ಗೋಡಂಬಿಯ ಈ ಅಚ್ಚರಿದಾಯಕ ಆರೋಗ್ಯಲಾಭಗಳು ನಿಮಗೆ ಗೊತ್ತೇ?
ಗೋಡಂಬಿಯು ಭಾರತದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಡ್ರೈಫ್ರೂಟ್‌ಗಳಲ್ಲೊಂದಾಗಿದೆ. ಪಾಯಸ,ಹಲ್ವಾ ಆಗಿರಲಿ ಅಥವಾ ಶಾಹಿ ಪನೀರ್ ,ಪಲಾವ್ ಆಗಿರಲಿ...ಭಾರತೀಯ ಖಾದ್ಯಗಳಲ್ಲಿ ಗೋಡಂಬಿ ಇದ್ದೇ ಇರುತ್ತದೆ. ಅದು ಆಹಾರಕ್ಕೆ ಹೆಚ್ಚಿನ ರುಚಿಯನ್ನು ನೀಡುತ್ತದೆ ನಿಜ,ಆದರೆ ಅದು ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ.
ಹೆಚ್ಚಿನ ಜನರು ತಮ್ಮ ದಿನನಿತ್ಯದ ಆಹಾರದಲ್ಲಿ ಗೋಡಂಬಿಯನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಗೋಡಂಬಿ ಸಮೃದ್ಧ ಕ್ಯಾಲರಿಗಳನ್ನು ಹೊಂದಿರುವುದು ಇದಕ್ಕೆ ಕಾರಣ. 100 ಗ್ರಾಂ ಗೋಡಂಬಿ ಸುಮಾರು 553 ಕ್ಯಾಲರಿಗಳನ್ನು ಒದಗಿಸುತ್ತದೆ ಮತ್ತು ಇದು ಪಿಸ್ತಾ,ಬಾದಾಮಗಳಂತಹ ಬೀಜಗಳಿಗೆ ಹೋಲಿಸಿದರೆ ತುಂಬ ಹೆಚ್ಚು. ಇದೇ ಕಾರಣದಿಂದ ತಮ್ಮ ದೇಹತೂಕದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವವರು ಗೋಡಂಬಿಯಿಂದ ದೂರವೇ ಇರುತ್ತಾರೆ.
ಕ್ಯಾಲರಿಗಳು ಮಾತ್ರವಲ್ಲ,ಇತರ ಅಗತ್ಯ ಖನಿಜಗಳು,ವಿಟಾಮಿನ್‌ಗಳು ಮತ್ತು ಆರೋಗ್ಯಕ್ಕೆ ಒಳ್ಳೆಯದಾದ ಕೊಬ್ಬು ಸಹ ಗೋಡಂಬಿಯಲ್ಲಿ ಸಮೃದ್ಧವಾಗಿವೆ. ಉತ್ಕರ್ಷಣ ನಿರೋಧಕಗಳು ಮತ್ತು ನಾರು ಕೂಡ ಹೆಚ್ಚಿನ ಪ್ರಮಾಣದಲ್ಲಿವೆ.
ಮ್ಯಾಂಗನೀಸ್,ಪೊಟ್ಯಾಷಿಯಂ,ಸತುವು,ಕಬ್ಬಿಣ ಮತ್ತು ಮ್ಯಾಗ್ನೀಷಿಯಂನಂತಹ ಖನಿಜಗಳು ಗೋಡಂಬಿಯಲ್ಲಿವೆ. ಅದರಲ್ಲರುವ ಫೈಟೊಕೆಮಿಕಲ್‌ಗಳು ರೋಗಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ನಮ್ಮನ್ನು ಆರೋಗ್ಯಯುತರನ್ನಾಗಿ ಇರಿಸುತ್ತವೆ. ಇಂತಹ ಗೋಡಂಬಿಯ ಅಚ್ಚರಿದಾಯಕ ಆರೋಗ್ಯಲಾಭಗಳನ್ನು ತಿಳಿಯೋಣ ಬನ್ನಿ.......
