ಸಾಧ್ವಿ ಸ್ಪರ್ಧೆಯ ಸುತ್ತಮುತ್ತ....
ಸಂಘ ಪರಿವಾರದ ಕಾರ್ಯಸೂಚಿಯಲ್ಲಿ ಸಾಧು ಸಂತರಿಗೆ ವಿಶೇಷ ಆದ್ಯತೆ. ಅಂತಲೇ ಸಂಘವನ್ನು ಓಲೈಸಲು ಮಧ್ಯಪ್ರದೇಶದ ಹಿಂದಿನ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ತಮ್ಮ ಸರಕಾರದಲ್ಲಿ ಐವರು ಸನ್ಯಾಸಿಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರು. ಯೋಗಿ ಆದಿತ್ಯನಾಥ್ ಕೂಡ ಸಂಘದ ಆಯ್ಕೆ. ಈಗ ಪ್ರಜ್ಞಾಸಿಂಗ್ ಕೂಡ ನಾಗಪುರ ಕೃಪಾಪೋಷಿತೆ.
ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಮೂಲಕ ಸಂಘ ಪರಿವಾರ ಭಯೋತ್ಪಾದನೆಗೆ (ಹಿಂದೂ ಅಲ್ಲ) ಶಾಸನಾತ್ಮಕ ಮಾನ್ಯತೆ ನೀಡುವ ಯತ್ನ ನಡೆಸಿದೆಯೇ? ಬಿಜೆಪಿಯ ಈ ತೀರ್ಮಾನದ ಹಿಂದೆ ಬರೀ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೈವಾಡ ಮಾತ್ರವಲ್ಲ, ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ವೌನ ಸಮ್ಮತಿ ಇರುವುದು ಗುಟ್ಟಿನ ಸಂಗತಿಯೇನಲ್ಲ. ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಗುಪ್ತ ಕಾರ್ಯಸೂಚಿ ಭಾಗವಾಗಿ ಇವೆಲ್ಲ ನಡೆದಿವೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ.
ಭೋಪಾಲ್‌ನಿಂದ ಸಾಧ್ವಿ ಪ್ರಜ್ಞಾಸಿಂಗ್ ಸ್ಪರ್ಧಿಸುವುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಿಂದೂ ನಾಗರಿಕತೆ ಮೇಲೆ ಭಯೋತ್ಪಾದನೆ ಆರೋಪ ಹೊರಿಸುವವರಿಗೆ ಉತ್ತರವಾಗಿ ಪ್ರಜ್ಞಾಸಿಂಗ್‌ರನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಿದ್ದಾರೆ. ಸಂಘ ಪರಿವಾರದ ಭಯೋತ್ಪಾದನೆ ಬಗ್ಗೆ ನಾವು ಮಾತಾಡಿದರೆ ಅದನ್ನು ಹಿಂದೂ ಭಯೋತ್ಪಾದನೆ ಎಂದು ತಿರುಚಿ ಹಿಂದೂಗಳನ್ನು ಭಯೋತ್ಪಾದಕರೆಂದು ಹೆಸರಿಸಿ ಅದರ ಸೆರಗಿನಲ್ಲಿ ತನ್ನ ದುಷ್ಕೃತ್ಯಗಳಿಗೆ ರಕ್ಷಣೆ ಪಡೆಯುತ್ತ ಬಂದ ಪರಂಪರೆ ಇವರದು.
ಜನಾಂಗ ದ್ವೇಷದ ವಿಷಜ್ವಾಲೆ ಎಬ್ಬಿಸುವ ಬೆಂಕಿಯುಗುಳುವ ನಾಲಗೆಯವರನ್ನು ಆರೆಸ್ಸೆಸ್ ಅತ್ಯಂತ ಜಾಣತನದಿಂದ ಮುಂಚೂಣಿಗೆ ತಂದು ಚುನಾವಣೆ ಮೂಲಕ ಗೆಲ್ಲಿಸಿ ಶಾಸನಬದ್ಧ ಸ್ಥಾನಗಳಿಗೆ ತಂದು ಕೂರಿಸುತ್ತದೆ. ಒಮ್ಮೆ ಈ ರೀತಿ ಶಾಸನಾತ್ಮಕ ಸ್ಥಾನ ಪಡೆದವರು ಕ್ರಮೇಣ ರಾಷ್ಟ್ರನಾಯಕರಾಗಿ ಮಿಂಚುತ್ತಾರೆ. ಇದಕ್ಕೆ ನರೇಂದ್ರ ಮೋದಿಯವರೇ ಕಣ್ಣ ಮುಂದಿನ ಉದಾಹರಣೆ. 2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಅವರಿನ್ನೂ ಕನಿಷ್ಠ ವಿಷಾದ ವ್ಯಕ್ತಪಡಿಸಿಲ್ಲ. ಇಂಥವರು ಈಗ ಕೆಲ ಸಮುದಾಯಗಳ ಯುವಕರ ಹೀರೊ ಆಗಿದ್ದಾರೆ. ಶೇ.31ರಷ್ಟು ಮತ ಪಡೆದು ದೇಶದ ಪ್ರಧಾನಿಯೂ ಆದರು. ಪ್ರಧಾನಿಯಾದ ನಂತರವೂ ಅವರು ಬದಲಾಗಲಿಲ್ಲ. ಅಲ್ಪಸಂಖ್ಯಾತರು, ದಲಿತರು ಆತಂಕ ಮತ್ತು ಭೀತಿಯ ನೆರಳಲ್ಲಿ ಜೀವ ಹಿಡಿದುಕೊಂಡು ಬದುಕುವ ವಾತಾವರಣ ಅವರು ನಿರ್ಮಿಸಿದ್ದಾರೆ
ಜಲಿಯನ್ ವಾಲ್ ಬಾಗ್ ಹತ್ಯಾಕಾಂಡಕ್ಕೆ ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ಬ್ರಿಟಿಷ್ ಸಂಸತ್ತು ಈ ಬಗ್ಗೆ ಇತ್ತೀಚೆಗೆ ಖೇದ ವ್ಯಕ್ತಪಡಿಸಿತು. ನ್ಯೂಝಿಲ್ಯಾಂಡ್‌ನಲ್ಲಿ ಮುಸಲ್ಮಾನರ ಮೇಲೆ ನಡೆದ ದಾಳಿಯ ಕುರಿತು ಅಲ್ಲಿನ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ನೀವು ವಲಸೆಗಾರರಾದರೂ ನಮ್ಮವರು ಎಂದರು. ಶ್ರೀಲಂಕಾದಲ್ಲಿ ಇತ್ತೀಚೆಗೆ ಚರ್ಚ್‌ಗಳ ಮೇಲೆ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಅಲ್ಲಿನ ಮುಸಲ್ಮಾನರು ಕ್ರೈಸ್ತರಿಗೆ ಕ್ಷಮೆಯಾಚಿಸಿ ನಮ್ಮ ಮಸೀದಿಗಳಲ್ಲಿ ಬಂದು ಪ್ರಾರ್ಥನೆ ಮಾಡಿ ಎಂದು ಮಸೀದಿಯ ಬಾಗಿಲುಗಳನ್ನು ತೆರೆದರು. ಆದರೆ ನಮ್ಮ ದೇಶದಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಎರಡು ಸಾವಿರ ಮುಸಲ್ಮಾನರು ಬಲಿಯಾದರೂ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಇದಕ್ಕೆ ಬದಲಾಗಿ, ಬೀದಿಪಾಲಾದ ಜನರ ಪುನರ್ವಸತಿಗಾಗಿ ಹಾಗೂ ಹಿಂಸೆಗೊಳಗಾದವರಿಗೆ ನ್ಯಾಯ ದೊರಕಿಸಲು ಶ್ರಮಿಸುತ್ತಿರುವ ತೀಸ್ತಾ ಸೆಟಲ್‌ವಾಡ್ ಅಂಥವರಿಗೆ ನಾನಾ ವಿಧದ ಕಿರುಕುಳ ನೀಡಲಾಗುತ್ತಿದೆ. ಇದೂ ಸಾಲದೆಂಬಂತೆ ಇದೀಗ ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಪ್ರಜ್ಞಾಸಿಂಗ್‌ರಿಗೆ ಬಿಜೆಪಿ ಟಿಕೆಟ್ ನೀಡಿರುವುದು ದೇಶಕ್ಕೆ ಯಾವ ಸಂದೇಶ ನೀಡುತ್ತದೆ. ಈಗ ಪ್ರಜ್ಞಾಸಿಂಗ್‌ರಿಗೆ ಟಿಕೆಟ್ ನೀಡಿದವರು ನಾಳೆ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹಂತಕರಿಗೂ ಟಿಕೆಟ್ ನೀಡಿದರೆ ಅಚ್ಚರಿಯಿಲ್ಲ.
