‘ನನ್ನೊಳಗಿನ ನಾನು’ ಕೃತಿಯ ಇಂಗ್ಲಿಷ್ ಅನುವಾದ ಲೋಕಾರ್ಪಣೆ
ಮಂಗಳೂರು, ಮೇ 1: ಹಿರಿಯ ಮುತ್ಸದ್ದಿ, ಮಾಜಿ ಸಚಿವ ಬಿ.ಎ. ಮೊಹಿದೀನ್‌ರ ‘ನನ್ನೊಳಗಿನ ನಾನು’ ಆತ್ಮಕಥನದ ಇಂಗ್ಲಿಷ್ ಅನುವಾದ ‘ದಿ ಐ ವಿದಿನ್ ಮಿ’ ಕೃತಿಯನ್ನು ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಲೋಕಾರ್ಪಣೆಗೊಳಿಸಿದರು.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ಬಿ.ಎ. ಮೊಹಿದೀನ್ ಅವರು ರಾಷ್ಟ್ರಕ್ಕೆ ಮಾದರಿ ರಾಜಕಾರಣಿಯಾಗಿದ್ದರು. ಅವರ ತತ್ವ, ಸಿದ್ಧಾಂತ ಗಳು ಎಲ್ಲರಿಗೂ ಮಾರ್ಗದರ್ಶಿ. ‘ನನ್ನೊಳಗಿನ ನಾನು’ ಆತ್ಮಕಥನದ ಆಶಯವು ಎಲ್ಲರಿಗೂ ತಲುಪಬೇಕು. ಕನ್ನಡದಿಂದ ಕೇವಲ ಇಂಗ್ಲಿಷ್‌ಗೆ ಮಾತ್ರವಲ್ಲ, ಉರ್ದು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ತರ್ಜುಮೆಯಾಗಬೇಕು. ಅದಕ್ಕೆ ತನ್ನ ಸಹಕಾರವಿದೆ ಎಂದು ಹೇಳಿದರು.
ಮೊಹಿದೀನ್‌ರು ಸಮುದಾಯಕ್ಕೆ ಸಣ್ಣ ಕಪ್ಪುಚುಕ್ಕೆ ಬಾರದಂತೆ ಜೀವನ ನಡೆಸಿದ್ದರು. ನನ್ನ ತಂದೆ ಯು.ಟಿ.ಫರೀದ್ ಮತ್ತು ಬಿ.ಎ.ಮೊಹಿದಿನ್ ಅವರು ಜೊತೆ ಜೊತೆಯಾಗಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಜೊತೆಗೆ ಯಾವುದೇ ಸಮುದಾಯವನ್ನು ಕಡೆಗಣಿಸದೇ ಎಲ್ಲ ಸಮುದಾಯಗಳನ್ನು ಒಗ್ಗೂಡಿಸು ವಲ್ಲಿ ಯಶಸ್ವಿಯಾಗಿದ್ದರು ಎಂದು ಸಚಿವ ಖಾದರ್ ತಮ್ಮ ನೆನಪುಗಳನ್ನು ತೆರೆದಿಟ್ಟರು.
ರಾಜಕೀಯ ಮೀರಿನಿಂತ ಮೊಹಿದೀನ್
ಹಿರಿಯ ಮುತ್ಸದ್ದಿ ಬಿ.ಎ. ಮೊಹಿದೀನ್ ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಎಲ್ಲಿಯೂ ರಾಜಕೀಯ ನೆಲೆಯನ್ನು ಬಿಡಲಿಲ್ಲ. ಸದಾಕಾಲ ಅವರೊಬ್ಬ ‘ಹ್ಯೂಮನ್ ಬಿಯಿಂಗ್’ಆಗಿ ಕಾಣುತ್ತಾರೆ. ಮೊಹಿದೀನ್ ರಾಜಕೀಯವನ್ನು ಮೀರಿನಿಂತ ಮಹಾನ್ ವ್ಯಕ್ತಿಯಾಗಿದ್ದಾರೆ. ಅದಕ್ಕಾಗಿಯೇ ಈ ಪುಸ್ತಕ ಜನರನ್ನು ಮನಸೂರೆಗೊಳಿಸುತ್ತಿದೆ ಎಂದು ‘ನನ್ನೊಳಗಿನ ನಾನು’ ಕೃತಿಯ ಇಂಗ್ಲಿಷ್ ಅನುವಾದಕ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕ ಬಿ. ಸುರೇಂದ್ರರಾವ್ ಸಂತಸ ವ್ಯಕ್ತಪಡಿಸಿದರು.
