ತಮಿಳುನಾಡಿನಲ್ಲಿ ಯಾವಾಗ ಚುನಾವಣೆ ನಡೆದರೂ ಸ್ಪರ್ಧೆ: ರಜಿನಿಕಾಂತ್
ಚೆನ್ನೈ, ಎ.19: ತನ್ನ ಬೆಂಬಲಿಗರನ್ನು ನಿರಾಸೆಗೊಳಿಸಲು ಬಯಸುವುದಿಲ್ಲ. ಆದ್ದರಿಂದ ತಮಿಳುನಾಡಿನಲ್ಲಿ ಯಾವಾಗ ವಿಧಾನಸಭೆ ಚುನಾವಣೆ ನಡೆದರೂ ತಾನು ಸ್ಪರ್ಧಿಸುತ್ತೇನೆ ಎಂದು ರಾಜಕೀಯ ಪ್ರವೇಶಿಸಿರುವ ಖ್ಯಾತ ನಟ ರಜಿನಿಕಾಂತ್ ಹೇಳಿದ್ದಾರೆ. 2017ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದ ರಜಿನಿಕಾಂತ್, ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಿಂದ ದೂರವಿದ್ದರು. ತಮಿಳುನಾಡಿನ ಮತ್ತೊಬ್ಬ ನಟ, ರಾಜಕಾರಣಿ ಕಮಲಹಾಸನ್ ಅವರ ಮಕ್ಕಳ್ ನಿಧಿ ಮಯ್ಯಮ್ (ಎಂಎನ್ಎಂ) ಪಕ್ಷ ತಮಿಳುನಾಡಿನ 18 ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತನ್ನ ರಾಜಕೀಯ ಪಕ್ಷದ ಹೆಸರನ್ನು ರಜನೀಕಾಂತ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ವಿಧಾನಸಭೆ ಚುನಾವಣೆ ಯಾವಾಗ ನಡೆದರೂ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಈ ಮಧ್ಯೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ , ಇದು ಮೇ 23ರಂದು ತಿಳಿಯುತ್ತದೆ ಎಂದಷ್ಟೇ ಉತ್ತರಿಸಿದರು.
ತಮಿಳುನಾಡು ಹಾಲಿ ವಿಧಾನಸಭೆಯ ಅವಧಿ 2021ರವರೆಗಿದೆ. ಆದರೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಸ್ಥಿರತೆ ಮೇ 23ರಂದು ಹೊರಬೀಳುವ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶವನ್ನು ಆಧರಿಸಿದೆ.