ಆಚಾರವಿಲ್ಲದ ನಾಲಿಗೆ...
ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಮುಂತಾದ ದೃಶ್ಯ, ಶ್ರವಣ ಮಾಧ್ಯಮಗಳಿಗೆ ಗೋಚರಿಸುವ ಮಾಲಿನ್ಯಗಳನ್ನು ನಿಯಂತ್ರಿಸಲು ಕಾನೂನು ರಚನೆಯಾಗಿದೆ. ಆದರೆ ಶಬ್ದ ಮಾಲಿನ್ಯದಲ್ಲಿ ದುರಾಚಾರದ ಮಾತುಗಳಿಗೆ ಕಡಿವಾಣ ಹಾಕಲು ಶಕ್ತ ಮತ್ತು ಪರಿಣಾಮಕಾರಿ ಕಾನೂನುಗಳಿಲ್ಲ. ಅದರಲ್ಲೂ ಚುನಾವಣಾ ಸಮಯದಲ್ಲಿ ಪದೇ ಪದೇ ಬಳಕೆಯಾಗುವ ಮಾನಗೇಡಿ ಮಾತುಗಳಿಗೆ ಲಗಾಮು ಹಾಕಲು ಚುನಾವಣಾ ನೀತಿಸಂಹಿತೆಯಲ್ಲೂ ಸರಿಯಾದ ಅವಕಾಶಗಳಿಲ್ಲ. ಇದರಿಂದಾಗಿ ಮಾತು ಬರುತ್ತದೆಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡಬಹುದೆಂಬ ಆತಂಕಕಾರಿ ಮಾತ್ರವಲ್ಲ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ನಾಯಿಗಳ ಬೊಗಳುವಿಕೆಯ ಅರ್ಥ ಮನುಷ್ಯನಿಗೆ ಗೊತ್ತಾಗುವುದಿಲ್ಲ. ಹಾಗೆಯೇ ಚುನಾವಣಾ ಸಮಯದ ಮಾತುಗಳನ್ನೂ ಕೇಳುಗ ಅರ್ಥವಿಸಲಾಗದ ಮರೆಯಿದ್ದರೆ ಒಳ್ಳೆಯದು.
ಐದು ಶತಮಾನಗಳಿಗೂ ಹಿಂದೆ ಪುರಂದರ ದಾಸರು ‘‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ನಾಲಿಗೆ’’ ಎಂದು ಆರಂಭವಾಗುವ ಕೀರ್ತನೆಯನ್ನು ಬರೆದಿದ್ದರು. ಅವರೇ ಮೊದಲಿಗರೆಂದಲ್ಲ, ಅದಕ್ಕೂ ಹಿಂದಿನ ವಚನಕಾರರು ಮತ್ತು ಪಂಪನ ವರೆಗೂ ಚಾಚಿಕೊಂಡ ಪ್ರಾಚೀನ ಕನ್ನಡ ಕಾವ್ಯವೂ ನೀಚತನದ ಅಭಿವ್ಯಕ್ತಿಯನ್ನು ಟೀಕಿಸಿದೆ. ಇನ್ನೂ ಆಳಕ್ಕೆ ಅಗೆದರೆ ಸಂಸ್ಕೃತ ರಾಮಾಯಣ ಮಹಾಭಾರತದ ಸಂದರ್ಭದಲ್ಲೂ ಸಡಿಲ ನಾಲಿಗೆಯ ಪ್ರತಾಪ-ವಿಕೋಪಗಳ ಕುರಿತು ಉಲ್ಲೇಖವಿದೆ. ನಮ್ಮ ಯಕ್ಷಗಾನದಲ್ಲೂ ‘‘ಮೂದಲಿಸಿ ಮಾತನಾಡಿದರ್’’ ಎಂಬ ಸಂದರ್ಭವಿದೆ. ಅಲ್ಲೆಲ್ಲ ಕವಿಸಮಯವನ್ನು ಹೊಂದಿಕೊಂಡು ಪಾತ್ರಗಳ ಮೂಲಕ ಇಂತಹ ಸಂದರ್ಭಗಳನ್ನು ಸೃಷ್ಟಿಸಿ ಸಮಕಾಲೀನ ಸಮಾಜಕ್ಕೆ ಮತ್ತು ಭವಿಷ್ಯದ ಪೀಳಿಗೆಗೆ ಆದರ್ಶಗಳ ಮತ್ತು ವಾಸ್ತವಗಳ ಪರಿವೆಯನ್ನು ಹೇಳಿಕೊಡಲಾಗಿದೆ.
