‘ಅಚ್ಛೇದಿನ್ ಕಿತ್ತಳೆ’ ಇದೆ ಬೇಕಾ...!!!
ಬುಡಬುಡಿಕೆ
ಬಿರುಬೇಸಿಗೆಯಲ್ಲಿ ಚುನಾವಣಾ ತಿರುಗಾಟದಿಂದ ಸುಸ್ತಾದ ಪತ್ರಕರ್ತ ಎಂಜಲು ಕಾಸಿ ದಾರಿಯಲ್ಲೇ ಮಾವು ಮಾರುವ ಮುದುಕನ ಬಳಿಗೆ ಸಾಗಿದ. ಮನೆಗೆ ಹೋಗುವಾಗ ಒಂದು ಕೆ.ಜಿ. ಮಾವುಗಳನ್ನು ತೆಗೆದುಕೊಂಡರೆ ಹೇಗೆ? ಎನ್ನುವುದು ಅವನ ಯೋಚನೆ.
‘‘ತಾತಾ....ಮಾವಿಗೆಷ್ಟು....’’ ಕಾಸಿ ಕೇಳಿದ.
ತಾತಾ ದರ ಹೇಳಿದ್ದೇ ಕಾಸಿ ಬೆಚ್ಚಿ ಬಿದ್ದ ‘‘ತಾತಾ...ಬುಟ್ಟಿಗೆ ಕೇಳಿದ್ದಲ್ಲ...ಕೆಜಿಗೆ ಕೇಳಿದ್ದು’’ ಮತ್ತೊಮ್ಮೆ ಸ್ಪಷ್ಟಪಡಿಸಿದ.
‘‘ಗೊತ್ತಾಯಿತು....ಆದರೆ ಇದು ವಿಶೇಷ ಮಾವಿನ ಹಣ್ಣು....’’ ತಾತ ಹೇಳಿದ.
‘‘ವಿಶೇಷ ಅಂದರೆ...ಬಂಗಾರದಿಂದ ಮಾಡಿದ್ದ....?’’
‘‘ಬಂಗಾರದಿಂದ ಮಾಡಿದ್ರೆ ಕುತ್ತಿಗೆಗೆ ನೇತಾಕೋಬೇಕಾಗತ್ತೆ...ತಿನ್ನಕ್ಕಾಗತ್ತ?’’ ತಾತಾ ಉಲ್ಟಾ ಹೊಡೆದ.
‘‘ಸರಿ, ಯಾವ ಜಾತಿ ಮಾವಿನ ಹಣ್ಣು?’’ ಕಾಸಿ ಕೇಳಿದ.
‘‘ಇದು ‘ನ್ಯಾಶನಲಿಸಂ’ ಜಾತೀದು...ರಾಷ್ಟ್ರೀಯತೆಯ ಸಂಕೇತ ಈ ಮಾವಿನ ಹಣ್ಣು....’’ ತಾತಾ ಹೇಳಿದಾಗ ಕಾಸಿ ಮತ್ತೊಮ್ಮೆ ಬೆಚ್ಚಿ ಬಿದ್ದ.
‘‘ಮಾವಿನ ಹಣ್ಣಿನಲ್ಲೂ ರಾಷ್ಟ್ರೀಯತೆಯ?’’ ಕಾಸಿ ಕೇಳಿದ.
‘‘ಹೂಂ...ಅದಕ್ಕೆ ಇದು ತುಂಬಾ ದುಬಾರಿ....’’
‘‘ನ್ಯಾಶನಲಿಸಂ ಜಾತಿದ್ದೂ ಅಂದರೆ’’
‘‘ನೋಡ್ರೀ...ನರೇಂದ್ರ ಮೋದಿಯವರು ಸಣ್ಣದಿನಲ್ಲಿ ಹಣವಿಲ್ಲದೆ ಅಂಗಡಿಯಿಂದ ಮಾವಿನ ಹಣ್ಣು ತಿನ್ನೋಕಾಗಿಲ್ಲ ಎನ್ನೋದು ಗೊತ್ತಿದೆಯಾ?’’
‘‘ಗೊತ್ತಿಲ್ಲ....’’
‘‘ಅದೆಲ್ಲ ಗೊತ್ತಿಲ್ಲಾ ಅಂದ್ರೆ ಇಲ್ಯಾಕೆ ಇದ್ದೀಯ...ಹೋಗು, ಪಾಕಿಸ್ತಾನಕ್ಕೆ ಹೋಗು’’ ತಾತ ಗದರಿಸಿದ.
‘‘ಸರಿ ತಾತ ಹೇಳು....’’
‘‘ಆಗ ನರೇಂದ್ರ ಮೋದಿಯವರು ಒಂದು ಮಾವಿನ ತೋಪಿಗೆ ಹೋಗಿ ಅಲ್ಲಿ ಮಾವಿನ ಹಣ್ಣನ್ನು ಯಾವುದೇ ನೀರಿನಲ್ಲಿ ತೊಳೆಯದೆಯೇ ತಿನ್ತಾ ಇದ್ದರು....’’
