ಬೆಂಕಿಯ ಮಳೆ ಸುರಿದು ಉರಿಸಿ ಕೊಲ್ಲಲುಬಾರದೆ?
ಬರ ಕುರಿತ ನಿರ್ವಚನೆ
ನೆಲ್ಲುಕುಂಟೆ ವೆಂಕಟೇಶ್
ಭಾಗ-1
ಬೆಂಗಳೂರಿಗೆ ತೀರಾ ಹತ್ತಿರದ ತೆಂಗು ಬೆಳೆಯುವ ಊರಿನಲ್ಲಿ ನಡೆದ ಘಟನೆಯಿದು. ಎಂಟೆಕರೆ ತೋಟವಿದ್ದ ಇಬ್ಬರು ಬುದ್ಧಿವಂತ ಮಕ್ಕಳ ಪುಟ್ಟದಾದ ಮತ್ತು ಖುಷಿ ನೆಲೆಸಿದ್ದ ಸಂಸಾರ. ಹೊಲ ಮನೆಯ ಕೆಲಸಗಳಿಗೆ ಆಳುಮಗನದೊಂದು ಸಂಸಾರವೂ ನೆಲೆಸಿತ್ತು. ಊರೊಟ್ಟಿನ ಕೆಲಸಗಳಿಗೆ ಎಲ್ಲರಿಗಿಂಥ ಹೆಚ್ಚು ದೇಣಿಗೆ ಕೊಡುತ್ತಿದ್ದ ಕುಟುಂಬ ಇದು. ಐದಾರು ಸೀಮೆ ಹಸುಗಳು ನಿರಂತರ ಹಾಲು ಕರೆಯುತ್ತಿದ್ದುದರಿಂದ ಹಣವೆಂದೂ ಸಮಸ್ಯೆ ಆಗಿರಲಿಲ್ಲ. ಇಂತಹ ಕುಟುಂಬಕ್ಕೆ, ಕಳೆದ ಏಳೆಂಟು ವರುಷಗಳಿಂದೀಚೆಗೆ ಬಿದ್ದ ನಿರಂತರ ಬರ ಬದುಕನ್ನು ಚಿಂದಿ ಮಾಡಿತು. ಮಕ್ಕಳಿಬ್ಬರೂ ಇಂಜಿನಿಯರಿಂಗ್ ಓದುತ್ತಿದ್ದರು. ಬರದ ಸುಡು ಸುಡುವ ದಾವಾನಲಕ್ಕೆ ಭೂಮಿ ಧೂಳಾಗಿ ಅಡಿಕೆ ತೊಡೆ ಸತ್ತು ಬಿದ್ದರೆ, ತೆಂಗು ಸುಳಿ ಉದುರಿ ಹೋದವು. ಕೂಡಿಟ್ಟ ಹಣ ಬೋರ್‌ವೆಲ್ ಕೊರೆಯಲು ಖರ್ಚಾಯಿತು. ಆದರೂ ನೀರ ಪಸೆ ಕಾಣಲಿಲ್ಲ. ಬರೀ ಧೂಳೇ ಧೂಳು. ಕೊನೆಗೆ ಮೇವು ಹೊಂದಿಸಲಾರದೆ ಹಸುಗಳನ್ನೂ ಮಾರಿಕೊಂಡಾಯ್ತು. ಮನೆ ಖರ್ಚಿಗೆ ಹೊಲದ ಬದುಗಳಲ್ಲಿದ್ದ ಹಲಸು, ಹೊಂಗೆ, ಮಾವು, ಬೇವು , ಅತ್ತಿ ಮುಂತಾದ ಮರಗಳೆಲ್ಲ ಸಾಮಿಲ್ಲು ಸೇರಿದವು. ಹಕ್ಕಿ ಪಕ್ಷಿಗಳಿಂದ ನಲಿಯುತ್ತಿದ್ದ ತೋಟ ಎಂಬ ಜಾಗವೀಗ ಸುಟ್ಟು ಉದುರಿಬಿದ್ದ ಸ್ಮಶಾನ ಭೂಮಿ. ಅದರ ಮಧ್ಯದಲ್ಲಿದ್ದ ಮನೆ ಮಾತ್ರ ಸಿಡಿಲಾಘಾತಕ್ಕೆ ಸಿಕ್ಕಿ ಕೊನೆ ಉಸಿರೆಳೆಯುತ್ತಿರುವ ಆನೆಯಂತೆ ಇಷ್ಟಿಷ್ಟೇ ಹೊಗೆ ಉಗುಳುತ್ತಾ ನಿಂತುಕೊಂಡಿತು. ಇದಿಷ್ಟೇ ಆಗಿದ್ದರೆ ಇದು ಚರಿತ್ರೆಯ ಕ್ರೌರ್ಯದ ನಡೆಯೊಳಗೊಂದು ಅಧ್ಯಾಯವೆಂದು ಭಾವಿಸಿ ಸುಮ್ಮನಿದ್ದು ಬಿಡಬಹುದಿತ್ತು.
ಮಕ್ಕಳ ಓದು ನಿಲ್ಲಿಸಬಾರದೆಂದು ಮನೆಯೊಡತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮನೆಯಾಳಿನ ಮಗನಿಂದ ಸಾಲ ಪ