ಪ್ರಜ್ಞಾಸಿಂಗ್‌ರನ್ನು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಬಂಧಿಸಲಾಗಿತ್ತು. ಒಂಬತ್ತು ವರ್ಷ ಜೈಲುವಾಸ ಅನುಭವಿಸಿ ಅವರು ಬಿಡುಗಡೆಯಾಗಿ ಬಂದಿದ್ದಾರೆ. ಎಂಸಿಒಸಿಎ ಅನ್ವಯ ಮಾಡಲಾದ ಆರೋಪಗಳಿಂದ ಅವರು ಮುಕ್ತರಾಗಿದ್ದರೂ ಸಂಪೂರ್ಣ ದೋಷಮುಕ್ತರಲ್ಲ. ಕಾನೂನು ಬಾಹಿರ ತಡೆ ಕಾಯ್ದೆ (ಯುಎಪಿಎ) ಅನ್ವಯ ಅವರ ಮೇಲಿರುವ ಆರೋಪಗಳು ಗಂಭೀರವಾಗಿವೆ. ಅವುಗಳಿಂದ ಅವರಿನ್ನೂ ಮುಕ್ತರಾಗಿಲ್ಲ.
ಸಾಧ್ವಿ ಪ್ರಜ್ಞಾಸಿಂಗ್ ಮೇಲೆ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಹತ್ಯೆಯ ಆರೋಪವಿದೆ. ಈಕೆಯನ್ನು ಮೊದಲು ಬಂಧಿಸಿದ್ದು ಮಧ್ಯಪ್ರದೇಶದ ಶಿವರಾಜಸಿಂಗ್ ನೇತೃತ್ವದ ಬಿಜೆಪಿ ಸರಕಾರ. ಈಗ ಅದೇ ಶಿವರಾಜಸಿಂಗ್ ಆಕೆಯ ಪರ ಪ್ರಚಾರ ಮಾಡಬೇಕಾಗಿ ಬಂದಿದೆ. ಈಕೆಯ ತಂಡ ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತ್ ಹತ್ಯೆಗೂ ಸಂಚು ರೂಪಿಸಿತ್ತೆಂದು ಹೇಳಲಾಗುತ್ತಿದೆ. ಇಂಥವರು ಈಗ ಬಿಜೆಪಿ ಅಭ್ಯರ್ಥಿ. ಸಂಘಪರಿವಾರದ ಒಳಗೆ ಯಾವ್ಯಾವ ಒಳ ಹುನ್ನಾರಗಳಿಮೋ ಯಾರಿಗೆ ಗೊತ್ತು.
ಆರೆಸ್ಸೆಸ್ ಎಂಬುದು ಅತ್ಯಂತ ನಿಗೂಢ ಸಂಘಟನೆ. ಮೇಲ್ನೋಟಕ್ಕೆ ಸ್ವಯಂ ಸೇವಾ ಸಂಸ್ಥೆ ಎಂದು ಹೇಳಿಕೊಳ್ಳುತ್ತದೆ. ಆದರೆ ಅದರ ನುಡಿ, ನಡೆಯಲ್ಲಿ ಸಂಶಯಾಸ್ಪದ ಗೊಂದಲ ಎದ್ದು ಕಾಣುತ್ತದೆ. ಸಂಘದ ಅನುಮತಿಯಿಲ್ಲದೇ ಬಿಜೆಪಿಯಲ್ಲಿ ಒಂದು ಕಡ್ಡಿಯೂ ಅಲುಗಾಡುವುದಿಲ್ಲ. ಭೋಪಾಲ್ ನಿಂದ ಸ್ಪರ್ಧಿಸಲು ಪ್ರಜ್ಞಾಸಿಂಗ್‌ಗೆ ಬಿಜೆಪಿ ಟಿಕೆಟ್ ಕೊಡಿಸಿದ್ದು ನಾಗಪುರದ ರಿಮೋಟ್ ಕಂಟ್ರೋಲ್.
