ಅ. 12-15: ಅಂಚೆ ಚೀಟಿ ಪ್ರದರ್ಶನ
ಮಂಗಳೂರು, ಎ. 29: ಕರ್ನಾಟಕ ಅಂಚೆ ವೃತ್ತವು ಅಕ್ಟೋಬರ್ 12ರಿಂದ 15ರವರೆಗೆ ಮಂಗಳೂರಿನಲ್ಲಿ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಏರ್ಪಡಿಸಿದೆ. ಈ ಪ್ರದರ್ಶನಕ್ಕೆ KARNAPEX 2019ಎಂದು ಹೆಸರಿಡಲಾಗಿದೆ. 4 ವರ್ಷಗಳಿಗೊಮ್ಮೆ ನಡೆಯುವ ಈ ಪ್ರದರ್ಶನವು ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ.
ಈ ಪ್ರದರ್ಶನದಲ್ಲಿ ದೇಶ-ವಿದೇಶದ ಅಂಚೆ ಚೀಟಿಗಳು ಪ್ರದರ್ಶನಗೊಳ್ಳಲಿದ್ದು, ಸಹಸ್ರಾರು ಅಂಚೆ ಚೀಟಿ ಸಂಗ್ರಹಕಾರರು ಪಾಲ್ಗೊಳ್ಳಲಿದ್ದಾರೆ. ಈ ಪ್ರದರ್ಶನ ಲಾಂಛನದ ವಿನ್ಯಾಸಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ನಾಗರಿಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಲಾಂಛನದ ವಿನ್ಯಾಸವು ಸ್ವಂತದ್ದಾಗಿರಬೇಕು ಹಾಗೂ ಆಯ್ಕೆಯಾದ ವಿನ್ಯಾಸವನ್ನು ಈ ಪ್ರದರ್ಶನದ ಲಾಂಛನವನ್ನಾಗಿ ಬಳಸಲಾಗುವುದು ಹಾಗೂ ಆಯ್ಕೆಯಾದ ಲಾಂಛನಕ್ಕೆ 5,000 ರೂ. ನಗದು ಬಹುಮಾನ ನೀಡಲಾಗುವುದು. ಈ ಲೋಗೋ ಡಿಸೈನನ್ನು ಜಂಟಿ ನಿರ್ದೇಶಕರು (ಫಿಲಾಟೆಲಿ), ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಕರ್ನಾಟಕ ವೃತ್ತ, ಬೆಂಗಳೂರು-560001ಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಮೇ 20ರೊಳಗೆ ಕಳುಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.