‘‘ಹೂಂ ಅದಕ್ಕೆ.....’’
‘‘ಇದು ಆ ಮಾವಿನ ತೋಪಿನಲ್ಲಿ ಬೆಳೆದದ್ದು. ನಮ್ಮ ಮೋದಿಯವರು ತೊಳೆಯದೇ ತಿನ್ತಾ ಇದ್ದ ಮಾವು ಇದೇನೆ....’’ ತಾತ ಕೊನೆಗೂ ಸತ್ಯವನ್ನು ಬಹಿರಂಗ ಪಡಿಸಿದ.
‘‘ಇದು ಆ ಮಾವಿನ ತೋಪಿನಿಂದ ಬಂದಿರುವ ಹಣ್ಣು ಅಂತ ನಿನಗೆ ಹೇಗೆ ಗೊತ್ತು?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಆಗ ಆ ಮಾವಿನ ತೋಪನ್ನು ನೋಡಿಕೊಳ್ತಾ ಇದದ್ದೇ ನನ್ನ ತಾತ. ಅವರಿಂದ ನನ್ನ ತಂದೆಗೆ, ಅಲ್ಲಿಂದ ನನಗೆ ...ಹೀಗೆ ವರ್ಗಾವಣೆಯಾಗಿ ಬಂದ ಮಾವಿನ ಹಣ್ಣು ಇದು. ಇದೀಗ ಈ ಮೋದಿ ಮ್ಯಾಂಗೋ ತೋಪನ್ನು ನಾನು ನೋಡ್ಕೋತಾ ಇದ್ದೇನೆ....ಮೋದಿ ತಿಂದ ಮಾವಿನ ಹಣ್ಣು ಇದು...ಅದಕ್ಕೆ ದರ ಸ್ವಲ್ಪ ಜಾಸ್ತಿ’’
‘‘ಇದು ಸಿಹಿ ಇದೆಯಾ?’’ ಕಾಸಿ ಅನುಮಾನದಿಂದ ಕೇಳಿದ.
‘‘ಸಿಹಿ ಇಲ್ಲದೆ? ಬೇಕಾದರೆ ಮೋದಿಯವರನ್ನೇ ಕೇಳು....’’
‘‘ಮೋದಿಯವರು ಅಕ್ಷಯ್ ಕುಮಾರ್ ಅವರಿಗೆ ಸಿಕ್ಕಿದ್ದೇ ಕಷ್ಟದಲ್ಲಿ....ಇನ್ನು ನನಗೆಲ್ಲಿ ಸಿಗ್ತಾರೆ?’’ ಕಾಸಿ ಸಂಶಯ ವ್ಯಕ್ತಪಡಿಸಿದ.
‘‘ಹಾಗಾದ್ರೆ ಮೋದಿ ಭಕ್ತರಲ್ಲಿ ಕೇಳು....’’
‘‘ಮೋದಿ ಭಕ್ತರಲ್ಲೇ?’’
ಅಷ್ಟರಲ್ಲಿ ತಾತ ಜೋರು ದನಿಯಲ್ಲಿ ‘‘ಇದು ಮೋದಿ ಮಾವಿನ ಹಣ್ಣು....ಇದು ಸಿಹಿಯಿದೆಯೋ ಇಲ್ಲವೋ...’’ ಕೇಳಿದ.
ಅಲ್ಲೇ ಅಕ್ಕಪಕ್ಕದಲ್ಲಿದ್ದ ಪುಂಡು ಪೋಕರಿಗಳೆಲ್ಲ ‘‘ ಮೋದಿ....ಮೋದಿ....ಮೋದಿ...’’ ಎಂದು ಚೀರಾಡ ತೊಡಗಿದರು.
ಕಾಸಿಯ ತೊಡೆ ಸಂದಿಯಲ್ಲಿ ಸಣ್ಣಗೆ ನಡುಕ. ಇಲ್ಲಿಂದ ಜೋಪಾನ ಮನೆ ಸೇರಿದರೆ ಸಾಕು ಎನಿಸಿತು.
‘‘ಸರಿ...ನಾನು ಬರುವೆ. ಈಗ ಮಾವು ಬೇಡ....ಮುಂದಿನ ಬಾರಿ ತೆಗೆದುಕೊಳ್ಳುವೆ...’’ ಕಾಸಿ ಹೊರಡಲನುವಾದ.
‘‘ಚುನಾವಣೆಯ ಹೊತ್ತಿನಲ್ಲಷ್ಟೇ ಇದು ತಾಜಾ ಇರತ್ತೆ....ಮತ್ತೆ ತಗೊಂಡ್ರೆ ಪ್ರಯೋಜನ ಇಲ್ಲ....ತಗೊಳ್ಳಿ ಒಂದು...’’ ತಾತ ಹೇಳಿದ. ಧ್ವನಿಯಲ್ಲಿ ಆದೇಶವಿದ್ದಂತಿತ್ತು.
