ಬ್ರಾಹ್ಮಣೀಕರಣಗೊಂಡ ಇತಿಹಾಸದ ಸುಳ್ಳುಗಳು.....
ಈ ಹೊತ್ತಿನ ಹೊತ್ತಿಗೆ
‘ದಿ ಬ್ರಾಹ್ಮಣೈಸಿಂಗ್ ಹಿಸ್ಟರಿ’ ಸಂಶೋಧನಾ ಕೃತಿ ಬಹಳಷ್ಟು ಹೆಸರುವಾಸಿಯಾದುದು. ಈ ದೇಶದ ಇತಿಹಾಸವನ್ನು ಬ್ರಾಹ್ಮಣೀಕರಣಗೊಳಿಸುವ ಮೂಲಕ ಹೇಗೆ ವೈದಿಕ ಶಾಹಿಗಳು ರಾಜಕೀಯ ಶಕ್ತಿಯಾಗಿ ಮತ್ತೆ ಬೆಳೆಯುತ್ತಾ ಬಂದರು, ತಳಸಮುದಾಯದ ಜನರು ಆ ಇತಿಹಾಸವನ್ನು ನಂಬಿ ತಮ್ಮ ಬೇರುಗಳನ್ನು ಮರೆತು ವೈದಿಕ ತೆಕ್ಕೆಗೆ ಬಿದ್ದರು ಎನ್ನುವುದನ್ನು ನಾವು ನೋಡಿದ್ದೇವೆ ಮತ್ತು ಅದರ ರಾಜಕೀಯ ಪರಿಣಾಮಗಳನ್ನು ಅನುಭವಿಸು ತ್ತಿದ್ದೇವೆ. ಈ ನಿಟ್ಟಿನಲ್ಲಿ ಭಾರತ ಇತಿಹಾಸವನ್ನು ಅಬ್ರಾಹ್ಮಣ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಪ್ರಯತ್ನ ನಡೆಯುತ್ತಾ ಬಂದಿದೆ. ಜ್ಯೋತಿಬಾ ಫುಲೆ, ಪೆರಿಯಾರ್ ಮೊದಲಾದವರು ಅಬ್ರಾಹ್ಮಣ ಚರಿತ್ರೆಯ ಪ್ರಥಮ ಪಾಠಗಳನ್ನು ಬರೆದರು. ಬಾಬಾ ಸಾಹೇಬರು ತಮ್ಮ ಕೃತಿಗಳಲ್ಲಿ ಅಬ್ರಾಹ್ಮಣ ಚರಿತ್ರೆಯನ್ನು ಬಲವಾಗಿ ಕಟ್ಟಿದರು. ಜೊತೆಗೆ ಮುಂಬರುವ ಪೀಳಿಗೆಗಾಗಿ ಚರಿತ್ರೆಯನ್ನು ರೂಪಿಸಲು ಬೇಕಾಗುವ ಪರಿಕರ ಮತ್ತು ವಿಸ್ತಾರವಾದ ಭಿತ್ತಿಯನ್ನು ಕೊಟ್ಟರು. ಆ ಹಾದಿಯಲ್ಲಿ ಹಲವು ಇತಿಹಾಸಕಾರರು ಸಾಗಿದ್ದಾರೆ. ಅವರಲ್ಲಿ ಬ್ರಜ್ ರಂಜನ್ ಮಣಿ ಮುಖ್ಯವಾದವರು. ಸಮೃದ್ಧವಾದ ಉಲ್ಲೇಖಗಳು, ಅಪಾರವಾದ ಅಧ್ಯಯನ, ಪರಿಕಲ್ಪನೆಗಳನ್ನು ಒಳಗೊಂಡಿರುವ ರಂಜನ್ ಅವರ ‘ದಿ ಬ್ರಾಹ್ಮನೈಸಿಂಗ್ ಹಿಸ್ಟರಿ’ ಈಗಾಗಲೇ ಹಲವು ಮುದ್ರಣಗಳನ್ನು ಕಂಡಿದೆೆ. ಹಲವು ಭಾಷೆಗಳಿಗೆ ಅನುವಾದ ಗೊಂಡಿದೆ. ಇದೀಗ ಡಾ. ರೀಟಾ ರೀನಿ ಅವರು ಅದನ್ನು ‘ಚರಿತ್ರೆಯ ಅಬ್ರಾಹ್ಮಣೀಕರಣ’ ಎಂಬ ಹೆಸರಲ್ಲಿ ಕನ್ನಡಕ್ಕೆ ತಂದಿದ್ದಾರೆ.
