ಮಾಜಿ ಸಿಎಂ, ರಾಜ್ಯಪಾಲ ಪುತ್ರನನ್ನು ಉಸಿರುಗಟ್ಟಿಸಿ ಹತ್ಯೆ
ಹೊಸದಿಲ್ಲಿ, ಎ.20: ಉತ್ತರಾಖಂಡದ ಮಾಜಿ ರಾಜ್ಯಪಾಲ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾಯಣ ಡಿ.ತಿವಾರಿ ಅವರ ಪುತ್ರ ರೋಹತ್ ಶೇಖರ್ ತಿವಾರಿ (39) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಆರಂಭಿಕ ಅಟಾಪ್ಸಿ ವರದಿಯಿಂದ ಬಹಿರಂಗವಾಗಿದೆ.
ಕಳೆದ ಮಂಗಳವಾರ ಸಂಜೆ ರೋಹಿತ್ ಅವರನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದರು. ಇದೀಗ ದಿಲ್ಲಿ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆಗಾಗಿ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ.
ಐವರು ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿ ರೋಹಿತ್ ಅವರ ಮರಣೋತ್ತರ ಪರೀಕ್ಷೆ ನಡೆಸಿತ್ತು. ಅವರ ಕತ್ತಿನ ಸುತ್ತ ಕೆಲ ಗಾಯದ ಗುರುತುಗಳು ಪತ್ತೆಯಾಗಿದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬೇಕು ಎಂದು ಎಐಐಎಂಎಸ್ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಅಂದಾಜಿಸಿದ್ದಾರೆ.
ಡಿಫೆನ್ಸ್ ಕಾಲನಿಯಲ್ಲಿರುವ ರೋಹಿತ್ ನಿವಾಸದಲ್ಲಿ ಕೆಲ ದಿಂಬುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಪೈಕಿ ಒಂದರಲ್ಲಿ ರಕ್ತದ ಕಲೆಗಳು ಕಂಡುಬಂದಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಸಂಪೂರ್ಣ ಅಟಾಪ್ಸಿ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ದೊರಕಲಿದೆ. ರೋಹಿತ್ ಅವರ ಕುಟುಂಬ ಸದಸ್ಯರನ್ನು ಪ್ರಶ್ನಿಸಲಾಗುತ್ತಿದ್ದು, ವಿಧಿವಿಜ್ಞಾನ ತಜ್ಞರು ಮತ್ತು ಪೊಲೀಸ್ ಅಧಿಕಾರಿಗಳ ತಂಡ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸೋಮವಾರ ಮತದಾನ ಮಾಡಿದ ಬಳಿಕ ರಾತ್ರಿ 11:30ರ ಸುಮಾರಿಗೆ ರೋಹಿತ್ ಮನೆಗೆ ವಾಪಸ್ಸಾಗಿದ್ದರು. ಸಾಕೇತದಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಮರುದಿನ ಸಂಜೆ 4:41ರ ವೇಳೆಗೆ ತುರ್ತು ಕರೆ ಆಗಮಿಸಿದಾಗ ಇವರ ಸಾವಿನ ವಿಚಾರ ಬೆಳಕಿಗೆ ಬಂದಿತ್ತು. ತಾಯಿ ಉಜ್ವಲಾ ತಿವಾರಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರೋಹಿತ್ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದೆ ಎಂದು ಕರೆಬಂದ ತಕ್ಷಣ ಆಸ್ಪತ್ರೆಯ ಆ್ಯಂಬುಲೆನ್ಸ್ನಲ್ಲಿ ರೋಹಿತ್ ಅವರನ್ನು ಕರೆ ತರಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದರು.