ಎಸೆಸೆಲ್ಸಿ ಫಲಿತಾಂಶ: ಏಳನೇ ಸ್ಥಾನಕ್ಕೆ ಕುಸಿದ ದ.ಕ.ಜಿಲ್ಲೆ
ಟಾಪ್ 10ರಲ್ಲಿ 12 ವಿದ್ಯಾರ್ಥಿಗಳು
ಮಂಗಳೂರು, ಎ.30: ಇತ್ತೀಚಿನ ಕೆಲವು ವರ್ಷಗಳವರೆಗೂ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಮೂಲಕ ಬುದ್ಧಿವಂತರ ಜಿಲ್ಲೆಯ ಹಿರಿಮೆ ಹೆಚ್ಚಿಸುತ್ತಿದ್ದ ದ.ಕ.ಜಿಲ್ಲೆಯ ವಿದ್ಯಾರ್ಥಿಗಳು ಇದೀಗ ಏಳು ಅಥವಾ ಎಂಟನೆ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳುವುದರೊಂದಿಗೆ ಬುದ್ಧಿವಂತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಭಾರೀ ಹೊಡೆತ ನೀಡಲಾರಂಭಿಸಿದ್ದಾರೆ ಎಂಬ ಮಾತಿಗೆ ಮಂಗಳವಾರ ಪ್ರಕಟಗೊಂಡ 2018-19ನೆ ಸಾಲಿನ ಫಲಿತಾಂಶ ಸಾಕ್ಷಿಯಾಗಿದೆ.
ಕಳೆದ ವರ್ಷ ಶೇ.85.56 ಫಲಿತಾಂಶ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ದ.ಕ.ಜಿಲ್ಲೆಯು ಈ ಬಾರಿ ಶೇ.86.85 ಫಲಿತಾಂಶ ದಾಖಲಿಸಿ 7ನೆ ಸ್ಥಾನಕ್ಕೆ ಕುಸಿದಿದೆ. ಸ್ಥಾನದಲ್ಲಿ ಕುಸಿತ ಕಂಡರೂ ಶೇಕಡಾವಾರು ಫಲಿತಾಂಶದಲ್ಲಿ ಒಂದಷ್ಟು ಚಿಗುರಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಒಟ್ಟಾರೆಯ ಫಲಿತಾಂಶವು ದ.ಕ.ಜಿಲ್ಲೆಯ ವಿದ್ಯಾರ್ಥಿಗಳ ಹಿನ್ನಡೆಗೆ ಕನ್ನಡಿಯಾಗಿದೆ.
ದ.ಕ.ಜಿಲ್ಲೆಯ 7 ಶೈಕ್ಷಣಿಕ ವಲಯಗಳಲ್ಲಿ 27,564 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 23,940 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, 3,624 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ದ.ಕ.ಜಿಲ್ಲೆಯ 9 ಪ್ರೌಢಶಾಲೆಗಳ 12 ವಿದ್ಯಾರ್ಥಿಗಳು ಟಾಪ್ 10ನಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಅದರಲ್ಲಿ 10 ಬಾಲಕಿಯರು ಮತ್ತು ಇಬ್ಬರು ಬಾಲಕರು ಸೇರಿದ್ದಾರೆ.
ದ.ಕ.ಜಿಲ್ಲೆಯ 84 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, ಅದರಲ್ಲಿ 17 ಸರಕಾರಿ, 5 ಅನುದಾನಿತ, 62 ಖಾಸಗಿ ಶಾಲೆಗಳು ಸೇರಿವೆ. ಶೂನ್ಯ ಫಲಿತಾಂಶವನ್ನು ಯಾವ ಶಾಲೆಯೂ ಪಡೆಯದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಟಾಪ್ ಟನ್ನಲ್ಲಿ ಸ್ಥಾನಪಡೆದ 12 ವಿದ್ಯಾರ್ಥಿಗಳು
ದ.ಕ.ಜಿಲ್ಲೆಯ 9 ಪ್ರೌಢಶಾಲೆಗಳ 12 ವಿದ್ಯಾರ್ಥಿಗಳು ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಾರೆ.
1. ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ 624.
2. ಬಂಟ್ವಾಳ ವೆಂಕಟ್ರಮಣಸ್ವಾಮಿ ಆಂಗ್ಲಮಾಧ್ಯಮ ಶಾಲೆಯ ಅನುಪಮ ಕಾಮತ್ 624.
3. ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಿಂಚನಾ ಲಕ್ಷ್ಮಿ 624.
4. ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆಯ ಕೃಪಾ ಕೆ.ಆರ್. 624.
5. ಆಳ್ವಾಸ್ ಶಿಕ್ಷಣ ಸಂಸ್ಥೆಯ ಶ್ರೇಯಾ ಪೈ 623.
6. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸುಜನಾನ್ ಆರ್.ಶೆಟ್ಟಿ 623.
7. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಶ್ರೀ ಯು. 623.
8. ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ಜ್ಯೋತಿಕಾ ಎನ್. 622.
9. ಉರ್ವ ಕೆನರಾ ಪ್ರೌಢಶಾಲೆಯ ಸಹಜ್ ಆಳ್ವ 622.
10. ಲೇಡಿಹಿಲ್ನ ವಿಕ್ಟೋರಿಯಾ ಗರ್ಲ್ಸ್ ಪ್ರೌಢಶಾಲೆಯ ರಾಜೇಶ್ವರಿ ಜೆ. ಶೆಟ್ಟಿ 622.
11. ಡೊಂಗರಕೇರಿಯ ಕೆನರಾ ಗರ್ಲ್ಸ್ ಪ್ರೌಢಶಾಲೆಯ ಬಿ. ಸ್ವಾತಿ ಬಾಳಿಗಾ 622.
12. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಪೂರ್ತಿ ಮುರಳೀಧರ್ ಹುಬ್ಬಳ್ಳಿ 622.