ಆದರೆ ಮನುಷ್ಯ ಎಂದಿಗೂ ಪಾಠ ಕಲಿಯಲಾರ. ಏಕೆಂದರೆ ಆಚಾರವಿಲ್ಲದಿರುವುದು ನಾಲಿಗೆಗಲ್ಲ; ಮನಸ್ಸಿಗೆ; ಅದನ್ನು ನಿಯಂತ್ರಿಸಬಲ್ಲ ಬುದ್ಧಿಗೆ. ಕುವೆಂಪು ಬರೆದಿರುವುದನ್ನು ಸ್ವಲ್ಪಅಣಕಿಸಿ ಬರೆದರೆ ‘‘ಈ ಸಮಯ.. ವಿಷಮಯ.. ಯಾತನಾಮಯ..’’ ಅಥವಾ ‘‘ಅಯೋಮಯ’’ ಎಂದೆಲ್ಲ ರಚನೆಯಾಗುತ್ತದೇನೋ?
ದೇಶದ ಚುನಾವಣೆಯ ಸಂದರ್ಭದಲ್ಲಿ ದೇಶದ ಕುರಿತ ಚಿಂತನೆ, ಚರ್ಚೆ ನಡೆಯುತ್ತದೆಂದು ಯಾರಾದರೂ ಭಾವಿಸಿದರೆ ತಪ್ಪು. ಅಭ್ಯರ್ಥಿಗಳು, ರಾಜಕೀಯದಲ್ಲಿ ಸೋಲುಗೆಲುವಿಗಾಗಿ ಹಣಾಹಣಿ ನಡೆಸುತ್ತಿರುವ ಅನುಯಾಯಿ ತಪೋಮಗ್ನರು ಮತ್ತು ಇವರನ್ನು ತಮ್ಮದೇ ಕಾರಣ/ನೆಪಗಳಿಗಾಗಿ ಬೆಂಬಲಿಸುತ್ತಿರುವ ಮತದಾರರು ಇವು ಭವಿಷ್ಯಕ್ಕೆ ನೀಡಬಲ್ಲ ನಕಾರಾತ್ಮ ಕೊಡುಗೆಗಳನ್ನು ಮರೆತಿದ್ದಾರೆ ಅಥವಾ ದುರುದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. ಇಂದು ಈ ನಾಲಿಗೆಯನ್ನು ಎಲ್ಲ ರಾಜಕಾರಣಿಗಳಿಗೆ ಮಾತ್ರವಲ್ಲ, ಮಾಧ್ಯಮ ವರದಿಗಾರರಿಗೆ, ಸಾಮಾಜಿಕ ಜಾಲತಾಣಗಳ ಪಾಲುದಾರರಿಗೆ ಉಚಿತವಾಗಿ ನೀಡಿದಂತಿದೆ. ಮಾನವೆಂಬ ಅಳತೆಯೇ ಅಳಿದಿದೆ. ಬಹುತೇಕ ಮತದಾರರು ಮತಾಂಧರಾಗಿದ್ದಾರೆಯಾದ್ದರಿಂದ ಈ ಪದ ಈಗ ಕೋಮುವಾದಕ್ಕಷ್ಟೇ ಮಿತಿಗೊಳ್ಳದೆ ನಾವು ಯಾವುದನ್ನು ಅತ್ಯಮೂಲ್ಯವೆಂದು ಪ್ರಚಾರ-ಪ್ರಸಾರ ಮಾಡಬೇಕಾಗಿದೆಯೋ ಅಂತಹ ಮತದಾನದ ಸಂದರ್ಭದಲ್ಲಿ ನಾಲಿಗೆಯಷ್ಟೇ ಸಡಿಲವಾಗಿ ಬಳಕೆಯಾಗುವ ಮೌಲ್ಯವಾಗಿದೆ. ವಿದ್ಯೆ ಒಳ್ಳೆಯದನ್ನು ಕಲಿಸುತ್ತದೆಯೆಂದು ಯಾರಾದರೂ ನಂಬಿದ್ದರೆ ಅದನ್ನು ಮರೆಯುವ (ಕು)ಸಂದರ್ಭ ಬಂದಿದೆ.
