ದ್ವೇಷ ಅಪರಾಧ: ಭಾರತದಲ್ಲಿ ಗೋವಿನ ವಿಷಯಕ್ಕೆ ಸಂಬಂಧಿಸಿದ ಹಿಂಸೆ ಮತ್ತು ಗುಂಪು ದಾಳಿಗಳು
ಎಸ್.ಬಾಬು ಖಾನ್ ಮೂಲ: ಪ್ರಾಚಿ ಸಾಳ್ವೆ
ಭಾಗ 1
ಎಪ್ರಿಲ್ ಒಂಬತ್ತನೆಯ ತಾರೀಕಿನಂದು, ಅಸ್ಸಾಂ ರಾಜ್ಯದಲ್ಲಿ ಒಂದು ಸುದ್ದಿ ಸಾಮಾಜಿಕ ಹರಿದಾಡತೊಡಗಿತ್ತು. ಶೌಕತ್ ಅಲಿ ಎನ್ನುವ 68 ವರ್ಷದ ವ್ಯಕ್ತಿಯ ಮೇಲೆ ಗುಂಪೊಂದು ದನದ ಮಾಂಸ ಮಾರಾಟದ ಆರೋಪ ಹೊರಿಸಿ ಹಲ್ಲೆಮಾಡಿ ಹಂದಿ ಮಾಂಸವನ್ನು ಬಲವಂತವಾಗಿ ತಿನ್ನಿಸಿತು. ಸ್ಥಳೀಯರು ಹೇಳುವ ಪ್ರಕಾರ ಈ ಗುಂಪು ಚಂದಾವಸೂಲಿಗೆ ಬಂದಿತ್ತು, ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿರುವ ಶೌಕತ್ ಅಲಿ ಚಂದಾಕೊಡಲು ನಿರಾಕರಿಸಿದ್ದರಿಂದ ಹಲ್ಲೆಯಾಯಿತು. ಹಾಡಹಗಲೇ ಯಾವುದೇ ತಪ್ಪು ಅಥವಾ ಅಪರಾಧ ಮಾಡದ ವ್ಯಕ್ತಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ತುತ್ತಾಗಬೇಕಾಯಿತು. ಮರುದಿನ ಒಂದೆರಡು ಕನ್ನಡ ಮಾಧ್ಯಮಗಳು ಇದನ್ನು ಪ್ರಕಟಿಸಿದವು ಉಳಿದೆಲ್ಲ ಮಾಧ್ಯಮಗಳು ಚುನಾವಣಾ ವಿಷಯದಲ್ಲಿ ಮುಳುಗಿದ್ದವು. ಈ ಹಲ್ಲೆಯೂ ಸೇರಿಕೊಂಡಂತೆ ದೇಶದಲ್ಲಾಗುತ್ತಿರುವ ಮತ್ತು ಆದ ಗುಂಪು ಹಲ್ಲೆಗಳ ಬಗ್ಗೆ ಏನಾದರೂ ಮಾಹಿತಿ ಲಭ್ಯವಿದೆಯೇ? ಇದನ್ನು ಯಾರಾದರೂ ವಿಶ್ಲೇಷಣೆ ಮಾಡಿದ್ದಾರೆಯೇ? ಎಂದು ಅಂತರ್ಜಾಲ ತಾಣಗಳನ್ನು ಹುಡುಕಬೇಕಾದರೆ ಇಂಡಿಯಾಸ್ಪೆಂಡ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು 2012-2019ರವರೆಗೆ ಇಂಗ್ಲಿಷ್ ಮಾಧ್ಯಮಗಳಲ್ಲಿ ಬಂದಂತಹ ವರದಿಗಳನ್ನು ಆಧರಿಸಿ ವಿಶ್ಲೇಷಣೆಯನ್ನು ಮಾಡಿದ್ದು ಗೋಚರಿಸಿತು. ದಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿಯೂ ಇದನ್ನು ಕುರಿತಂತೆ 2017ರಲ್ಲಿಯೇ ವಿವರವಾದ ವರದಿಯೊಂದು ಪ್ರಕಟವಾಗಿತ್ತು. ಇಂಡಿಯಾ ಸ್ಪೆಂಡ್ ಕಾಲಾನುಕ್ರಮವಾಗಿ ದಾಖಲಿಸಿರುವ ಘಟನೆಗಳು ಮತ್ತು ವಿಶ್ಲೇಷಣೆಗಳನ್ನು ಒಂದು ಬಾರಿ ಕಣ್ಣಾಡಿಸಿದೆ. ಖಂಡಿತವಾಗಿಯೂ ಇದನ್ನು ಕನ್ನಡದಲ್ಲಿ ಬರೆಯಬೇಕೆನಿಸಿ, ಇಂಡಿಯಾ ಸ್ಪೆಂಡ್ ಸಂಸ್ಥೆಗೆ ಇಮೇಲ್ ಬರೆದೆ ಅವರು ಸಂತೋಷವಾಗಿ ಒಪ್ಪಿಕೊಂಡು ಅನುಮತಿಸಿದರು. ರಾಷ್ಟ್ರೀಯ ಅಥವಾ ರಾಜ್ಯ ಅಪರಾಧಗಳ ಅಂಕಿಸಂಖ್ಯೆಗಳು ಸಾಮಾನ್ಯ ಹಿಂಸೆ ಮತ್ತು ಗುಂಪುದಾಳಿಯನ್ನು ಪ್ರತ್ಯೇಕವಾಗಿ ಗುರುತಿಸುವುದಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಈ ಅಂಕಿಸಂಖ್ಯೆಗಳು ಹೊಸದೊಂದು ದೃಷ್ಟಿಕೋನದಲ್ಲಿ ಅರ್ಥೈಸಲು ಸಹಕಾರಿಯಾಗಿವೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ 2012-2019ರ ವರೆಗೂ ಗೋವಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ದ್ವೇಷ ಅಪರಾಧಗಳು, ಗುಂಪು ಆಕ್ರಮಣಗಳು, ಮಾರಣಾಂತಿಕ ಹಲ್ಲೆಗಳು ಮತ್ತು ಕೊಲೆ ಸಾವು ನೋವುಗಳ ಒಟ್ಟಾರೆ ಚಿತ್ರಣ ಮತ್ತು ವಿಶ್ಲೇಷಣೆಯನ್ನು ಪ್ರಸ್ತುತ ಬರಹದಲ್ಲಿ ಮಾಡಲಾಗಿದೆ. ಹಾಗೆಯೇ ಲಭ್ಯವಿರುವ ಇತರ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ.
ಈ ಬರಹವನ್ನು ಓದುವುದಕ್ಕೂ ಮುನ್ನ ಗುಂಪು ದಾಳಿಯ ವ್ಯಾಖ್ಯಾನವನ್ನು ಅರ್ಥೈಸಿಕೊಳ್ಳಬೇಕಿದೆ. ಇಲ್ಲಿ ಗುಂಪುದಾಳಿಯನ್ನು ಕೆಂಬ್ರಿಡ್ಜ್ ಅರ್ಥಕೋಶದ ಲಿಂಚ್ ಮೊಬ್ ಎನ್ನುವ ಇಂಗ್ಲಿಷ್ ನಾಮಪದದ ಸಂವಾದಿಯಾಗಿ ಬಳಸಲಾಗಿದೆ. ಇದರ ವ್ಯಾಖ್ಯಾನ; ಜನರ ಗುಂಪೊಂದು ಯಾವುದೇ ವ್ಯಕ್ತಿಯು ಗಂಭೀರ ಅಪರಾಧ ಮಾಡಿದ್ದಾರೆಂದು ಭಾವಿಸಿ ಆ ವ್ಯಕ್ತಿಯ ಮೇಲೆ ಆಕ್ರಮಣಮಾಡುವುದು.
ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಗೋವಿಗೆ ಸಂಬಂಧಿಸಿದಂತೆ ಜನಸಮುದಾಯಗಳ ಮೇಲೆ ಶೇ.98ರಷ್ಟು ಗುಂಪು ದಾಳಿಗಳು ನಡೆದಿವೆ ಇದು ಗಂಭೀರವಾಗಿರುವ ಮತ್ತು ಗಮನಿಸಬೇಕಾಗಿರುವ ವಿಷಯ. ಗುಂಪು ಹಲ್ಲೆಗಳಿಂದಾಗಿ ಆಗಿರುವ ಶೇ.100ರಷ್ಟು ಸಾವುಗಳು, ಶೇ.100ರಷ್ಟು ಮಾರಣಾಂತಿಕ ಹಲ್ಲೆ ಪ್ರಕರಣಗಳು ಮತ್ತು ಶೇ.96ರಷ್ಟು ಸಣ್ಣ ಪುಟ್ಟ ಗಾಯಗಳ ಪ್ರಮಾಣ ಇದೇ ಅವಧಿಯಲ್ಲಿ ಸಂಭವಿಸಿವೆ. 2015-2018 ರ ಅವಧಿಯಲ್ಲಿ ಶೇ.92ರಷ್ಟು ಘಟನೆಗಳು, ಶೇ.100ರಷ್ಟು ಸಾವುಗಳು ಮತ್ತು ಶೇ.92ರಷ್ಟು ಮಾರಣಾಂತಿಕ ಹಲ್ಲೆಗಳು ನಡೆದಿವೆ.
