ಭಾರತ ದೇಶವೆಂದರೆ ನರೇಂದ್ರ ಮೋದಿ ಅಲ್ಲವಲ್ಲ? -ಎ.ಕೆ.ಸುಬ್ಬಯ್ಯ
ನರೇಂದ್ರ ಮೋದಿ ಅವರನ್ನು ಟೀಕಿಸುವ ಬುದ್ಧ್ದಿಜೀವಿಗಳ ಮತ್ತು ಪ್ರಗತಿಪರರ ವಿರುದ್ಧ ಆರೋಪ ಮಾಡುತ್ತಾ ಇವರೆಲ್ಲಾ ದೇಶದ ವಿರುದ್ದ ಮಾತನಾಡುತ್ತಾರೆ ಎಂದು ಬೊಬ್ಬಿಡುವ ವರ್ಗವೊಂದಿದೆ. ನರೇಂದ್ರ ಮೋದಿ ಅವರನ್ನು ಟೀಕಿಸುವುದು ದೇಶವನ್ನೇ ಟೀಕಿಸಿದಂತೆ ಎಂದು ಭ್ರಮಿಸಿದ ಈ ಜನ ದೇಶವೆಂದರೆ ನರೇಂದ್ರ ಮೋದಿ; ಮೋದಿ ಎಂದರೆ ದೇಶ ಎಂಬುದನ್ನು ಬಹಿರಂಗವಾಗಿ ಪ್ರಕಟ ಮಾಡಿದಂತಾಯಿತು.
ದೇಶವೆಂದರೆ ನರೇಂದ್ರ ಮೋದಿ ಅಲ್ಲ. ಅಥವಾ ಇನ್ಯಾವುದೊ ಪ್ರಧಾನ ಮಂತ್ರಿಯೂ ಅಲ್ಲ. ದೇಶದಲ್ಲಿ ಸೇವೆ ಸಲ್ಲಿಸಲು ಹುಟ್ಟಿಕೊಂಡ ಉನ್ನತ ಮಟ್ಟದ ಹುದ್ದೆಯೇ ಪ್ರಧಾನ ಮಂತ್ರಿ ಸ್ಥಾನ. ಈ ಪ್ರಧಾನ ಮಂತ್ರಿ ಸ್ಥಾನದ ಮೂಲಕ ನರೇಂದ್ರ ಮೋದಿ ಅವರು ದೇಶವೆಂದರೆ ತಾನೇ ಎಂದು ಬಿಂಬಿಸಿಕೊಳ್ಳುವುದಕ್ಕೆ ಮಾಡಿದ ನಿರಂತರ ಪ್ರಯತ್ನ ನಮ್ಮ ಕಣ್ಣ ಮುಂದಿದೆ.
ಮೊದಲನೆಯದಾಗಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಕೂಡ ತಾನೇ ಆಗಬೇಕು ಎಂದು ಪ್ರಯತ್ನಿಸಿ ಕೈ ಸುಟ್ಟುಕೊಂಡ ನಿದರ್ಶನವೂ ಇದೆ. ಅದೇ ರೀತಿ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತಾನೇ ಆಗಬೇಕೆಂದು ಪ್ರಯತ್ನಿಸಿ ಅದರಲ್ಲಿ ಮೋದಿ ಅವರು ಯಶಸ್ಸು ಕಂಡದ್ದನ್ನು ನಾವು ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆಯ ಮಹಾದಂಡ ನಾಯಕ ತಾನೇ ಎಂದು ಕೂಡ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತ ದೇಶದ್ರೋಹದ ಕೆಲಸ ಇನ್ನೊಂದು ಬೇಕಾ?. ಅಲ್ಲದೆ, ಸಿ.ಬಿ.ಐ., ಜಾರಿ ನಿರ್ದೇಶನಾಲಯ (ಇ.ಡಿ.) ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ನರೇಂದ್ರ ಮೋದಿ ಅವರು ಮೋದಿಮಯಗೊಳಿಸಿಬಿಟ್ಟಿದ್ದಾರೆ. ಚುನಾವಣಾ ಆಯೋಗ ಕೂಡ ತನ್ನ ಸ್ವಾತಂತ್ರವನ್ನು ಕಳೆದುಕೊಂಡು ನರೇಂದ್ರ ಮೋದಿ ಅವರ ಕಿಸೆಯೊಳಗೆ ಸೇರಿಕೊಂಡಿರುವ ಲಕ್ಷಣಗಳು ಅಲ್ಲಲ್ಲಿ ಪ್ರಜ್ಞಾವಂತ ಮತದಾರರಿಗೆ ಕಾಣಸಿಗುತ್ತದೆ.
