varthabharthi


Social Media

ನಾರಾಯಣ ಗುರುಗಳ ಫೋಟೋ ಇಟ್ಟಿರುವ ಬಿಜೆಪಿ ಅವರ ಸಿದ್ಧಾಂತ ಪಾಲಿಸುವುದೆ ?

ವಾರ್ತಾ ಭಾರತಿ : 21 Apr, 2019
ದಿನೇಶ್ ಅಮೀನ್ ಮಟ್ಟು

ಕಲ್ಬುರ್ಗಿಯಲ್ಲಿ ಭಾರತೀಯ ಜನತಾ ಪಕ್ಷ, ಈಡಿಗ ಸಮಾಜದವರ ಸಭೆ ನಡೆಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕರೆ ನೀಡಿದ ಸುದ್ದಿಯನ್ನು ಓದಿದೆ. ಎಲ್ಲ ಜಾತಿ-ಧರ್ಮದವರಿಗೆ ಅವರ ಆಯ್ಕೆಯ ಪಕ್ಷದ ಜತೆ ಗುರುತಿಸಿಕೊಳ್ಳುವ ಮತ್ತು ಅದನ್ನು ಬೆಂಬಲಿಸುವ ಹಕ್ಕು ಇದೆ. ಆದರೆ ಅಲ್ಲಿ ನಾರಾಯಣ ಗುರುಗಳ ಭಾವಚಿತ್ರ ಇದ್ದುದನ್ನು ನೋಡಿ ಆಶ್ಚರ್ಯವಾಯಿತು.

ರಾಜಕೀಯ ಸಮಾವೇಶಗಳಲ್ಲಿ ನಾರಾಯಣ ಗುರುಗಳ ಫೋಟೊ ನಾನು ಮೊದಲು ನೋಡಿದ್ದು, 15 ವರ್ಷಗಳ ಹಿಂದೆ ಉತ್ತರಪ್ರದೇಶದ ಬಿಎಸ್ ಪಿ ಸಮಾವೇಶಗಳಲ್ಲಿ. ಅದು ಕಾನ್ಸಿರಾಮ್ ಎಂಬ ನಿಜ ಚಾಣಕ್ಯನ ಮೆದುಳು. ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಎಸ್ ಪಿಗೆ ನಾರಾಯಣ ಗುರುಗಳ ಫೋಟೊ ಇಟ್ಟುಕೊಳ್ಳುವ ಹಕ್ಕು ಹೆಚ್ಚಿದೆ. ಅವರನ್ನು ಬಿಟ್ಟರೆ ನಾರಾಯಣ ಗುರುಗಳ ಫೋಟೊ ಹಾಕುವ ಹಕ್ಕು ಇರುವುದು ಕೇರಳದ ಕಮ್ಯುನಿಸ್ಟರಿಗೆ. ಅಲ್ಲಿನ ಕಮ್ಯುನಿಸ್ಟ್ ಚಳುವಳಿಯೇ ನಾರಾಯಣ ಗುರು ಚಳುವಳಿಯ ಮುಂದುವರಿದ ಹಂತ. ಭಿನ್ನಾಭಿಪ್ರಾಯಕ್ಕೆ ಸ್ವಾಗತ. 

ನಾರಾಯಣ ಗುರುಗಳು ಒಬ್ಬ ವ್ಯಕ್ತಿ ಅಲ್ಲ, ಅವರೊಂದು ಸಿದ್ಧಾಂತ. ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ವ್ಯಕ್ತಿಗೆ ಗೌರವ ಸಲ್ಲಿಸುವ ನೈತಿಕ ಹಕ್ಕು ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಬಿಜೆಪಿ ಮುಖ್ಯವಾಗಿ ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್, ನಾರಾಯಣ ಗುರುಗಳ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತದೆಯೇ ಎನ್ನುವುದು ಪ್ರಶ್ನೆ. 

‘’ನಿಮಗೆ ದೇವರನ್ನು ಪೂಜಿಸಲು ಅವಕಾಶ ಇಲ್ಲ ಎಂದಾದರೆ ದೇವರನ್ನೇ ನಿಮ್ಮ ಬಳಿಗೆ ತರುತ್ತೇನೆ’’ ಎಂದು ಹೇಳಿ 165ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕೇರಳಾದ್ಯಂತ ಸ್ಥಾಪಿಸಿ ದೇವಸ್ಥಾನ ಚಳುವಳಿಯನ್ನೇ ಸಾಮಾಜಿಕ ಸುಧಾರಣಾ ಚಳುವಳಿಯನ್ನಾಗಿ ಪರಿವರ್ತಿಸಿ ಯಶಸ್ಸು ಕಂಡವರು ನಾರಾಯಣ ಗುರುಗಳು.