ಆತ್ಮಕಥೆಯು ಆತ್ಮಸ್ಥುತಿಯಾಗಬಾರದು. ಪುಸ್ತಕ ಓದಿ ಗ್ರಹಿಸುವುದು ಸುಲಭ. ಆದರೆ ಅದೇ ಶಬ್ದಗಳನ್ನು ತರ್ಜುಮೆ ಮಾಡುವುದು ವಿಭಿನ್ನವಾಗಿರುತ್ತದೆ. ಮೊಯಿದೀನ್‌ರ ಭಾವನೆಗಳನ್ನು ಯಥಾವತ್ತಾಗಿ ಹಿಡಿದಿಟ್ಟುಕೊಂಡು ಅಕ್ಷರ ರೂಪಕ್ಕೆ ಇಳಿಸಿದ್ದ ಆತ್ಮಕಥನವನ್ನು ತರ್ಜುಮೆ ಮಾಡುವಾಗ ಬಲು ಜಾಗರೂಕತೆ ವಹಿಸಿದ್ದೆ ಎಂದು ಅವರು ತಿಳಿಸಿದರು.
ಆತ್ಮಕಥನದಲ್ಲಿ ಮೊಹಿದೀನ್ ಅವರು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಆತ್ಮಕಥನವೆಂದರೆ ನಮ್ಮನ್ನು ನಾವೇ ಬೆತ್ತಲಾಗಿಸಿಕೊಳ್ಳುವುದು. ಯಾರ ಮುಂದೆ ಎಷ್ಟು ಪ್ರಮಾಣದಲ್ಲಿ ಬೆತ್ತಲಾಗಬೇಕು ಎನ್ನುವುದನ್ನು ವ್ಯಕ್ತಿಯೇ ನಿರ್ಧರಿಸಬೇಕು. ಪ್ರತಿಯೊಂದಕ್ಕೂ ಸಮಾಜದ ಚೌಕಟ್ಟುಗಳಿರುತ್ತದೆ. ಅಂತಹ ಚೌಕಟ್ಟನ್ನು ಆತ್ಮಕಥನ ಎಲ್ಲಿಯೂ ಮೀರಿಲ್ಲ. ಪುಸ್ತಕ ಬಹಳ ಶ್ರೇಷ್ಠ ಎಂದು ಹೇಳಲ್ಲ. ಆದರೆ ಈ ಆತ್ಮಕಥೆಯಲ್ಲಿ ಪಾರದರ್ಶಕತೆ ಇರುವುದು ಸತ್ಯ ಎಂದು ಹೇಳಿದರು.
ಅಧಿಕಾರದಲ್ಲಿದ್ದಾಗ ಗೌರವ ಕೊಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಅಧಿಕಾರವಿಲ್ಲದಿದ್ದಾಗಲೂ ಸಮಾಜ ಗೌರವ ಸಲ್ಲಿಸುತ್ತದೆ ಎಂದರೆ ಆತ ಅಸಾಮಾನ್ಯ ವ್ಯಕ್ತಿಯೇ ಸರಿ. ವ್ಯಕ್ತಿಯು ತನ್ನ ಉನ್ನತ ಕಾಲದಲ್ಲಿ ಸುತ್ತಮುತ್ತಲಿನ ಪರಿಸರವನ್ನು ಮರೆಯುತ್ತಾನೆ. ಎಲ್ಲರೂ ಮರೆಯುವ ಸ್ಥಿತಿಗೆ ಉನ್ನತ ವ್ಯಕ್ತಿ ಕ್ಷೀಣಿಸಬಹುದು. ಆದರೆ ಮೊಹಿದೀನ್‌ರು ಎಂತಹ ಸಂದರ್ಭದಲ್ಲೂ ಎಲ್ಲರನ್ನು ಸಮಾನತೆಯಿಂದ ಕಂಡಿದ್ದರು. ಇಂತಹ ವಿಷಯಗಳಿಂದಲೇ ಮೊಹಿದೀನ್ ಶ್ರೇಷ್ಠರಾಗುತ್ತಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಬ್ಯಾರೀಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್, ಮಾಜಿ ಸಚಿವ ಜಯಪ್ರಕಾಶ ಹೆಗಡೆ ಮಾತನಾಡಿದರು.