ದೇಶದಲ್ಲಿ ತಾನು ಬಿಟ್ಟರೆ ಇನ್ನೇನೂ ಇಲ್ಲ ಎಂಬ ಭ್ರಮೆ ಇವರದು. ನಾಚಿಕೆ ಮತ್ತು ಮಾನ-ಮರ್ಯಾದೆಯ ಇತಿಮಿತಿಗಳ ಗಡಿದಾಟಿ ನರೇಂದ್ರ ಮೋದಿ ಅವರು ಮಾತನಾಡುತ್ತಾರೆಂದರೆ ಇವರೊಬ್ಬ ಫ್ಯಾಶಿಸ್ಟ್ ಪ್ರಧಾನಿಯಾಗಿ ಫ್ಯಾಶಿಸಂ ಸಾರ್ವಭೌಮತ್ವವನ್ನು ಪುನರ್‌ಸ್ಥಾಪಿಸಲು ಪ್ರಧಾನಮಂತ್ರಿ ಸ್ಥಾನದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಹಗಲಿನಷ್ಟೇ ಸತ್ಯವಾಗಿದೆ. ಇದರಿಂದಾಗಿ ಪವಿತ್ರವಾದ ನಮ್ಮ ರಾಜ್ಯಾಂಗ ಮತ್ತು ಪ್ರಜಾತಂತ್ರ ವ್ಯವಸ್ಥೆ ಅಪಾಯದಲ್ಲಿದೆ ಎಂದು ಕಂಡುಕೊಳ್ಳುವುದಕ್ಕೆ ದೇಶದ ಚಿಂತಕ ಸಮೂಹಕ್ಕೆ ಕಷ್ಟವೇನಿಲ್ಲ.
ರಫೇಲ್ ಯುದ್ಧ ವಿಮಾನ ಪ್ರಕರಣದಲ್ಲಿ ನರೇಂದ್ರ ಮೋದಿ ಬೆತ್ತಲಾಗಿ ನಡು ರಸ್ತೆಯಲ್ಲಿ ನಿಂತಿದ್ದಾರೆ. ಈ ಬೆತ್ತಲುತನದಿಂದ ಪಾರಾಗಲು ಅವರಿಗೆ ಈಗ ತುಂಡು ಬಟ್ಟೆ ಕೂಡ ದೊರೆಯುತ್ತಿಲ್ಲ. ಇದಕ್ಕಾಗಿ ಮೋದಿ ಅವರು ದೇಶದ ಜನತೆಗೆ ಸತ್ಯವನ್ನು ಮರೆಮಾಚಿ ಅವರ ದಿಕ್ಕು ತಪ್ಪಿಸುವ ಪ್ರಯತ್ನ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನರೇಂದ್ರ ಮೋದಿ ಅವರು ಪ್ರತಿದಿನ ಹಾಕುತ್ತಿರುವ ಪ್ರತಿಯೊಂದು ಹೆಜ್ಜೆ ಕೂಡ ಭ್ರಷ್ಟಾಚಾರದ ಕಾರ್ಯಾಚರಣೆಯೇ ಆಗಿದೆ. ಇದು ತಮಾಷೆಯಲ್ಲದೆ ಮತ್ತೇನು?.
