ಬಾಬರಿ ಮಸೀದಿ ಕೆಡವಲು ನಾನೂ ಇದ್ದೆ, ಅದರ ಬಗ್ಗೆ ಹೆಮ್ಮೆಯಿದೆ: ಪ್ರಜ್ಞಾ ಠಾಕೂರ್ ವಿವಾದಾತ್ಮಕ ಹೇಳಿಕೆ
ಭೋಪಾಲ್, ಎ. 21: ನಿಷ್ಠಾವಂತ ಪೊಲೀಸ್ ಅಧಿಕಾರಿ, ಹುತಾತ್ಮ ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿರುವ ಪ್ರಜ್ಞಾ ಠಾಕೂರ್ ಇದೀಗ "ಬಾಬರಿ ಮಸೀದಿಯ ತುದಿಗೆ ಏರಿ ಮಸೀದಿ ಕೆಡವಲು ನಾನೂ ನೆರವಾಗಿದ್ದೆ" ಎನ್ನುವ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಕ್ಷಣ ಇದಕ್ಕೆ ಸ್ಪಂದಿಸಿದ ಚುನಾವಣಾ ಆಯೋಗ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಒಂದೇ ದಿನ ಎರಡನೇ ನೋಟಿಸ್ ಜಾರಿ ಮಾಡಿದೆ. ಮಧ್ಯಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ವಿ.ಎಲ್. ಕಾಂತಾ ರಾವ್ ಎಲ್ಲ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ನಿರ್ದೇಶನ ಹೊರಡಿಸಿ, ಪದೇ ಪದೇ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದು ಮತ್ತು ನಿಂದನಾತ್ಮಕ, ಪ್ರಚೋದನಾಕಾರಿ ಹೇಳಿಕೆ ನೀಡಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಾಬರಿ ಮಸೀದಿ ವಿವಾದವನ್ನು ಮತ್ತೆ ರಾಜಕೀಯಕ್ಕೆ ಎಳೆದು ತಂದಿರುವ ಪ್ರಜ್ಞಾ ಶನಿವಾರ ಭೋಪಾಲ್‌ನಲ್ಲಿ ಪ್ರಚಾರ ಸಂದರ್ಭದಲ್ಲಿ ಟಿವಿ ಚಾನಲ್‌ಗೆ ನೀಡಿದ ಹೇಳಿಕೆಯಲ್ಲಿ "ನಾವು ಖಂಡಿತಾ ರಾಮಮಂದಿರ ಕಟ್ಟುತ್ತೇವೆ. ಭವ್ಯವಾದ ಮಂದಿರ ನಿರ್ಮಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಕಾಲಮಿತಿ ಇದೆಯೇ ಎಂದು ಪ್ರಶ್ನಿಸಿದಾಗ, "ನಾವು ಮಂದಿರ ನಿರ್ಮಿಸುತ್ತೇವೆ. ಈಗಾಗಲೇ ನಾವು ಮಸೀದಿ ಕೆಡವಿದ್ದೇವೆ" ಎಂದು ಹೇಳಿದರು.
"ಮಸೀದಿ ಧ್ವಂಸಗೊಳಿಸಲು ನಾನು ಗೋಪುರದ ತುದಿಗೆ ಏರಿದ್ದೆ. ದೇವರು ಇದನ್ನು ಮಾಡುವ ಅಪೂರ್ವ ಅವಕಾಶ ನೀಡಿದ್ದಕ್ಕೆ ಮತ್ತು ಆ ಶಕ್ತಿ ನೀಡಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ಅದನ್ನು ಸಾಧಿಸಿದೆ. ದೇಶದ ಕಳಂಕವನ್ನು ಅಳಿಸಿ ಹಾಕಿದೆ. ಇದೀಗ ನಾವು ಅಲ್ಲಿ ಭವ್ಯವಾದ ಮಂದಿರ ನಿರ್ಮಿಸುತ್ತೇವೆ" ಎಂದು ಹೇಳಿದರು.