ಒತ್ತಡದಿಂದ ತಕ್ಷಣ ಪಾರಾಗಬೇಕೇ? ಹಾಗಿದ್ದರೆ ಈ ಕೆಲಸ ಮಾಡಿ
ಇಂದಿನ ದಿನಗಳಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಜೀವನಶೈಲಿಯು ಪ್ರತಿಯೊಬ್ಬ ವ್ಯಕ್ತಿಯನ್ನೂ ಒಂದಲ್ಲ ಒಂದು ಸಮಯದಲ್ಲಿ ಒತ್ತಡಕ್ಕೆ ಗುರಿಯಾಗಿಸುತ್ತದೆ. ಒತ್ತಡವು ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಆದರೆ ಕೆಲವು ಸರಳ ವ್ಯಾಯಾಮಗಳ ಮೂಲಕ ಒತ್ತಡವನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.
ವ್ಯಾಯಾಮವು ನಮ್ಮ ಶರೀರದ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮನ್ನು ಫಿಟ್ ಆಗಿರಿಸುತ್ತದೆ. ಶರೀರದ ಮಾತ್ರವಲ್ಲ,ನಮ್ಮ ಮಾನಸಿಕ ಆರೋಗ್ಯವನ್ನೂ ಅದು ಹೆಚ್ಚಿಸುತ್ತದೆ. ವ್ಯಾಯಾಮವು ನಮ್ಮ ಮನಸ್ಸು ಮತ್ತು ಶರೀರದ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ವ್ಯಾಯಾಮವನ್ನು ಮಾಡುವ ಮೂಲಕ ನಮ್ಮನ್ನು ಕಾಡುತ್ತಿರುವ ಒತ್ತಡದಿಂದ ನೈಸರ್ಗಿಕವಾಗಿ ಮುಕ್ತಿ ಪಡೆಯಬಹದು,ಅಲ್ಲದೆ ದಿನನಿತ್ಯ ವ್ಯಾಯಾಮವನ್ನು ಮಾಡಲು ಇದು ಇನ್ನೊಂದು ಕಾರಣವಾಗುತ್ತದೆ.
ವ್ಯಾಯಾಮಕ್ಕೂ ಒತ್ತಡಕ್ಕೂ ಇರುವ ನಂಟು
ಒತ್ತಡ ಹಾರ್ಮೋನ್‌ಗಳನ್ನು ಕಡಿಮೆ ಮಾಡಲು ಮತ್ತು ನಮಗೆ ಹಿತವಾದ ಅನುಭವವನ್ನು ನೀಡುವ ರಾಸಾಯನಿಕ ಎಂಡಾರ್ಫಿನ್ ಅನ್ನು ಹೆಚ್ಚಿಸಲು ವ್ಯಾಯಾಮವು ನೆರವಾಗುತ್ತದೆ. ವ್ಯಾಯಾಮವು ದಿನದ ಆರಂಭದಿಂದಲೇ ನಮ್ಮ ಮೂಡ್ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಮನಸ್ಸನ್ನು ಹದಗೆಡಿಸುವ ನಕಾರಾತ್ಮಕ ಚಿಂತನೆಗಳು ಮತ್ತು ಭಾವನೆಗಳನ್ನು ನಿವಾರಿಸಲು ವ್ಯಾಯಾಮವು ನೆರವಾಗುತ್ತದೆ. ನಾವು ಇತರರೊಂದಿಗೆ ಸೇರಿಕೊಂಡು ಅಥವಾ ಜಿಮ್‌ನಲ್ಲಿ ವ್ಯಾಯಾಮ ಮಾಡಿದರೆ ಅದು ನಾವು ಸಾಮಾಜಿಕವಾಗಿ ಬೆರೆಯಲು ನೆರವಾಗುತ್ತದೆ. ಇತರ ಆರೊಗ್ಯ ಸಮಸ್ಯೆಗಳನ್ನು ದೂರವಿಡುವ ವ್ಯಾಯಾಮವು ನಮ್ಮನ್ನು ಫಿಟ್ ಆಗಿಡುವ ಮೂಲಕ ನಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.
ವ್ಯಾಯಾಮದಿಂದ ಒತ್ತಡವನ್ನು ತಗ್ಗಿಸುವುದು ಹೇಗೆ?