‘’ದೇಹವೇ ದೇಗುಲ..’’ ಎಂದ ಬಸವಣ್ಣ, ‘’ದೇವರಿಲ್ಲದ ಜಾಗವೇ ಇಲ್ಲವಾದ ಕಾರಣ ಯಾರೂ ಇಲ್ಲದ ಸ್ಥಳದಲ್ಲಿ ಬಾಳೆಹಣ್ಣು ಹೇಗೆ ತಿನ್ನಲಿ ? ಎಂಬ ಸರಳ ಪ್ರಶ್ನೆಯಲ್ಲಿ, ದೇವರು-ದೇವಸ್ಥಾನದ ಕಲ್ಪನೆಯನ್ನು ಬಿಚ್ಚಿಟ್ಟ ಕನಕದಾಸರ ಚಿಂತನೆಗಳ ಜಾಡಿನಲ್ಲಿಯೇ ನಾರಾಯಣ ಗುರುಗಳ ಚಿಂತನೆ ಇದೆ.

‘’ ರಾಮ ಹುಟ್ಟಿದ ಜಾಗದಲ್ಲಿಯೇ ಮಂದಿರ ಕಟ್ಟುವೆವು’’ ಎಂದು ಮಸೀದಿ ಒಡೆದು ಅದರ ಮೂಲಕ ದೇಶ ಒಡೆಯಲು ಹೊರಟ ಬಿಜೆಪಿ, ನಾರಾಯಣ ಗುರುಗಳ ದೇವಾಲಯದ ಅಭಿಪ್ರಾಯವನ್ನು ಒಪ್ಪುತ್ತಾ ?

ಹಿಂದೂಗಳಲ್ಲಿರುವ ಸರ್ವಜಾತಿಗಳಿಗೂ ಅರ್ಚಕನಾಗುವ ಹಕ್ಕು ಇದೆ ಎಂದು ಪ್ರತಿಪಾದಿಸಿ ಶೂದ್ರ ಅರ್ಚಕರ ತರಬೇತಿ ಕೇಂದ್ರವನ್ನೇ ಸ್ಥಾಪಿಸಿದವರು ನಾರಾಯಣ ಗುರುಗಳು. ಇಂದಿಗೂ ಗುರುಗಳಿಂದ ನಿರ್ಮಾಣಗೊಂಡ ದೇವಸ್ಥಾನಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಒಪ್ಪುತ್ತಾ? ಅವರು ನಿರ್ಮಿಸಲು ಹೊರಟಿರುವ ರಾಮಮಂದಿರದಲ್ಲಿ ಶೂದ್ರ ಅರ್ಚಕರಿಗೆ ಪೂಜೆಯ ಹಕ್ಕು ನೀಡುತ್ತಾರೆಯೇ?

ಕೇರಳದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಶೇಕಡಾ 23ರಷ್ಟು ಕ್ರಿಶ್ಚಿಯನರು, ಶೇಕಡಾ 16ರಷ್ಟು ಮುಸ್ಲಿಮರಿದ್ದರೂ ಇತ್ತೀಚಿನ ವರೆಗೆ ಅಲ್ಲಿ ಕೋಮುವಾದದ ವೈರಸ್ ಪ್ರವೇಶಿಸದಂತೆ ತಡೆದು ನಿಲ್ಲಿಸಿದ್ದು ಇದೇ ನಾರಾಯಣ ಗುರುಗಳು ಬೋದಿಸಿದ್ದ ಸಹಬಾಳ್ವೆಯ ಚಿಂತನೆ. ಬಿಜೆಪಿಯವರ ‘’ದೇಶ’’ದ ಕಲ್ಪನೆಯಲ್ಲಿ ಈ ಅಲ್ಪಸಂಖ್ಯಾತರಿಗೆ ಜಾಗ ಇದೆಯೇ?

ನಾರಾಯಣ ಗುರುಗಳನ್ನು, ಈಳವ/ಬಿಲ್ಲವರನ್ನು ಸೆಳೆಯಲು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ. ಕೇರಳದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾರಾಯಣ ಗುರುಗಳಿಂದ ಸ್ಥಾಪನೆಗೊಂಡಿದ್ದ ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಸಂಸ್ಥೆ (ಎಸ್ ಎನ್ ಡಿ ಪಿ)ಯನ್ನು ಹೈಜಾಕ್ ಮಾಡಲು ಹೊರಟ ಬಿಜೆಪಿ ವಿಫಲವಾಗಿತ್ತು. ಎಸ್ ಎನ್ ಡಿಪಿ’’ ಭಾರತಧರ್ಮ ಜನಸೇನಾ ಎಂಬ ಪಕ್ಷ ಸ್ಥಾಪಿಸಿ ಅದರ ಮೂಲಕ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ವೇಲಪ್ಪಲ್ಲಿ ನಟೇಶ್ ಈಗ ಹೊರಬಂದಿದ್ದಾರೆ.

