ಮಂಗಳೂರು ವಿವಿ ಸಂಧ್ಯಾ ಕಾಲೇಜಿಗೆ ಪ್ರವೇಶಾತಿ ಆರಂಭ
ಮಂಗಳೂರು, ಎ.17: ಮಂಗಳೂರು ವಿವಿ ಸಂಧ್ಯಾ ಕಾಲೇಜಿಗೆ 2019-20ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದೆ.
ಬಿ.ಎ., ಬಿ.ಕಾಂ. ಹಾಗೂ ಬಿ.ಸಿ.ಎ. ಪದವಿ ತರಗತಿಗಳು ಲಭ್ಯವಿದ್ದು ಬಿ.ಎ. ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಷಯಗಳಿದ್ದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹಾಗೂ ಮಾಧ್ಯಮ ಕ್ಷೇತ್ರದ ಅವಕಾಶಗಳನ್ನು ಬಳಸಿಕೊಳ್ಳಲು ಪತ್ರಿಕೋದ್ಯಮ ಹಾಗೂ ಇತರೆ ವಿಷಯಗಳು ಸಹಕಾರಿಯಾಗಲಿದೆ.
ಪದವಿ ಪೂರ್ವ ಹಂತದ ಬಳಿಕ ಸಿ.ಎ. ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ಹೊತ್ತಿನಲ್ಲಿ ಬಿಕಾಂ ಪದವಿಯನ್ನು ಕೂಡ ಪೂರ್ಣ ಗೊಳಿಸಬಹುದಾಗಿದೆ. ಸಂಧ್ಯಾ ಕಾಲೇಜಿನ ಪದವಿಗೂ ಹಗಲು ಕಾಲೇಜುಗಳ ಪದವಿಯ ಮೌಲ್ಯಕ್ಕೂ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ. ಸಂಧ್ಯಾ ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶಗಳಿದ್ದು, ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಅಂತರ್ ಕಾಲೇಜು ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುವಂತಹ ಸುಸಜ್ಜಿತ ಕೊಠಡಿಗಳು, ಕಂಪ್ಯೂಟರ್ ಮತ್ತು ಮಾಧ್ಯಮ ಪ್ರಯೋಗಾಲಯಗಳು ಲಭ್ಯವಿದ್ದು ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಕಚೇರಿ ಸಮಯದಲ್ಲಿ ಕಾಲೇಜು ಕಚೇರಿಯಿಂದ ಅರ್ಜಿಗಳನ್ನು ಪಡೆದುಕೊಂಡು ತಾವು ಇಚ್ಛಿಸಿದ ಪದವಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ. ಪ್ರಕಟನೆಯಲ್ಲಿ ತಿಳಿಸಿರುತ್ತಾರೆ