ಸ್ವಚ್ಛತೆ ಕಾಪಾಡದ ಜಿಮ್ ಸೆಂಟರ್: ಶುಲ್ಕ ವಾಪಸ್ ನೀಡಲು ನ್ಯಾಯಾಲಯ ಆದೇಶ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.28: ಸಿಲಿಕಾನ್ ಸಿಟಿಯಲ್ಲಿ ಫಿಟ್ನೆಸ್ ಜಿಮ್ ಸೆಂಟರ್ಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಆದರೆ, ಆ ಸೆಂಟರ್ಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ನೀವು ಸೇರಿಕೊಂಡರೆ ನಿಮಗೆ ಫಿಟ್ನೆಸ್ ಸಿಗುವುದಿಲ್ಲ. ಕಟ್ಟಿದ ಶುಲ್ಕ ಕೂಡ ವಾಪಸ್ ಸಿಗುವುದಿಲ್ಲ. ಇಂತಹ ಪ್ರಕರಣವೊಂದರಲ್ಲಿ ಗ್ರಾಹಕರ ನ್ಯಾಯಾಲಯವು ಗ್ರಾಹಕರು ಕಟ್ಟಿದ ಶುಲ್ಕವನ್ನು ವಾಪಸ್ ನೀಡಲು ಆದೇಶಿಸಿದೆ.
ನಗರದ ಫ್ರೇಸರ್ ಟೌನ್ ನಿವಾಸಿಯಾದ ಪಲ್ಲವಿ ರಬಿನಾಥನ್ ಆರೋಗ್ಯ ಕಾಪಾಡಿಕೊಳ್ಳಲಿಕ್ಕಾಗಿ ಜಿಮ್ ಸೇರಲು ನಿರ್ಧರಿಸಿದ್ದರು. ಅದರಂತೆ ಇಂಟಟ್ನೆಟ್ನಲ್ಲಿ ಹುಡುಕಾಡಿ ಮನೆ ಸಮೀಪದ ಪಾಟರಿ ರಸ್ತೆಯಲ್ಲಿರುವ ಜಿಮ್ ವೊಂದನ್ನು ಪತ್ತೆ ಮಾಡಿ ಅದರಲ್ಲಿ ತಮ್ಮ ನಂಬರ್ ಹಾಗೂ ಹೆಸರು ದಾಖಲಿಸಿದ್ದರು. ಪಲ್ಲವಿ ಅವರ ನಂಬರ್ಗೆ ಕರೆ ಮಾಡಿದ ಜಿಮ್ ಸೆಂಟರ್ ನ ಯುವತಿ ತಮ್ಮ ಜಿಮ್ಗೆ ದಾಖಲಾತಿ ಪಡೆದುಕೊಳ್ಳುವಂತೆ ಮನವಿ ಮಾಡಿದ್ದರು. ಆ ನಂತರವೂ ಪದೇ ಪದೇ ಕರೆ ಮಾಡಿದ್ದರಿಂದ ಪಲ್ಲವಿ ಜಿಮ್ಗೆ ಭೇಟಿ ನೀಡಿದ್ದರು.