ಸಾಧ್ವಿ ಪ್ರಜ್ಞಾಸಿಂಗ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಮುಂಬೈಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಪ್ರಜ್ಞಾಸಿಂಗ್ ಮೇಲೆ ಗಂಭೀರ ಸಾಕ್ಷ್ಯಾಧಾರಗಳಿಲ್ಲ ಎಂದು ಎನ್‌ಐಎ ಹೇಳಿದರೆ, ಪ್ರಜ್ಞಾಸಿಂಗ್ ಮೇಲೆ ಆರೋಪಪಟ್ಟಿ ಸಲ್ಲಿಸುವಷ್ಟು ಸಾಕ್ಷ್ಯಾಧಾರಗಳಿವೆ ಎಂದು ಎನ್‌ಐಎ ವಿಶೇಷ ನ್ಯಾಯಾಲಯ ಹೇಳಿದೆ. ಇನ್ನೊಂದೆಡೆ ಆರೋಪಿಗಳ ಬಗ್ಗೆ ಮೃದುವಾಗಿರಬೇಕೆಂದು ಎನ್‌ಐಎ ಪರೋಕ್ಷವಾಗಿ ಒತ್ತಡ ಹೇರುತ್ತಿದೆ ಎಂದು ಈ ಪ್ರಕರಣದ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ಹೇಳಿರುವುದು ಕೂಡ ಗಮನಿಸಬೇಕಾದ ಅಂಶವಾಗಿದೆ. ಒಟ್ಟಾರೆ ಪ್ರಜ್ಞಾಸಿಂಗ್ ಮೇಲಿನ ಆರೋಪ ಸಾಬೀತಾಗಿಲ್ಲ ಎಂಬುದು ನಿಜವಾಗಿರಬಹುದು. ಆದರೆ ಯಾವುದೇ ನ್ಯಾಯಾಲಯ ಅವರನ್ನು ಸಂಪೂರ್ಣವಾಗಿ ದೋಷಮುಕ್ತರನ್ನಾಗಿ ಮಾಡಿಲ್ಲ. ಹೀಗಿರುವಾಗ ಆಕೆಯನ್ನು ಅಭ್ಯರ್ಥಿಯನ್ನಾಗಿ ಮಾಡಿರುವ ಉದ್ದೇಶವೇನು? ಚುನಾವಣೆಯಲ್ಲಿ ಕೋಮು ಧ್ರುವೀಕರಣ ಬಿಟ್ಟರೆ ಇನ್ಯಾವ ಉದ್ದೇಶವಿದೆ.
ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿಗಳ ಬಗ್ಗೆ ಆರೆಸ್ಸೆಸ್ ಮುಂಚೆ ಅಂತರ ಕಾಯ್ದುಕೊಂಡಿತ್ತು. ಈ ಪ್ರಕರಣದ ಮುಖ್ಯ ಆರೋಪಿಗಳಾದ ಸಾಧ್ವಿ ಪ್ರಜ್ಞಾಸಿಂಗ್, ದಯಾನಂದ ಪಾಂಡೆ ಹಾಗೂ ಕರ್ನಲ್ ಶ್ರೀಕಾಂತ ಪುರೋಹಿತ್ ಅಭಿನವ ಭಾರತ ಸಂಸ್ಥೆಯಲ್ಲಿದ್ದವರು. ಈ ಅಭಿನವ ಭಾರತ ಸಂಸ್ಥೆ ಅತ್ಯುಗ್ರ ಹಿಂದುತ್ವವಾದಿ ಸಂಘಟನೆ. ಇದರ ಮೂಲ ಸ್ಥಾಪಕರು ವಿ.ಡಿ. ಸಾವರ್ಕರ್. ಈಗ ಇದರ ನೇತೃತ್ವ ವಹಿಸಿದವರು ಸಾವರ್ಕರ್ ಸೊಸೆ ಹಾಗೂ ನಾಥೂರಾಮ ಗೋಡ್ಸೆ ಸಂಬಂಧಿ ಹಿಮಾನಿ ಸಾವರ್ಕರ್. ಕರ್ನಲ್ ಪುರೋಹಿತ್ ಲ್ಯಾಪ್‌ಟಾಪ್‌ನಲ್ಲಿ ದೊರೆತ ಮಾಹಿತಿ ಪ್ರಕಾರ ಈ ಸಂಘಟನೆಯ ಗುರಿ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಬದಲಿಸಿ ಅದರ ಬದಲಾಗಿ, ವೇದ ಮತ್ತು ಸ್ಮತಿಗಳನ್ನು ಆಧರಿಸಿದ ವೈದಿಕ ಹಿಂದೂ ರಾಷ್ಟ್ರ ನಿರ್ಮಾಣ. ಪ್ರಜ್ಞಾಸಿಂಗ್ ಈ ಸಂಘಟನೆ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡವರು. ಇದಕ್ಕಿಂತ ಮುಂಚೆ ಎಬಿವಿಪಿಯಲ್ಲಿ ಇದ್ದವರು.