ಚುನಾವಣೆಯ ಸಂದರ್ಭದಲ್ಲಿ ಸ್ವನಿಯಂತ್ರಣವನ್ನು ಮನುಷ್ಯರು ಮಾಡಿಕೊಳ್ಳದೆ ಇದ್ದರೆ ಸಾಮಾಜಿಕ ವಾತಾವರಣವು ಈ ದೇಶದ ಜನಸಂಖ್ಯೆಯ ಹಾಗೆ ಅನಿಯಂತ್ರಿತವಾಗಿ ಬೆಳೆಯುವುದು ಅನಿವಾರ್ಯ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಮುಂತಾದ ದೃಶ್ಯ, ಶ್ರವಣ ಮಾಧ್ಯಮಗಳಿಗೆ ಗೋಚರಿಸುವ ಮಾಲಿನ್ಯಗಳನ್ನು ನಿಯಂತ್ರಿಸಲು ಕಾನೂನು ರಚನೆಯಾಗಿದೆ. ಆದರೆ ಶಬ್ದ ಮಾಲಿನ್ಯದಲ್ಲಿ ದುರಾಚಾರದ ಮಾತುಗಳಿಗೆ ಕಡಿವಾಣ ಹಾಕಲು ಶಕ್ತ ಮತ್ತು ಪರಿಣಾಮಕಾರಿ ಕಾನೂನುಗಳಿಲ್ಲ. ಅದರಲ್ಲೂ ಚುನಾವಣಾ ಸಮಯದಲ್ಲಿ ಪದೇ ಪದೇ ಬಳಕೆಯಾಗುವ ಮಾನಗೇಡಿ ಮಾತುಗಳಿಗೆ ಲಗಾಮು ಹಾಕಲು ಚುನಾವಣಾ ನೀತಿಸಂಹಿತೆಯಲ್ಲೂ ಸರಿಯಾದ ಅವಕಾಶಗಳಿಲ್ಲ. ಇದರಿಂದಾಗಿ ಮಾತು ಬರುತ್ತದೆಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡಬಹುದೆಂಬ ಆತಂಕಕಾರಿ ಮಾತ್ರವಲ್ಲ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ನಾಯಿಗಳ ಬೊಗಳುವಿಕೆಯ ಅರ್ಥ ಮನುಷ್ಯನಿಗೆ ಗೊತ್ತಾಗುವುದಿಲ್ಲ. ಹಾಗೆಯೇ ಚುನಾವಣಾ ಸಮಯದ ಮಾತುಗಳನ್ನೂ ಕೇಳುಗ ಅರ್ಥವಿಸಲಾಗದ ಮರೆಯಿದ್ದರೆ ಒಳ್ಳೆಯದು.
ಈ ಬಾರಿಯ ಚುನಾವಣೆ ಹಿಂದಿನ ಎಲ್ಲ ದಾಖಲೆಗಳನ್ನು ಪಕ್ಷಾತೀತವಾಗಿ ಮೀರಿದೆ. ಕೆಳಮಟ್ಟಕ್ಕಿಳಿಯುವುದರಲ್ಲಿ ತೀವ್ರ ಸ್ಪರ್ಧೆ ಏರ್ಪಾಡಾಗಿದೆ. ಕಲಿಕೆಯಲ್ಲಿ ‘ನಾಮುಂದು, ತಾ ಮುಂದು’ ಎಂಬ ಪೈಪೋಟಿ ಉಂಟಾಗ ಬೇಕು; ಆದರೆ ಇದಕ್ಕೆ ಪರ್ಯಾಯವಾಗಿ ಚುನಾವಣೆಗಳ ಭಾಷಣಗಳಲ್ಲಿ, ಘೋಷಣೆಗಳಲ್ಲಿ ‘ನಾ ಹಿಂದೂ, ತಾ ಹಿಂದೂ’ ಎಂಬ ಸ್ಪರ್ಧೆಯಿದೆ.