ಜಿಮ್ಗೆ ನೇರವಾಗಿ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿನ ವಾತಾವರಣ ಕೊಳಕಾಗಿಯೇ ಕಂಡು ಬಂದಿತ್ತು. ಜತೆಗೆ ಜಿಮ್ನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರು ಅಲ್ಲಿ ವರ್ಕೌಟ್ ಮಾಡುತ್ತಿದ್ದರು. ಇದಕ್ಕೆ ಸಬೂಬು ಹೇಳಿದ್ದ ಜಿಮ್ ನ ತರಬೇತುದಾರ ಯುವತಿಯು, ನಮ್ಮ ಜಿಮ್ ಈ ಏರಿಯಾದಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಹೀಗಾಗಿ ಹೆಚ್ಚು ಜನ ಸೇರಿದ್ದಾರೆ. ಇದರಿಂದಾಗಿ ಜಿಮ್ ವಾತಾವರಣ ಕೊಳಕಾಗಿದೆ. ಎಲ್ಲರಿಗೂ ಪ್ರತ್ಯೇಕ ಸಮಯ ನಿಗದಿ ಮಾಡಿದ್ದು, ಅದರಂತೆ ನಡೆಯಲಿದೆ. ಆಗ ಇಂತಹ ವಾತಾವರಣ ಇರುವುದಿಲ್ಲ ಎಂದು ಮನವೊಲಿಸಿದ್ದರು. ಜಿಮ್ ನ ಸಿಬ್ಬಂದಿಯ ಮಾತು ನಂಬಿದ ಪಲ್ಲವಿ, 2017ರ ಫೆ.14ರಂದು 16 ಸಾವಿರ ರೂ.ಚೆಕ್ ಬರೆದು ಕೊಟ್ಟು ಒಂದು ವರ್ಷದ ಸದಸ್ಯತ್ವ ಪಡೆದುಕೊಂಡಿದ್ದರು. 16 ಸಾವಿರ ರೂ.ಗೆ ಚೆಕ್ ಪಡೆದ ಸಿಬ್ಬಂದಿ ಅದನ್ನು ತಮ್ಮ ಖಾತೆಗೆ ಹಾಕಿಕೊಂಡ ಮೇಲೆ 15 ಸಾವಿರ ರೂ.ರಶೀದಿ ಕೊಟ್ಟು ಇನ್ನೊಂದು ಸಾವಿರಕ್ಕೆ ಬೇರೆಯದೇ ಲೆಕ್ಕದ ಕಥೆ ಹೇಳಿದರು. ಹೀಗೆ ಸದಸ್ಯತ್ವ ಪಡೆದುಕೊಂಡು ಜಿಮ್ ಸೇರಿದ ಪಲ್ಲವಿ ವರ್ಕೌಟ್ ಆರಂಭಿಸಿದಾಗಲೇ ಜಿಮ್ ನ ಅಸಲಿಯತ್ತು ಮನವರಿಕೆ ಆಯಿತು.
ಯೋಗಾಸನದ ಮ್ಯಾಟ್ ಸೇರಿದಂತೆ ಅಗತ್ಯ ಸಲಕರಣೆಗಳು ಇಲ್ಲದೇ ಇರುವುದು, ಇರುವ ಸಲಕರಣೆಗಳೂ ಕೊಳಕಾಗಿರುವುದು, ಅಗತ್ಯಕ್ಕಿಂತ ಹೆಚ್ಚು ಜನ ಸೇರಿ ವ್ಯಾಯಾಮ ಮಾಡಲು ಜಾಗ ಸಿಗದಿರುವುದು ಹಾಗೂ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದೆ ಬೆವರು ದುರ್ನಾತ ತುಂಬಿಕೊಂಡಿರುವುದು ಗಮನಕ್ಕೆ ಬಂತು. ಈ ಕುರಿತು ಜಿಮ್ ಸೆಂಟರ್ ಸಿಬ್ಬಂದಿಗೆ ದೂರು ಹೇಳಿಕೊಂಡಾಗ ಯಾವುದೇ ಪ್ರಯೋಜನವಾಗಲಿಲ್ಲ. ಜಿಮ್ನ ದುರವ್ಯವಸ್ಥೆ ಬಗ್ಗೆ ಪದೆ ಪದೇ ಮಾತನಾಡಿದಾಗ ಜಿಮ್ ಸಿಬ್ಬಂದಿ ಜಗಳಕ್ಕೆ ನಿಂತರು. ನಿಮಗೆ ಅಷ್ಟೊಂದು ಕೊಳಕು ಎನ್ನಿಸಿದರೆ ನೀವೇ ಜಿಮ್ ಸ್ವಚ್ಛ ಮಾಡಿ, ಇಲ್ಲದಿದ್ದರೆ ಹೊರಗೆ ನಡೀರಿ ಎಂಬ ಮಾತು ಕೇಳಿಬಂತು. ಅವಕ್ಕಾದ ಪಲ್ಲವಿ, ತಾವು ನೀಡಿರುವ ಅಡ್ವಾನ್ಸ್ ಹಿಂದಿರುಗಿಸುವಂತೆ ಕೇಳಿದರು. ಇದಕ್ಕೆ ಸರಿಯಾಗಿ ಸ್ಪಂದಿಸದ ಸಿಬ್ಬಂದಿ ನಮ್ಮಲ್ಲಿ ಒಮ್ಮೆ ದಾಖಲಾದರೆ ಮುಗಿಯಿತು. ಶುಲ್ಕ ಹಿಂದಿರುಗಿಸುವ ಮಾತೇ ಇಲ್ಲ. ಬೇಕಿದ್ದರೆ ಮುಂದುವರೆಸಿ, ಇಲ್ಲದಿದ್ದರೆ ನಡೀರಿ ಎಂದು ಕಟುವಾಗಿ ಹೇಳಿದರು.
