ಕಾಡುವ ಇದಿನಬ್ಬರ ನೆನಪುಗಳು
ಜನಜನಿತ
ಚುನಾವಣೆ ಬರುವಾಗೆಲ್ಲಾ ನನಗೆ ಆಗಾಗ ನೆನಪಾಗುವುದು ನಮ್ಮ ಕನ್ನಡದ ಕೋಗಿಲೆಯೆಂದೇ ಖ್ಯಾತರಾದ ಉಳ್ಳಾಲದ ಮಾಜಿ ಶಾಸಕ ಬಿ. ಎಂ. ಇದಿನಬ್ಬ. ಅದಕ್ಕೆ ಕಾರಣವಿಷ್ಟೇ. ಇಂದು ಅಭ್ಯರ್ಥಿಯೊಬ್ಬ ಅಸೆಂಬ್ಲಿ ಚುನಾವಣೆ ಗೆಲ್ಲಬೇಕೆಂದರೆ ಕಡಿಮೆ ಕಡಿಮೆಯೆಂದರೂ ಐವತ್ತು ಕೋಟಿ ರೂಪಾಯಿಯ ಗಂಟು ಬೇಕು. ಚುನಾವಣಾ ಆಯೋಗವು ಅಭ್ಯರ್ಥಿಯೊಬ್ಬ ಮಾಡಬಹುದಾದ ಖರ್ಚಿಗೆ ಒಂದು ನಿರ್ದಿಷ್ಟ ಮಿತಿ ಹೇರುತ್ತದೆಯಾದರೂ ಅದೆಲ್ಲಾ ಕೇವಲ ಕಡತಕ್ಕೆ ಮಾತ್ರ ಸೀಮಿತ. ಈ ನೆಲೆಯಲ್ಲಿ ನಮ್ಮ ಇದಿನಬ್ಬರು ಎದುರಿಸಿದ ಚುನಾವಣೆಗಳತ್ತ ಒಮ್ಮೆ ದೃಷ್ಟಿ ಹಾಯಿಸಿದರೆ ಹೊಸ ತಲೆಮಾರಿಗೆ ರಾಜಕೀಯದಲ್ಲಿ ಇಂತಹವರೂ ಇದ್ದರೇ....? ಎಂದೆನಿಸದಿರದು.
ಪಕ್ಷ ಯಾವುದೇ ಇರಲಿ, ಇಂದು ಅದು ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನೋಡುವ ಮಾನದಂಡಗಳಲ್ಲಿ ದುಡ್ಡು ಪ್ರಮುಖವಾದುದು. ಕೆಲವು ಪ್ರಮುಖ ರಾಜಕೀಯ ಪಕ್ಷಗಳಲ್ಲಂತೂ ಚುನಾವಣೆಗೆ ನಿಲ್ಲಬಯಸುವ ಅಭ್ಯರ್ಥಿ ಪಕ್ಷದ ಉನ್ನತರಿಗೆ ಕೋಟಿ ಕೋಟಿ ಸುರಿದೇ ಟಿಕೆಟ್ ಪಡೆಯುವುದು ಈ ಕಾಲದಲ್ಲಿ ಅತೀ ಸಾಮಾನ್ಯ. ದುಡ್ಡಿನ ಮುಂದೆ ಇತರೆಲ್ಲಾ ಅರ್ಹತೆಗಳು ಗೌಣವಾಗುತ್ತದೆ ಕೂಡಾ. ಇವುಗಳ ಮಧ್ಯೆ ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ನಮಗೆ ಗಾಂಧಿವಾದದ ಪಳೆಯುಳಿಕೆಯಂತೆ ಕಾಣುತ್ತಾರೆ.