ಭಾರತದಲ್ಲಿ ಪಕ್ಷಾಧಾರಿತ ಚುನಾವಣೆಗಳು ನಡೆಯುತ್ತಿವೆ. ವ್ಯಕ್ತಿಯನ್ನು ಆಧರಿಸಿ ಚುನಾವಣೆ ನಡೆಯುತ್ತಿಲ್ಲ. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆಂದು ಯಾವುದೇ ಪಕ್ಷವು ಹೇಳಿಕೊಂಡರೂ ಕೊನೆಗೂ ನೇಪಥ್ಯದಲ್ಲಿ ಹಣ, ಪ್ರಭಾವ, ಜಾತಿ ಮುಂತಾದವುಗಳು ಕೆಲಸಮಾಡಿವೆಯೆಂಬುದು ಪಥ್ಯವಾಗಬೇಕಾದ ಸತ್ಯ. ಯಾವುದೇ ಚುನಾವಣೆಯಲ್ಲಿ ಪಕ್ಷದ ಹೆಸರಿನಲ್ಲಿ ನಿಂತ ಅಭ್ಯರ್ಥಿ ಕನಿಷ್ಠ ಮಟ್ಟಿಗಾದರೂ ತನ್ನ ಮತ್ತು ತನ್ನ ಪಕ್ಷದ ಸಾಧನೆಯನ್ನು ಮತದಾರರ ಮುಂದೆ ಬಿಂಬಿಸಬೇಕು. ತನ್ನ ಮತ್ತು ತನ್ನ ಪಕ್ಷದ ಸಾಧನೆ-ಸಿದ್ಧಿಗಳು ಇತರ ಪಕ್ಷಗಳಿಗಿಂತ ಹೆಚ್ಚಿನವೆಂದು ಮನವರಿಕೆ ಮಾಡಬೇಕು. ಅದನ್ನು ಪರಿಗಣಿಸಿ ಮತದಾರ ಮತ ನೀಡುತ್ತಾನೆಂಬ ಎಚ್ಚರಿಕೆ ಪಕ್ಷಗಳಿಗಿರುವಂತೆ ಮತದಾರ ವರ್ತಿಸಬೇಕು.
ಆದರೆ ನಮ್ಮಲ್ಲಿ ನಡೆಯುತ್ತಿರುವುದೇ ಬೇರೆ: ವಸ್ತುರೂಪದ ಯಾವುದೆಲ್ಲ ಆಮಿಷಗಳಿವೆಯೋ ಅವನ್ನೆಲ್ಲ ಮುಗ್ಧ ಮತ್ತು ಬೌದ್ಧಿಕ ಬಡತನದ ಮತದಾರರಿಗೆ ಚುನಾವಣಾ ಸಮಯದಲ್ಲಿ ನೀಡಲಾಗುತ್ತದೆ. ಅವರ ಪಾಲಿಗೆ ಇದೇ ಸಕಲ ಸೌಭಾಗ್ಯದಂತಿರುವಾಗ ಅವರು ತಮ್ಮ ಬುದ್ಧಿಯನ್ನು ಈ ಆಮಿಷಗಳಿಗೆ ಅಡವಿಟ್ಟು ಮತ ನೀಡುತ್ತಾರೆ.
ಇದಕ್ಕಿಂತಲೂ ಭಿನ್ನವಾದ ಇನ್ನೊಂದು ಪರಂಪರೆ ಸೃಷ್ಟಿಯಾಗಿದೆ. ಅದು ತಮ್ಮ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದಿರುವುದು. ಇದರಲ್ಲೂ ಎರಡು ವಿಧ: ಒಂದು- ಎದುರಾಳಿಯ ಕುರಿತು ಎಷ್ಟು ಸಾಧ್ಯವೋ ಅಷ್ಟು ಅಪಪ್ರಚಾರ ಮಾಡುವುದು. ಅದನ್ನು ಜನರು ನಂಬುವಂತೆ ಪ್ರಯತ್ನಿಸುವುದು. ಗೋಬೆಲ್ಲನ ಪ್ರಮೇಯದಂತೆ ಒಂದು ಸುಳ್ಳನ್ನು ಹತ್ತು ಬಾರಿ ಹೇಳಿದಾಗ ಅದು ಸತ್ಯದಂತೆ ಕಾಣುತ್ತದೆ. ಹೀಗೆ ಅನೇಕ ಜನರ ಬಾಯಿಯಿಂದ ಅದೇ ಸುಳ್ಳನ್ನು ಪುನರಾವರ್ತಿಸುವುದು. ಇಂದು ನಮ್ಮ ಟಿವಿ ಚಾನೆಲ್‌ಗಳಲ್ಲ್ಲಿ ನಡೆಯುವ ಗಣತಿ/ಸರ್ವೇ ಹೀಗೆಯೇ. ನಿಮ್ಮ ಪ್ರಕಾರ ಯಾರು ಗೆಲ್ಲುತ್ತಾರೆ? ಎಂಬ ಪ್ರಶ್ನೆಯಡಿ ಎರಡೋ ಮೂರೋ ಆಯ್ಕೆಗಳನ್ನು ನೀಡಲಾಗುತ್ತದೆ. ಇಂತಹ ಪ್ರಶ್ನೆಗಳು ಬಂದಾಗೆಲ್ಲ ಅದನ್ನು ತಕ್ಷಣ ನಿರ್ಧರಿಸುವಷ್ಟು ಗೋಬೆಲ್‌ಗಳು ತಯಾರಿರುತ್ತಾರೆ. ಅವರು ತಮ್ಮ ಜಂಟಿ ಮತ್ತು ಪೂರ್ವನಿರ್ಧರಿತ ಆಯ್ಕೆಯನ್ನು ದಾಖಲಿಸುತ್ತಾರೆ. ಇದರಿಂದಾಗಿ ಜನರಿಗೆ ಅರಿವಿಲ್ಲದೆಯೇ ಅಸತ್ಯದ ಪರವಾಗಿ ಶೇ. 80-90 ಮತಗಳು ಬೀಳುತ್ತವೆ. ಇದನ್ನು ನೋಡಿದ ಅಮಾಯಕರು ಸಾರ್ವಜನಿಕ ಅಭಿಪ್ರಾಯ ಹೀಗೇ ಇದೆ ಎಂದು ನಂಬುತ್ತಾರೆ. ಪ್ರವಾಹದೊಂದಿಗೆ ಈಜುವ ಕುರಿಮಂದೆಯೇ ಹೆಚ್ಚಿರುವಾಗ ಸತ್ಯ ಸಾಯುತ್ತದೆ; ಸುಳ್ಳು ಸಾರಾಸಗಟು ಗೆಲ್ಲುತ್ತದೆ. ಮುಗ್ಧ ಜನರಿಗೆ ತರ್ಕವಾಗಲೀ ಸತ್ಯವಾಗಲೀ ದೃಷ್ಟಿಗೆ ಸುಲಭ ಸಾಧ್ಯವಲ್ಲ. ಸತ್ಯದ ಮುಖ ಬಂಗಾರದ ಪಾತ್ರೆಯಲ್ಲಿ ಮುಚ್ಚಿಟ್ಟಿರುವುದರಿಂದ ಅದರ ಮುಚ್ಚಳವನ್ನು ತೆರೆದು ಪ್ರಕಾಶಿಸುವ ಬೆಳಕಿಗೆ ಹಿಡಿಯುವ ಸಾಮರ್ಥ್ಯದ ಗಾಂಧಿಗಳು ಇಂದಿಲ್ಲ. ಆದ್ದರಿಂದ ಸತ್ಯದ ಹೆಸರಿನಲ್ಲಿ ಕುರುಡು ಸುಳ್ಳು ಕುಣಿಯುತ್ತದೆ. ಸತ್ಯಶೀಲರನ್ನು, ಸತ್ಯವೀರರನ್ನು ತುಳಿಯುತ್ತದೆ. ಈ (ಕು)ತಂತ್ರದಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದದ್ದು. ಅವುಗಳು ಬಹುತೇಕ ರಾಜಕಾರಣಿಗಳ, ಉದ್ಯಮಿಗಳ ನಿಯಂತ್ರಣದಲ್ಲಿರುವುದರಿಂದ ಮತ್ತು ಹೊಟ್ಟೆಯ ಬೆಂಕಿಯು ವಿಚಾರದ ಬೆಂಕಿಗಿಂತ ಹೆಚ್ಚು ಸುಡುವುದರಿಂದ ಮಾಧ್ಯಮಿಗಳು ಸಹಜವಾಗಿಯೇ ಅಂತಹ ಗುಪ್ತ ಮಾರ್ಗಸೂಚಿಗಳನ್ನು ಜನಾಭಿಪ್ರಾಯವೆಂಬಂತೆ ಪ್ರಸಾರಮಾಡುತ್ತಾರೆ.
