ವಾರಣಾಸಿ: ಕನ್ನಡಿಗ ಪತ್ರಕರ್ತನ ನಾಮಪತ್ರ ತಿರಸ್ಕೃತ
ಡಾ. ಯು.ಪಿ. ಶಿವಾನಂದ
ಪುತ್ತೂರು: 'ದಿಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳಿಯಿಂದ ದಿಲ್ಲಿಗೆ ಆಡಳಿತ ಆಗಬೇಕು' ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ವಾರಣಾಸಿಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕನ್ನಡಿಗ ಪುತ್ತೂರಿನ ಡಾ. ಯು.ಪಿ. ಶಿವಾನಂದ ಅವರ ನಾಮಪತ್ರ ತಿರಸ್ಕೃತಗೊಂಡಿರುವುದಾಗಿ ತಿಳಿದು ಬಂದಿದೆ.
ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ಅವರು ಕಳೆದ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ್ದರು.
ಬಲಾತ್ಕಾರದ ಬಂದ್, ಭ್ರಷ್ಟಾಚಾರ, ನೇತ್ರಾವತಿ ನದಿ ತಿರುವು ಯೋಜನೆ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿಷಯ ಮತ್ತು ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ 'ದಿಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳಿಯಿಂದ ದಿಲ್ಲಿಗೆ ಆಡಳಿತ ಆಗಬೇಕು' ಎಂಬ ವಿಚಾರವನ್ನು ರಾಷ್ಟ್ರದ ಪ್ರಮುಖ ನಾಯಕರಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡುವುದಕ್ಕಾಗಿ ಮತ್ತು ರಾಷ್ಟ್ರ ಮಟ್ಟದಿಂದಲೇ ಈ ವಿಚಾರಗಳು ಅನುಷ್ಠಾನಗೊಳ್ಳಬೇಕೆಂಬ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ವಾರಣಾಸಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ನಾಮಪತ್ರ ಪರಿಶೀಲನೆ ವೇಳೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿರುವುದಾಗಿ ತಿಳಿದು ಬಂದಿದೆ.
ಮೋದಿಯವರ ವಿರುದ್ದ ಮಾತ್ರವಲ್ಲದೆ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ದವೂ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಯು.ಪಿ. ಶಿವಾನಂದರವರು ಎಪ್ರಿಲ್ 18ರಂದು ನಾಮಪತ್ರ ಸಲ್ಲಿಸಿದ್ದರು. ಅಮೇಥಿಯಲ್ಲಿ ಎ.20ರಂದು ನಾಮಪತ್ರ ಪರೀಶಿಲನೆ ನಡೆದಿದ್ದು ಯು.ಪಿ. ಶಿವಾನಂದರ ನಾಮಪತ್ರ ಸ್ವೀಕೃತಗೊಂಡಿದೆ.