ನಮ್ಮ ದೇಶದಲ್ಲಿ ಒಟ್ಟು ಇದುವರೆಗೂ 126 ಪ್ರಕರಣಗಳು ವರದಿಯಾಗಿದ್ದು, ಈ ಘಟನೆಗಳಿಂದಾಗಿ 46 ಜನ ಸಾವಿಗೀಡಾಗಿದ್ದಾರೆ. ಆಂಧ್ರ ಪ್ರದೇಶ, ದಿಲ್ಲಿ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣ ಹೊರತು ಪಡಿಸಿದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಜನ ಸಾವಿಗೀಡಾಗಿದ್ದಾರೆ. ಉತ್ತರಪ್ರದೇಶದಲ್ಲಿ 11 (24%) ಜನ ಸಾವಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳ, ಹರ್ಯಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ತಲಾ 6 (13%) ಮಂದಿ ಮೃತ ಪಟ್ಟಿದ್ದಾರೆ. ಉಳಿದಂತೆ ಇತರ ರಾಜ್ಯಗಳಲ್ಲಿ ಮೃತಪಟ್ಟವರ ಸಂಖ್ಯೆ 1-3ರವರೆಗೆ ಇದೆ. ಮಾಧ್ಯಮಗಳ ವರದಿಗಳ ಪ್ರಕಾರ ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಗೋರಕ್ಷಣಾ ಸಂಘ ಸಮಿತಿಗಳ ಕಾರ್ಯಕರ್ತರು ಗುಂಪು ಆಕ್ರಮಣ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಗೋಆತಂಕವಾದ ಆಥವಾ ಗೋ ಭಯೋತ್ಪಾದನೆ ಎಂದು ಒಟ್ಟಾರೆ ಆಕ್ರಮಣಗಳನ್ನು ಅರ್ಥೈಸಲಾಗಿದೆ.
ಗುಂಪುದಾಳಿಗಳು ಹಲವಾರು ಹಿಂಸಾತ್ಮಕ ಕಾರ್ಯತಂತ್ರಗಳನ್ನು ಒಳಗೊಂಡಿರುತ್ತವೆ. ಇವು ವ್ಯಕ್ತಿಗಳನ್ನು ದಾಳಿ ಮಾಡಿ ಹತ್ಯೆ ಮಾಡುತ್ತವೆ, ಕೊಲೆ ಪ್ರಯತ್ನಗಳನ್ನು ಮಾಡಲಾಗುತ್ತದೆ. ದಾಳಿ ಮತ್ತು ಅತ್ಯಾಚಾರಗಳು ಗುಂಪುದಾಳಿಗಳ ಅಸ್ತ್ರಗಳಾಗಿವೆ. ಕೆಲವು ಪ್ರಕರಣಗಳಲ್ಲಿ ವ್ಯಕ್ತಿಗಳನ್ನು ಸರಪಳಿಯಿಂದ ಬಿಗಿದು, ಬೆತ್ತಲೆಗೊಳಿಸಿ ದೈಹಿಕವಾಗಿ ಹಲ್ಲೆಮಾಡಲಾಗುತ್ತದೆ ಹಾಗೆಯೇ ಬಲಿಪಶುಗಳನ್ನು ನೇಣಿಗೆ ಏರಿಸಿರುವ ಪ್ರಕರಣವೂ ದಾಖಲಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ಪೂರ್ವಯೋಜಿತವಾಗಿದ್ದು, ದ್ವೇಷ, ಅನುಮಾನ, ಆರೋಪ ಮತ್ತು ವದಂತಿಗಳೇ ಗುಂಪುದಾಳಿಗಳ ಅಸ್ತ್ರಗಳಾಗಿವೆ. ಕಾಡಿನಲ್ಲಿರುವ ಮಾಂಸಾಹಾರಿ ಪ್ರಾಣಿಗಳು ಹೊಟ್ಟೆ ಹಸಿದಾಗ ಮಾತ್ರ ದಾಳಿ ಮಾಡುತ್ತವೆ. ಆದರೆ ಈ ಗುಂಪುಹಲ್ಲೆ ಒಬ್ಬ ಅಥವಾ ಎರಡು ಮೂರು ವ್ಯಕ್ತಿಗಳು ಇಲ್ಲವೇ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಅನಿರೀಕ್ಷಿತವಾಗಿ ದಿಢೀರನೆ ಮೇಲೆರಗುತ್ತದೆ. ಇಂತಹ ಸಂದರ್ಭದಲ್ಲಿ ದಾಳಿಗೊಳಗಾದವರ ದನಿ ಕ್ಷೀಣಿಸಿ ಗುಂಪಿನ ದನಿಯೇ ದೊಡ್ಡದಾಗಿ ಘರ್ಜಿಸುತ್ತದೆ. ಕೆಲವೊಮ್ಮೆ ಮಾರಕಾಸ್ತ್ರಗಳು ಇವರ ಬಳಿ ಇರುವುದರಿಂದ, ಸುತ್ತಮುತ್ತಲಿನ ಜನ ಅಸಹಾಯಕ ವೀಕ್ಷಕರಾಗಿಬಿಡುತ್ತಾರೆ ಅಥವಾ ಕೆಲವು ಕೃತ್ಯಗಳನ್ನು ಮೊಬೈಲ್‌ನಲ್ಲಿ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಗುಂಪು ಹಲ್ಲೆಯ ವಿವಿಧ ರೂಪಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಇಲ್ಲಿ ಕೆಲವು ಘಟನೆಗಳನ್ನು ವಿವರಿಸಲಾಗಿದೆ. ಗುಂಪುದಾಳಿಯ ಮೊದಲ ಪ್ರಕರಣ ಪಂಜಾಬ್ ರಾಜ್ಯದಿಂದ 2012ರಲ್ಲಿ ವರದಿಯಾಯಿತು. ಒಂದು ಕಾರ್ಖಾನೆಯ ಬಳಿ 25 ಸತ್ತ ದನಗಳು ಕಂಡವು. ಮಾರನೆಯ ದಿನ ವಿಶ್ವ ಹಿಂದೂ ಪರಿಷತ್ ಮತ್ತು ಗೋಶಾಲಾ ಸಂಘದ ಕಾರ್ಯಕರ್ತರು ಮತ್ತು ಊರಿನ ಜನ ಸೇರಿ ಕಾರ್ಖಾನೆಯ ಒಳ ನುಗ್ಗಿ, ಹಾಳು ಮಾಡಿದರು ಮತ್ತು ಕಾರ್ಖಾನೆಯ ವ್ಯಾಪ್ತಿಯಲ್ಲಿದ್ದ ಎರಡು ಮನೆಗಳಿಗೆ ಬೆಂಕಿ ಹಚ್ಚಿದರು. ನಾಲ್ಕು ಜನರಿಗೆ ಗಂಭೀರ ಗಾಯಗಳಾದವು. ಮೂವರನ್ನು ಬಂಧಿಸಲಾಯಿತು. 2016ರಲ್ಲಿ ದನದ ಮಾಂಸವನ್ನು ತಿಂದರೆಂಬ ಆರೋಪಹೊರಿಸಿ ಹರ್ಯಾಣದ ಹದಿನಾಲ್ಕು ವರ್ಷದ ಹೆಣ್ಣುಮಗಳು ಮತ್ತು ಆಕೆಯ ತಾಯಿಯ ಮೇಲೆ ಅತ್ಯಾಚಾರ ಮಾಡಲಾಯಿತು. ಇಬ್ಬರು ಸಂಬಂಧಿಕರನ್ನು ಕೊಲೆಮಾಡಲಾಯಿತು. ಆಕೆ ತಾನು ದನದ ಮಾಂಸವನ್ನು ತಿಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಅತ್ಯಾಚಾರ ಮತ್ತು ಕೊಲೆಯ ಕಾರಣಕ್ಕೆ ನಾಲ್ವರನ್ನು ಬಂಧಿಸಲಾಗಿದೆ. ಇದೇ ವರ್ಷದ ಜೂನ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಗುರ್ಗಾಂವ್‌ನಲ್ಲಿ ದನಗಳ ಕಳ್ಳಸಾಗಾಟ ಮಾಡುತ್ತಿದ್ದವರ ಬೆನ್ನುಬಿದ್ದ ಭಜರಂಗದಳದ ಸಂಘಟಕ ಮತ್ತು ಗೋರಕ್ಷಣಾ ದಳದ ಕಾರ್ಯಕರ್ತರ ಮೇಲೆ ದನದ ಮಾಂಸ ಕಳ್ಳಸಾಗಾಟ ಮಾಡುವವರು ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಕೊಲೆಯತ್ನದ ಬಗ್ಗೆ ದೂರು ದಾಖಲಾಗಿದೆ.
2010-2019 ರವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಈ ಘಟನೆಗಳ ರಾಜ್ಯವಾರು ಘಟನೆಗಳು ಮತ್ತು ಅದರ ವಿಶ್ಲೇಷಣೆ ಈ ಕೆಳಕಂಡಂತಿದೆ.