ಕರ್ನಾಟಕದಲ್ಲಿಯೂ ಬಿಜೆಪಿ ಎಸ್.ಬಂಗಾರಪ್ಪನವರನ್ನು ಬಳಸಿಕೊಂಡು ಬಿಸಾಕಿದ್ದು ಕಲಿಯಬೇಕೆನ್ನುವವರು ತಿಳಿದುಕೊಳ್ಳಬೇಕಾದ ಹಳೆಯ ಪಾಠ. ಈ ಪಾಠದ ಮುಂದುವರಿದ ಭಾಗವನ್ನು ಕರಾವಳಿ ಜಿಲ್ಲೆಗಳಲ್ಲಿ ಪೋಲಿಸ್ ಕೇಸ್ ಹಾಕಿಸಿಕೊಂಡು, ಜೈಲು ಅನ್ನ ತಿನ್ನುತ್ತಾ ಬದುಕು ಹಾಳು ಮಾಡಿಕೊಂಡ ಬಿಲ್ಲವ ಯುವಕರಿಂದ ಕಲಿಯಬೇಕು. ಆರ್ ಎಸ್ ಎಸ್ ಮತ್ತು ನಾರಾಯಣ ಗುರುಗಳ ಸಿದ್ಧಾಂತ ಪರಸ್ಪರ ವಿರುದ್ಧವಾಗಿರುವಂತಹದ್ದು. ಅವೆರಡೂ ಒಂದಾಗುವ ದೂರ, ಬಹುದೂರದ ಸಾಧ್ಯತೆಗಳೂ ಕೂಡಾ ಇಲ್ಲ.

‘ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ದಾರಿತೋರಿಸಬಲ್ಲ ಅನೇಕ ಯಶಸ್ವಿ ಚಿಂತನೆಗಳ ಮಾದರಿಗಳು ನಮ್ಮ ಮುಂದಿವೆ. ಇವರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ರಾಮಮನೋಹರ ಲೋಹಿಯಾ ಚಿಂತನೆಯ ಮಾದರಿಗಳ ಬಗ್ಗೆ ವಿಸ್ತೃತವಾದ ಚರ್ಚೆ ಕರ್ನಾಟಕದಲ್ಲಿ ನಡೆದಿವೆ. 

ರಾಜ್ಯದಲ್ಲಿ ಹೆಚ್ಚು ಚರ್ಚೆಗೊಳಗಾಗದ ಇನ್ನೊಂದು ಮಾದರಿ ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳ ಚಿಂತನೆಯದ್ದು. ಅಂತಹ ಚರ್ಚೆ ನಡೆಯದಿರುವ ಕಾರಣದಿಂದಾಗಿಯೇ ಇಂದು ನಾರಾಯಣ ಗುರುಗಳ ಚಿಂತನೆಗೆ ವಿರುದ್ಧ ಇದ್ದವರು ಅವರನ್ನು ಹೈಜಾಕ್ ಮಾಡಿ ರಾಜಕಾರಣಕ್ಕೆ ದುರ್ಬಳಕೆ ಮಾಡುವಂತಾಗಿದೆ.

ತಾನು ಬದುಕಿದ್ದಷ್ಟು ದಿನವೂ ಸಾಮಾಜಿಕ ಶ್ರೇಣಿಯಲ್ಲಿ ಈಳವರಿಗಿಂತಲೂ ಕೆಳಗಿದ್ದ ಅಸ್ಪೃಶ್ಯ ಸಮುದಾಯದ ಪುಲಯ ಸಮುದಾಯಕ್ಕೆ ಸೇರಿದವನಿಂದ ಅಡುಗೆ ಮಾಡಿಸಿ ಉಣ್ಣುತ್ತಿದ್ದ ನಾರಾಯಣ ಗುರುಗಳು ಬದುಕಿದ್ದರೆ ಯಾರನ್ನು ಬೆಂಬಲಿಸುತ್ತಿದ್ದರು ಎನ್ನುವ ಬಗ್ಗೆ ನನಗಂತೂ ಅನುಮಾನ ಇಲ್ಲ. ಗುರುಗಳು ಖಂಡಿತ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಶೀರ್ವಾದ ಮಾಡುತ್ತಿದ್ದರು.

ಕೃಪೆ: ದಿನೇಶ್ ಅಮೀನ್ ಮಟ್ಟು ಅವರ ಫೇಸ್ ಬುಕ್ ಪೋಸ್ಟ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)