ಐನೂರಕ್ಕೂ ಅಧಿಕ ಪುಟಗಳಿರುವ ಬೃಹತ್ ಕೃತಿ ಇದು. ಬ್ರಜ್ ರಂಜನ್ ಮಣಿ ಅವರು ಭಾರತದ ಬ್ರಾಹ್ಮಣೀಕರಣಗೊಂಡ ಚರಿತ್ರೆಯನ್ನು ಹೀಗೆ ವಿಶ್ಲೇಷಿಸುತ್ತ್ಜಾರೆ ‘‘ನಮ್ಮ ಚರಿತ್ರೆಯು ಒಳ್ಳೆಯ ಮತ್ತು ಶ್ರೇಷ್ಠ ಎನ್ನುವ ಹಲವು ಸುಂದರ ವಂಚನೆಗಳಿಂದ ತುಂಬಿ ಹೋಗಿದೆ. ಹಲವು ಶತಮಾನಗಳ ಕಾಲ ಬ್ರಾಹ್ಮಣವಾದಿ ನಿರ್ವಚನಗಳ ಮೂಲಕ ಸಂವಹಿಸಿರುವ ಅಧ್ಯಾತ್ಮವಾದಿ ಸಂಸ್ಕೃತಿ ಎನ್ನುವ ಪ್ರಬಲ ನಿರೂಪಣೆಯು ಬ್ರಾಹ್ಮಣವಾದದ ರಕ್ತಸಿಕ್ತ ಹಲ್ಲುಗಳು ಮತ್ತು ಪಂಜವನ್ನು ಗುಡಿಸಿ ಹಾಕುವಲ್ಲಿ ಯಶಸ್ವಿಯಾಗಿರುವಂತೆ ಕಾಣುತ್ತದೆ. ಆದರೆ ಜಾತಿ ಮತ್ತು ಬ್ರಾಹ್ಮಣವಾದದ ಭೀಕರತೆಯನ್ನು ಮರೆಮಾಚುವುದು, ಭಯಾನಕ ಉದ್ದೇಶಗಳಿಗೆ ಬೆಂಬಲವಾಗಬಹುದಷ್ಟೇ. ಈ ವಿಷಯವನ್ನು ಪ್ರಸ್ತಾಪಿಸಬೇಕು, ಚರ್ಚಿಸಬೇಕು ಮತ್ತು ಸಂವಾದಿಸಬೇಕು. ಮುಂದುವರಿಯುತ್ತಿರುವ ಅಸಮಾನತೆ, ವಿಭಜನೆ ಮತ್ತು ಕ್ರೌರ್ಯದ ಕಾರಣಕ್ಕಾಗಿ ಮಾತ್ರವಲ್ಲ, ಮುಖ್ಯವಾಗಿ ದಮನಿತ ಸಮುದಾಯಗಳನ್ನು ಸಶಕ್ತಗೊಳಿಸಿ, ಒಂದುಗೂಡಿಸಿ ವಿಮೋಚಿಸಬೇಕಾಗಿರುವುದರಿಂದ. ಏಕೆಂದರೆ ಆ ಗತವು ಇನ್ನೂ ಗತಿಸಿಲ್ಲ...’’ ಮುನ್ನುಡಿಯ ಈ ಮಾತುಗಳು ಈ ಸಂಶೋಧನಾ ಗ್ರಂಥದ ಇಂದಿನ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಸಾಂಸ್ಕೃತಿಕ ವೇಷದಲ್ಲಿರುವ ಭಾರತದ ಬ್ರಾಹ್ಮಣ್ಯ ಇತಿಹಾಸದ ಮುಖವಾಡವನ್ನು ಈ ಕೃತಿಯಲ್ಲಿ ಕಳಚಿದ್ದಾರೆ. ಸದ್ಯದ ಬ್ರಾಹ್ಮಣ್ಯ ರಾಜಕಾರಣ ಎತ್ತಿರುವ ಪ್ರಶ್ನೆಗಳಿಗೆ ಈ ಸಂಶೋಧನಾತ್ಮಕ ಗ್ರಂಥದಲ್ಲಿ ಉತ್ತರಗಳಿವೆ. ಟೆಡ್ಸ್ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 528. ಮುಖಬೆಲೆ 450 ರೂ. ಆಸಕ್ತರು 8762694961 ದೂರವಾಣಿಯನ್ನು ಸಂಪರ್ಕಿಸಬಹುದು.