ಮಾಲೆಗಾಂವ್ ಬಾಂಬ್ ಸ್ಫೋಟ ನಡೆದಾಗ ಅಭಿನವ ಭಾರತ ಸಂಸ್ಥೆಯ ಜೊತೆಗೆ ಅಂತರ ಕಾಯ್ದುಕೊಂಡಿದ್ದ ಆರೆಸ್ಸೆಸ್ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಈ ಬಗ್ಗೆ ಪತ್ರವನ್ನೂ ಬರೆದಿತ್ತು. ಭಯೋತ್ಪಾದನೆಗೂ ತನಗೂ ಸಂಬಂಧವಿಲ್ಲ ಎಂದು ಆರೆಸ್ಸೆಸ್ ಹೇಳುತ್ತಿದ್ದರೂ ಅಜ್ಮೀರ್ ಶರೀಫ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷಗೊಳಗಾದ ದೇವೇಂದ್ರ ಗುಪ್ತ ಮತ್ತು ಬಾವೇಶ ಪಟೇಲ್ ಆರೆಸ್ಸೆಸ್ ಕಾರ್ಯಕರ್ತರು ಎಂಬುದು ಗಮನಾರ್ಹ. ಇಂಥ ಅಪರಾಧಗಳಲ್ಲಿ ಸಿಕ್ಕ್ಕಿ ಬಿದ್ದರೆ, ಈಗ ಅವರು ಸಂಘದಲ್ಲಿಲ್ಲ, ಮುಂಚೆ ಇದ್ದರು ಎಂದು ಹೇಳಲಾಗುತ್ತದೆ. ಸಿಕ್ಕಿ ಬೀಳದಿದ್ದರೆ ನರೇಂದ್ರ ಮೋದಿಯವರಂತೆ ರಾಜಕೀಯ ಅಧಿಕಾರ ನೀಡಲಾಗುತ್ತದೆ. ಹಿಂದೂ ಮತಗಳ ಧ್ರುವೀಕರಣಕ್ಕಾಗಿ ಆರೆಸ್ಸೆಸ್ ಈ ರೀತಿ ಎರಡು ವಿಧದ ತಂತ್ರಗಳನ್ನು ಅನುಸರಿಸುತ್ತದೆ.
ಸನ್ಯಾಸಿಗಳು, ಸಾಧುಗಳು, ಸಾಧ್ವಿಗಳು ಎಂದರೆ ಸಮಾಜದಲ್ಲಿ ಇನ್ನೂ ಗೌರವವಿದೆ. ಸಾಮಾನ್ಯವಾಗಿ ನಿಜವಾದ ಸಾಧುಗಳು ಜನರನ್ನು ಜಾತಿ, ಕೋಮು ಆಧಾರದಲ್ಲಿ ದ್ವೇಷಿಸುವುದಿಲ್ಲ. ನಮ್ಮ ದೇಶದಲ್ಲಿ ರಾಮಕೃಷ್ಣ ಪರಮಹಂಸ, ಶಾರದಾಮಾತೆ, ಸ್ವಾಮಿ ವಿವೇಕಾನಂದರು ಇದಕ್ಕೆ ಉದಾಹರಣೆ. ವಸುದೈವ ಕುಟುಂಬಕಂ ಇವರ ಆದರ್ಶ. ನಮ್ಮ ನಾಡಿನ ಬಸವಣ್ಣನವರು ಸಕಲ ಜೀವಾತ್ಮರ ಲೇಸನು ಬಯಸಿದರು. ಆದರೆ ಸಂಘ ಪರಿವಾರದ ಸನ್ಯಾಸಿಗಳೇ ಬೇರೆ. ರೈಲು ಸ್ಫೋಟಿಸುವವರು, ಬಾಂಬ್ ಸ್ಫೋಟಿಸುವವರು, ಬಾಯಿ ತೆರೆದರೆ ವಿಷ ಕಕ್ಕುವವರು. ಅಯೋಧ್ಯೆಯ ಮಂದಿರ ನಿರ್ಮಾಣದ ಕೋಲಾಹಲ ನಡೆದಾಗ ಸಾಧ್ವಿ ರಿತಾಂಬರಾ, ಸಾಧ್ವಿ ಉಮಾಭಾರತಿ ಭಾಷಣಗಳನ್ನು ಕೇಳಿದರೆ ಶಾಂತ ಪ್ರದೇಶಗಳಲ್ಲೂ ಕೋಮು ಗಲಭೆೆಗಳಾಗುತ್ತಿದ್ದವು.