ಇನ್ನೊಂದು ವಿಧ ಹೆಚ್ಚು ಪ್ರಚಲಿತವಿದೆ. ಇದನ್ನು ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಜಾರಿಗೆ ತಂದಿತು. ಆಗ ಯಾವೊಬ್ಬ ಅಭ್ಯರ್ಥಿಯೂ ತನ್ನ ಹೆಸರಿನಲ್ಲಾಗಲೀ, ಸಾಧನೆಯ ಆಧಾರದಲ್ಲಿಯಾಗಲೀ ಮತಯಾಚಿಸದೆ ತಮ್ಮ ನಾಯಕಿ ಇಂದಿರಾ ಹೆಸರಿನಲ್ಲಿ ಮತಯಾಚಿಸುತ್ತಿದ್ದರು. ಆನಂತರ ಈ ಸಂಪ್ರದಾಯ ಸ್ವಲ್ಪಮರೆಯಾಯಿತು. ರಾಜೀವ್ ಗಾಂಧಿ ಅಥವಾ ಆನಂತರದ ನರಸಿಂಹ ರಾವ್, ವಾಜಪೇಯಿ, ಮನಮೋಹನ ಸಿಂಗ್ ಕಾಲದಲ್ಲಿ ಹೀಗೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮತಗಳಿಸುವುದು ಸಾಧ್ಯವಿರಲಿಲ್ಲ ಅಥವಾ ವ್ಯಕ್ತಿಗಿಂತ ಪಕ್ಷವು ಹೆಚ್ಚು ಪ್ರಸ್ತುತವಾಗಿತ್ತು. ಆದರೆ 2014ರಲ್ಲಿ ಹಳೆಯ ಚಿತ್ರ ಹೊಸ ರೂಪದಲ್ಲಿ ಪ್ರತ್ಯಕ್ಷವಾಯಿತು. ಭಾರತೀಯ ಜನತಾ ಪಕ್ಷವು ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನು ಎಂಬಂತೆ ಮೋದಿಯನ್ನು ಚಿತ್ರಿಸಿ, ಅವರಿಗೆ ವಿವೇಕಾನಂದರೇ ಮೊದಲಾದ ದೇಶದ ಮಹಾಮಹಿಮರ ಪೇಟ, ಮುಂಡಾಸು, ಕಿರೀಟ ಹೀಗೆ ಛದ್ಮವೇಷ ತೊಡಿಸಿ ಅಂತೂ ಅಧಿಕಾರಕ್ಕೆ ಬಂತು. ಆದರೆ ಆನಂತರದ ಐದು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಅಸ್ಮಿತೆಯನ್ನು ಸಂಪಾದಿಸಲು ವಿಫಲವಾದದ್ದು ಅದರ ಮಾತ್ರವಲ್ಲ ಪ್ರಜಾತಂತ್ರದ ದುರಂತವೂ ಹೌದು. ದೇಶದ ಎಲ್ಲೆಡೆ ನಡೆಯುವ ಚುನಾವಣೆಯಲ್ಲಿ ಭಾಜಪದ ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿ ಮತಬೇಡುವುದೇ ಇಲ್ಲ. ಅವರೆಲ್ಲರೂ ಒಬ್ಬ ಭೂಗತ ಡಾನ್‌ನ ಕೂಲಿಯಾಳುಗಳಂತೆ ಮೋದಿಯ ಹೆಸರಿನಲ್ಲೇ ಮತಬೇಟೆಯಾಡುತ್ತಿದ್ದಾರೆ. ಒಂದು ವೇಳೆ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದದ್ದೇ ಆದರೆ ಅದು ಮೋದಿಯ ಅಧಿಕಾರವಾದೀತೇ ಹೊರತು ಪಕ್ಷದ್ದಲ್ಲ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ಪಕ್ಷಗಳ ಅಸ್ತಿತ್ವವೇ ಇರಲಾರದೇನೋ? (ಕಾಂಗ್ರೆಸಿಗೆ ಈ ಸಮಸ್ಯೆ ಸದ್ಯಕ್ಕಂತೂ ಇಲ್ಲ!)
ಕಾಂಗ್ರೆಸ್-ಭಾಜಪದ ಗುರುಶಿಷ್ಯ ಪರಂಪರೆ ನಶಿಸೀತೆಂದು ಅನ್ನಿಸುವುದಿಲ್ಲ. ಇದು ಬದಲಾಗಬೇಕಾದರೆ ಶತಮಾನಗಳೇ ಬೇಕು ಎನ್ನುವುದನ್ನು ಕೇಳಿದ್ದೇನೆ. ಆದರೆ ಈ ವಿನಿಮಯ ತಂತ್ರವು ಬದಲಾದೀತೆಂಬ ಆಶಯವು ಸದ್ಯಕ್ಕೆ ದೂರದ ಮಾತು. ಆದ್ದರಿಂದ ಇವನ್ನು ಸಾಂಪ್ರದಾಯಿಕ ಚುನಾವಣಾ ನೀತಿಯೆಂದು ಒಪ್ಪಿಕೊಳ್ಳಬೇಕಾಗಿದೆ.