‘‘ತಾತಾ ಈಗ ಬೇಡ....ಇನ್ನೊಮ್ಮೆ....’’ ಕಾಸಿ ನುಣುಚಿಕೊಳ್ಳಲು ಹೊರಟ.
‘‘ಇನ್ನೊಮ್ಮೆ ಅಂದ್ರೆ....ಇದು ನ್ಯಾಶನಲಿಸ್ಟ್ ಮಾವಿನ ಹಣ್ಣು....ನೀವು ಬಿಟ್ಟು ಹೋದರೆ ದೇಶಕ್ಕೆ ಅವಮಾನ ಮಾಡಿದಂತೆ....’’ ತಾತ ಗದರಿದ.
‘‘ಹಾಗಲ್ಲ....ಮಾವು ನ್ಯಾಶನಲಿಸ್ಟ್ ಹೌದೋ ಅಲ್ಲವೋ....’’ ಏನೋ ಹೇಳಲು ಹೊರಟು ‘‘ಒಂದು ವೇಳೆ ಮಾವು ಹುಳಿ ಇದ್ದರೇ?’’ ಎಂದು ಕೇಳಿ ಬಿಟ್ಟ.
‘‘ರಾಷ್ಟ್ರೀಯತೆಯ ಸಂಕೇತವಾಗಿರುವ ಈ ಮಾವಿನ ಹಣ್ಣನ್ನು ಅನುಮಾನಿಸಲು ನಾಚಿಕೆಯಾಗುವುದಿಲ್ಲವೇ? ನೀನು ಈ ಮಾವಿಗೆ ಕೊಡುವ ಹಣ, ಪುಲ್ವಾಮದಲ್ಲಿ ಹುತಾತ್ಮರಾದ ಸೈನಿಕರಿಗೆ ಸಲ್ಲಿಸುವ ಶ್ರದ್ಧಾಂಜಲಿ.... ಗೊತ್ತಾ?’’
‘‘ಆದರೆ ನನಗೆ ಈಗ ಮಾವು ಬೇಡ....ನನಗೆ ಕಿತ್ತಳೆ ಬೇಕು....’’ ಕಾಸಿ ಅಳುಕುತ್ತಾ ಹೇಳಿದ.
‘‘ರಾಷ್ಟ್ರೀಯತೆಯ ಮಾವು ಎಂದು ಗೊತ್ತಾಗಿ ಬಿಟ್ಟು ಹೋಗುವುದು ದೇಶದ್ರೋಹದ ಕೆಲಸ....ಜನರು ಸುಮ್ಮನಿರುವುದಿಲ್ಲ....ಮತ್ತೇನಾದರೂ ಅವರೆಲ್ಲ ಸೇರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ ಅದಕ್ಕೆ ನಾನು ಜವಾಬ್ದಾರಿ ಅಲ್ಲ....’’ ತಾತ ಬೆದರಿಸಿದ.
ಕಾಸಿ ಕಂಗಾಲಾಗಿ ಕಿಸೆಯಿಂದ ನೂರು ರೂಪಾಯಿ ತೆಗೆದು ತಾತನ ಕೈಗಿಟ್ಟ. ತಾತ ದುರುಗುಡುತ್ತಲೇ ಒಂದು ಮಾವನ್ನು ಕೈಗೆ ಕೊಟ್ಟ. ಜೊತೆಗೆ ‘‘ಅಚ್ಛೇ ದಿನ್ ಕಿತ್ತಳೆ ಇದೆ ಬೇಕಾ?’’
ಕಾಸಿ ಆತನ ಮುಖವನ್ನೂ ನೋಡದೆ ಓಟಕ್ಕಿತ್ತ. ಮನೆಗೆ ಬಂದವನೇ ಕೈಯಲ್ಲಿದ್ದ ಮಾವನ್ನು ಮೂಸಿ ನೋಡಿದ. ‘ಪರಿಮಳವೂ ಇಲ್ಲ....ಮಣ್ಣೂ ಇಲ್ಲ....’’
ತೊಳೆಯದೇ ತಿನ್ನುವುದಾ, ಕತ್ತರಿಸಿ ತಿನ್ನುವುದಾ....ಯೋಚಿಸಿದ. ಒಳಗೆ ಹುಳ ಇದ್ದರೆ....ಎನ್ನುತ್ತಾ ....ತೊಳೆದು ಇನ್ನೇನು ಕತ್ತರಿಸಬೇಕು....ಮಾವನ್ನು ಯಾಕೋ ಒತ್ತಿ ನೋಡಿದ....ನೋಡಿದರೆ ಪ್ಲಾಸ್ಟಿಕ್ ಮಾವು....!
ನ್ಯಾಶನಲಿಸ್ಟ್ ಮಾವನ್ನು ರಸ್ತೆಗೆ ಒಗೆದವನೇ ‘ನೆಹರೂ’ರನ್ನು ನೆನೆದು ಮನೆಯ ಮಂಚದಲ್ಲಿ ಬಿದ್ದುಕೊಂಡ.