► ಹೃದಯವನ್ನು ಆರೋಗ್ಯಯುತವಾಗಿರಿಸುತ್ತದೆ
ಗೋಡಂಬಿಯು ಹೃದಯಕ್ಕೆ ಒಳ್ಳೆಯದಲ್ಲ ಎಂಬ ತಪ್ಪುಗ್ರಹಿಕೆಯಿದೆ,ಆದರೆ ಅದು ನಿಜಕ್ಕೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಸಮೃದ್ಧವಾಗಿರುವ ಅಗತ್ಯ ಕೊಬ್ಬುಗಳು ಅಪಧಮನಿಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಜೊತೆಗೆ ಶರೀರದಲ್ಲಿ ಉತ್ಕರ್ಷಣ ಶೀಲ ಒತ್ತಡದ ಮಟ್ಟವನ್ನೂ ತಗ್ಗಿಸುತ್ತವೆ. ಅದರಲ್ಲಿರುವ ಫೈಟೊಸ್ಟೆರಾಲ್‌ಗಳು ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್) ಮಟ್ಟವನ್ನು ತಗ್ಗಿಸುತ್ತವೆ ಮತು ಒಳ್ಳೆಯ ಕೊಲೆಸ್ಟ್ರಾಲ್(ಎಚ್‌ಡಿಎಲ್) ಮಟ್ಟವನ್ನು ಹೆಚ್ಚಿಸುತ್ತವೆ. ಅಲ್ಲದೆ ಅದು ರಕ್ತದೊತ್ತಡವನ್ನು ತಗ್ಗಿಸುವ ಮೂಲಕ ಹೃದಯವನ್ನು ಆರೋಗ್ಯಯುತವಾಗಿರಿಸುತ್ತದೆ. ಗೋಡಂಬಿಯಲ್ಲಿರುವ ಉರಿಯೂತ ನಿರೋಧಕ ಸಂಯುಕ್ತಗಳು ಶರೀರದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಹೃದಯ ಸಮಸ್ಯೆಗಳನ್ನು ತಡೆಯುತ್ತವೆ.
► ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಗೋಡಂಬಿಯಲ್ಲಿ ಸಮೃದ್ಧವಾಗಿರುವ ಕ್ಯಾಲ್ಸಿಯಂ,ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂನಂತಹ ಖನಿಜಗಳು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತವೆ. ಅದರಲ್ಲಿ ಸೋಡಿಯಂ ಕಡಿಮೆ ಪ್ರಮಾಣದಲ್ಲಿರುವುದು ಮೂಳೆಗಳ ಸದೃಢತೆಯನ್ನು ಕಾಪಾಡಿಕೊಳ್ಳಲು ಗೋಡಂಬಿಯನ್ನು ಒಳ್ಳೆಯ ಆಯ್ಕೆಯನ್ನಾಗಿಸಿದೆ. ಅದರಲ್ಲಿರುವ ವಿಟಾಮಿನ್ ಕೆ ಮತ್ತು ಕ್ಯಾಲ್ಸಿಯಂ ಮೂಳೆಗಳ ಸಾಂದ್ರತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ,ತನ್ಮೂಲಕ ಮೂಳೆ ಮುರಿತಗಳು ಮತು ಅಸ್ತಿರಂಧ್ರತೆಯಂತಹ ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸುತ್ತವೆ.