ಈ ಸಂದರ್ಭ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಇಬ್ರಾಹೀಂ, ಅನುವಾದಕ ಬಿ. ಸುರೇಂದ್ರರಾವ್ ಹಾಗೂ ಆಕೃತಿ ಪ್ರಕಾಶನದ ನಾಗೇಶ್ ಅವರನ್ನು ಉಸ್ತುವಾರಿ ಸಚಿವ ಯು.ಟಿ.ಖಾದರ್ ಶಾಲು ಹೊದಿಸಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬಿ.ಎ.ಮೊಹಿದೀನ್‌ರ ಪುತ್ರರಾದ ಮುಸ್ತಾಕ್ ಹಾಗೂ ಮಸೂದ್, ವಿ.ಟಿ.ರಾಜಶೇಖರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕೊಡಿಜಾಲ್ ಇಬ್ರಾಹೀಂ, ಬಶೀರ್ ಬೈಕಂಪಾಡಿ, ಉಪಮೇಯರ್ ಮುಹಮ್ಮದ್ ಕುಂಜತ್ತ್‌ಬೈಲ್, ಅಡ್ವೋಕೇಟ್ ಮುಹಮ್ಮದ್ ಹನೀಫ್, ಮೂಸಬ್ಬ, ಮುಹಮ್ಮದ್ ಅಲಿ ಉಚ್ಚಿಲ ಹಾಗೂ ಬಿ.ಎ.ಮೊಹಿದೀನ್‌ರ ಆತ್ಮಕಥನ ‘ನನ್ನೊಳಗಿನ ನಾನು’ ಕನ್ನಡ ಕೃತಿಯನ್ನು ನಿರೂಪಿಸಿದ ಮುಹಮ್ಮದ್ ಕುಳಾಯಿ ಮತ್ತು ಬಿ.ಎ.ಮುಹಮ್ಮದ್ ಅಲಿ ಉಪಸ್ಥಿತರಿದ್ದರು.
ಸಾಹಿತಿ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಮೊಹಿದೀನ್ ರಿಗೆ ತುರ್ತುಪರಿಸ್ಥಿತಿಯ ಕಲ್ಪನೆ ಇತ್ತು: ಅಬ್ದುಸ್ಸಲಾಂ ಪುತ್ತಿಗೆ
ಬಿ.ಎ.ಮೊಹಿದೀನ್ ಅವರು ಇಂದಿರಾಗಾಂಧಿಯ ವಿರೋಧಿಯೂ, ಸಮರ್ಥಕರೂ ಆಗಿದ್ದರು. ತುರ್ತು ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು. ಆಗಿನ ಸಂದರ್ಭದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರದಿದ್ದರೆ ಅಂದು ಎದುರಾಗುತ್ತಿದ್ದ ದುರಂತಗಳ ಚಿತ್ರಣ ಮೊಹಿದೀನ್ ಅವರರ ವಿವೇಚನೆಗೆ ಬಂದಿತ್ತು. ಮೊಹಿದೀನ್ ಅವರದ್ದು ವಸ್ತುನಿಷ್ಠ ಧೋರಣೆಯಾಗಿತ್ತು ಎಂದು ‘ವಾರ್ತಾಭಾರತಿ’ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅವರು ಪ್ರತಿಪಾದಿಸಿದರು.
ರಾಜಕಾರಣವು ಎರಡನೇ ಪ್ರಾಚೀನ ವೃತ್ತಿಯಾಗಿದೆ. ಒಳ್ಳೆಯವರನ್ನು ಹುಡುಕುತ್ತಾ ಹೋದರೆ ಸಿಕ್ಕೇ ಸಿಗುತ್ತಾರೆ. ಆದರೆ ಕೆಟ್ಟವರನ್ನು ಹುಡುಕುವುದೇ ಬೇಡ, ಅವರು ಕಣ್ಮುಂದೆಯೇ ಸಿಗುತ್ತಾರೆ. ಅಂತಹ ಸಂದರ್ಭ ಅವರ ಇರುವಿಕೆ ಗಮನಾರ್ಹವಾಗುವುದೇ ಇಲ್ಲ. ಒಳ್ಳೆಯವರ ಪೈಕಿ ಕೆಲವರು ಕಾಣದಿದ್ದರೆ ಕಳೆದುಕೊಂಡ ಭಾವ ಉಂಟಾಗುತ್ತದೆ. ಜನಸೇವೆ ಮಾಡಿದವರು ಸದಾ ನೆನಪಲ್ಲಿ ಉಳಿಯುತ್ತಾರೆ. ಅದಕ್ಕೆ ಬಿ.ಎ.ಮೊಹಿದೀನ್ ನಿಖರ ನಿದರ್ಶನ ಎಂದು ಅಭಿಪ್ರಾಯಪಟ್ಟರು.
ದೇವರಾಜ ಅರಸರು ಗತಿಸಿ ನಾಲ್ಕು ದಶಕ ಕಳೆದರೂ ಅವರನ್ನು ನೆನಪಿಸಿಕೊಳ್ಳುವ ಜನರಿದ್ದಾರೆ. ಅಝೀಝ್ ಶೇಠ್, ನಝೀರ್ ಸಾಬ್ ಅವರಂಥವರು ಸ್ಮರಣೀಯರು. ಇಂತಹ ಸ್ಮರಣೀಯರ ಸಾಲಿನಲ್ಲಿ ಬಿ.ಎ.ಮೊಹಿದೀನ್ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು.