ಪ್ರೊ.ಚಂಪಾರಿಗೆ 2018ನೇ ಸಾಲಿನ 'ಬಸವಶ್ರೀ ಪ್ರಶಸ್ತಿ'
ಚಿತ್ರದುರ್ಗ, ಎ.22: ಇಲ್ಲಿನ ಮುರುಘಾ ಮಠದ ವತಿಯಿಂದ ನೀಡಲಾಗುವ 2018ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಹಿರಿಯ ಸಾಹಿತಿ, ದಲಿತ-ಬಂಡಾಯ ಧ್ವನಿತ ಪ್ರಗತಿಪರ ಚಿಂತಕ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ(ಚಂಪಾ) ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಸಾಹಿತ್ಯ ಕ್ಷೇತ್ರಕ್ಕೆ ಚಂಪಾ ನೀಡಿರುವ ಕೊಡುಗೆ ಹಾಗೂ ಕನ್ನಡ ಭಾಷೆಯನ್ನು ಕಟ್ಟುವಲ್ಲಿ ಅವರ ಕಾರ್ಯವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಮೇ 7ರಂದು ಪೂರ್ವಾಹ್ನ 11ಗಂಟೆಗೆ ಚಿತ್ರದುರ್ಗ ಶ್ರೀ ಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ನಡೆಯುವ ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ದಿವ್ಯ ಸಾನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು. ಬೆಂಗಳೂರು ಐಪಿಸಿ ಚರ್ಚ್‌ನ ಮಾಜಿ ಅಧ್ಯಕ್ಷ ರೆವರೆಂಡ್ ಟಿ.ಡಿ.ಥಾಮಸ್ ಮತ್ತು ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜುನೈದ್ ಸಖಾಫಿ ಎಂ.ಎಸ್.ಎಂ. ಹಾಗೂ ತುಮಕೂರಿನ ಉದ್ಯಮಿ ವೆಂಕಟೇಶ್ ಲಾಡ್ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ತತ್ತ್ವಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರಿಗೆ ಹಾಗೂ ಶರಣರ ಆದರ್ಶಗಳನ್ನಾದರಿಸಿ ಋಜುಮಾರ್ಗದಲ್ಲಿ ನಡೆಯುವ ಮಹನೀಯರಿಗೆ ಪ್ರದಾನ ಮಾಡುವ ಸಲುವಾಗಿ ಈ ಪ್ರಶಸ್ತಿಯನ್ನು ಶ್ರೀ ಮುರುಘಾಮಠ ಸ್ಥಾಪಿಸಿದೆ. 2017ರಲ್ಲಿ ನಿಸರ್ಗ ಪ್ರೇಮಿ ಕಾಮೇಗೌಡರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಈ.ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪಟೇಲ್ ಶಿವಕುಮಾರ್, ಡಿ.ಎಸ್. ಮಲ್ಲಿಕಾರ್ಜುನ್, ದಾದಾ ಪೀರ್, ವಕೀಲರಾದ ಉಮೇಶ್, ದಸಂಸ ಮಹಾಲಿಂಗಪ್ಪ, ಪೆಲ್ವಾನ್ ತಿಪ್ಪೇಸ್ವಾಮಿ ಮುಂತಾದವರಿದ್ದರು.
ಪ್ರೊ.ಚಂದ್ರಶೇಖರ ಪಾಟೀಲ
ಸಾಹಿತ್ಯ ಲೋಕದಲ್ಲಿ ‘ಚಂಪಾ’ ಎಂದೇ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಚಂಪಾ ಅವರು 1930ರ ಜೂನ್ 18ರಂದು ಬಸವರಾಜ ಹಿರೇಗೌಡರು ಮತ್ತು ಶ್ರಿಮುರಿಗವ್ವ ದಂಪತಿಯ ಪುತ್ರರಾಗಿ ಜನಿಸಿದರು. ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಧಾರವಾಡದಲ್ಲಿ ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ಪಡೆದು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿ ಡಾಕ್ಟರೇಟ್ ಪದವಿಯೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಕಾಲಿರಿಸಿ ಪ್ರಖರ ವೈಜ್ಞಾನಿಕ ಚಿಂತಕರಾಗಿ ಎಲ್ಲ ಜನವರ್ಗದಲ್ಲಿ ಚಿರಪರಿಚಿತರಾದರು. ಹಾಸ್ಯ, ವಿಡಂಬನೆ ಮತ್ತು ನೇರ-ನಿಷ್ಠುರ ನುಡಿ ನಡೆಗೆ ಮಾದರಿಯಾಗಿ ಕಾವ್ಯ, ನಾಟಕ, ವಿಮರ್ಶಾ ವಲಯಗಳಲ್ಲಿ ಸ್ವತಃ ಕೃಷಿ ಮಾಡುತ್ತಲೇ 1934ರಲ್ಲಿ ‘ಸಂಕ್ರಮಣ’ ಮಾಸಪತ್ರಿಕೆ ಆರಂಭಿಸಿ, ಇಂದಿನವರೆಗೂ ಸಾವಿರಾರು ಜನ ಉದಯೋನ್ಮುಖ ಸಾಹಿತಿಗಳಿಗೆ ಪ್ರೇರಣೆ ಮತ್ತು ಬರಹ ವೇದಿಕೆ ನೀಡಿದವರು.
ಧಾರವಾಡದಲ್ಲಿ ಆರಂಭಗೊಂಡ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಂದಿನಿಂದ ಆರಂಗೊಂಡ ಅವರ ಸಂಘಟನಾ ಯಾತ್ರೆ ಗೋಕಾಕ್ ಚಳವಳಿ, ನಾಟಕ ಸಂಘಗಳು, ಬಂಡಾಯ ಸಾಹಿತ್ಯ ಸಂಘಟನೆ ಮೊದಲಾದವುಗಳಲ್ಲಿ ಪ್ರವಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ(1996-99), ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿ (2004-08) ಕಾರ್ಯನಿರ್ವಹಿಸಿದ ಯಶಸ್ಸು ಇವರದಾಗಿದೆ. ಮೈಸೂರಿನಲ್ಲಿ ನಡೆದ 2017ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಗೊಂಡ ಇವರಿಗೆ ‘ಪಂಪ ಪ್ರಶಸ್ತಿ’ ಆದಿಯಾಗಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಎಲ್ಲ ವಲಯಗಳೊಳಗೆ ಜಡ್ಡುಗಟ್ಟಿ ಶೋಷಣೆಗೆ ಮೂಲವಾದ ದಮನಕಾರಿ ಸಂಸ್ಕೃತಿಯ ವಿರುದ್ಧ ನಿರಂತರ ಸಾಹಿತ್ಯ ರಚನೆ ಮತ್ತು ಹೋರಾಟದಲ್ಲಿ ಭಾಗಿಯಾದ ಇವರ ಒಟ್ಟು ಜೀವಿತಾವಧಿಯ ಕಾರ್ಯಚಟುವಟಿಕೆಗಳು 12ನೇ ಶತಮಾನದ ಬಸವಾದಿ ಶರಣರ ಚಳವಳಿಯ ಆಶಯಗಳಿಗೆ ಅನುಗುಣವಾಗಿರುವುದನ್ನು ಗುರುತಿಸಿ, ಗೌರವಿಸಿ, ಶ್ರೀ ಮುರುಘಾಮಠ ತನ್ನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.