ಕನ್ನಡದ ಪರಿಚಾರಿಕೆ ಮಾಡುತ್ತಾ ಕತೆ, ಕವನಗಳೆಂದು ತಿರುಗಾಡುತ್ತಾ ಹೊಟ್ಟೆಪಾಡಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೃಷಿಕರ ಮಾರಾಟ ಸಂಘದಲ್ಲಿ ಗುಮಾಸ್ತರಾಗಿ ದುಡಿಯುತ್ತಿದ್ದ ಇದಿನಬ್ಬರನ್ನು ಕಾಂಗ್ರೆಸ್ ಪಕ್ಷ 1962ರ ಅಸೆಂಬ್ಲಿ ಚುನಾವಣೆಗೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆ. ಅದಕ್ಕೆ ಮುಖ್ಯ ಕಾರಣ ಉಳ್ಳಾಲವು ಮುಸ್ಲಿಂ ಬಾಹುಳ್ಯದ ಪ್ರದೇಶ. ಆ ಕಾಲಕ್ಕೆ ಅಲ್ಲಿ ರಾಜಕೀಯವಾಗ ಕಮ್ಯುನಿಸ್ಟ್ ಪಕ್ಷವು ಪ್ರಬಲವಾಗಿತ್ತು. ಅಂದು ಉಳ್ಳಾಲದಲ್ಲಿ ಹಂಚಿನ ಕಾರ್ಖಾನೆ, ಹುರಿ ಹಗ್ಗದಂತಹ ಗುಡಿ ಕೈಗಾರಿಕೆ ಮತ್ತಿತರ ಕೈಗಾರಿಕೆಗಳ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಕಾರ್ಮಿಕ ಪರ ಕಮ್ಯುನಿಸ್ಟ್ ಪಕ್ಷ ಪ್ರಬಲವಾಗಿರಲು ಕಾರಣ. ಇವಿಷ್ಟು ಮಾತ್ರವಲ್ಲದೇ ಉಳ್ಳಾಲ ಕೇರಳದ ಗಡಿ ಪ್ರದೇಶವಾದುದರಿಂದಲೂ ಇಲ್ಲಿ ಕಮ್ಯುನಿಸ್ಟ್ ಚಳವಳಿ ಪ್ರಬಲವಾಗಿತ್ತೆನ್ನಲಡ್ಡಿಯಿಲ್ಲ.
ಇಂತಹ ಉಳ್ಳಾಲದಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥ ಅಭ್ಯರ್ಥಿಯೊಬ್ಬರ ಶೋಧದಲ್ಲಿದ್ದಾಗ ಆಗಿನ ಕಾಂಗ್ರೆಸ್ ಹಿರಿತಲೆಗಳಿಗೆ ಕಂಡದ್ದು ಗಾಂಧಿವಾದಿ ಮತ್ತು ಅಪ್ಪಟ ಕಾಂಗ್ರೆಸಿಗ ಇದಿನಬ್ಬ.
ಇದಿನಬ್ಬರಿಗೆ ಟಿಕೆಟ್ ಘೋಷಣೆಯಾದಾಗ ಇದಿನಬ್ಬರೇ ಹೆದರಿದ್ದರಂತೆ. ಅವರು ಕನಸು ಮನಸಲ್ಲಿಯೂ ಶಾಸಕನಾಗುವ ಆಶೆ ಇಟ್ಟವರಲ್ಲ. ಇದಿನಬ್ಬರಿಗೆ ಟಿಕೆಟ್ ಘೋಷಣೆಯಾದಾಗ ಅವರ ಭಯಕ್ಕೆ ಇದ್ದ ಕಾರಣಗಳಲ್ಲಿ ಠೇವಣಿ ಕಟ್ಟುವ ದುಡ್ಡೂ ಆಗಿತ್ತು. ಇದಿನಬ್ಬರಲ್ಲಿ ಠೇವಣಿ ಕಟ್ಟಲು ದುಡ್ಡಿಲ್ಲ ಎಂಬ ವಿಷಯ ತಿಳಿದ ಹಿರಿಯ ಸಹಕಾರಿ ಮತ್ತವರ ಗಾಡ್ ಫಾದರ್ ಪೈಲೂರು ಲಕ್ಷ್ಮೀನಾರಾಯಣರಾವ್ ಠೇವಣಿ ದುಡ್ಡು ನೀಡಿದ್ದರು. ಠೇವಣಿ ದುಡ್ಡೇ ಇಲ್ಲದಿದ್ದ ಅಭ್ಯರ್ಥಿ ಮತ್ತೆ ಈಗಿನ ರಾಜಕಾರಣಿಗಳಂತೆ ಮತದಾರರಿಗೆ ಆಮಿಷವೊಡ್ಡುವುದು ಇನ್ನಿತರ ಖರ್ಚು ಮಾಡುವುದೆಲ್ಲಾ ದೂರದ ಮಾತು. ಈ ಠೇವಣಿ ದುಡ್ಡಾದರೂ ಎಷ್ಟು... ಇನ್ನೂರೋ ಇನ್ನೂರೈವತ್ತೋ ಅಷ್ಟೇ... ತಿಂಗಳಿಗೆ ಎಂಬತ್ತು ರೂಪಾಯಿ ಪಗಾರಕ್ಕೆ ಗುಮಾಸ್ತ ಹುದ್ದೆಯಲ್ಲಿದ್ದ ಇದಿನಬ್ಬರಿಗೆ ಠೇವಣಿ ದುಡ್ಡಿನ ಹಣವೆಂದರೆ ಮೂರು ತಿಂಗಳ ದುಡಿಮೆ. ಹಾಗೂ ಹೀಗೂ ಚುನಾವಣೆಗೆ ನಿಂತ ಇದಿನಬ್ಬರ ಎದುರಾಳಿ ಕಮ್ಯುನಿಸ್ಟ್ ಪಕ್ಷದ ಪ್ರಬಲ ಅಭ್ಯರ್ಥಿ ಕೃಷ್ಣ ಶೆಟ್ರು. ಕೃಷ್ಣ ಶೆಟ್ರ ಎದುರು ಇದಿನಬ್ಬರು ಮೊದಲ ಯತ್ನದಲ್ಲಿ ಏಳುನೂರು ಮತಗಳ ಅಂತರದಲ್ಲಿ ಸೋತರು. ಹಾಗೆ ಸೋತ ಇದಿನಬ್ಬರು ಮತ್ತೆ ತನ್ನ ಉದ್ಯೋಗಕ್ಕೆ ಮರಳಿದರು. ಇದಿನಬ್ಬರಿಗೆ ಸ್ವಂತದ್ದೆಂಬ ಮನೆಯಿರಲಿಲ್ಲ. ಅವರು ಉಳ್ಳಾಲ ಪೇಟೆ (ಹಳೆಯ ಹೆಸರು ಕುಚ್ಚಿಕ್ಕಾಡು) ಎಂಬಲ್ಲಿ ಪುಟ್ಟ ಬಾಡಿಗೆ ಮನೆಯೊಂದರಲ್ಲಿದ್ದರು.
1967ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಇದಿನಬ್ಬರನ್ನೇ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಎದುರಾಳಿಯೂ ಅದೇ ಕೃಷ್ಣ ಶೆಟ್ರು. ಈ ಬಾರಿಯೂ ಇದಿನಬ್ಬರಿಗೆ ಠೇವಣಿ ದುಡ್ಡು ನೀಡಿ ಆಶೀರ್ವದಿಸಿದವರು ಅದೇ ಪೈಲೂರು ಲಕ್ಷ್ಮೀನಾರಾಯಣರಾವ್. ಎರಡನೇ ಯತ್ನದಲ್ಲಿಯೂ ಆಮಿಷವೊಡ್ಡಲೇನೂ ಇದಿನಬ್ಬರ ಕೈಯಲ್ಲಿ ಬಿಡಿಗಾಸಿರಲಿಲ್ಲ ಬಿಡಿ. ಇನ್ನು ಹಂಚುವುದೆಲ್ಲಾ ಕನಸೇ ಸರಿ. ಈ ಬಾರಿ ಇದಿನಬ್ಬ ಏಳುಸಾವಿರದ ಆರುನೂರು ಮತಗಳ ಭರ್ಜರಿ ಅಂತರದಲ್ಲಿ ಗೆದ್ದು ಬಂದರು. ಆಗಲೂ ಇದಿನಬ್ಬರಿದ್ದದ್ದು ಅದೇ ಬಾಡಿಗೆ ಮನೆಯಲ್ಲಿ.
ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದರೂ ಮುಂದಿನ ಚುನಾವಣೆಯಲ್ಲಿ ಪಕ್ಷ ಇದಿನಬ್ಬರಿಗೆ ಟಿಕೆಟ್ ನಿರಾಕರಿಸಿತು. ಇದಿನಬ್ಬರು ಯಾವುದೇ ಲಾಬಿಗೂ ಇಳಿಯಲಿಲ್ಲ. ಅದು ಇದಿನಬ್ಬರಿಗೆ ಆಗದ ಕೆಲಸ. ಪಕ್ಷದ ಅಭ್ಯರ್ಥಿಯಾಗಿದ್ದ ಯು.ಟಿ.ಫರೀದರ ಪರ ಪ್ರಾಮಾಣಿಕವಾಗಿ ದುಡಿದು ಅವರ ಗೆಲುವಿಗೆ ಶ್ರಮಿಸಿದರು. ಈಗಿನವರಂತೆ ಕಾಲೆಳೆಯುವ ಕೆಲಸ ಇದಿನಬ್ಬರಿಗೆ ಗೊತ್ತೇ ಇರಲಿಲ್ಲವೆಂದರೂ ಉತ್ಪ್ರೇಕ್ಷೆಯಾಗದು. ಒಂದು ಬಾರಿ ಶಾಸಕರಾದರೂ ಇದಿನಬ್ಬ ಸಿಟಿಬಸ್ಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಪ್ರಯಾಣಿಸುತ್ತಿದ್ದರು. ಅದೆಷ್ಟೋ ಬಾರಿ ಸೀಟು ಸಿಗದೆ ಬಸ್ಗಳಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದರು.
