ಫೇಸ್ಬುಕ್ ಸ್ನೇಹಕ್ಕೆ ಲಕ್ಷಾಂತರ ರೂ. ಕಳೆದುಕೊಂಡ ಬ್ರಹ್ಮಾವರದ ವೈದ್ಯ
ಉಡುಪಿ, ಮೇ2: ಫೇಸ್ಬುಕ್ ಮೂಲಕ ಪರಿಚಯವಾಗಿ ತನ್ನನ್ನು ವೈದ್ಯೆಯೆಂದು ಪರಿಚಯಿಸಿಕೊಂಡಿದ್ದ ಲಂಡನ್ನ ಯುವತಿಯೊಬ್ಬಳ ಮಾತನ್ನು ನಂಬಿ ಬ್ರಹ್ಮಾವರದ ವೈದ್ಯರೊಬ್ಬರು ಲಕ್ಷಾಂತರ ರೂ. ನಗದು ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿ ಮೋಸ ಹೋಗಿದ್ದಾರೆ.
ಬ್ರಹ್ಮಾವರ ಹಂದಾಡಿ ನಿವಾಸಿ ಡಾ. ಪ್ರವೀಣಕುಮಾರ್ (43), ಯುವತಿ ಮಾತನ್ನು ನಂಬಿ ಒಟ್ಟು 1,95,700 ರೂ. ಹಣ ಕಳೆದುಕೊಂಡಿದ್ದಾರೆ. ಡಾ. ಪ್ರವೀಣ್ ಅವರಿಗೆ ಫೇಸ್ಬುಕ್ ನಲ್ಲಿ ಈ ಯುವತಿಯ ಪರಿಚಯವಾಗಿತ್ತು. ಲಂಡನ್ನ ಕಮಿಲ್ಲಾ ಗಂಪಿ ಎಂಬಾಕೆ ತನ್ನನ್ನು ವೈದ್ಯೆ ಎಂದು ಪರಿಚಯಿಸಿಕೊಂಡ ಬಳಿಕ ಡಾ.ಪ್ರವೀಣ್ಕುಮಾರ್ ಫ್ರೆಂಡ್ಸ್ ರಿಕ್ವೆಸ್ಟ್ ಸ್ವೀಕಾರ ಮಾಡಿದ್ದರು. 2019ರ ಎ.30ರಂದು ಬೆಳಗ್ಗೆ 11:08ಕ್ಕೆ ಆಕೆ ಕರೆ ಮಾಡಿ ತಾನು ಹೊಸದಿಲ್ಲಿಯ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ತೊಂದರೆ ಸಿಲುಕ್ಕಿದ್ದು, ಇದಕ್ಕಾಗಿ 2 ಲಕ್ಷ ರೂ. ಅಗತ್ಯವಿದೆ. ತನ್ನಲ್ಲಿ ಬ್ರಿಟನ್ನ ಪೌಂಡ್ಸ್ ಹಣವಿದ್ದು, ಅವರು ಸ್ವೀಕಾರ ಮಾಡುತ್ತಿಲ್ಲ ಎಂದು ನಂಬಿಸಿದ್ದಳು.
ತನಗೀಗ ಭಾರತೀಯ ಹಣದ ಅಗತ್ಯವಿದ್ದು, 2 ಲಕ್ಷ ರೂ. ಕಳುಹಿಸುವಂತೆ ಕಮಿಲ್ಲಾ ವಿನಂತಿಸಿಕೊಂಡಿದ್ದಳು. ಆಕೆಯ ಮಾತನ್ನು ನಂಬಿದ್ದ ಡಾ.ಪ್ರವೀಣ್ ಆಕೆ ಕೊಟ್ಟ ಐಸಿಐಸಿಐ ಬ್ಯಾಂಕ್ ಖಾತೆಗೆ ಸಿಂಡಿಕೇಟ್ ಬ್ಯಾಂಕ್ ಮೊಬೈಲ್ ಆ್ಯಪ್ನಿಂದ 50 ಸಾವಿರ ಹಾಗೂ 1,45,700 ರೂ. ಆರ್ಟಿಜಿಎಸ್ ಮೂಲಕ ವರ್ಗಾಯಿಸಿದ್ದರು. ಆದರೆ ಆ ಬಳಿಕ ಅವರಿಗೆ ಆಕೆ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಒಟ್ಟು 1,95,700 ರೂ.ಗಳನ್ನು ವೈದ್ಯರು ಕಳೆದುಕೊಂಡಿದ್ದು, ಈ ಬಗ್ಗೆ ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.