ಉಡುಪಿ: ಬೆಸಿಗೆಯ ದಾಹ ತಣಿಸಲು "ಜಲ-ಕುಟೀರ" ಸ್ಥಾಪನೆ
ಉಡುಪಿ: ಜೋಸ್ ಆಲುಕ್ಕಾಸ್ ಆಭರಣ ಮಳಿಗೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ, ಸುಡು ಬಿಸಿಲಲ್ಲಿ ದಾಹ ತಣಿಸಲು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದೆ.
'ಜಲ ಕುಟೀರ'ವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥೀಕಾದಲ್ಲಿ ಸ್ಥಾಪಿಸಿದ್ದಾರೆ. ಅದರ ಉದ್ಘಾಟನೆಯು ಬಾಲಪ್ರತಿಭೆ ಯುಕ್ತ ಕೆ ಸಾಮಗಳಿಂದ ಬುಧವಾರ ನಡೆಯಿತು.
ಮೃತ್ತಿಕೆ ಹೂಜೆಗೆ ಬಿಸಿಲ ತಾಪದ ರಕ್ಷಣೆಗೆಂದು ತೃಣ ಕುಟೀರವನ್ನು ಕಲಾವಿದ ರಮೇಶ್ ಕಿದಿಯೂರು ಕಲಾತ್ಮಕವಾಗಿ ರಚಿಸಿದ್ದು ಗಮನ ಸೆಳೆಯುತ್ತಿದೆ. ಇಪ್ಪತ್ತು ಲೀಟರಿನಷ್ಟು ನೀರು ತುಂಬುವ ಸಾಮರ್ಥ್ಯ ಹೊಂದಿರುವ ಎರಡು ಮೃತ್ತಿಕೆ ಹೂಜೆಯಲ್ಲಿ ನೀರು ತುಂಬಿಡುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಮೃತ್ತಿಕೆ ಹೂಜೆಯು ನೀರನ್ನು ತಂಪಾಗಿಸುವ ಗುಣ ಹೊಂದಿದರಿಂದ ಜಂಟಿ ಸಮಿತಿಯವರು ಹೂಜೆಯನ್ನು ಆಯ್ಕೆ ಮಾಡಿದ್ದಾರೆ. ಹಳೆ ಸಂಪ್ರದಾಯಕ್ಕೆ ಮರುಜೀವ ನೀಡಿದ್ದಾರೆ. ಬಳಲಿದವರಿಗೆ ಜಲದಾನ ಮಾಡುವ ಯೋಜನೆಯು ಮೆಚ್ಚುಗೆಗೆ ಪಾತ್ರವಾಗಿದೆ. 'ಜೀವಜಲ ಅಮೂಲ್ಯ, ನೀರನ್ನು ಮಿತವಾಗಿ ಬಳಸಿ' ಸಂದೇಶ ವಾಕ್ಯದ ಫಲಕವನ್ನು ಇಲ್ಲಿ ಅಳವಡಿಸಿ ಜಲ ಜಾಗ್ರತಿ ಮೂಡಿಸಲಾಗಿದೆ.
ನೀರಿನ ಅಭಾವದಿಂದ ಸಕಲ ಜೀವಿಗಳು, ಮನುಷ್ಯರು ರೋಧಿಸ ಬೇಕಾದ ಪರಿಸ್ಥಿತಿ ಈ ಸಲದ ಬೆಸಿಗೆಯಲ್ಲಿ ಎದುರಾಗಿದೆ. ಪ್ರಾಣಿ ಪಕ್ಷಿಗಳ ದಾಹ ತಣಿಸಲು ನಾವು ನಗರದಲ್ಲಿ ಅವುಗಳ ಸಂಚಾರ, ಇರುವಿಕೆ ಇರುವ, ಹತ್ತು ಸ್ಥಳಗಳನ್ನು ಗುರುತಿಸಿ, ಅಲ್ಲಿ ಕಲ್ಮರ್ಗಿಗಳನ್ನು ಸ್ಥಾಪಿಸಿ ನೀರಿಡಲು ಪ್ರಾರಂಭಿಸಿದೆವು.
ಈಗಾಗಲೇ ನಾವು ಸುಡು ಬಿಸಿಲ ಧಗೆಯಲ್ಲಿ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆಗಳು ನಡೆದವು. ಬಿಸಿಲ ತಾಪ, ಬಾಯಾರಿಕೆ ಕಾರಣವೆಂದು ಅಸ್ವಸ್ಥರು ಹೇಳಿದಾಗ, ನಮಗೆ ಜಲ ಕುಟೀರ ಸ್ಥಾಪನೆಗೆ ಪ್ರೇರಣೆ ಆಯಿತು. ಯಾವತ್ತೂ ಜನ ಸಂಚಾರ ಇರುವ ಮಾರುತಿ ವಿಥೀಕಾ ರಸ್ತೆಯಲ್ಲಿ ಮೃತ್ತಿಕೆ ಹೂಜೆ ಇಡಲು ಆಯ್ಕೆ ಮಾಡಿಕೊಂಡೆವು. ರವಿಚಂದ್ರನ್ ಅವರು ತಮ್ಮ ವಾಣಿಜ್ಯ ಸಂಕೀರ್ಣದ ಮುಂಬಾಗ ಸ್ಥಳಾವಕಾಶ ನೀಡಿದರು. ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಯು ಮಳೆಗಾಲ ಪ್ರಾರಂಭ ಆಗುವವರೆಗೂ ಮುಂದುವರಿಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೋಸ್ ಆಲೂಕ್ಕಾಸ್ ಚಿನ್ನಾಭರಣ ಸಂಸ್ಥೆಯ ಪ್ರಬಂಧಕ ರಾಜೇಶ್ ಎನ್ ಆರ್, ಸಿಬ್ಬಂದಿಗಳಾದ ರತೀಶ್, ಗೋಪಾಲ್ ಮತ್ತು ನಾಗರಿಕ ಸಮಿತಿಯ ಪದಾಧಿಕಾರಿಗಳಾದ ತಾರಾನಾಥ್ ಮೇಸ್ತ ಶಿರೂರು, ಸುಧಾಕರ್ ದೇವಾಡಿಗ, ಡೇವಿಡ್ ಮತ್ತಿತರರು ಉಪಸ್ಥಿತರಿದ್ದರು.