1983ರಲ್ಲಿ ಉಳ್ಳಾಲ ಕ್ಷೇತ್ರದಲ್ಲಿ ಮಸೂದರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತು. ಈ ಬಾರಿ ಮತ್ತೆ ಉಳ್ಳಾಲದಲ್ಲಿ ರಾಮಚಂದ್ರರಾಯರ ಮೂಲಕ ಕೆಂಬಾವುಟ ಹಾರಿತು. 1985ರಲ್ಲಿ ಗೆಲುವಿಗಾಗಿ ತಹತಹಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಇದಿನಬ್ಬ ಅನಿವಾರ್ಯ ಆಯ್ಕೆಯಾದರು. ಈ ಬಾರಿಯೂ ಮತ್ತೆ ಇದಿನಬ್ಬರು ಠೇವಣಿ ದುಡ್ಡಿಗೆ ಒದ್ದಾಡಿ ಅಲ್ಲಿಲ್ಲಿ ಸಾಲ ಮಾಡಿದ್ದಾರೆಂದರೆ ಅವರ ಪ್ರಾಮಾಣಿಕತೆ ಯಾವ ಮಟ್ಟದ್ದಿರಬಹುದೆಂದು ಊಹಿಸಬಹುದು. 1985ರಲ್ಲಿ ಗೆಲುವು ಸಾಧಿಸಿದ ಇದಿನಬ್ಬರಿಗೆ 1989ರಲ್ಲೂ ಮತ್ತೆ ಕಾಂಗ್ರೆಸ್ ಟಿಕೆಟ್ ಒಲಿದು ಬಂತು. ಪುಣ್ಯಕ್ಕೆ ಈ ಬಾರಿ ಠೇವಣಿ ದುಡ್ಡಿಗೆ ಪರದಾಡುವ ಸ್ಥಿತಿ ಬರಲಿಲ್ಲ. ಮೂರನೇ ಬಾರಿ ಶಾಸಕರಾದರೂ ಇದಿನಬ್ಬರು ತನಗೆ ಮಂತ್ರಿ ಪಟ್ಟ ಬೇಕೆಂದು ಲಾಬಿ ಮಾಡಲು ಹೋಗಲಿಲ್ಲ. ತನ್ನ ಕ್ಷೇತ್ರದ ಜನತೆಗೆ ಅನ್ಯಾಯವಾಗದಂತೆ ಅವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರು. ಈ ಬಾರಿ ವೀರಪ್ಪಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಸ್ಥಾನ ಇದಿನಬ್ಬರಿಗೆ ಒಲಿದು ಬಂತು. ತನ್ನ ಸಾರ್ವಜನಿಕ ಬದುಕಿನುದ್ದಕ್ಕೂ ಖಾದಿದಾರಿಯಾಗಿದ್ದ ಅಪ್ಪಟ ಗಾಂಧಿವಾದಿಯ ಖಾದಿಪ್ರೇಮಕ್ಕೆ ಸಹಜವಾಗಿಯೇ ಆ ಮಂಡಳಿಯ ಅಧ್ಯಕ್ಷ ಸ್ಥಾನ ಒಲಿಯಿತು.
