ಉಡುಪಿ: ಬೇಸಿಗೆ ದಾಹ ತಣಿಸಲು ‘ಜಲಕುಟೀರ’
ಉಡುಪಿ, ಮೇ 2: ಜಿಲ್ಲೆಯಲ್ಲಿ ಬಿರುಬಿಸಿಲಿನ ಸುಡುತಾಪದಿಂದ ಕಂಗೆಟ್ಟಿರುವ ಜನತೆಯ ದಾಹವನ್ನು ತಣಿಸಲು ಉಡುಪಿ ನಗರದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಜೋಸ್ ಅಲುಕ್ಕಾಸ್ ಆಭರಣ ಮಳಿಗೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದೆ.
‘ಜಲ ಕುಟೀರ’ ವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥಿಕಾದಲ್ಲಿ ಇರಿಸಲಾಗಿದೆ. ಇದರ ಉದ್ಘಾಟನೆಯು ಬಾಲ ಪ್ರತಿಭೆ ಯುಕ್ತ ಕೆ.ಸಾಮಗ ಇವಳಿಂದ ಬುಧವಾರ ನಡೆಯಿತು.
ಮಣ್ಣಿನ ಹೂಜೆಯಲ್ಲಿ ಶುದ್ಧ ಕುಡಿಯುವ ನೀರನ್ನು ತುಂಬಿಸಿ ಇರಿಸಿದ್ದು, ಇದಕ್ಕೆ ಬಿಸಿಲಿನ ತಾಪದಿಂದ ರಕ್ಷಣೆಗೆಂದು ತೆಂಗಿನ ಸೋಗೆಯ ಕುಟೀರವನ್ನು ಕಲಾವಿದ ರಮೇಶ್ ಕಿದಿಯೂರು ಕಲಾತ್ಮಕವಾಗಿ ರಚಿಸಿದ್ದಾರೆ. 20ಲೀ. ನೀರು ತುಂಬುವ ಸಾಮರ್ಥ್ಯದ ಎರಡು ಮಣ್ಣಿನ ಹೂಜಿಯಲ್ಲಿ ನೀರು ತುಂಬಿಸಿಡುವ ವ್ಯವಸ್ಥೆ ಮಾಡಲಾಗಿದೆ. ಮಣ್ಣಿನಿಂದ ತಯಾರಿಸಿದ ಹೂಜಿಯು ನೀರನ್ನು ತಂಪಾಗಿ ಇರಿಸುವ ಗುಣವನ್ನು ಹೊಂದಿರುವುದರಿಂದ ಸಮಿತಿ ಹೂಜಿಯನ್ನು ಆಯ್ಕೆ ಮಾಡಿದೆ.
‘ಜೀವಜಲ ಅಮೂಲ್ಯ, ನೀರನ್ನು ಮಿತವಾಗಿ ಬಳಸಿ’ ಎಂಬ ಸಂದೇಶ ವಾಕ್ಯದ ಫಲಕವನ್ನು ಇಲ್ಲಿ ಇರಿಸಲಾಗಿದ್ದು, ಈ ಮೂಲಕ ಜಲಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವವರಿಗೆ, ಬಾಯಾರಿಕೆಯಿಂದ ಬಳಲಿದವರಿಗೆ ಜಲದಾನ ಮಾಡುವ ಈ ಯೋಜನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
‘ಈ ಬಾರಿಯ ಬಿರುಬೇಸಿಗೆ ಹಾಗೂ ಸುಡು ಬಿಸಿಲಿನಿಂದಾಗಿ ನೀರಿನ ಅಭಾವ ಉಂಟಾಗಿದ್ದು, ಸಕಲಜೀವಿಗಳು, ಮನುಷ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಣಿ ಪಕ್ಷಿಗಳ ದಾಹ ತಣಿಸಲು ನಾವು ನಗರದಲ್ಲಿ ಅವುಗಳ ಸಂಚಾರ, ಇರುವಿಕೆ ಇರುವ ಹತ್ತು ಸ್ಥಳಗಳನ್ನು ಗುರುತಿಸಿ, ಅಲ್ಲಿ ಕಲ್ಮರ್ಗಿಗಳನ್ನು ಸ್ಥಾಪಿಸಿ ನೀರಿಡಲು ಪ್ರಾರಂಭಿಸಿದೆವು’ ಎಂದು ಸಮಿತಿಯ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಯೋಜನೆಯ ಕುರಿತು ವಿವರಿಸಿದರು.
‘ಈಗಾಗಲೇ ನಾವು ಸುಡು ಬಿಸಿಲಿನ ಧಗೆಯಲ್ಲಿ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದ ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಬಿಸಿಲಿನ ತಾಪ ಹಾಗೂ ಅತಿಯಾದ ಬಾಯಾರಿಕೆ ತಮ್ಮ ಅಸ್ವಸ್ಥಕ್ಕೆ ಕಾರಣವೆಂದು ಅವರು ಹೇಳಿದಾಗ, ಜಲ ಕುಟೀರ ಸ್ಥಾಪಿಸಲು ನಮಗೆ ಪ್ರೇರಣೆಯಾಯಿತು. ಸದಾ ಕಾಲ ಜನಸಂಚಾರವಿರುವ ಮಾರುತಿ ವಿಥಿಕಾ ರಸ್ತೆಯಲ್ಲೇ ಮಣ್ಣಿನ ಹೂಜಿ ಇಡಲು ನಿರ್ಧರಿಸಿದೆವು. ಮಳೆಗಾಲ ಪ್ರಾರಂಭಗೊಳ್ಳುವವರೆಗೂ ಈ ಯೋಜನೆ ಮುಂದುವರಿಯಲಿದೆ ’ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೋಸ್ ಅಲೂಕಾಸ್ ಚಿನ್ನಾಭರಣ ಸಂಸ್ಥೆಯ ಪ್ರಬಂಧಕ ರಾಜೇಶ್ ಎನ್ ಆರ್, ಸಿಬ್ಬಂದಿಗಳಾದ ರತೀಶ್, ಗೋಪಾಲ್ ಹಾಗೂ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ತಾರಾನಾಥ ಮೇಸ್ತ ಶಿರೂರು, ಸುಧಾಕರ ದೇವಾಡಿಗ, ಡೇವಿಡ್ ಮತ್ತಿತರರು ಉಪಸ್ಥಿತರಿದ್ದರು.