ಹಲವು ಬಾರಿ ಶುಲ್ಕ ಹಿಂದಿರುಗಿಸುವಂತೆ ಕೋರಿದರೂ ಜಿಮ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದಾಗ ಪಲ್ಲವಿ ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಿ 2017ರ ಸೆಪ್ಟೆಂಬರ್ ನಲ್ಲಿ ಬೆಂಗಳೂರು ನಗರ 2ನೆ ಹೆಚ್ಚುವರಿ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು. ಜತೆಗೆ ಅಗತ್ಯ ದಾಖಲೆಗಳು ಹಾಗೂ ಜಿಮ್ ಕೊಳಕು ಬಿಂಬಿಸುವ ಫೋಟೋ, ವಿಡಿಯೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಪಲ್ಲವಿ ಅವರಿಗೆ ಪೂರ್ತಿ ಹಣ ಹಿಂದಿರುಗಿಸುವಂತೆ ಆದೇಶ ನೀಡಿದೆ. ಜತೆಗೆ ಕೋರ್ಟ್ ವೆಚ್ಚವಾಗಿ ಒಂದು ಸಾವಿರ ನೀಡುವಂತೆ ಆದೇಶಿಸಿದೆ. ಹಾಗೆಯೇ ಜಿಮ್ ಮಾಲಕರಿಗೆ ಛೀಮಾರಿ ಹಾಕಿರುವ ನ್ಯಾಯಾಲಯ ಸೂಕ್ತ ಸಲಕರಣೆಗಳು ಇಲ್ಲದ ಹಾಗೂ ಸ್ವಚ್ಛತೆ ಇಲ್ಲದ ಜಿಮ್ ಗಳಿಂದ ಜನರು ಹೇಗೆ ಆರೋಗ್ಯ ಪಡೆಯುತ್ತಾರೆ. ಇಂತಹ ದಂಧೆಯನ್ನು ನಿಯಂತ್ರಿಸಬೇಕು ಎಂದು ಹೇಳಿದೆ.
ಮೋಸ ಮಾಡುತ್ತಿರುವ ಜಿಮ್ ಸೆಂಟರ್ಗಳು
ಕೆಲವೊಂದು ಜಿಮ್ ಸೇರುವಾಗ ಅದರ ಮಾಲಕರು ಇನ್ನಿಲ್ಲದ ಭರವಸೆ ನೀಡುತ್ತಾರೆ. ಆದರೆ ಶುಲ್ಕ ಕೊಟ್ಟು ಎಂಟ್ರಿ ಪಡೆದ ಮೇಲೆ ಜಿಮ್ ಮತ್ತು ಕೋಚ್ನ ಅಸಲಿಯತ್ತು ಅರ್ಥವಾಗುತ್ತದೆ. ತರಬೇತಿ ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ಜಿಮ್ನ ಕೊಳಕು ವಾತಾವರಣದ ಬಗ್ಗೆ ದೂರಿದರೆ, ನೇರವಾಗಿ ಬರಬೇಡಿ ಎಂದು ಹೇಳುತ್ತಾರೆ. ಶುಲ್ಕ ವಾಪಸ್ಸು ಕೇಳಿದರೆ ಅದು ವಾಪಸ್ ಕೊಡಲು ಬರುವುದಿಲ್ಲ ಎನ್ನುತ್ತಾರೆ. ಬಹುತೇಕ ಜಿಮ್ಗಳಲ್ಲಿ ಇಂತಹುದೇ ಪರಿಪಾಠವಿದ್ದು ಇದೀಗ ಬಂದಿರುವ ತೀರ್ಪು ಜಿಮ್ ಮಾಲಕರಿಗೆ ಪಾಠವಾಗಿ ಪರಿಣಮಿಸಿದೆ.