ಅದೇ ಕೊನೆ ಮತ್ತೆಂದೂ ಚುನಾವಣೆಯ ಗೋಜಿಗೆ ಹೋಗದ ಇದಿನಬ್ಬ ಒಂದರ್ಥದಲ್ಲಿ ರಾಜಕೀಯ ನಿವೃತ್ತಿ ಪಡೆದಿದ್ದರು. ಮತ್ತೆ ಎಸ್. ಎಂ. ಕೃಷ್ಣ ಸರಕಾರ ಅಸ್ತಿತ್ವಕ್ಕೆ ಬಂದಾಗ ಅವರಿಗೆ ಅವರಿಷ್ಟದ ಕನ್ನಡಮ್ಮನ ಸೇವೆಗೈಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ತಾನಾಗಿಯೇ ಒಲಿದು ಬಂತು. ಧರಂ ಸಿಂಗ್ ಸರಕಾರದಲ್ಲೂ ಆ ಹುದ್ದೆ ಮುಂದುವರಿದಿತ್ತು. ಕನ್ನಡ ನಾಡು ನುಡಿಯ ಪ್ರಾಮಾಣಿಕ ಸೇವಕ ತನ್ನ ಅವಧಿಯಲ್ಲಿ ತನ್ನ ಏರುತ್ತಿರುವ ವಯಸ್ಸನ್ನೂ ಲೆಕ್ಕಿಸದೇ ಕನ್ನಡ ನುಡಿಗಾಗಿ ದುಡಿದರು. ಆದರೆ ಕಾಸರಗೋಡನ್ನು ಕನ್ನಡ ನಾಡಿನಲ್ಲಿ ವಿಲೀನಗೊಳಿಸಬೇಕೆಂಬ ಅವರ ಬಹುಕಾಲದ ಕನಸು ಮಾತ್ರ ಈಡೇರಲೇ ಇಲ್ಲ. ಬಹುಶಃ ಅದು ಇನ್ನೆಂದೂ ಈಡೇರದು.
ಮೂರು ಬಾರಿ ಶಾಸಕ, ಎರಡು ಬಾರಿ ಉನ್ನತ ಮಂಡಳಿ, ಪ್ರಾಧಿಕಾರದ ಅಧ್ಯಕ್ಷನಾಗಿದ್ದರೂ ಇದಿನಬ್ಬರ ಬದುಕಿನ ಕೊನೆವರೆಗೂ ಅವರಲ್ಲಿ ಅವರ ಸ್ವಂತದ್ದೆಂಬ ಒಂದು ಕಾರೂ ಇರಲಿಲ್ಲ. ಅವರು ಕೊನೆಯ ದಿನಗಳಲ್ಲಿ ಆಟೋ ಅಥವಾ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಇದಿನಬ್ಬರು ತನ್ನ ಮಕ್ಕಳನ್ನು ರಾಜಕೀಯದಿಂದ ಮಾರು ದೂರ ನಿಲ್ಲಿಸಿದ್ದರು. ಅವರು ತನ್ನ ಮಕ್ಕಳಲ್ಲಿ ಹೇಳುತ್ತಿದ್ದರಂತೆ ‘‘ನಿಮ್ಮಲ್ಲಿ ಯಾರಾದರೂ ನೀವು ಯಾರ ಮಕ್ಕಳೆಂದು ಕೇಳಿದರೆ ಶಾಸಕ ಇದಿನಬ್ಬರ ಮಕ್ಕಳೆಂದು ಹೇಳಬೇಡಿ, ಕನ್ನಡದ ಕವಿ ಇದಿನಬ್ಬರ ಮಕ್ಕಳೆಂದು ಹೇಳಿ.’’
ಇಂದು ಸಾಮಾನ್ಯವಾಗಿ ಶಾಸಕರ ಪತ್ನಿಯರೆಂದರೆ ಅವರಲ್ಲಿ ಅವರ ದೇಹ ತೂಕದ ಕಾಲು ಭಾಗವಾದರೂ ಚಿನ್ನಾಭರಣವಿರುತ್ತದೆ. ಇದಿನಬ್ಬರ ಪತ್ನಿ ಹಲೀಮ ಅವರು ಇದಿನಬ್ಬರಲ್ಲಿ ಇಟ್ಟಿದ್ದ ಏಕೈಕ ಬೇಡಿಕೆ ಕೇವಲ ಎರಡು ಚಿನ್ನದ ಬಳೆಗಳಂತೆ. ಅವರು ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಮಂಡಳಿ- ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರಿಗದು ಕೈ ಗೂಡಿರಲಿ ಲ್ಲವಂತೆ. ಆ ಕೊರಗು ಬಹುಕಾಲ ಕಾಡಿದ್ದರಿಂದ ಹಲೀಮಾರ ಬದುಕಿನ ಕೊನೆಯ ದಿನಗಳಲ್ಲಿ ಹಾಗೂ ಹೀಗೂ ಅವರ ಎರಡೂ ಕೈಗಳಿಗೆ ಚಿನ್ನದ ಬಳೆ ತೊಡಿಸುವಲ್ಲಿ ಇದಿನಬ್ಬರು ಯಶಸ್ವಿಯಾದರಂತೆ...
ಇಂತಹ ರಾಜಕಾರಣಿಗಳ ಕನಸು ಕಾಣುವುದು ಇನ್ನೂ ಮರೀಚಿಕೆಯೇ ಸರಿ.