ಎ.25ರಿಂದ ಶ್ರೀನಿವಾಸ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ತಾಯಂದಿರ ಮಾಸ
ಮಂಗಳೂರು, ಎ.23: ಸುರತ್ಕಲ್ ಸಮೀಪದ ಮುಕ್ಕಾದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅ್ಯಂಡ್ ರಿಸರ್ಚ್ ಸೆಂಟರ್ ತನ್ನ ವೈದ್ಯಕೀಯ ಕಾಲೇಜು ಆಸ್ಪತ್ರೆ ಕ್ಯಾಂಪಸ್ನಲ್ಲಿ ಎ.25ರಿಂದ ಮೇ 30ರ ತನಕ (ರವಿವಾರ ಹೊರತುಪಡಿಸಿ) ತಾಯಂದಿರ ಮಾಸವನ್ನು ಆಚರಿಸುತ್ತಿದೆ.
ಮೇ 12ರಂದು ವಿಶ್ವದಾದ್ಯಂತ ನಡೆಯುವ ಅಂತಾರಾಷ್ಟ್ರೀಯ ತಾಯಂದಿರ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಮೇ 5ರಂದು ಆರಂಭವಾಗುವ ರಮಝಾನ್ ಪವಿತ್ರ ತಿಂಗಳಿನ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯರು ಶಿಬಿರದ ಪ್ರಯೋಜನ ಪಡೆಯಲು ಅನುಕೂಲವಾಗುವಂತೆ ಎ.25ರಿಂದ ಶಿಬಿರ ಆರಂಭವಾಗುತ್ತಿದೆ.
ಈ ಅವಧಿಯಲ್ಲಿ ಆಸ್ಪತ್ರೆಯು ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದಲ್ಲಿ ಮಹಿಳೆಯರಿಗೆ ಮತ್ತು ಹೊರರೋಗಿಗಳಿಗೆ ಉಚಿತವಾಗಿ ಸಮಾಲೋಚನೆ, ಸಾಮಾನ್ಯ ಆರೋಗ್ಯ ಪರೀಕ್ಷೆಯನ್ನು ಒದಗಿಸಲಿದೆ. ಅಗತ್ಯವಿದ್ದಲ್ಲಿ ನಡೆಯುವ ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯಿತಿ ನೀಡಲಾಗುವುದು.
ಗರ್ಭ ಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಪ್ಯಾಪ್ ಸ್ಮೀಯರ್, ಸೊನೋಮ್ಯಮೋಗ್ರಾಮ್ ಪರೀಕ್ಷೆ ಯನ್ನು ಮಹಿಳೆಯರು ಪಡೆಯಬಹುದು. ಪರೀಕ್ಷೆಗಳನ್ನು ಸ್ತ್ರೀರೋಗ್ತ್ರ ಮತ್ತು ಪ್ರಸೂತಿ ತಜ್ಞರು, ಉಚಿತ ಸಮಾಲೋಚನೆಯೊಂದಿಗೆ ನೀಡಲಾಗುವುದು.
ಮಹಿಳೆಯರಲ್ಲಿ ಋತುಚಕ್ರದ ಅಸ್ವಸ್ಥತೆಗಳು, ಸ್ತನ ಕ್ಯಾನ್ಸರ್ ಮತ್ತು ಗರ್ಭದ ಕ್ಯಾನ್ಸರ್ ಅಪಾಯದ ಕುರಿತಂತೆ ಆರೋಗ್ಯ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಆಸಕ್ತಿ ಇರುವವರು ಆಸ್ಪತ್ರೆಯ ಹೊರರೋಗಿ ಇಲಾಖೆಯನ್ನು ಭೇಟಿ ಮಾಡುವ ಮೂಲಕ ಸೌಲಭ್ಯವನ್ನು ಪಡೆಯಬಹುದು. ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ವಾರದ ಏಳು ದಿನ ಈ ಸೌಲಭ್ಯಗಳನ್ನು ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.