ಷಗಾನ, ಆಹಾರ ಎಲ್ಲವೂ ಇಲ್ಲಿ ತಿಳಿ ನಗುವಿನ ಜೊತೆಗೆ ವಿಮರ್ಶೆಗೀಡಾಗಿವೆ. ಕೇವಲ ನಗಿಸುವ ಉದ್ದೇಶದಿಂದ ಸೃಷ್ಟಿಯಾದ ಬರಹ ಇದಲ್ಲ. ಲವಲವಿಕೆಯ ಜೊತೆಗೆ ಬದುಕಿನ ಅವಾಂತರಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಜೊತೆಗೆ ಬದುಕಿನ ಬೇರೆ ಬೇರೆ ದರ್ಶನಗಳನ್ನು ಹಾಸ್ಯ ನಿರೂಪಣೆಯ ಮೂಲಕವೇ ನಮಗೆ ನೀಡಿದ್ದಾರೆ. ನಾವು ಒಮ್ಮೆ ನೋಡಿ ಮರೆತು ಬಿಡಬಹುದಾದ ಪಾತ್ರಗಳನ್ನು ಅವರು ವೀಕ್ಷಿಸಿ ಅದರೊಳಗಿನ ಬದುಕಿನ ಪ್ರೀತಿಯನ್ನು ಗುರುತಿಸಿ ಬರಹ ರೂಪಕ್ಕೆ ಇಳಿಸಿದ್ದಾರೆ. ಇಲ್ಲಿರುವ ಬರಹಗಳನ್ನು ಪ್ರೀತಿಸಲು ಓದುಗರಿಗೆ ಹತ್ತು ಹಲವು ಕಾರಣಗಳಿವೆ.
ಆಕೃತಿ ಆಶಯ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 172. ಮುಖಬೆಲೆ 150 ರೂಪಾಯಿ. ಆಸಕ್ತರು 94480 74074 ದೂರವಾಣಿಯನ್ನು ಸಂಪರ್ಕಿಸಬಹುದು. -ಕಾರುಣ್ಯಾ