ಮುಖ್ಯ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಆಘಾತಕಾರಿ ವಿವರಗಳು
ನನ್ನ ಇಡೀ ಕುಟುಂಬವನ್ನು ಬಲಿಪಶು ಮಾಡಲಾಯಿತು: ಮಹಿಳೆಯ ಆರೋಪ
ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ಸುಪ್ರೀಂ ಕೋರ್ಟ್ನ ಮಾಜಿ ಕಿರಿಯ ಸಹಾಯಕಿ ಸುಪ್ರೀಂ ಕೋರ್ಟ್ನ 22 ನ್ಯಾಯಾಧೀಶರುಗಳಿಗೆ ಬರೆದ ಪತ್ರದಲ್ಲಿ ಬರೆದಿರುವ ವಿವರಗಳು…
ಜನವರಿ 11ರಂದು ತಾನು ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ತೆರಳಿದಾಗ ಪೊಲೀಸ್ ಅಧಿಕಾರಿಯೊಬ್ಬರು ಜತೆಗೆ ಆಗಮಿಸಿದ್ದರು. ಅಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ಪತ್ನಿ ತನ್ನನ್ನು ನೆಲದಲ್ಲಿ ಸಾಷ್ಟಾಂಗ ಪ್ರಣಾಮ ಮಾಡಿ ಅವರ ಪಾದಗಳಿಗೆ ಮೂಗನ್ನು ಒರೆಸಿ ಕ್ಷಮೆ ಕೋರಲು ಹೇಳಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ. ಈ ಕ್ಷಮೆಯನ್ನು ತಾನು ಯಾಕಾಗಿ ಕೋರಬೇಕು ಎಂದು ಅರಿಯದೆ ಆಕೆ ನೀಡಿದ ಅಣತಿಯಂತೆಯೇ ನಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ.
ಈ ರೀತಿ ಕ್ಷಮೆ ಕೋರಿರುವ ಹೊರತಾಗಿಯೂ, ಸುಪ್ರೀಂ ಕೋರ್ಟಿಗೆ ಅಕ್ಟೋಬರ್ 9ರಂದು ತಾತ್ಕಾಲಿಕ ಜೂನಿಯರ್ ಕೋರ್ಟ್ ಅಟೆಂಡೆಂಟ್ ಆಗಿ ಮುಖ್ಯ ನ್ಯಾಯಮೂರ್ತಿಗಳ ವಿವೇಚನಾ ಕೋಟಾದಡಿ ನೇಮಕಗೊಂಡಿದ್ದ ತನ್ನ ಅಂಗವಿಕಲ ಮೈದುನನಿಗೆ ಯಾವುದೇ ಕಾರಣ ನೀಡದೆ ಉದ್ಯೋಗದಿಂದ ಕೈಬಿಡಲಾದ ಟರ್ಮಿನೇಶನ್ ಪತ್ರವನ್ನು ಜನವರಿ 14ರಂದು ನೀಡಲಾಗಿತ್ತೆಂದು ಆಕೆ ಆರೋಪಿಸಿದ್ದಾಳೆ.
ಮಾರ್ಚ್ 9ರಂದು ಮಾಜಿ ಕಿರಿಯ ಕೋರ್ಟ್ ಸಹಾಯಕಿ ಮತ್ತಾಕೆಯ ಪತಿ ರಾಜಸ್ಥಾನದ ತಮ್ಮ ಗ್ರಾಮದಲ್ಲಿದ್ದಾಗ ಅಲ್ಲಿಗೆ ಆಗಮಿಸಿದ ದಿಲ್ಲಿ ಪೊಲೀಸರ ತಂಡ ಆಕೆಯ ವಿರುದ್ಧ ವಂಚನೆ ಪ್ರಕರಣ ಕುರಿತಂತೆ ವಿಚಾರಣೆ ನಡೆಸಲು ಅವರನ್ನು ಮರಳಿ ಕರೆದುಕೊಂಡು ಹೋಗುವುದಾಗಿ ತಿಳಿಸಿತ್ತು. ಆಕೆ ದೂರುದಾರನಿಗೆ 2017ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ರೂ.50,000 ಪಡೆದು ನಂತರ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂಬ ಆರೋಪ ಹೊರಿಸಲಾಗಿತ್ತು.
ಮರುದಿನ ಆಕೆ ಮತ್ತಾಕೆಯ ಪತಿಯನ್ನು ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಆಕೆಯ ಮೈದುನ, ಆತನ ಪತ್ನಿ ಮತ್ತೊಬ್ಬ ಪುರುಷ ಸಂಬಂಧಿ ಜತೆ ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಅಫಿದವಿತ್ ತಿಳಿಸಿದೆ. ಅಲ್ಲಿ ತಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿತ್ತು, ಕೈಕಾಲುಗಳಿಗೆ ಕೋಳ ತೊಡಿಸಲಾಗಿತ್ತು ಹಾಗೂ 24 ಗಂಟೆಗಳ ಕಾಲ ನೀರು ಮತ್ತು ಆಹಾರ ನಿರಾಕರಿಸಲಾಗಿತ್ತು ಎಂದು ಅಫಿದವಿತ್ ನಲ್ಲಿ ಆರೋಪಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ಕೈಕೋಳದಲ್ಲಿ ಮಹಿಳೆಯ ಪತಿ ಕಾಣಿಸುವ ವೀಡಿಯೋ ದೃಶ್ಯಾವಳಿಯನ್ನೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳಿಗೆ ಅಫಿದವಿತ್ ಜತೆಗೆ ಕಳುಹಿಸಿಕೊಡಲಾಗಿದೆ.
ಕೃಪೆ: scroll.in