ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು, ಮೇ 2: ಕಳೆದ ಮುಂಗಾರಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಹಿನ್ನೆಲೆಯಾಗಿರಿಸಿ, ಪ್ರಸಕ್ತ ಸಾಲಿನಲ್ಲಿ ಪ್ರಾಕೃತಿಕ ವಿಕೋಪವನ್ನು ನಿಭಾಯಿಸಲು ತಹಶೀಲ್ದಾರ್ ಮಟ್ಟದಲ್ಲಿ ಸ್ಥಳೀಯವಾಗಿ ಯೋಜನೆ ರೂಪಿಸಿ ಸಜ್ಜಾಗುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದಲ್ಲಿ ಸುಸ್ಸಜ್ಜಿತ ಕಂಟ್ರೋಲ್ ರೂಂ ಈಗಾಗಲೇ ಅನುಷ್ಠಾನದಲ್ಲಿದೆ. ತಾಲೂಕು ಮಟ್ಟದಲ್ಲಿ ಕಳೆದ ವರ್ಷ ಎದುರಿಸಿದ ವಿಕೋಪವನ್ನು ಗಮನದಲ್ಲಿರಿಸಿ ಒಳ್ಳೆಯ ಕೆಲಸಗಾರರನ್ನು ಗುರುತಿಸಿ ತಂಡ ಕಟ್ಟಿಕೊಳ್ಳಬೇಕು. ಕಂಟ್ರೋಲ್ ರೂಂ ಮುಖಾಂತರವೇ ಅಗತ್ಯ ಇರುವ ಕಡೆ ತಲುಪಲು ಸಾಧ್ಯವಾಗುವಂತೆ ನೆಟ್‌ವರ್ಕ್ ನಿರ್ಮಿಸಬೇಕು ಎಂದು ತಾಲೂಕು ದಂಡಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಅನಾಹುತ ಸಂಭವಿಸಿದೆಡೆ ಒಬ್ಬರೇ ಓಡದೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲು ಮುಖ್ಯವಾಗಿ ಅಗ್ನಿಶಾಮಕ, ಪೊಲೀಸ್ ಮತ್ತು ಇತರ ಸಂಬಂಧಪಟ್ಟವರೊಂದಿಗೆ ತಾಲೂಕು ಮಟ್ಟದಲ್ಲಿ ತಂಡವನ್ನು ರಚಿಸಬೇಕು. ತಾಲೂಕಿನ ಚರಿತ್ರೆಯನ್ನೊಮ್ಮೆ ಮನನ ಮಾಡಿಕೊಳ್ಳಬೇಕು. ಎಲ್ಲಿ ನೆರೆ ಸಂಭವಿಸಲಿದೆ, ಭೂಮಿ ಕುಸಿಯಲಿದೆ, ಕಡಲ್ಕೊರೆತ ಸಂಭವಿಸಲಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಹಾಗೂ ನಗರಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಮುಚ್ಚಿರುವ ನಾಲಾಗಳನ್ನು ತೆರವುಗೊಳಿಸಿ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದರೆ ನಗರದ ನೆರೆಗೆ ಅವಕಾಶವಿರುವುದಿಲ್ಲ. ಈ ಎಲ್ಲ ಕೆಲಸಗಳು ಶೀಘ್ರವಾಗಿ ಮುಗಿಯಬೇಕು. ಈ ಮಾದರಿಯ ಕೆಲಸಗಳಿಗೆ ಟೆಂಡರ್ ಕರೆಯಲು ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು. ಜಿಲ್ಲೆಯ ಅಗ್ನಿಶಾಮಕ ದಳ ಈಗಾಗಲೇ ಅಗತ್ಯ ಸಲಕರಣೆಗಳೊಂದಿಗೆ ಮಳೆಗಾಲವನ್ನು ಎದುರಿಸಲು ಸಜ್ಜಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ವಿವರಿಸಿದರು.
ಶಿರಾಡಿ, ಚಾರ್ಮಾಡಿಯಲ್ಲಿ ಪೆಟ್ರೋಲಿಂಗ್‌ಗೆ ವಾಹನವೊಂದನ್ನು ನಿಯೋಜಿಸಿ, ಅಲ್ಲಿ ಗುಡ್ಡ ಕುಸಿತಗಳು ಸಂಭಿಸಿವಿಸಿದರೆ ತುರ್ತು ನೆರವಿಗೆ ಸಜ್ಜಾಗಬೇಕು ಎಂದು ಪುತ್ತೂರು ಮತ್ತು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ಹಾಗೂ ಸಹಾಯಕ ಆಯುಕ್ತ ಕೃಷ್ಣಮೂರ್ತಿ ಅವರಿಗೆ ಸೂಚನೆಗಳನ್ನು ನೀಡಿದರು.
ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯು ತಮ್ಮ ನೂರು ಸ್ವಯಂಸೇವಕರೊಂದಿಗೆ ಜಿಲ್ಲಾಡಳಿತಕ್ಕೆ ಸಕಾಲ ನೆರವನ್ನು ನೀಡಲು ಸನ್ನದ್ಧವಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಪೊಲೀಸ್ ಉಪ ಆಯುಕ್ತ ಶ್ರೀನಿವಾಸ್ ಗೌಡ, ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಕೃಷ್ಣ ಮೂರ್ತಿ, ಅಗ್ನಿಶಾಮಕ ಆಯುಕ್ತರಾದ ಟಿ.ಎನ್.ಶಿವಶಂಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
‘ಜೀವಹಾನಿ: 48 ಗಂಟೆಯೊಳಗೆ ಪರಿಹಾರ’
ಮಳೆಗಾಲದಲ್ಲಿ ಸ್ಥಳೀಯ ಪ್ರದೇಶಕ್ಕೆ ಸೀಮಿತವಾಗಿ ಮಕ್ಕಳ ಸುರಕ್ಷೆತೆಯನ್ನು ಗಮನದಲ್ಲಿರಿಸಿ ತಹಶೀಲ್ದಾರ್ ಅವರು ಡಿಡಿಪಿಐ ಅಥವಾ ಬಿಇಒಗಳೊಂದಿಗೆ ಸಮಾಲೋಚಿಸಿ ರಜೆ ನೀಡಬೇಕು. ಮಳೆಗಾಲದಲ್ಲಿ ಜೀವಹಾನಿ ಹಾಗೂ ಸಾವು-ನೋವು ಸಂಭವಿಸಿದರೆ 48 ಗಂಟೆಯೊಳಗಾಗಿ ಪರಿಹಾರ ನೀಡಲು ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದ್ದು, ಯಾವುದೇ ರೀತಿ ವಿಳಂಬ ಸಲ್ಲದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.