ಚುನಾವಣಾ ಪ್ರಚಾರದ ಹೆಸರಿನಲ್ಲಿ ಈಗ ನಡೆಯುವ ಕೀಳುಮಟ್ಟದ ಟೀಕೆಗಳು ಪ್ರಜ್ಞಾವಂತರನ್ನು ಘಾಸಿಗೊಳಿಸುವಂತಹವು. ಬದ್ಧ ಮತಾಂಧರನ್ನು ಹೊರತುಪಡಿಸಿ ಶ್ರೀಸಾಮಾನ್ಯರನ್ನು ಬೆರಗುಗೊಳಿಸುವಂತಹವು. ಚುನಾವಣಾ ಆಯೋಗವು ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ(!) ಆದಿತ್ಯನಾಥ್, ಮೇನಕಾ ಗಾಂಧಿ, ಅಝಮ್‌ಖಾನ್, ಮಾಯಾವತಿ ಇವರ ಬಾಯಿಗೆ ತಾತ್ಕಾಲಿಕವಾಗಿಯಾದರೂ ಬೀಗ ಹಾಕಿ ತನ್ನ ಮಾನವನ್ನು ಕೊಂಚ ಮಟ್ಟಿಗೆ ಕಾಪಾಡಿಕೊಂಡಿದೆ. (ಇದು ಅದರ ಸ್ವಯಿಚ್ಛೆಯೆನ್ನುವುದಕ್ಕಿಂತ ಸರ್ವೋಚ್ಚ ನ್ಯಾಯಾಲಯದ ಎಚ್ಚರಿಕೆಯ ಆಣತಿಯೆಂದೇ ಹೇಳಬಹುದು.) ಒಂದು ರಾಜ್ಯದ ಮುಖ್ಯಮಂತ್ರಿಗೇ ಈ ಗತಿ ಬಂದರೆ ನಮ್ಮ ಪ್ರಜಾತಂತ್ರ ಮತ್ತು ಚುನಾವಾ ನೀತಿ ಹೇಗಿದೆಯೆಂದು ಊಹಿಸಬಹುದು. (ಮುಖ್ಯಮಂತ್ರಿಯಲ್ಲದಿದ್ದರೂ ‘ಯೋಗಿ’ಯೊಬ್ಬನ ಬಾಯಿಯಿಂದ ಬರುವ ಅಮೃತ ವಾಕ್ಯಗಳು ದೇವರಿಗೇ ಪ್ರೀತಿ!) ಕರ್ನಾಟಕದ ಶಾಸಕರೊಬ್ಬರು ‘‘ಮೋದಿಗೆ ಮತ ನೀಡದವರು ತಾಯ್ಗಂಡರು’’ ಎಂದು ಹೇಳಿದರೆಂದು ವರದಿಯಾಗಿದೆ. ಹೀಗೆ ಹೇಳಿದ್ದೇ ಹೌದಾದರೆ ಅವರ ಸಭ್ಯತೆ, ನಾಗರಿಕತೆ ಮತ್ತು ಅವೆಲ್ಲದರ ಮೂಲದ ಬಗ್ಗೆಯೇ ಸಂಶಯ ಬರುತ್ತದೆ! ಇಂತಹ ಭಾರತೀಯತೆಯೇ ವಿಶ್ವದಲ್ಲಿ ಭಾರತವನ್ನು ರಸಾತಳಕ್ಕೆ ತಳ್ಳಿರುವುದು ಎಂದು ನಂಬಬೇಕಾಗಿದೆ. ಆದರೆ ಅಶ್ಲೀಲ ಮಾತ್ರವಲ್ಲ, ಅವಾಚ್ಯ, ಅಪ್ರಸ್ತುತ ಇತ್ಯಾದಿಗಳಿಗೂ ಬೀಗ ಹಾಕಬೇಕಾಗಿದೆ. ಇದು ಪಕ್ಷಾತೀತವಾಗಿದ್ದರೂ ಇದರಲ್ಲಿ ದೇಶಭಕ್ತಿಯ ಹೆಸರಿನಲ್ಲಿ ಪ್ರಕಟಗೊಳ್ಳುವ ಆಕ್ರಮಣಕಾರಿ ಅವಾಚ್ಯತೆ ಮತ್ತು ಸ್ವಾಯತ್ತ ಸಂಸ್ಥೆಗಳು, ಸಂಶೋಧನೆಗಳು, ಸೇನೆಯೂ ಸೇರಿದಂತೆ ಎಲ್ಲವನ್ನೂ ರಾಜಕೀಯಗೊಳಿಸುವುದು ಭಾರತ ಮಾತೆಗೆ ಭಯಹುಟ್ಟಿಸುವ ವಿಚಾರ.