► ಮಧುಮೇಹದ ಸಾಧ್ಯತೆಯನ್ನು ತಗ್ಗಿಸುತ್ತದೆ
ಹೌದು,ಗೋಡಂಬಿಯು ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುವ ಜೊತೆಗೆ ಮಧುಮೇಹದ ಅಪಾಯವನ್ನೂ ಕಡಿಮೆ ಮಾಡುತ್ತದೆ. ಅದರಲ್ಲಿ ಸಮೃದ್ಧವಾಗಿರುವ ಮೋನೊಸ್ಯಾಚ್ಯುರೇಟೆಡ ಫ್ಯಾಟಿ ಆ್ಯಸಿಡ್‌ಗಳು ರಕ್ತದಲ್ಲಿ ಗ್ಲುಕೋಸ್ ಬಿಡುಗಡೆಯನ್ನು ನಿಧಾನಗೊಳಿಸುತ್ತವೆ. ಗೋಡಂಬಿಯಲ್ಲಿರುವ ಹೈಡ್ರೋಎಥನಾಲಿಕ್ ಸಾರವು ಜೀವಕೋಶಗಳ ನಡುವೆ ಗ್ಲುಕೋಸ್ ರವಾನೆಯನ್ನು ಪ್ರಚೋದಿಸುತ್ತವೆ ಮತ್ತು ತನ್ಮೂಲಕ ಶರೀರದಲ್ಲಿ ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
► ಮಿದುಳನ್ನು ಹೆಚ್ಚು ಚುರುಕುಗೊಳಿಸುತ್ತದೆ.
ಗ್ಲುಕೋಸ್ ಮಿದುಳಿಗೆ ಪ್ರಮುಖ ಶಕ್ತಿಯ ಮೂಲವಾಗಿದೆ. ಆದರೆ ಈ ಅಂಗದ ಹೆಚ್ಚಿನ ಭಾಗವು ಕೊಬ್ಬುಗಳಿಂದ ಮಾಡಲ್ಪಟ್ಟಿರುವುದರಿಂದ ಕ್ರಿಯಾಶೀಲವಾಗಿರಲು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಲು ಆಹಾರದ ಮೂಲಕ ಫ್ಯಾಟಿ ಆ್ಯಸಿಡ್‌ಗಳ ಸ್ಥಿರವಾದ ಪೂರೈಕೆ ಅದಕ್ಕೆ ಅಗತ್ಯವಾಗಿದೆ. ಗೋಡಂಬಿಯಲ್ಲಿ ಮಿದುಳಿನ ಗ್ರಹಣ ಕಾರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ಹೊಂದಿರುವ ಹಲವಾರು ಸಂಯುಕ್ತಗಳಿವೆ. ಅಲ್ಲದೆ ಮಹಿಳೆಯರು ಗರ್ಭಾವಸ್ಥೆಯಲ್ಲಿ ಗೋಡಂಬಿಯನ್ನು ತಿನ್ನುತ್ತಿದ್ದರೆ ಹುಟ್ಟುವ ಮಗುವಿನ ನೆನಪಿನ ಶಕ್ತಿಯೂ ಚೆನ್ನಾಗಿರುತ್ತದೆ. ಉದ್ವೇಗ,ಬುದ್ಧಿಮಾಂದ್ಯತೆ,ಏಕಾಗ್ರತೆಯ ಕೊರತೆ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನೂ ಅದು ತಗ್ಗಿಸುತ್ತದೆ.
► ಪಿತ್ತಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ
ಗೋಡಂಬಿ ಇತರ ಬೀಜಗಳೊಂದಿಗೆ ಸೇರಿಕೊಂಡು ಪಿತ್ತಕಲ್ಲುಗಳು ಉಂಟಾಗುವ ಅಪಾಯವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಪಿತ್ತಕೋಶವು ಯಕೃತ್ತು ಉತ್ಪಾದಿಸುವ ಪಿತ್ತ ಆಮ್ಲಗಳನ್ನು ಸಂಗ್ರಹಿಸಿಡುವಲ್ಲ್ಲಿ ನೆರವಾಗುವ ಅಂಗವಾಗಿದೆ. ಈ ಆಮ್ಲಗಳು ಕೊಬ್ಬುಗಳ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ದಿನನಿತ್ಯದ ಆಹಾರದಲ್ಲಿ ಗೋಡಂಬಿಯಂತಹ ಬೀಜಗಳನ್ನು ಸೇರಿಸಿಕೊಳ್ಳುವುದರಿಂದ ಪಿತ್ತಕಲ್ಲುಗಳು ಉಂಟಾಗುವ ಅಪಾಯ ಶೇ.30 ರಷ್ಟು ಕಡಿಮೆಯಾಗುತ್ತದೆ.