ಇಂಥ ಸಾಧ್ವಿಯೊಬ್ಬಳನ್ನು ಚುನಾವಣೆಗೆ ನಿಲ್ಲಿಸಿ ಜನಾಂಗ ದ್ವೇಷದ ಬೆಂಕಿಯಲ್ಲಿ ಓಟಿನ ಬೆಳೆ ತೆಗೆಯಲು ಬಿಜೆಪಿ ಹೊರಟಿದೆ. ಇದರೊಂದಿಗೆ ಕೋಮು ಭಯೋತ್ಪಾದನೆಗೆ ಸಾಮಾಜಿಕ ಮತ್ತು ಶಾಸನಾತ್ಮಕ ಮನ್ನಣೆ ದೊರಕಿಸುವ ದುರಂತ ದೇಶದಲ್ಲಿ ನಡೆದಿದೆ. ಹೀಗೆ ಒಂದೊಂದೇ ಪ್ರಯೋಗ ಮಾಡುತ್ತ ಅಂತಿಮವಾಗಿ ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಮಸಲತ್ತು ನಡೆದಿದೆ.
ಸಂಘ ಪರಿವಾರದ ಕಾರ್ಯಸೂಚಿಯಲ್ಲಿ ಸಾಧು ಸಂತರಿಗೆ ವಿಶೇಷ ಆದ್ಯತೆ. ಅಂತಲೇ ಸಂಘವನ್ನು ಓಲೈಸಲು ಮಧ್ಯಪ್ರದೇಶದ ಹಿಂದಿನ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ತಮ್ಮ ಸರಕಾರದಲ್ಲಿ ಐವರು ಸನ್ಯಾಸಿಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರು. ಯೋಗಿ ಆದಿತ್ಯನಾಥ್ ಕೂಡ ಸಂಘದ ಆಯ್ಕೆ. ಈಗ ಪ್ರಜ್ಞಾಸಿಂಗ್ ಕೂಡ ನಾಗಪುರ ಕೃಪಾಪೋಷಿತೆ. ಅದೇನೇ ಮಸಲತ್ತು ನಡೆಸಿದರೂ ಯಾರೇ ಸಾಧ್ವಿ, ಸಾಧುಗಳನ್ನು ಚುನಾವಣಾ ಕಣಕ್ಕಿಳಿಸಿದರೂ ಈ ಬಾರಿ ನರೇಂದ್ರ ಮೋದಿಯ ಬಿಜೆಪಿ ಗೆಲ್ಲುವುದು ಸುಲಭವಲ್ಲ.
ಸಾಧ್ವಿಯ ಸ್ಪರ್ಧೆಯ ಹಿಂದಿನ ಉದ್ದೇಶವೇನು? ಈ ಹುನ್ನಾರವನ್ನು ತಡೆಯಬೇಕಾದ ಜಾತ್ಯತೀತ ಪಕ್ಷಗಳು ಒಡೆದು ಚೂರು ಚೂರಾಗಿವೆ. ಎಲ್ಲ ಸೆಕ್ಯುಲರ್ ಪಕ್ಷಗಳನ್ನು ಒಂದುಗೂಡಿಸಬೇಕಾದ ಕಾಂಗ್ರೆಸ್ ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಹೀಗಾಗುತ್ತಿರಲಿಲ್ಲ. ದೇಶದ ರಾಜಧಾನಿ ದಿಲ್ಲಿಯಲ್ಲಿ ಎಎಪಿ ಜೊತೆ ಅದು ಹೊಂದಾಣಿಕೆ ಮಾಡಿಕೊಂಡಿದ್ದರೆ ಅಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಬಹುದಿತ್ತು.