ಪ್ರಾಯಃ ಚುನಾವಣೆಯಲ್ಲಿ ಭಾಷಣಗಳನ್ನು ಮತ್ತು ಘೋಷಣೆಗಳನ್ನು ಜನರು ಬಹಿಷ್ಕರಿಸುವ ಕಾಲವಿನ್ನೂ ಬಂದಿಲ್ಲ. ಆದರೆ ಇವನ್ನು ಬರೆದೇ ಓದಬೇಕೆಂದು ಮತ್ತು ಅಂತಹ ಬರಹವನ್ನು ಚುನಾವಣಾ ಆಯೋಗವು ಸೆನ್ಸಾರ್ ಮಾಡಬೇಕೆಂದು ಹೇಳುವುದು ಸರಿಯಾದೀತು. ಹಾಗೆಯೇ ಮಾಧ್ಯಮಗಳಿಗೂ (ಅ)ವಾಚ್ಯತೆಯ ಕುರಿತು ತರಬೇತಿ ನೀಡುವುದು ಒಳಿತು. ಅವು ದುಂಬಿಗಳಂತೆ ಜೇನನ್ನು ಹೀರಿ ಸಂಗ್ರಹಿಸಬೇಕೇ ಹೊರತು ನೊಣದಂತೆ ಅಮೇಧ್ಯವೂ ಸೇರಿದಂತೆ ಎಲ್ಲೆಂದರಲ್ಲಿ ಕುಳಿತು ಅದನ್ನು ಇನ್ನೊಂದೆಡೆ ಒಯ್ದು ಇನ್ನೊಬ್ಬರ ತಲೆಯ ಮೇಲೆ ಸ್ಥಾಪಿಸುವುದಲ್ಲ ಎಂಬುದನ್ನು ನೆನಪಿಸಬೇಕಿದೆ. ಅಭ್ಯರ್ಥಿಗಳು, ಚುನಾವಣೆ ಎಲ್ಲವೂ ಮುಗಿದು ಮಾಮೂಲು ಬದುಕು ಮರುಕಳಿಸಬೇಕಾದಾಗ ಈ ಹೊಲನ್ನು ಅಳಿಸಲು ವರ್ಷಗಳೇ ಬೇಕು!
ಸದ್ಯಕ್ಕೆ ಈ ಗೊಂದಲದಲ್ಲೂ ಅನರ್ಹರ ನಡುವೆ ಒಬ್ಬ ಅರ್ಹರನ್ನು ಸ್ಥಾಪಿಸುವ ಮತ್ತು ಆರಿಸಿ ಕಳಿಸುವ ದುರದೃಷ್ಟ ಮತದಾರನ ಪಾಲಿಗೊದಗಿದೆ. ಇದು ಅಮೃತ ಮಥನವಲ್ಲ. ಕೊನೇ ಪಕ್ಷ ವಿಷ ಉತ್ಪತ್ತಿಯಾದಾಗ ಅದನ್ನು ಕಂಠದಲ್ಲಿ ಧರಿಸಿ ಅದು ಇನ್ನಷ್ಟು ವ್ಯಾಪಕವಾಗಿ ಹಬ್ಬದಂತೆ ಮತ್ತು ಆ ವಿಷದ ಒಡಲಿನಿಂದ ಒಳಿತನ್ನು ಅಥವಾ ಕಡಿಮೆ ಕೆಡುಕನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಭಾರತದ ಮತದಾರ ತೋರಿಸುತ್ತಾನೆಂದು ಆಶಿಸುವುದಷ್ಟೇ ಈಗಿರುವ ಆಸೆ, ಆಶಯ.