ಭ್ರಷ್ಟಾಚಾರ ವಿರೋಧಿ ಎಂದು ತನ್ನನ್ನು ಸ್ವಯಂಘೋಷಿಸಿಕೊಂಡಿರುವ ನರೇಂದ್ರ ಮೋದಿ ಅವರು ಬಿ. ಎಸ್. ಯಡಿಯೂರಪ್ಪಅವರ ಡೈರಿ ಬಗ್ಗೆ ಏಕೆ ಮೌನ ವಹಿಸಿದ್ದಾರೆ?. ಈ ಡೈರಿ ನಕಲಿ ಎಂಬುದು ಬಿಜೆಪಿ ಮತ್ತು ಸಂಘ ಪರಿವಾರದವರ ಹೊಸ ವಾದವಾಗಿದೆ. ಹಾಗಾದರೆ ಇದನ್ನು ನಕಲಿ ಮಾಡಿದವರು ಯಾರು? ಏಕೆ ಮಾಡಿದರು? ಈ ಡೈರಿ ಜಾರಿ ನಿರ್ದೇಶನಾಲಯದವರ ಕೈ ಸೇರಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತು ಸತ್ಯ ಬಯಲಾಗುವವರೆಗೆ ಯಡಿಯೂರಪ್ಪಅವರ ಡೈರಿ ನಕಲಿ ಎನ್ನುವುದನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ. ಈ ಡೈರಿಯಲ್ಲಿ ನಮೂದಿಸಿರುವ ವಿಶೇಷ ಅಂಶ ಗಮನಿಸಿದಾಗ ಅದರಲ್ಲಿ ನ್ಯಾಯಾಧಿಶರಿಗೆ 250 ಕೋಟಿ ರೂ. ನೀಡಲಾಗಿದೆ ಎಂದು ದಾಖಲಾಗಿದೆ. ನ್ಯಾಯಾಂಗ ಹೋರಾಟದಲ್ಲಿ ವಕೀಲರಿಗೆ 500 ಕೋಟಿ ರೂ. ಪಾವತಿಯಾಗಿದೆ ಎಂದು ಹೇಳಲಾಗಿದೆ. ಈ ರೀತಿಯಾಗಿ ನಕಲಿ ಮಾಡಿ ಯಾರಿಗಾದರೂ ಒಂದು ಡೈರಿಯನ್ನು ಸೃಷ್ಟಿಸುವುದು ಸುಲಭ ಸಾಧ್ಯವೇ?. ನರೇಂದ್ರ ಮೋದಿ ಅವರು ಈ ಹಿನ್ನೆಲೆಯಲ್ಲಿಯೂ ಕೂಡ ತಾನೊಬ್ಬ ಸುಳ್ಳುಗಾರ, ಆತ್ಮವಂಚಕ, ಪ್ರಜಾಪ್ರಭುತ್ವದ ಶತ್ರು, ಭ್ರಷ್ಟಾಚಾರಿ ಎಂಬುದನ್ನು ತಾವೇ ಬಹಿರಂಗಪಡಿಸಿದ್ದಾರೆ.
ದೇಶದ ಹಿತಬಯಸುವ ಪ್ರಜ್ಞಾವಂತರು ಜೊತೆಗೂಡಿ ಸಂಘಟಿತರಾಗ ಬೇಕಾದ ಅನಿವಾರ್ಯ ಹಿಂದೆಂದಿಗಿಂತಲೂ ಇದೀಗ ಅತ್ಯವಶ್ಯಕವಾಗಿದೆ. ಎಲ್ಲಾರೂ ಒಟ್ಟಾಗಿ ಸವಾರ್ಧಿಕಾರಿ, ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸುವ ಸುವರ್ಣಾವಕಾಶ ಈ ಲೋಕಸಭಾ ಚುನಾವಣೆ ನೆಪದಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಂತಿದೆ. ಈ ಅವಕಾಶವನ್ನು ನ್ಯಾಯೋಚಿತವಾಗಿ ಬಳಕೆ ಮಾಡಿಕೊಂಡು ‘ಮೋದಿ ಹಠಾವೋ ದೇಶ್ ಬಚಾವೋ’ ಎಂಬ ಘೋಷಣೆಯನ್ನು ಸಾಕಾರಗೊಳಿಸುವ ದೃಢ ನಿರ್ಧಾರದೊಡನೆ ನಾವು ಈ ಚುನಾವಣಾ ಪ್ರಚಾರದಲ್ಲಿ ತೊಡಗಿ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ.
ಆದ್ದರಿಂದ ಇದೆಲ್ಲ್ಲವನ್ನೂ ಅರ್ಥ ಮಾಡಿಕೊಂಡು ಪ್ರಜ್ಞಾವಂತ ಮತದಾರರು ಎ.18 ಮತ್ತು 23ರಂದು ಕರ್ನಾಟಕದಲ್ಲಿ ಮತದಾನ ಮಾಡಲು ಸಜ್ಜಾಗಬೇಕಿದೆ.