►ಯೋಗ:ಯೋಗವು ಮನಸ್ಸು ಮತ್ತು ಶರೀರ ಎರಡಕ್ಕೂ ಲಾಭದಾಯಕವಾಗಿದೆ. ಶರೀರದ ಕ್ಷಮತೆಯನ್ನು ಹೆಚ್ಚಿಸುವ ಅದು ಏಕಾಗ್ರತೆಯನ್ನು ಉತ್ತಮಗೊಳಿಸುತ್ತದೆ ಹಾಗೂ ನಮ್ಮ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುತ್ತದೆ. ಯೋಗವನ್ನು ನಿಯಮಿತವಾಗಿ ಮಾಡುವುದರಿಂದ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳು ಯೋಗದ ಅಂಗವಾಗಿದ್ದು,ಇವು ಮಾನಸಿಕ ಸ್ವಾಸ್ಥವನ್ನು ಹೆಚ್ಚಿಸುತ್ತವೆ. ಯೋಗವು ಒತ್ತಡ ಹಾರ್ಮೋನ್ ಆಗಿರುವ ಕಾರ್ಟಿಸಾಲ್ ಮಟ್ಟಗಳನ್ನು ತಗ್ಗಿಸುತ್ತದೆ. ಹೀಗಾಗಿ ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಮತ್ತು ಒತ್ತಡವನ್ನು ದೂರವಿಡುವಲ್ಲಿ ಯೋಗವು ನೆರವಾಗುತ್ತದೆ. ಖಿನ್ನತೆ ಮತ್ತು ನಿದ್ರಾಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲೂ ಅದು ಪೂರಕವಾಗಿದೆ.
►ಪೈಲೇಟಸ್: ಪೈಲೇಟಸ್ ಹೊಸ ಫಿಟ್ನೆಸ್ ಟ್ರೆಂಡ್ ಆಗಿದ್ದು,ಅದನ್ನೊಂದು ಕೈ ನೋಡೇಬಿಡೋಣ ಎಂದು ವ್ಯಾಯಾಮಪ್ರಿಯರು ಬಯಸುತ್ತಾರೆ. ಈ ವ್ಯಾಯಾಮ ಪದ್ಧತಿಯು ಒತ್ತಡದಿಂದ ಪಾರಾಗಲು ನೆರವಾಗಬಲ್ಲುದು. ಸೂಕ್ತ ಉಸಿರಾಟ ವಿಧಾನಗಳನ್ನು ಇದು ಒಳಗೊಂಡಿರುವುದರಿಂದ ಮೂಡ್‌ನ್ನು ಮತ್ತು ಶಕ್ತಿ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಮನೆಯಲ್ಲಿಯೂ ಮಾಡಬಹದು ಎನ್ನುವುದು ಈ ವ್ಯಾಯಾಮ ಪದ್ಧತಿಯ ಪ್ಲಸ್ ಪಾಯಿಂಟ್ ಆಗಿದೆ. ಪೈಲೇಟಸ್ ಸಾಮಾನ್ಯವಾಗಿ 40ರಿಂದ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು ವ್ಯಾಯಾಮದ ಎರೋಬಿಕ್ ಮತ್ತು ಎರೋಬಿಕೇತರ ರೂಪಗಳ ಮಿಶ್ರಣವಾಗಿದ್ದು,ಶರೀರದ ಚಲನೆಯನ್ನು ಹೆಚ್ಚು ನಿಖರಗೊಳಿಸುತ್ತದೆ. ಶರೀರದ ನಮ್ಯತೆ,ಶಕ್ತಿಯನ್ನು ಹೆಚ್ಚಿಸುವ ಈ ವ್ಯಾಯಾಮವು ಇಡೀ ಶರೀರದ ಮೇಲಿನ ನಿಯಂತ್ರಣ ಮತ್ತು ಸಹಿಷ್ಣುತೆಯನ್ನು ಸಾಧಿಸಲು ನೆರವಾಗುತ್ತದೆ.
►ಎರೋಬಿಕ್ಸ್: ಎರೋಬಿಕ್ಸ್ ವ್ಯಾಯಾಮವನ್ನೂ ಮೋಜಿನ ಅನುಭವವಾಗಿಸುತ್ತದೆ. ಅದು ಮನಸ್ಸನ್ನು ತಾಜಾಗೊಳಿಸುತ್ತದೆ,ಜೊತೆಗೆ ಶರೀರದ ತೂಕವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ನೆರವಾಗುತ್ತದೆ. ಅದು ಉಸಿರಾಟ ಮತ್ತು ಹೃದಯ ಬಡಿತ ದರಗಳನ್ನು ಹೆಚ್ಚಿಸುವ ಮೂಲಕ ಸ್ನಾಯುಗಳಿಗೆ ಬಲ ನೀಡುತ್ತದೆ. ವ್ಯಾಯಾಮ ಮತ್ತು ಡ್ಯಾನ್ಸ್‌ನ ಪರಿಪೂರ್ಣ ಸಂಯೋಜನೆಯಾಗಿರುವ ಎರೋಬಿಕ್ಸ್ ಒತ್ತಡವನ್ನು ಶಮನಗೊಳಿಸಲು ಉತ್ತಮ ಮಾರ್ಗವಾಗಿದೆ.
ದಿನಕ್ಕೆ ಕನಿಷ್ಠ 30 ನಿಮಿಷಗಳನ್ನಾದರೂ ವ್ಯಾಯಾಮಕ್ಕೆ ಮೀಸಲಿಡಬೇಕು. ಇದರಿಂದ ನಾವು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಫಿಟ್ ಆಗಿರಲು ಸಾಧ್ಯವಾಗುತ್ತದೆ.